'ವಾರ್- 2', 'ಕೂಲಿ' ಎದುರು '45' ಬಾಕ್ಸಾಫೀಸ್ ಕದನ; ಶಿವಣ್ಣ ಏನಂತಾರೆ?
ಆಗಸ್ಟ್ 15ಕ್ಕೆ ಭಾರೀ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯುವ ಸುಳಿವು ಸಿಕ್ತಿದೆ. ಬಾಲಿವುಡ್‌ನ ಬಹುನಿರೀಕ್ಷಿತ 'ವಾರ್- 2' ಹಾಗೂ ತಮಿಳಿನ 'ಕೂಲಿ' ಸಿನಿಮಾಗಳ ಜೊತೆಗೆ ಕನ್ನಡದ '45' ಸಿನಿಮಾ ತೆರೆಗಪ್ಪಳಿಸಲಿದೆ. 3 ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.
ಲಾಂಗ್ ವೀಕೆಂಡ್‌ನಲ್ಲಿ ಸಿನಿಮಾ ಬಿಡುಗಡೆ ಆದರೆ ಪ್ರೇಕ್ಷಕರ ರೆಸ್ಪಾನ್ಸ್ ಚೆನ್ನಾಗಿರುತ್ತದೆ ಎನ್ನುವ ಲೆಕ್ಕಾಚಾರ ಇದೆ. ರಜಾ ದಿನಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಆಸಕ್ತಿ ತೋರಿಸುತ್ತಾರೆ. ಅದೇ ಕಾರಣಕ್ಕೆ ಬಹಳ ಬೇಗ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಮಾಡಿ ಚಿತ್ರತಂಡಗಳು ಕಾಯುತ್ತವೆ. ಬಹಳ ಹಿಂದೆಯೇ '45' ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿತ್ತು. ಆದರೆ ಇತ್ತೀಚೆಗೆ ರಜನಿಕಾಂತ್ 'ಕೂಲಿ' ಸಿನಿಮಾ ಅದೇ ಸಮಯದಲ್ಲಿ ತೆರೆಗೆ ಬರೋದು ಖಚಿತವಾಗಿದೆ.

ಪರಭಾಷೆಯ ದೊಡ್ಡ ಸಿನಿಮಾಗಳು ತೆರೆಗೆ ಬರುವಾಗ ಕನ್ನಡ ಸಿನಿಮಾಗಳ ರಿಲೀಸ್ ಡೇಟ್ ಮುಂದೂಡುವುದನ್ನು ನೋಡಿದ್ದೇವೆ. ಆದರೆ ಇತ್ತೀಚೆಗೆ ಆ ಭಯ ಇಲ್ಲ. ದೊಡ್ಡ ಸಿನಿಮಾಗಳ ಎದುರು ಕನ್ನಡ ಸಿನಿಮಾಗಳು ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿವೆ. '45' ಸಿನಿಮಾ ರಿಲೀಸ್ ವಿಚಾರದಲ್ಲಿ ಕೂಡ ಚಿತ್ರತಂಡ ಧೈರ್ಯ ಮಾಡುತ್ತಿದೆ. ಅರ್ಜುನ್ ಜನ್ಯಾ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
ಶಿವರಾಜ್‌ಕುಮಾರ್ ಜೊತೆಗೆ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ '45' ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮುಂಬೈ, ಚೆನ್ನೈ, ಹೈದರಾಬಾದ್‌ಗೆ ತೆರಳಿ ಚಿತ್ರತಂಡ ಪ್ರಚಾರ ಮಾಡುತ್ತಿದೆ. 'ಕೂಲಿ' ಹಾಗೂ 'ವಾರ್- 2' ಸಿನಿಮಾಗಳ ಎದುರು '45' ಸಿನಿಮಾ ರಿಲೀಸ್ ಆಗುತ್ತಿರುವ ಬಗ್ಗೆ ಎದುರಾದ ಪ್ರಶ್ನೆಗೆ ಶಿವಣ್ಣ ಉತ್ತರಿಸಿದ್ದಾರೆ. ಹೈದರಾಬಾದ್ ಸುದ್ದಿಗೋಷ್ಠಿ ವೇಳೆ ಈ ಬಗ್ಗೆ ಮಾತನಾಡಿದ್ದಾರೆ.
"ಎಲ್ಲಾ ಸಿನಿಮಾಗಳು ಚೆನ್ನಾಗಿ ಪ್ರದರ್ಶನವಾಗಬೇಕು. ರಜನಿ ಸರ್, ಜ್ಯೂ. ಎನ್‌ಟಿಆರ್, ಹೃತಿಕ್ ನಾವೆಲ್ಲಾ ಒಂದೇ ಇಂಡಸ್ಟ್ರಿಯಲ್ಲಿದ್ದೀವಿ. ನಾವೆಲ್ಲಾ ಸಹೋದರಂತೆ. ನಾವು ಬಹಳ ಹಿಂದೆಯೇ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿದ್ದೆವು. ನಮಗೆ ಗೊತ್ತಿರಲಿಲ್ಲ ಆ 2 ಸಿನಿಮಾಗಳು ಅದೇ ದಿನ ತೆರೆಗೆ ಬರ್ತಾವೆ ಅಂತ. ನೋಡೋಣ ಏನಾಗುತ್ತೋ. ನಮ್ಮ ಸಿನಿಮಾ ಸಿಜಿ ವರ್ಕ್ ಬಹಳ ಇದೆ. ಕೆನಡಾದಲ್ಲಿ ವರ್ಕ್ ನಡೀತಿದೆ. ಕಾದು ನೋಡೋಣ" ಎಂದು ಶಿವಣ್ಣ ಹೇಳಿದ್ದಾರೆ.
ಸೆಂಚುರಿ ಸ್ಟಾರ್ ಮಾತು ಕೇಳಿದರೆ '45' ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗುವ ಸುಳಿವು ಸಿಗುತ್ತಿದೆ. '45' ಹಾಗೂ 'ಕೂಲಿ' ಎರಡೂ ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಸಿನಿಮಾ ತಡವಾಗುವ ಸಾಧ್ಯತೆಯಿದೆ. ಉಪೇಂದ್ರ ಕೂಡ ಇದೇ ಮಾತನ್ನು ಹೇಳಿದ್ದಾರೆ. ಸಿಜಿ ವರ್ಕ್ ಜಾಸ್ತಿಯಿದೆ. ಸಿನಿಮಾ ಚೆನ್ನಾಗಿ ಬರ್ತಿದೆ ನೋಡೋಣ ಎಂದು ತಿಳಿಸಿದ್ದಾರೆ.
ರಮೇಶ್ ರೆಡ್ಡಿ '45' ಚಿತ್ರಕ್ಕೆ ಹಣ ಹೂಡಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದ್ದು 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.
ರಾಜ್ ಬಿ ಶೆಟ್ಟಿ ಪಾತ್ರದ ಸುತ್ತಾ '45' ಚಿತ್ರದ ಕಥೆ ಸುತ್ತುತ್ತದೆ ಎನ್ನುವುದು ಟೀಸರ್ ನೋಡಿದರೆ ಅರ್ಥವಾಗುತ್ತದೆ. ಆತನ ವಿರುದ್ಧ ಉಪೇಂದ್ರ ನಿಂತಾಗ ಶಿವಣ್ಣ ಬೆಂಬಲಕ್ಕೆ ನಿಲ್ಲುವ ಕಥೆಯಿದೆ. ಆತನಿಗಾಗಿ ಇವರಿಬ್ಬರ ನಡುವೆ ಕಾದಾಟ ನಡೆಯುವಂತಿದೆ.


Click it and Unblock the Notifications











