ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಬರೆದ ಹೊಸ ಹೀರೋ, 12 ದಿನವಾದರೂ ಕಡಿಮೆಯಾಗದ ಹವಾ
ಪ್ರೀತಿಯಿಂದ .. ಪ್ರೀತಿಗಾಗಿ .. ಪ್ರೀತಿಗೋಸ್ಕರ .. ಪ್ರೀತಿ ಎಂಬ ಎರಡಕ್ಷರದ ಮಧುರ ಭಾವದ ಸುತ್ತ ಮುತ್ತ ಭಾರತೀಯ ಬೆಳ್ಳಿತೆರೆಯ ಮೇಲೆ ಇಲ್ಲಿಯವರೆಗೆ ಹಲವಾರು ಚಿತ್ರಗಳು ಅರಳಿವೆ. ಎಷ್ಟೇ ಬರೆದರೂ ಮುಗಿಯದ ಬಣ್ಣ ಬಣ್ಣದ ಭಾವನೆಗಳ ಈ ಸಾಗರದಿಂದ ಕ್ಯಾಂಪಸ್, ಕ್ಲಾಸ್ ರೂಮ್, ಲೈಬ್ರರಿ, ಕ್ಯಾಂಟೀನ್, ಬಸ್ಸು, ರೋಡು, ಪಾರ್ಕು, ಹೀಗೆ ಎಲ್ಲೆಲ್ಲೂ ಪ್ರೀತಿಸುವ ಹೃದಯಗಳ ಬಡಿತದ ಕಥೆಗಳನ್ನು ಹೆಕ್ಕಿ ಹೇಳಲಾಗಿದೆ.
ಆ ಪೈಕಿ ಕೆಲ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದಿವೆ. ಇನ್ನೂ ಕೆಲ ಚಿತ್ರಗಳು ಪ್ರೇಕ್ಷಕರ ಮನಸಿನಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿವೆ. ಇಷ್ಟೇ ಅಲ್ಲ ಬಾಕ್ಸಾಫೀಸ್‌ನಲ್ಲಿ ಅತ್ಯಮೋಘ.. ಅದ್ವೀತಿಯ ಗೆಲುವನ್ನು ಕೂಡ ಕಂಡಿವೆ. ಉದಾಹರಣೆಗೆ ''ಸೈಯಾರ''. ಹೌದು.. ''ಸೈಯಾರ''.. ಮೊಹೀತ್ ಸೂರಿಯ ಪ್ರೇಮ ಕಾವ್ಯ. ಚಿತ್ರ ಬಿಡುಗತಡೆಯಾಗಿ ಎರಡು ವಾರಗಳಾಗಿವೆ ಆದರೂ ಈ ಚಿತ್ರದ ಅಲೆ ಇನ್ನೂ ಕಡಿಮೆಯಾಗಿಲ್ಲ.

ಚಿತ್ರ ಬಿಡುಗಡೆಯಾಗಿ ಹನ್ನೆರಡು ದಿನವಾದರೂ ಕೂಡ ಚಿತ್ರದ ನಿರ್ಮಾಪಕ ಅಕ್ಷಯೇ ವಿಧಾನಿ ಅವರ ಮೇಲೆ ಹಣದ ಮಳೆ ಬೀಳುತ್ತಲೇ ಇದೆ. ಈ ಹನ್ನೆರಡು ದಿನದಲ್ಲಿ ಎಲ್ಲ ಭಾಷೆಗಳಲ್ಲಿ ಹಲವು ಸಿನಿಮಾಗಳು ಬಂದಿವೆ. ಆದರೂ ಕೂಡ ಪ್ರೇಕ್ಷಕರು ಒಲವು ''ಸೈಯಾರ'' ಮೇಲಿದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಹೊಸ ಮುಖಗಳನ್ನೊಂದಿರುವ ಈ ಚಿತ್ರ ಕೇವಲ ಹನ್ನೆರಡು ದಿನದಲ್ಲಿ ₹ 266.53 ಕೋಟಿ ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.

ಇನ್ನು ಸಾಮಾನ್ಯವಾಗಿ ಸೋಮವಾರ.. ಮಂಗಳವಾರ.. ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತೆ. ಅಂದುಕೊಂಡ ಗಳಿಕೆ ಆಗಲ್ಲ. ಆದರೆ.. ''ಸೈಯಾರ'' ವಿಚಾರದಲ್ಲಿ ಇದು ತದ್ವಿರುದ್ದ. ಅಂದುಕೊಂಡಿದ್ದಕ್ಕಿಂತ ಹೆಚ್ಚು ಗಳಿಕೆಯಾಗುತ್ತಿದೆ. ವಾರದ ದಿನಗಳಲ್ಲಿ ಕೂಡ ''ಸೈಯಾರ'' ಕೋಟಿ ಕೋಟಿ ಹಣವನ್ನೇ ಗಳಿಸುತ್ತಿದೆ. ''ಸ್ಯಾಕ್ನಿಲ್'' ಪ್ರಕಾರ ನಿನ್ನೆ [ ಜುಲೈ 29 ] ಈ ಚಿತ್ರ ಅಂದಾಜು ₹ 9.93 ಕೋಟಿ ಹಣವನ್ನು ದೋಚಿದೆ.
ಇನ್ನು ಸ್ಯಾಕ್ನಿಲ್ ಉಲ್ಲೇಖಿಸಿರುವಂತೆ ''ಸೈಯಾರ'' ಮೊದಲ ವಾರ ₹ 172.75 ಕೋಟಿ ಹಣವನ್ನು ಗಳಿಸಿತ್ತು. ಆ ಪೈಕಿ ಕೇವಲ ನಾಲ್ಕು ದಿನದಲ್ಲಿ ನೂರು ಕೋಟಿಯನ್ನು ಚಿತ್ರ ಗಳಿಸಿತ್ತು. ವಿಶೇಷ ಅಂದರೆ ಎರಡನೇ ವಾರದ ನಾಲ್ಕೇ ದಿನದಲ್ಲಿ ಚಿತ್ರ ₹93.78 ಕೋಟಿ ಹಣವನ್ನು ಗಳಿಸಿದೆ. ಬಾಲಿವುಡ್ ಪಂಡಿತರ ಪ್ರಕಾರ ಇಂದು [ ಜುಲೈ 30] ಎರಡನೇ ಬಾರಿ 100 ಕೋಟಿಯ ಗಡಿಯನ್ನು ಕೂಡ ಈ ಚಿತ್ರ ದಾಟಲಿದೆ. ಬಾಲಿವುಡ್‌ನಲ್ಲಿ ಇಂತಹದ್ದೊಂದು ಪವಾಡ ನಡೆದು ಹಲವು ದಿನಗಳಾಗಿತ್ತು.
ಒಟ್ನಲ್ಲಿ ಭಾರತದೆಲ್ಲೆಡೆ ಹೊಸ ಅಲೆ ಎಬ್ಬಿಸಿದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯದ ''ಸೈಯಾರ'' ಸದ್ಯ ಹಲವು ದಾಖಲೆಗಳನ್ನು ಬಾಕ್ಸಾಫೀಸ್‌ನಲ್ಲಿ ಬರೆಯುತ್ತಿದೆ. ನಿರ್ಮಾಪಕರಿಗೆ ಭರ್ಜರಿ ಲಾಭವನ್ನು ತಂದು ಕೊಡುತ್ತಿದೆ. ಮುಂಬರುವ ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ''ಸೈಯಾರ'' ಮತ್ಯಾವ ಸಾಧನೆಯನ್ನು ಮಾಡುತ್ತೆ, ಚಿತ್ರ 300 ಕೋಟಿಯ ಗಡಿಯನ್ನು ದಾಟಿ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











