The Girlfriend Box Office Day 1 ; ಬಾಕ್ಸಾಫೀಸ್ ಕ್ವೀನ್ ರಶ್ಮಿಕಾಗೆ ಆಘಾತ- ಮುಗ್ಗರಿಸಿ ಬಿದ್ದ ದಿ ಗರ್ಲ್‌ಫ್ರೆಂಡ್
09 ವರ್ಷದ ಹಿಂದೆ ಅವಕಾಶಕ್ಕೆ ಕಂಡ ಕಂಡಲೆಲ್ಲ ಆಡಿಷನ್ ಕೊಡುತ್ತಿದ್ದ ರಶ್ಮಿಕಾ ಮಂದಣ್ಣ ಆ ನಂತರ ಹೇಗೆಲ್ಲ ಬೆಳೆದರು ಎನ್ನುವುದನ್ನು ಒಮ್ಮೆ ತಿರುಗಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು. ಇವತ್ತು ರಶ್ಮಿಕಾ ಮಂದಣ್ಣ ಕೇವಲ..
ಕನ್ನಡದ ನಾಯಕಿ ಅಲ್ಲ. ತೆಲುಗು ಚೆಲುವೆ ಅಲ್ಲ. ಬದಲಿಗೆ ರಶ್ಮಿಕಾ ಮಂದಣ್ಣ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್. ಕನ್ನಡದಿಂದ ತೆಲುಗುಗೆ ವಲಸೆ ಹೋಗಿ ಅಲ್ಲಿಂದ ಹಿಂದಿ ಚಿತ್ರರಂಗಕ್ಕೆ ಹೋದ ರಶ್ಮಿಕಾ ಈಗ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ''ಅನಿಮಲ್''.. ''ಛಾವಾ''.. ''ಸಿಕಂದರ್''.. ಹೀಗೆ ಒಂದಾದ ಮೇಲೊಂದು ಚಿತ್ರಗಳನ್ನು ಮಾಡಿದ್ದಾರೆ. ಬ್ಲಾಕ್ ಬಸ್ಟರ್ ಮಹಾರಾಣಿ ಎಂದು ಕರೆಯಲ್ಪಡುತ್ತಿದ್ದಾರೆ.

ಇಂಥಾ ರಶ್ಮಿಕಾ ಮಂದಣ್ಣ ಅಭಿನಯದ '' ದಿ ಗರ್ಲ್‌ಫ್ರೆಂಡ್'' ಈ ವಾರ (ನವೆಂಬರ್ 7 ) ಬಿಡುಗಡೆಯಾಗಿದೆ. ಸಹಜವಾಗಿ ಈ ಚಿತ್ರದ ಮೇಲೆ ನಿರೀಕ್ಷೆಗಳಿವೆ. ಯಾಕೆಂದರೆ ಬಹುದಿನಗಳ ನಂತರ ರಶ್ಮಿಕಾ ಮಾಡಿರುವ ತೆಲುಗು ಸಿನಿಮಾ ಇದು.
ಇನ್ನೂ.. ರಶ್ಮಿಕಾ ಮಂದಣ್ಣ ಹೈದರಾಬಾದ್‌ನ ಸೊಸೆ. ಎಲ್ಲಕ್ಕಿಂತ ಹೆಚ್ಚಾಗಿ ಆಂಧ್ರದಲ್ಲಿ ಇವರ ಆರಾಧಕರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆ ಧಾಂ ಧೂಂ ಎಂಬ ಓಪನಿಂಗ್‌ನ ಚಿತ್ರ ಮೊದಲ ದಿನ ಪಡೆಯದೇ ಇದ್ದರೂ ಕೂಡ ಉತ್ತಮವಾದ ಆರಂಭವನ್ನು ''ದಿ ಗರ್ಲ್‌ಫ್ರೆಂಡ್'' ಪಡೆಯುತ್ತೆ ಎನ್ನುವ ನಂಬಿಕೆ ಹಲವರಲ್ಲಿತ್ತು. ಈ ನಂಬಿಕೆ ಸದ್ಯ ಹುಸಿಯಾಗಿದೆ. ''ದಿ ಗರ್ಲ್‌ಫ್ರೆಂಡ್'' ಮೊದಲ ದಿನವೇ ಮುಗ್ಗರಿಸಿ ಬಿದ್ದಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ ₹ 1.3 ಕೋಟಿಯನ್ನು ಗಳಿಸಿದೆ. ನಿಜಾ.. ಸ್ಟಾರ್ ಹೀರೋಗಳಿರದ ಈ ಚಿತ್ರದ ಈ ಗಳಿಕೆ ನಿಜಕ್ಕೂ ಮೆಚ್ಚುವಂತಹದ್ದೇ.
ಆದರೆ.. ರಶ್ಮಿಕಾ ಮಂದಣ್ಣ ಅವರ ಸ್ಟಾರ್ ಪವರ್‌ಗೆ ಈ ಗಳಿಕೆ ಕಡಿಮೆ ಎನ್ನುವುದು ಹಲವು ಬಾಕ್ಸಾಫೀಸ್ ಪಂಡಿತರ ವಾದ. ಯಾಕೆಂದರೆ ರಶ್ಮಿಕಾ ಮಂದಣ್ಣ ಹಿಂದಿಯಲ್ಲಿ ಮಾಡಿದ್ದ ಮೊದಲ ಚಿತ್ರ ''ಗುಡ್ ಬೈ'' ಹೊರತು ಪಡಿಸಿದರೆ ಇವರ ಬೇರೆ ಯಾವ ಚಿತ್ರ ಕೂಡ ಇಷ್ಟೊಂದು ಕಡಿಮೆ ಹಣವನ್ನು ಗಳಿಸಿಲ್ಲ. ರಶ್ಮಿಕಾ ಮಂದಣ್ಣ ಅವರನ್ನು ನೋಡಲೆಂದೇ ಹಲವರು ಚಿತ್ರಮಂದಿರಕ್ಕೆ ಈ ಹಿಂದೆ ಹೋದ ಉದಾಹರಣೆಗಳಿವೆ.
ಇನ್ನು ''ದಿ ಗರ್ಲ್‌ಫ್ರೆಂಡ್'' ಚಿತ್ರಕ್ಕೆ ವಿಮರ್ಷಕರ ಪ್ರೀತಿ ಸಿಕ್ಕಿದೆ. ರಶ್ಮಿಕಾ ಮಂದಣ್ಣ ಮತ್ತು ಕನ್ನಡಿಗ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರ ಅಭಿನಯದ ಕುರಿತು ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಆದರೂ ಕೂಡ ಚಿತ್ರದ ಗಳಿಕೆ ಅಂದುಕೊಂಡಂತೆ ಆಗಲಿಲ್ಲ. ಈ ಹಿನ್ನೆಲೆ ಇಂದು ಮತ್ತು ನಾಳೆ '' ದಿ ಗರ್ಲ್‌ಫ್ರೆಂಡ್'' ಚಿತ್ರಕ್ಕೆ ತುಂಬಾನೇ ಮುಖ್ಯ. ಬಾಯಿ ಮಾತಿನ ಪ್ರಚಾರದಿಂದ ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬರುತ್ತಾ..? ''ದಿ ಗರ್ಲ್‌ಫ್ರೆಂಡ್'' ಚಿತ್ರಕ್ಕೆ ಹಾಕಿದ ಬಂಡವಾಳ ನಿರ್ಮಾಪಕರಿಗೆ ಮರಳಿ ಬರುತ್ತಾ..? ಚಿತ್ರ ಒಟ್ಟಾರೆ ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











