Saiyaara Box Office ; 256% ಲಾಭ ಮಾಡಿದ 'ಸೈಯಾರ', 'ಛಾವಾ' ದಾಖಲೆ ಮುರಿಯುತ್ತಾನಾ ಹೊಸ ಹುಡುಗ ?
ದಕ್ಷಿಣ ಭಾರತೀಯ ಚಿತ್ರರಂಗದ ಅಬ್ಬರದಿಂದ ಬಾಲಿವುಡ್ ಬರ್ಬಾದ್ ಆಯ್ತು ಎಂದೇ ಅನೇಕರು ಅಂದುಕೊಂಡಿದ್ದರು. ಕೊರೊನಾ ನಂತರದ ದಿನಗಳಲ್ಲಿ ವಾತಾವರಣ ಹಾಗೇ ಇತ್ತು ಕೂಡ. ಒಂದು ಕಡೆ ಕೆಜಿಎಫ್ .. ಪುಷ್ಪ .. ಆರ್‌ಆರ್‌ಆರ್ .. ಕಾಂತಾರ .. 777 ಚಾರ್ಲಿ ಅಂತಹ ಚಿತ್ರಗಳು ಅಬ್ಬರಿಸುತ್ತಿದ್ದರೆ, ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳೆಲ್ಲವೂ ನೆಲ ಕಚ್ಚುತ್ತಿದ್ದವು.
ಆದರೆ.. 2023ರ ಸುಮಾರು ಬಾಲಿವುಡ್ ನಿಧಾನವಾಗಿ ಚೇತರಿಸಿಕೊಳ್ಳಲು ಶುರು ಮಾಡಿತ್ತು. ಹಾಗಂಥ.. ಮೊದಲಿನ ಲಯಕ್ಕೆ ಹಿಂದಿ ಉದ್ಯಮ ಆಗಲೂ ಮರಳಲಿಲ್ಲ. ಈಗಲೂ ಕೂಡ ಮರಳಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಮಾತ್ರ ಮಕಾಡೆ ಮಲಗಿದ ಬಾಲಿವುಡ್‌ನ ಬಡಿದೆಬ್ಬಿಸುತ್ತಿವೆ. ಆ ಕ್ಷಣಕ್ಕೆ ಹೊಸ ಹುರುಪು ತುಂಬುತ್ತಿವೆ.

ಕಳೆದ ವರ್ಷ ಈ ಕೆಲಸವನ್ನು ''ಮುಂಜ್ಯಾ'' .. ''ಸ್ತ್ರೀ 2'' ಅಂತಹ ಚಿತ್ರಗಳು ಮಾಡಿದ್ದವು. ಈ ವರ್ಷದ ಆರಂಭದಲ್ಲಿ ''ಛಾವಾ'' ಈ ಕೆಲಸವನ್ನು ಮಾಡುತ್ತಿದೆ. ಈಗ ವರ್ಷದ ದ್ವೀತಿಯಾರ್ಧದಲ್ಲಿ ಹೊಸ ಹುಡುಗನ ''ಸೈಯಾರ'' ಈ ಕೆಲಸವನ್ನು ಮಾಡುತ್ತಿದೆ.
ಹೌದು, ತೆರೆಗೆ ಬಂದ ಮೊದಲ ದಿನದಿಂದನೇ ಇಂದಿನ ಯುವಜನಾಂಗವನ್ನು ಆಯಸ್ಕಾಂತದಂತೆ ತನ್ನತ್ತ ಸೆಳೆಯುತ್ತಿರುವ ''ಸೈಯಾರ'' ಸದ್ಯ ಬಾಕ್ಸಾಫೀಸ್‌ನಲ್ಲಿ ಒಂದು ವಾರ ಪೂರೈಸಿದೆ. ಈ ಒಂದು ವಾರದಲ್ಲಿ ಹತ್ತು ಹಲವು ದಾಖಲೆಗಳನ್ನು ಕೂಡ ಮುರಿದಿದೆ. ಕೇವಲ ನಾಲ್ಕೇ ದಿನದಲ್ಲಿ 100 ಕೋಟಿಯ ಗಡಿಯನ್ನು ಕೂಡ ದಾಟಿದೆ.
ಇಂಥಾ ''ಸೈಯಾರ'' ಹಾಕಿದ ಬಂಡವಾಳಕ್ಕಿಂತ 246% ಲಾಭವನ್ನು ಮಾಡಿದೆ ಎಂದು ''www.koimoi.com'' ವರದಿಯನ್ನು ಮಾಡಿದೆ. ಹೌದು, ಅಸಲಿಗೆ ಭಾರತದೆಲ್ಲೆಡೆ ಹೊಸ ಅಲೆ ಎಬ್ಬಿಸಿದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯದ ಈ ಚಿತ್ರಕ್ಕೆ ಚಿತ್ರದ ನಿರ್ಮಾಪಕ ಅಕ್ಷಯೇ ವಿಧಾನಿ ಕೇವಲ 45 ಕೋಟಿ ಹಣವನ್ನು ಮಾತ್ರ ಹೂಡಿದ್ದರು. ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್‌ನ ಸಹಾಯ ಪಡೆದು ಚಿತ್ರವನ್ನು ಬಿಡುಗಡೆ ಮಾಡಿದ್ದರು.
ಆದರೆ ''ಸೈಯಾರ'' ತನ್ನ ಪಾಲಿನ ಅಕ್ಷಯ ಪಾತ್ರೆಯಾಗಲಿದೆ ಎನ್ನುವ ಚಿಕ್ಕ ಸುಳಿವು ಕೂಡ ಅಕ್ಷಯೇಗೆ ಇರಲಿಲ್ಲ. ನಿರೀಕ್ಷೆಯನ್ನು ಮಿರೀ ಪ್ರತಿಕ್ರಿಯೆಯನ್ನು ಪಡೆದ ಈ ಚಿತ್ರ ಮೊದಲ ದಿನದಂದೇ ಇತಿಹಾಸ ಬರೆಯಿತು.

''ಸೈಯಾರ''ದ ಈ ಅಭೂತಪೂರ್ವ ಸಾಧನೆಯ ಕುರಿತು www.koimoi.com ವರದಿಯನ್ನು ಮಾಡಿದ್ದು ಈ ವರದಿಯಲ್ಲಿ ''ಸೈಯಾರ'' 246% ಲಾಭವನ್ನು ಈ 7 ದಿನದಲ್ಲಿ ಮಾಡಿದೆ ಎಂದು ಹೇಳಿದೆ.
ಇನ್ನೂ ಈ ವರ್ಷದ ಆರಂಭದಲ್ಲಿ ಬಂದ ''ಛಾವಾ'' ಚಿತ್ರಕ್ಕೆ ಇದೇ ವರದಿಯ ಪ್ರಕಾರ 130 ಕೋಟಿ ಖರ್ಚಾಗಿತ್ತು. ಆದರೆ.. ಆ ಚಿತ್ರ ಕೂಡ ಈ ಚಿತ್ರದಂತೆಯೇ ಸದ್ದು ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ 615.39 ಕೋಟಿ ಗಳಿಸುವ ಮೂಲಕ ನಿರ್ಮಾಣ ಸಂಸ್ಥೆಗೆ 373% ಲಾಭವನ್ನು ಮಾಡಿ ಕೊಟ್ಟಿತ್ತು. ಈಗ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ''ಸೈಯಾರ'' ಸದ್ಯ 246% ಲಾಭವನ್ನು ಮಾಡಿದೆ.
ಈ ಹಿನ್ನೆಲೆ ಇನ್ನು 59.25 ಕೋಟಿ ಹಣವನ್ನು ಸೈಯಾರ ಗಳಿಸಿದರೆ ಈ ವರ್ಷದ ಬಹುದೊಡ್ಡ ಲಾಭದಾಯಕ ಚಿತ್ರವಾಗಿ ಮೊಹೀತ್ ಸೂರಿಯ ಈ ಚಿತ್ರ ಹೊರಹೊಮ್ಮಲಿದೆ. ಗಳಿಕೆಯಲ್ಲಿ ''ಛಾವಾ'' ಚಿತ್ರವನ್ನು ಹಿಂದಿಕ್ಕದಿದ್ದರೂ ಲಾಭಾಂಶದ ಲೆಕ್ಕದಲ್ಲಿ ವಿಕ್ಕಿ ಕೌಶಲ್ ಅಭಿನಯದ ''ಛಾವಾ'' ಚಿತ್ರವನ್ನು ''ಸೈಯಾರ'' ಹಿಂದಿಕ್ಕಲಿದೆ.
ಅಂದ್ಹಾಗೇ ಬಾಲಿವುಡ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ಈ ಚಿತ್ರ ಈ 7 ದಿನದಲ್ಲಿ ₹ 172.75 ಕೋಟಿಯನ್ನು ಗಳಿಸಿದೆ. ನಾಳೆ [ಜುಲೈ 26] ವಾರಾಂತ್ಯದ ಪ್ರಯುಕ್ತ ಚಿತ್ರದ ಗಳಿಕೆಯಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆಗಳಿವೆ.
ಒಟ್ನಲ್ಲಿ ''ಸೈಯಾರ'' ಸದ್ಯ ಹಲವು ದಾಖಲೆಗಳನ್ನು ಬರೆಯುತ್ತಿದೆ. ನಿರ್ಮಾಪಕರಿಗೆ ಭರ್ಜರಿ ಲಾಭವನ್ನು ತಂದು ಕೊಟ್ಟಿದೆ. ಬಾಕ್ಸಾಫೀಸ್‌ನಲ್ಲಿ ಸೈಯಾರ ಮತ್ಯಾವ ಸಾಧನೆಯನ್ನು ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











