Sitaare Zameen Par Box Office ; ಪ್ರಶಾಂತ್ ನೀಲ್-ಪ್ರಭಾಸ್ ಸಲಾರ್ ಚಿತ್ರದ ದಾಖಲೆ ಮುರಿದ ಆಮಿರ್ ಖಾನ್ ಸಿತಾರೆ..!
ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳಿಗೆ ಆವರಿಸಿಕೊಂಡ ಪ್ಯಾನ್ ಇಂಡಿಯಾ ಜ್ವರ ಇನ್ನೂ ಕಡಿಮೆಯಾಗಿಲ್ಲ. ಬದಲಿಗೆ ಸ್ಯಾಂಡಲ್‌ವುಡ್ ಸೋತು.. ಬಳಲಿ.. ದಣಿದು.. ಐಸಿಯು ಸೇರಿದ್ದರೂ ಕೂಡ ಇನ್ನು ನಮ್ಮಲ್ಲಿ ಅನೇಕರು ಪ್ಯಾನ್ ಇಂಡಿಯಾ ಭಜನೆ ಮಾಡುತ್ತಿದ್ದಾರೆ. ಇನ್ನು .. ತೆಲುಗು ಚಿತ್ರರಂಗ ಕೂಡ ಇದೇ ತರಹದ ಜ್ವರದಿಂದ ನರಳುತ್ತಿದೆ. ಇರುವುದರಲ್ಲಿ ಕಾಲಿವುಡ್‌ಗೆ ಈ ಜ್ವರ ಇಳಿದಿದ್ದು ಮಲಯಾಳಂನವರು
ಈ ಸಾಂಕ್ರಾಮಿಕ ರೋಗದಿಂದ ಮೊದಲಿಂದ ಅಂತರವನ್ನು ಕಾಪಾಡಿಕೊಂಡೇ ಬಂದಿದ್ದಾರೆ. ಇದಕ್ಕೆ ಇತ್ತೀಚೆಗೆ ಅಲ್ಲಿ ತೆರೆಗೆ ಬಂದು ಗೆದ್ದ ಚಿತ್ರಗಳೇ ಉದಾಹರಣೆ. ಇನ್ನೂ ಬಾಲಿವುಡ್‌ನಲ್ಲಿ ಪ್ಯಾನ್ ಇಂಡಿಯಾ ಎಂಬ ಮಾಯೆಯಲ್ಲಿ ಎಲ್ಲರು ಸಿಲುಕಿಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ನಮ್ಮದು ಪ್ಯಾನ್ ಇಂಡಿಯಾ ಚಿತ್ರ ಎನ್ನುತ್ತಾರಷ್ಟೇ.

ಮಿಕ್ಕವರು ತಮ್ಮ ಪಾಡಿಗೆ ತಾವು ತಮ್ಮ ಭಾಷೆಯಲ್ಲಿ ಕೆಲಸ ಮಾಡಿಕೊಂಡು ಮುಂದಕ್ಕೋಗುತ್ತಿದ್ದಾರೆ. ವಿಶೇಷ ಅಂದರೆ ಇವರಲ್ಲಿ ಕೆಲವರು ಗೆಲುವನ್ನು ಕೂಡ ಕಾಣುತ್ತಿದ್ದಾರೆ. ಆಮಿರ್ ಖಾನ್ ಇದಕ್ಕೆ ಸದ್ಯದ ಉದಾಹರಣೆ.
ಹೌದು. ಇನ್ನೇನು.. ಆಮಿರ್ ಖಾನ್ ಅವರ ಸುವರ್ಣ ಯುಗ ಅಂತ್ಯವಾಯ್ತು ಎಂದೇ ಅನೇಕರು ಅಂದುಕೊಂಡಿದ್ದರು. ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಮಾಡುವ ಮೂಲಕ ತಮ್ಮ ಕಾಲ ಮೇಲೆ ಆಮಿರ್ ತಾವೇ ಚಪ್ಪಡಿ ಕಲ್ಲು ಎಳೆದುಕೊಂಡರು ಎಂದೇ ಭಾವಿಸಿದ್ದರು. ಆದರೆ.. ಸಿತಾರೆ ಜಮೀನ್ ಪರ್ ಈ ಎಲ್ಲ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದೆ. ಅನೇಕರಲ್ಲಿನ ಅಭಿಪ್ರಾಯ ಬದಲಿಸಿದೆ.
ಬಿಡುಗಡೆಯಾದ ದಿನದಿಂದಲೇ ಎಲ್ಲರನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಾ ಬಂದ ಈ ಚಿತ್ರ ಸದ್ಯ ದಾಖಲೆಯ ಮೇಲೆ ದಾಖಲೆಯನ್ನು ಬರೆಯುತ್ತಿದೆ. ಹಲವು ದಾಖಲೆಗಳನ್ನು ಮುರಿಯುತ್ತಿದೆ. ಇದಕ್ಕೆ ಒಂದು ಕೈಗನ್ನಡಿ ಎಂಬಂತೆ ಬಾಲಿವುಡ್ ಬಾಕ್ಸಾಫೀಸ್‌ನ ರಿಪೋರ್ಟ್ ಹಂಚಿಕೊಳ್ಳುವ www.koimoi.com ಸದ್ಯ ಒಂದು ವರದಿಯನ್ನು ಹಂಚಿಕೊಂಡಿದೆ.
ಆ ಪ್ರಕಾರ ಸಿತಾರೆ ಜಮೀನ್ ಪರ್ ಚಿತ್ರ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಜೋಡಿಯ ಸಲಾರ್ ಚಿತ್ರವನ್ನು ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿದೆ. ಕಂಗನಾ ರಣಾವತ್ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ ತನು ವೆಡ್ಸ್ ಮನು ರಿಟರನ್ಸ್ ಚಿತ್ರದ ಗಳಿಕೆಯನ್ನು ಕೂಡ ಹಿಂದಿಕ್ಕಿದೆ.

ಹೌದು, www.koimoi.comನ ವರದಿಯ ಪ್ರಕಾರ ಸಲಾರ್ ಹಿಂದಿ ಅವತರಣಿಕೆ ಬಾಕ್ಸಾಫೀಸ್‌ನಲ್ಲಿ ₹ 152 ಕೋಟಿಯನ್ನು ಗಳಿಸಿತ್ತು. ಸಿತಾರೆ ಜಮೀನ್ ಪರ್ ಈ ಗಳಿಕೆಯನ್ನು ಹಿಂದಿಕ್ಕಿದ್ದು ಈ 21 ದಿನದಲ್ಲಿ ₹152.44 ಕೋಟಿಯನ್ನು ಗಳಿಸಿದೆ. ಇನ್ನು ಕಂಗನಾ ರಣಾವತ್ ಅಭಿನಯದ ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರ ಕೂಡ ಸಲಾರ್‌ನಷ್ಟೇ ಅಂದರೆ ₹ 152 ಕೋಟಿಯನ್ನೇ ಗಳಿಸಿತ್ತು. ಈ ದಾಖಲೆ ಕೂಡ ಸದ್ಯ ಉಡೀಸ್ ಆಗಿದೆ.
ಇನ್ನು ಬಾಲಿವುಡ್ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಮತ್ತೊಂದು ವೆಬ್ ಸೈಟ್ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಸಿತಾರೆ ಜಮೀನ್ ಪರ್ ಈ 21 ದಿನದಲ್ಲಿ ₹154.35 ಕೋಟಿಯನ್ನು ಗಳಿಸಿದೆ. ಹಾಗಿದ್ದರೆ ಸಿತಾರೆ ಜಮೀನ್ ಪರ್ ಚಿತ್ರದ ವಾರದ ಗಳಿಕೆ ಎಷ್ಟು ಎಂದು ತಿಳಿಯಲು ಮುಂದೆ ಓದಿ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ 'ಸಿತಾರೆ ಜಮೀನ್ ಪರ್' ಚಿತ್ರದ 21 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ವಾರ - ₹ 88.9 ಕೋಟಿ
ಎರಡನೇ ವಾರ - ₹ 46.5 ಕೋಟಿ
ಮೂರನೇ ವಾರ - ₹ 18.95 ಕೋಟಿ
ಒಟ್ಟು ಗಳಿಕೆ - ₹ 154.35 ಕೋಟಿ
ಹೀಗೆ ಸದ್ಯ ಸಿತಾರೆ ಜಮೀನ್ ಪರ್ ಚಿತ್ರ ಈ 21 ದಿನದಲ್ಲಿ ₹ 154.35 ಕೋಟಿ ಹಣವನ್ನು ಗಳಿಸಿದ್ದು ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಮತ್ತು ರಣ್ವೀರ್ ಸಿಂಗ್ -ಆಲಿಯಾ ಭಟ್ ಅಭಿನಯದ ರಾಕಿ ಔರ್ ರಾಣಿ ಕೀ ಪ್ರೇಮಕಥಾ ಚಿತ್ರದ ಗಳಿಕೆಯನ್ನು ಕೂಡ ಈ ಚಿತ್ರ ಹಿಂದಿಕ್ಕಿದೆ ಎಂದು www.koimoi.com ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ಸಿತಾರೆ ಜಮೀನ್ ಪರ್ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications