Su From So Day 1 Boxoffice: ಮೊದಲ ದಿನ ಬಾಕ್ಸಾಫೀಸ್ ಶೇಕ್ ಮಾಡಿದ 'ಸು ಫ್ರಂ ಸೋ'; 'ಎಕ್ಕ' ದಾಖಲೆ ಮುರೀತಾ?
ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೊಸಬರ 'ಸು ಫ್ರಂ ಸೋ' ಆರ್ಭಟ ಜೋರಾಗಿದೆ. ಎಲ್ಲೆಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ರಾಜ್ ಬಿ. ಶೆಟ್ಟಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಶನಿವಾರ ಹಾಗೂ ಭಾನುವಾರವೂ ಚಿತ್ರಕ್ಕೆ ಬುಕ್ಕಿಂಗ್ ಜೋರಾಗಿದೆ.
ಜೆಪಿ ತುಮ್ಮಿನಾಡು ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಇದು. ಬಹುತೇಕ ಹೊಸ ಪ್ರತಿಭೆಗಳೇ ಚಿತ್ರದಲ್ಲಿದ್ದಾರೆ. ಕರಾವಳಿ ಹಿನ್ನೆಲೆಯ ಒಂದು ಸಿಂಪಲ್ ಕಥೆಯನ್ನು ಚಿತ್ರದಲ್ಲಿ ಹೇಳಿದ್ದಾರೆ. ಕಲಾವಿದರು ಟೈಮಿಂಗ್ ಸಖತ್ತಾಗಿದೆ. ಅದೇ ಸಿನಿಮಾವನ್ನು ಸಖತ್ ಎಂಜಾಯ್ ಮಾಡುವಂತೆ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಭಾಷೆಗಳಿಗೆ 'ಸು ಫ್ರಂ ಸೋ' ಸಿನಿಮಾ ಡಬ್ ಮಾಡಿ ಬಿಡಿ ಎಂದು ಸಿನಿರಸಿಕರು ಕಾಮೆಂಟ್ ಮಾಡುತ್ತಿದ್ದಾರೆ.

ಸಣ್ಣ ಮಟ್ಟದಲ್ಲೇ 'ಸು ಫ್ರಂ ಸೋ' ಸಿನಿಮಾ ಬಿಡುಗಡೆಯಾಗಿದೆ. ಆದರೆ ಕಲೆಕ್ಷನ್ ಮಾತ್ರ ಜೋರಾಗಿದೆ. ಬೆಂಗಳೂರು ಬಿಟ್ಟು ಹೊರಭಾಗದ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಬಿಡುಗಡೆ ಆಗಿಲ್ಲ. ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ನಮ್ಮ ಊರಲ್ಲೂ ಸಿನಿಮಾ ರಿಲೀಸ್ ಮಾಡಿ ಎಂದು ಸಿನಿರಸಿಕರು ಮನವಿ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ದರ್ಬಾರ್ ನಡೆಸುತ್ತಿದೆ. ಸಣ್ಣ ಸಣ್ಣ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಹುತೇಕ ಕಡೆಗಳಲ್ಲಿ ಪ್ರದರ್ಶನವಾಗುತ್ತಿದೆ. ನಿಧಾನವಾಗಿ ಶೋಗಳ ಸಂಖ್ಯೆ, ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ.
ಫಸ್ಟ್ ಡೇ ಕಲೆಕ್ಷನ್
'ಸು ಫ್ರಂ ಸೋ' ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಚಿತ್ರತಂಡ ನೀಡಿಲ್ಲ. ಆದರೆ ಬಾಕ್ಸ್ ಆಫೀಸ್ ಟ್ರ್ಯಾಕರ್ sacnilk.com ಪ್ರಕಾರ 90 ಲಕ್ಷದಿಂದ 1 ಕೋಟಿ ರೂ.ವರೆಗೆ ಸಿನಿಮಾ ಕಲೆಕ್ಷನ್ ಮಾಡಿದೆ. ಸ್ಟಾರ್ ನಟರಿಲ್ಲದ, ಭಾರೀ ಪ್ರಚಾರ ಇಲ್ಲದ ಹೊಸಬರ ಚಿತ್ರ ಈ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.
'ಎಕ್ಕ' ಹಿಂದಿಕ್ಕಿದ ಚಿತ್ರ
ಬುಕ್ ಮೈಶೋನಲ್ಲಿ 'ಸು ಫ್ರಂ ಸೋ' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಬಹುತೇಕರು ಆನ್‌ಲೈನ್‌ನಲ್ಲೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಪೇಯ್ಡ್ ಪ್ರೀಮಿಯರ್ ಶೋಗಳಲ್ಲಿ 18 ಸಾವಿರ ಟಿಕೆಟ್ ಬುಕ್ ಆಗಿತ್ತು. ಇನ್ನು ಮೊದಲ ಸಿನ 74 ಸಾವಿರ ಟಿಕೆಟ್ ಬುಕ್ ಆಗಿ ಹುಬ್ಬೇರಿಸುವಂತೆ ಮಾಡಿದೆ. ಒಂದು ಟಿಕೆಟ್ ದರ ಸರಾಸರಿ 200 ರೂ. ಎಂದು ಲೆಕ್ಕ ಹಾಕಿದ್ರು, 1.50 ಕೋಟಿ ರೂ. ಕಲೆಕ್ಷನ್ ಮಾಡಿದಂತಾಗುತ್ತದೆ. ಬಹುತೇಕ ಟಿಕೆಟ್ ಆನ್‌ಲೈನ್‌ನಲ್ಲೇ ಬುಕ್ ಆಗಿದೆ. 'ಎಕ್ಕ' ಚಿತ್ರಕ್ಕೆ ಮೊದಲ ದಿನ 35 ಸಾವಿರ ಟಿಕೆಟ್ ಬಿಎಂಎಸ್‌ನಲ್ಲಿ ಸೇಲ್ ಆಗಿತ್ತು.

'ಎಕ್ಕ' ಚಿತ್ರಕ್ಕೆ ಆಫ್‌ಲೈನ್‌ನಲ್ಲಿ ಹೆಚ್ಚು ಟಿಕೆಟ್ ಮಾರಾಟವಾಗಿತ್ತು. ಮೊದಲ ದಿನ 'ಎಕ್ಕ' ಸಿನಿಮಾ 1.40 ಕೋಟಿ ರೂ. ಇಂದ 1.60 ಕೋಟಿ ರೂ ಕಲೆಕ್ಷನ್ ಮಾಡಿದ್ದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕಿದ್ದರು. ಹೆಚ್ಚು ಕಮ್ಮಿ 'ಸು ಫ್ರಂ ಸೋ' ಕೂಡ ಅದೇ ರೀತಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ.
ಕನ್ನಡ ಚಿತ್ರಗಳ ಆರ್ಭಟ
ಒಟ್ಟಾರೆ ಕನ್ನಡ ಸಿನಿಮಾಗಳು ಮತ್ತೆ ಸದ್ದು ಮಾಡಲು ಆರಂಭಿಸಿವೆ. ಒಳ್ಳೆ ಸಿನಿಮಾ ಮಾಡಿದರೆ ಖಂಡಿತ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರ್ತಾರೆ ಎನ್ನುವುದು ಸಾಬೀತಾಗಿದೆ. ಕಳೆದ ವಾರ ತೆರೆಗೆ ಬಂದಿದ್ದ 'ಎಕ್ಕ' ಹಾಗೂ 'ಜ್ಯೂನಿಯರ್' ಚಿತ್ರಗಳು ಗೆಲುವಿನ ಓಟ ಮುಂದುವರೆಸಿವೆ. ಯಶಸ್ವಿಯಾಗಿ 2ನೇ ವಾರಕ್ಕೆ ಸಿನಿಮಾಗಳು ಕಾಲಿಟ್ಟಿವೆ. ಇದೀಗ ಆ ಚಿತ್ರಗಳ ಜೊತೆಗೆ 'ಸು ಫ್ರಂ ಸೋ' ಚಿತ್ರ ಸೇರಿಕೊಂಡಿದೆ. ಈಗಾಗಲೇ 'ಎಕ್ಕ' ಸಿನಿಮಾ ಕಲೆಕ್ಷನ್ 10 ಕೋಟಿ ರೂ. ಗಡಿಯಲ್ಲಿದೆ. ಮುಂದಿನ ವಾರ 'ಕೊತ್ತಲವಾಡಿ' ಸಿನಿಮಾ ಬಿಡುಗಡಗೆ ಸಜ್ಜಾಗಿದೆ. ಆ ಚಿತ್ರವೂ ಕೂತೂಹಲ ಮೂಡಿಸಿದೆ.


Click it and Unblock the Notifications











