5 ವರ್ಷಗಳ ಬಾಲಿವುಡ್ ಬಾಕ್ಸ್ ಆಫೀಸ್ ರಿಪೋರ್ಟ್: ನಂಬರ್ 1 ಯಾರು? ಸಲ್ಲುಗೆ ಶಾಕ್
ಕೋವಿಡ್ ನಂತರ ಬಾಲಿವುಡ್ ಚಿತ್ರರಂಗದ ಚಿತ್ರಣವೇ ಬದಲಾಗಿದೆ. ಚಿತ್ರಮಂದಿರಗಳು ಪುನರಾರಂಭವಾದ ನಂತರ, ಜನರಿಗೆ ಇಷ್ಟವಾಗುವ ಸಿನಿಮಾಗಳೇ ಬೇರೆಯಾಗಿವೆ. ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗುತ್ತಿವೆ.
ಈ ನಾಲ್ಕು ವರ್ಷಗಳಲ್ಲಿ ಯಾರು ಅಸಲಿ ಸುಲ್ತಾನ್ ಎಂಬುದು ಸಾಬೀತಾಗಿದೆ. ಒಬ್ಬ ನಟ ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದು ದಾಖಲೆ ಬರೆದಿದ್ದಾರೆ. ಮತ್ತೊಬ್ಬ ಸ್ಟಾರ್ ನಟ ಸಾಲು ಸಾಲು ಸಿನಿಮಾಗಳನ್ನು ನೀಡಿದರೂ ಸೋಲು ಅನುಭವಿಸಿದ್ದಾರೆ.

ಈಗಿನ ಲೆಕ್ಕಾಚಾರದ ಪ್ರಕಾರ ಟಾಪ್ 10 ನಟರ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಶಾರುಖ್ ಖಾನ್ ಅಗ್ರಸ್ಥಾನದಲ್ಲಿದ್ದರೆ, ಸಲ್ಮಾನ್ ಖಾನ್ ಕೊನೆಯ ಸ್ಥಾನದಲ್ಲಿದ್ದಾರೆ. ಕೋವಿಡ್ ಬಳಿಕ ಬಾಲಿವುಡ್ ನಟರ ಅಸಲಿ ಬಾಕ್ಸ್ ಆಫೀಸ್ ರಿಪೋರ್ಟ್ ಕಾರ್ಡ್ ಇಲ್ಲಿದೆ.
ಕಿಂಗ್ ಈಸ್ ಬ್ಯಾಕ್
ಬಾಲಿವುಡ್ ಅಂಗಳದಲ್ಲಿ ಶಾರುಖ್ ಖಾನ್ ಮತ್ತೆ ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದಾರೆ. 'ಜೀರೋ' ಸಿನಿಮಾ ಮಾಡಿದ್ದ ಸೋತಿದ್ದ ಕಿಂಗ್ ಖಾನ್ ಈಗ ಗೆಲುವಿನ ಲಯಕ್ಕೆ ಮರಳಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅವರು ನಟಿಸಿದ 3 ಸಿನಿಮಾಗಳು ತೆರೆಗೆ ಬಂದಿದ್ದವು. ಆದರೆ 3 ಸಿನಿಮಾಗಳು ಮಾಡಿದ ಸದ್ದು ಅಷ್ಟಿಷ್ಟಲ್ಲ. ಒಟ್ಟು ₹2,669.22 ಕೋಟಿ ಗಳಿಸುವ ಮೂಲಕ ಅವರು ನಂಬರ್ 1 ಸ್ಥಾನದಲ್ಲಿದ್ದಾರೆ. ಪ್ರತಿ ಸಿನಿಮಾದ ಸರಾಸರಿ ಗಳಿಕೆ ಸುಮಾರು ₹889 ಕೋಟಿಗೂ ಅಧಿಕವಾಗಿದೆ. 'ಪಠಾಣ್' ಮತ್ತು 'ಜವಾನ್' ಚಿತ್ರಗಳು ಶಾರುಖ್ ಅವರ ಅಸಲಿ ತಾಕತ್ತು ತೋರಿಸಿವೆ.

ಸೈಲೆಂಟ್ ಕಿಲ್ಲರ್ ರಣ್‌ಬೀರ್
ಸದ್ಯದ ಟ್ರೆಂಡ್ ಗಮನಿಸಿದರೆ ರಣಬೀರ್ ಕಪೂರ್ ದೊಡ್ಡ ಮಟ್ಟದ ಪೈಪೋಟಿ ನೀಡುತ್ತಿದ್ದಾರೆ. 'ಅನಿಮಲ್' ಸಿನಿಮಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಒಟ್ಟು ₹1,619.86 ಕೋಟಿ ಗಳಿಕೆಯೊಂದಿಗೆ ಅವರು 5ನೇ ಸ್ಥಾನದಲ್ಲಿದ್ದಾರೆ. ಆದರೆ ಸರಾಸರಿ ಲೆಕ್ಕಾಚಾರದಲ್ಲಿ ರಣಬೀರ್ 2ನೇ ಸ್ಥಾನಕ್ಕೆ ಏರುತ್ತಾರೆ. ಪ್ರತಿ ಸಿನಿಮಾದಿಂದ ಅವರು ಸರಾಸರಿ ₹404 ಕೋಟಿಗೂ ಅಧಿಕ ಲಾಭ ತಂದುಕೊಡುತ್ತಿದ್ದಾರೆ. ಸದ್ಯ 'ರಾಮಾಯಣ' ಸರಣಿ ಚಿತ್ರಗಳಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರಣ್‌ವೀರ್ ಸೋಲು ಗೆಲುವು
5 ಸಿನಿಮಾಗಳಲ್ಲಿ ನಟಿಸಿದ್ದ ರಣ್‌ವೀರ್ ಸಿಂಗ್ ಒಟ್ಟು ₹1,986.77 ಕೋಟಿ ಗಳಿಕೆಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಆದರೆ ಅವರ ಎಲ್ಲಾ ಸಿನಿಮಾಗಳು ಯಶಸ್ಸು ಕಂಡಿಲ್ಲ. ಐದು ಸಿನಿಮಾಗಳಲ್ಲಿ ಕೆಲವು ದೊಡ್ಡ ಹಿಟ್ ಆದರೆ, ಕೆಲವು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. ಆದರೂ ಒಟ್ಟಾರೆ ಕಲೆಕ್ಷನ್ ವಿಚಾರದಲ್ಲಿ ಅವರು ಶಾರುಖ್ ನಂತರದ ಸ್ಥಾನದಲ್ಲಿದ್ದಾರೆ. ಇವರ ಸರಾಸರಿ ಗಳಿಕೆ ₹397 ಕೋಟಿ ಆಸುಪಾಸಿನಲ್ಲಿದೆ. 'ಧುರಂಧರ್- 2' ಮೂಲಕ ಮತ್ತೆ ಅಬ್ಬರಿಸಲು ಬರ್ತಿದ್ದಾರೆ.
ಅಜಯ್ - ಅಕ್ಕಿ ಜಾದೂ ನಡೀತಿಲ್ಲ
ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಈ ಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಅಜಯ್ 13 ಸಿನಿಮಾಗಳನ್ನು ನೀಡಿದರೆ, ಅಕ್ಷಯ್ ಬರೋಬ್ಬರಿ 16 ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾಗಳ ಸಂಖ್ಯೆ ಹೆಚ್ಚಿರುವುದರಿಂದ ಅವರ ಒಟ್ಟು ಗಳಿಕೆ ದೊಡ್ಡದಾಗಿ ಕಾಣುತ್ತಿದೆ. ಆದರೆ ಪ್ರತಿ ಸಿನಿಮಾದ ಸರಾಸರಿ ಗಳಿಕೆ ನೋಡಿದರೆ ಇಬ್ಬರೂ ಫ್ಲಾಪ್ ಎನಿಸಿಕೊಳ್ಳುತ್ತಾರೆ. ಅಕ್ಷಯ್ ಕುಮಾರ್ ಅವರ ಸಿನಿಮಾಗಳ ಸರಾಸರಿ ಗಳಿಕೆ ಕೇವಲ ₹116 ಕೋಟಿ ಮಾತ್ರ.
ಸನ್ನಿ ಡಿಯೋಲ್ ಮ್ಯಾಜಿಕ್...
ಯಾರೂ ನಿರೀಕ್ಷಿಸದ ರೀತಿಯಲ್ಲಿ ಸನ್ನಿ ಡಿಯೋಲ್ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. 'ಗದರ್- 2' ಸಿನಿಮಾ ನೀಡಿದ ಬೂಸ್ಟ್ ಇದಕ್ಕೆ ಕಾರಣ. ಕೇವಲ ನಾಲ್ಕು ಸಿನಿಮಾಗಳಿಂದ ಅವರು ₹1,297.05 ಕೋಟಿ ಗಳಿಸಿದ್ದಾರೆ. ಇದರಲ್ಲಿ ಸಿಂಹಪಾಲು 'ಗದರ್- 2' ಚಿತ್ರದ್ದೇ ಆಗಿದೆ. ಸೀನಿಯರ್ ಸ್ಟಾರ್ ನಟರು ಇಂದಿಗೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಬಲ್ಲರು ಎಂಬುದಕ್ಕೆ ಸನ್ನಿ ಡಿಯೋಲ್ ಸಾಕ್ಷಿ.
ರಾಜ್‌ಕುಮಾರ್, ವಿಕ್ಕಿ ಮತ್ತು ಕಾರ್ತಿಕ್...
ರಾಜ್‌ಕುಮಾರ್ ರಾವ್ 'ಸ್ತ್ರೀ- 2' ಮೂಲಕ ದೊಡ್ಡ ಜಿಗಿತ ಕಂಡಿದ್ದಾರೆ. ಅವರು 7ನೇ ಸ್ಥಾನದಲ್ಲಿದ್ದಾರೆ. ಇನ್ನು ವಿಕ್ಕಿ ಕೌಶಲ್ ಪ್ರತಿ ಸಿನಿಮಾವನ್ನು ಬಹಳ ಅಚ್ಚುಕಟ್ಟಾಗಿ ಆಯ್ಕೆ ಮಾಡುತ್ತಿದ್ದಾರೆ. ಅವರ ಸರಾಸರಿ ಗಳಿಕೆ ₹289 ಕೋಟಿ ಇರುವುದು ಅವರ ಯಶಸ್ಸನ್ನು ಸಾರುತ್ತದೆ. ಕಾರ್ತಿಕ್ ಆರ್ಯನ್ 9ನೇ ಸ್ಥಾನದಲ್ಲಿದ್ದು, ಯುವ ಪೀಳಿಗೆಯ ಅತ್ಯಂತ ಭರವಸೆಯ ನಟನಾಗಿ ಹೊರಹೊಮ್ಮಿದ್ದಾರೆ. 'ಭೂಲ್ ಭುಲೈಯಾ' ಸರಣಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ.
10ನೇ ಸ್ಥಾನದಲ್ಲಿ ಸಲ್ಲು
ಎಲ್ಲರಿಗೂ ಅಚ್ಚರಿ ತಂದ ವಿಷಯವೆಂದರೆ ಸಲ್ಮಾನ್ ಖಾನ್ 10ನೇ ಸ್ಥಾನಕ್ಕೆ ಕುಸಿದಿರುವುದು. ಸಲ್ಲು ನಟಿಸಿದ 5 ಸಿನಿಮಾಗಳ ಬಾಕ್ಸಾಫೀಸ್ ₹899.56 ಕೋಟಿ ಮಾತ್ರ. ಸಲ್ಮಾನ್ ಖಾನ್ ಸಿನಿಮಾಗಳು ಅಂದ್ರೆ ಕನಿಷ್ಠ ₹300 ಕೋಟಿ ಗಳಿಸುತ್ತಿದ್ದ ಕಾಲವಿತ್ತು. ಆದರೆ ಇತ್ತೀಚಿನ ಅವರ ಚಿತ್ರಗಳ ಆಯ್ಕೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ ಎಂಬುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತಿದೆ. 'ಟೈಗರ್' ಸರಣಿಯ ಚಿತ್ರ ಕೂಡ ಅವರಿಗೆ ದೊಡ್ಡ ಮಟ್ಟದ ನೆರವು ನೀಡಲಿಲ್ಲ.


Click it and Unblock the Notifications











