'ಧುರಂಧರ್' ಅಬ್ಬರ.. 1200 ಕೋಟಿ ಕ್ಲಬ್‌ಗೆ ಎಂಟ್ರಿ; ಶಾರುಖ್-ಪ್ರಭಾಸ್ ದಾಖಲೆ ಮುರಿದ ಸಂಜಯ್ ದತ್
ಭಾರತೀಯ ಚಿತ್ರರಂಗ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ 100 ಕೋಟಿ ರೂಪಾಯಿ ಗಳಿಕೆ ಎನ್ನುವುದೇ ದೊಡ್ಡ ಸಾಧನೆಯಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಈಗೇನಿದ್ದರೂ ಸಾವಿರ ಕೋಟಿ ರೂಪಾಯಿಗಳದ್ದೇ ಮಾತು. ದೊಡ್ಡ ಬಜೆಟ್ ಸಿನಿಮಾಗಳು ಅಷ್ಟೇ ದೊಡ್ಡ ಮಟ್ಟದ ಲಾಭವನ್ನು ತರುತ್ತಿವೆ.
ಸಿನಿಮಾ ಪ್ರೇಮಿಗಳು ಕೇವಲ ಸ್ಟಾರ್ ನಟರಿಗಾಗಿ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಕಥೆ ಮತ್ತು ಮೇಕಿಂಗ್ ಚೆನ್ನಾಗಿದ್ದರೆ ಸಾಕು ಅಂತಹ ಸಿನಿಮಾಗಳನ್ನು ಜನ ತಲೆಮೇಲೆ ಹೊತ್ತು ಮೆರೆಯುತ್ತಿದ್ದಾರೆ. ಈ ಬದಲಾದ ಟ್ರೆಂಡ್‌ನಿಂದಾಗಿ ಭಾರತೀಯ ಚಿತ್ರರಂಗದ ಹಲವು ನಟರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಅಧಿಪತ್ಯ ಸ್ಥಾಪಿಸುತ್ತಿವೆ. ಈ ಪೈಪೋಟಿಯ ನಡುವೆ ನಟರ ನಡುವಿನ ಬಾಕ್ಸ್ ಆಫೀಸ್ ಸುಲ್ತಾನ್ ಪಟ್ಟಕ್ಕಾಗಿ ದೊಡ್ಡ ಮಟ್ಟದ ಫೈಟ್ ನಡೆಯುತ್ತಿದೆ.
'ಧುರಂಧರ್' ಅಬ್ಬರ
ಈಗ ಎಲ್ಲೆಡೆ 'ಧುರಂಧರ್' ಸಿನಿಮಾದ್ದೇ ಚರ್ಚೆ. ಆರಂಭದಿಂದಲೂ ಕುತೂಹಲ ಕೆರಳಿಸಿದ್ದ ಈ ಸಿನಿಮಾ ಈಗ 1200 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ. ಪ್ರೇಕ್ಷಕರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಈ ಸಿನಿಮಾದ ಯಶಸ್ಸು ಚಿತ್ರತಂಡಕ್ಕೆ ದೊಡ್ಡ ಮೈಲೇಜ್ ನೀಡಿದೆ. ವಿಶೇಷವಾಗಿ ಈ ಚಿತ್ರದ ಮೂಲಕ ಬಾಲಿವುಡ್ ನ ಖಡಕ್ ನಟ ಸಂಜಯ್ ದತ್ ಅವರ ಖಾತೆಗೆ ಹೊಸ ದಾಖಲೆಯೊಂದು ಸೇರ್ಪಡೆಯಾಗಿದೆ. ಸಂಜಯ್ ದತ್ ಸಿನಿ ಬದುಕಿನಲ್ಲಿ ಇದೊಂದು ಮರೆಯಲಾಗದ ಕ್ಷಣ ಎನ್ನಬಹುದು.
ದೀಪಿಕಾ ಸಾಲಿಗೆ ಸಂಜು
ಈಗ ಅಸಲಿ ವಿಷಯಕ್ಕೆ ಬರುವುದಾದರೆ ಸಂಜಯ್ ದತ್ ಅವರು ನಟಿ ದೀಪಿಕಾ ಪಡುಕೋಣೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಹೌದು, ದೀಪಿಕಾ ಪಡುಕೋಣೆ ನಟನೆಯ ಮೂರು ಸಿನಿಮಾಗಳು ಈ ಹಿಂದೆ 1000 ಕೋಟಿ ರೂಪಾಯಿಗಳ ಕ್ಲಬ್ ಸೇರಿದ್ದವು. ಈಗ ಸಂಜಯ್ ದತ್ ಕೂಡ ಆ ಸಾಲಿಗೆ ಸೇರಿದ್ದಾರೆ.
ಸಂಜಯ್ ದತ್ ನಟಿಸಿದ ಮೂರು ಸಿನಿಮಾಗಳು 1000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಕೆ ಮಾಡಿವೆ. ಈ ಮೂಲಕ ಅವರು ಭಾರತೀಯ ಚಿತ್ರರಂಗದ ಅತಿ ಹೆಚ್ಚು ಯಶಸ್ವಿ ನಟರ ಪಟ್ಟಿಯಲ್ಲಿ ಮುಂಚೂಣಿಗೆ ಬಂದಿದ್ದಾರೆ. ವಿಲನ್ ಪಾತ್ರವಿರಲಿ ಅಥವಾ ಪೋಷಕ ಪಾತ್ರವಿರಲಿ ಸಂಜು ಅವರ ಉಪಸ್ಥಿತಿಯೇ ಸಿನಿಮಾಗೆ ಬಲ ತುಂಬುತ್ತಿದೆ.
ಶಾರುಖ್, ಪ್ರಭಾಸ್ ಹಿಂದಿಕ್ಕಿದ ಸಂಜು
ಈ ಸಾಧನೆಯ ಮೂಲಕ ಸಂಜಯ್ ದತ್ ಅವರು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಅವರನ್ನೂ ಹಿಂದಿಕ್ಕಿದ್ದಾರೆ. ಶಾರುಖ್ ಖಾನ್ ಅವರ 'ಪಠಾಣ್' ಮತ್ತು 'ಜವಾನ್' ಸಿನಿಮಾಗಳು 1000 ಕೋಟಿ ದಾಟಿದ್ದವು. ಇತ್ತ ಪ್ರಭಾಸ್ ಅವರ 'ಬಾಹುಬಲಿ 2' ಮತ್ತು 'ಕಲ್ಕಿ 2898 AD' ಕೂಡ ಇದೇ ಸಾಧನೆ ಮಾಡಿದ್ದವು.
ಇದೀಗ ಸಂಜಯ್ ದತ್ ನಟನೆಯ 'KGF 2', 'ಜವಾನ್' ಹಾಗೂ 'ಧುರಂಧರ್' ಚಿತ್ರಗಳು ಈ ಸಾಧನೆ ಮಾಡಿರುವುದು ವಿಶೇಷ. ಇದರಿಂದಾಗಿ ಅತಿ ಹೆಚ್ಚು 1000 ಕೋಟಿ ಗಳಿಸಿದ ಚಿತ್ರಗಳಲ್ಲಿ ನಟಿಸಿದ ಸ್ಟಾರ್ ನಟರ ಪಟ್ಟಿಯಲ್ಲಿ ಸಂಜಯ್ ದತ್ ಈಗ ಅಗ್ರಸ್ಥಾನದಲ್ಲಿದ್ದಾರೆ.
ಸಂಜಯ್ ದತ್ 2ನೇ ಇನ್ನಿಂಗ್ಸ್ ಅದ್ಭುತವಾಗಿದೆ. ಕೇವಲ ಹೀರೊ ಆಗಿ ಮಾತ್ರವಲ್ಲದೆ, ಪವರ್ಫುಲ್ ವಿಲನ್ ಪಾತ್ರಗಳ ಮೂಲಕ ಅವರು ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ. ಸಂಜಯ್ ದತ್ ನಟನೆಯ ತೆಲುಗಿನ 'ದಿ ರಾಜಾಸಾಬ್' ಹಾಗೂ ಕನ್ನಡ 'ಕೆಡಿ' ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿವೆ.


Click it and Unblock the Notifications











