45 Box Office Day 5 ; ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಬಾಕ್ಸಾಫೀಸ್ ಬೇಟೆ - 5ನೇ ಗಳಿಸಿದ್ದೆಷ್ಟು 45 ?
ಮಲ್ಟಿಸ್ಟಾರ್ ಸಿನಿಮಾ ಮಾಡುವುದು ಸುಲಭ ಅಲ್ಲ. ಅದಕ್ಕೆ ಅದರದ್ದೇ ಆದ ಅಡೆತಡೆಗಳಿರುತ್ತವೆ. ಒಂದು ಕಡೆ ಅಭಿಮಾನಿಗಳ ನಿರೀಕ್ಷೆಯಾದರೆ ಮತ್ತೊಂದು ಕಡೆ ಸ್ಟಾರ್‌ಗಳನ್ನು ಸಂಭಾಳಿಸುವ, ನಿಭಾಯಿಸುವ ಸವಾಲು. ಚೂರು ಯಾಮಾರಿದರೂ ಕೂಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ. ಹೀಗಾಗಿಯೇ ಹಲವರು ಅದರಲ್ಲಿಯೂ ಕನ್ನಡದಲ್ಲಿ ಮಲ್ಟಿ ಸ್ಟಾರ್ ಸಿನಿಮಾ ಸಹವಾಸಕ್ಕೆ ಹೋಗುವುದಿಲ್ಲ. ಹೀಗಿರುವಾಗ ನಿರ್ದೇಶಕನಾಗಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಅರ್ಜುನ್ ಜನ್ಯ...
ಕನ್ನಡದ ಮೂರು ಮುತ್ತುಗಳನ್ನು ಒಂದು ಕಡೆ ಗುಡ್ಡೆ ಹಾಕಿ ಚಿತ್ರ ಮಾಡುವ ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನದ ಹೆಸರು ''45''.ಸದ್ಯ ಈ ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿ ಸಿಕ್ಕಿದೆ. ಕರುನಾಡಿನೆಲ್ಲೆಡೆ ಚಿತ್ರ ಯಶಸ್ವೀ ಪ್ರದರ್ಶನವನ್ನು ಕೂಡ ಕಾಣುತ್ತಿದೆ. ವಿಶೇಷ ಅಂದರೆ ಒಂದು ಕಡೆ ''ಧುರಂಧರ್'' ಅಬ್ಬರ ಇದೆ. ಮತ್ತೊಂದು ''ಅವತಾರ್''.. ''ಮಾರ್ಕ್''.. ಸೇರಿ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಆದರೂ ಕೂಡ ''45'' ಚಿತ್ರಮಂದಿರದಲ್ಲಿ ನೆಲೆಯೂರಿದೆ. ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕೈಗನ್ನಡಿಯೇ ಚಿತ್ರದ ಗಳಿಕೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''45'' ಸೋಮವಾರದ ಪರೀಕ್ಷೆಯಲ್ಲಿ ಪಾಸಾಗಿದೆ. ತೀವೃ ಪೈಪೋಟಿಯ ನಡುವೆಯೂ ಚಿತ್ರ ₹85 ಲಕ್ಷವನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಕೇವಲ ಐದು ದಿನದಲ್ಲಿ ಈ ಚಿತ್ರ ಸದ್ಯ ₹ 12.30 ಕೋಟಿಯನ್ನು ಗಳಿಸಿದೆ.
ಸ್ಯಾಕ್ನಿಲ್ ಪ್ರಕಾರ ''45''ಚಿತ್ರದ ಮೊದಲ 5 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಗುರುವಾರ] - ₹ 5.5 ಕೋಟಿ
ಎರಡನೇ ದಿನ [ಶುಕ್ರವಾರ] - ₹2 ಕೋಟಿ
ಮೂರನೇ ದಿನ [ಶನಿವಾರ] - ₹1.95 ಕೋಟಿ
ನಾಲ್ಕನೇ ದಿನ [ಭಾನುವಾರ]- ₹2 ಕೋಟಿ * ಅಂದಾಜು
ಐದನೇ ದಿನ [ಸೋಮವಾರ]- ₹85 ಲಕ್ಷ * ಅಂದಾಜು
ಒಟ್ಟು ಗಳಿಕೆ - ₹ 12.30 ಕೋಟಿ

ಹೀಗೆ ಐದು ದಿನದಲ್ಲಿ ₹12.30 ಕೋಟಿಯನ್ನು ದೋಚಿರುವ ''45'' ಚಿತ್ರವನ್ನು ತುಮಕೂರಿನ ಜನ ಹೆಚ್ಚೆಚ್ಚು ನೋಡುತ್ತಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ತುಮಕೂರಿನಲ್ಲಿ ನಿನ್ನೆ (ಡಿಸೆಂಬರ್ 29) 45.75% ಆಕ್ಯುಪೆನ್ಸಿ ಕಂಡು ಬಂದಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಹುಬ್ಬಳ್ಳಿ.. ಮೈಸೂರು.. ಬೆಳಗಾವಿ.. ಕುಂದಾಪುರ.. ಬೆಂಗಳೂರು.. ಸೇರಿ ರಾಜ್ಯದ ಹಲವಡೆ ಕೂಡ ಜನಸಂದಣಿ ಕಂಡು ಬಂದಿದೆ. ಇನ್ನು ಬೆಳಗ್ಗೆ ಮತ್ತು ರಾತ್ರಿಯ ಶೋಗಳಿಗಿಂತ ಮಧ್ಯಾಹ್ನದ ಪ್ರದರ್ಶನಕ್ಕೆ ಹೆಚ್ಚಿನ ಜನ ಬಂದಿದ್ದು ವಿಶೇಷ.
ಇನ್ನು ''45'' ಪ್ಯಾನ್ ಇಂಡಿಯಾ ಸಿನಿಮಾ. ಸದ್ಯ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿರುವ ಈ ಚಿತ್ರ ಈ ವಾರದಿಂದ (ಜನವರಿ 1) ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಕೂಡ ಬಿಡುಗಡೆಯಾಗಲಿದೆ. ಈ ಹಿನ್ನೆಲೆ ಚಿತ್ರದ ಗಳಿಕೆ ಈ ವಾರಾಂತ್ಯದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಕೂಡ ಕರ್ನಾಟಕದಲ್ಲಿ ಚಿತ್ರ ಉತ್ತಮವಾದ ಗಳಿಕೆ ಮಾಡುವ ನಿರೀಕ್ಷೆ ಇದೆ.
ಒಟ್ನಲ್ಲಿ ''45'' ಚಿತ್ರ ನಿಧಾನವಾಗಿಯಾದರೂ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮುಂಬರುವ ದಿನಗಳಲ್ಲಿ ಈ ಚಿತ್ರ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಚಿತ್ರತಂಡ ಅಧಿಕೃತ ಅಂಕಿ ಅಂಶಗಳನ್ನು ಕೂಡ ಹಂಚಿಕೊಳ್ಳುವ ನಿರೀಕ್ಷೆ ಇದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











