Bharat Bhhagya Viddhaata BO Day 4 ; ಬಾಕ್ಸಾಫೀಸ್‌ನಲ್ಲಿ ನಡೆಯದ ಪವಾಡ, ಹಲವಡೆ ಕಂಗನಾ 'ಭಾರತ್ ಭಾಗ್ಯ ವಿಧಾತ' ಎತ್ತಂಗಡಿ
ಸಿನಿಮಾ ಅಂದರೆ ಗಿಮಿಕ್ ಅಲ್ಲ. ಗಿಮಿಕ್ ಮಾಡೋರಿಗೆ ಇಲ್ಲಿ ಉಳಿಗಾಲ ಇಲ್ಲ. ಯಾಕೆಂದರೆ ಸಿನಿಮಾ ಅಂದರೆ ಅದೊಂದು ತಪಸ್ಸು. ಧ್ಯಾನ. ಚಿತ್ರಕ್ಕೆ ಇಲ್ಲಿ ಕೇವಲ ಹಣ ಮಾತ್ರ ಮುಖ್ಯ ಅಲ್ಲ. ತನು-ಮನ ಅರ್ಪಿಸಿ ಸಿನಿಮಾ ಮಾಡಿದಾಗಲೇ ಪ್ರಯತ್ನಕ್ಕೆ ಫಲ ಸಿಗುತ್ತೆ. ಪ್ರೇಕ್ಷಕರ ಆಶೀರ್ವಾದ ಸಿಗುತ್ತೆ.
ಅದನ್ನೂ ಮಾಡದೇ ಪೆಟ್ರೋಲ್ ಕುಡಿದರೂ ಅಷ್ಟೇ.. ಫಿನಾಯಿಲ್ ಕುಡಿದರೂ ಅಷ್ಟೇ. ಉಚಿತವಾಗಿ ಟಿಕೆಟ್ ಹಂಚಿದರು ಅಷ್ಟೇ. ಎಷ್ಟೇ ತಿಪ್ಪರಲಾಗ ಹಾಕಿದರೂ ಕೂಡ ಅಷ್ಟೇ. ಪ್ರೇಕ್ಷಕರು ಇಲ್ಲಿ ಕ್ಯಾರೇ ಎನ್ನಲ್ಲ. ಇದಕ್ಕೆ ಕಂಗನಾ ರಣಾವತ್ ಅಭಿನಯದ ''ಭಾರತ್ ಭಾಗ್ಯ ವಿಧಾತ'' ಸದ್ಯದ ತಾಜಾ ಉದಾಹರಣೆ.

ಹೌದು, ಕಂಗನಾ ರಣಾವತ್ ಅವರ ಮತ್ತೊಂದು ಕನಸು ಕಮರಿದೆ. ಸೋಲಿನ ಖಾತೆಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ತುಂಬಾನೇ ನಿರೀಕ್ಷೆ ಮೂಡಿಸಿದ್ದ ಸತ್ಯ ಕಥೆಯನ್ನಾಧರಿಸಿದ ''ಭಾರತ್ ಭಾಗ್ಯ ವಿಧಾತ'' ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದು ನಾಲ್ಕು ದಿನದಲ್ಲಿ ಕೇವಲ ₹4.80 ಕೋಟಿಯನ್ನು ಮಾತ್ರ ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.
ಸ್ಯಾಕ್ನಿಲ್ ಪ್ರಕಾರ ''ಭಾರತ್ ಭಾಗ್ಯ ವಿಧಾತ'' ಚಿತ್ರದ 4 ದಿನದ ಗಳಿಕೆ ಈ ಕೆಳಗಿನಂತೆ ಇದೆ
| ದಿನ | ಭಾರತದ ಒಟ್ಟು ನಿವ್ವಳ ಗಳಿಕೆ (India Net) |
|---|---|
| ಮೊದಲ ದಿನ - ಶುಕ್ರವಾರ | ₹1.00 ಕೋಟಿ |
| ಎರಡನೇ ದಿನ - ಶನಿವಾರ | ₹1.45 ಕೋಟಿ |
| ಮೂರನೇ ದಿನ - ಭಾನುವಾರ | ₹1.80 ಕೋಟಿ |
| ನಾಲ್ಕನೇ ದಿನ - ಸೋಮವಾರ * | ₹0.55 ಕೋಟಿ * |

ಕೈ ಹಿಡಿಯದ ಫ್ರಿ ಟಿಕೆಟ್ ಆಫರ್
ಹೌದು, ಅಸಲಿಗೆ ಪ್ರೇಕ್ಷಕರನ್ನು ಸೆಳೆಯಲು, ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು, ಚಿತ್ರತಂಡ ಒಂದು ಟಿಕೆಟ್ ಖರೀದಿಸಿದರೆ ಇನ್ನೊಂದು ಉಚಿತ ಎನ್ನುವ ಘೋಷಣೆ ಮಾಡಿತ್ತು. ಕಂಗನಾ ರಣಾವತ್ ಅವರಂತಹ ಸ್ಟಾರ್ ನಟಿ ಚಿತ್ರದಲ್ಲಿದ್ದರೂ ಮಾಡಲಾದ ಈ ಸರ್ಕಸ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಯ್ತು.
ಇನ್ನು ಸಾಮಾನ್ಯವಾಗಿ ಇಂತಹ ಆಫರ್ ಗಳನ್ನು ವಾರದ ಮಧ್ಯದಲ್ಲಿ ನೀಡಲಾಗುತ್ತೆ. ಆದರೆ.. ''ಭಾರತ್ ಭಾಗ್ಯ ವಿಧಾತ'' ಚಿತ್ರಕ್ಕೆ ಬಿಡುಗಡೆಯಾದ ಎರಡನೇ ದಿನವೇ ಬೈ 1 ಗೆಟ್ 1 ಆಫರ್ ನೀಡಲಾದ ಹಿನ್ನೆಲೆ ಹಲವರು ವ್ಯಂಗ್ಯವಾಡಿದ್ದರು.
ಆದರೂ ಕೂಡ ಚಿತ್ರತಂಡಕ್ಕೆ ಈ ಆಫರ್ ಕೈ ಹಿಡಿಯುತ್ತೆ ಎನ್ನುವ ವಿಶ್ವಾಸ ಇತ್ತು. ಆದರೆ ಅಂತಹ ಹೇಳಿಕೊಳ್ಳುವಂತಹ ಲಾಭ, ಗಳಕೆ, ಈ ಆಫರ್ ದಿಂದ ಆಗಲಿಲ್ಲ ಎನ್ನುವುದೇ ವಾಸ್ತವ.
ಹಲವು ಕಡೆ ಎತ್ತಂಗಡಿ
ಚಿತ್ರಕ್ಕೆ ಸಿಕ್ಕ ಈ ನೀರಸ ಪ್ರತಿಕ್ರಿಯೆಯಿಂದ ಹಲವಡೆ ''ಭಾರತ್ ಭಾಗ್ಯ ವಿಧಾತ'' ಚಿತ್ರವನ್ನು ಎತ್ತಂಗಡಿ ಮಾಡಲಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಶುಕ್ರವಾರ (ಜೂನ್ 12) ಭಾರತದಲ್ಲಿ 2,181 ಪ್ರದರ್ಶನಗಳನ್ನು ಈ ಚಿತ್ರ ಕಂಡಿತ್ತು. ಆದರೆ ಇಂದು ಈ ಸಂಖ್ಯೆ 1,830ಕ್ಕೆ ಇಳಿಕೆ ಕಂಡಿದೆ.
ಇದಲ್ಲದೇ ಕಂಗನಾ ಅವರ ಇಮೇಜ್ ತುಂಬಾ ಸ್ಟ್ರಾಂಗ್ ಆಗಿದೆ. ಆದರೆ ಅದು ಟಿವಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ವರ್ಕ್ ಆಗುತ್ತದೆ, ಚಿತ್ರಮಂದಿರಗಳಲ್ಲಲ್ಲ ಎಂದು ಬಿಹಾರದ ಪ್ರಮುಖ ಪ್ರದರ್ಶಕರಾದ (Exhibitor) ರೋಷನ್ ಸಿಂಗ್ ಹೇಳಿದ್ದಾರೆ ಎಂದು ''ಡೆಕ್ಕನ್ ಕ್ರೋನಿಕಲ್'' ವರದಿ ಮಾಡಿದೆ. ಚಿತ್ರಮಂದಿರಗಳ ಮಾಲೀಕರು ''ಭಾರತ್ ಭಾಗ್ಯ ವಿಧಾತ'' ಸಿನಿಮಾಗಳ ಶೋಗಳನ್ನು ಈಗಾಗಲೇ ರದ್ದುಗೊಳಿಸುತ್ತಿದ್ದಾರೆ ಎಂದಿದ್ದಾರೆ ಎಂದು ಕೂಡ ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
''ಭಾರತ್ ಭಾಗ್ಯ ವಿಧಾತ'' ಚಿತ್ರದ ಪ್ರದರ್ಶನದ ಅಂಕಿ -ಅಂಶಗಳ ವಿವರ ಈ ಕೆಳಗಿನಂತೆ ಇದೆ
| ದಿನ | ಪ್ರದರ್ಶನಗಳು (Shows) | ಆಕ್ಯುಪೆನ್ಸಿ (Occupancy) |
|---|---|---|
| ಮೊದಲ ದಿನ - ಶುಕ್ರವಾರ | 2,181 | 11.0% |
| ಎರಡನೇ ದಿನ - ಶನಿವಾರ | 1,956 | 17.0% |
| ಮೂರನೇ ದಿನ -ಭಾನುವಾರ | 1,914 | 21.0% |
| ನಾಲ್ಕನೇ ದಿನ - ಸೋಮವಾರ | 1,830 | 11.0% |
ತೆರಿಗೆ ವಿನಾಯಿತಿಯಿಂದಲೂ ಆಗಲಿಲ್ಲ ಲಾಭ
ಹರಿಯಾಣದಂತಹ ರಾಜ್ಯಗಳಲ್ಲಿ ''ಭಾರತ್ ಭಾಗ್ಯ ವಿಧಾತ'' ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಸಾಮಾನ್ಯವಾಗಿ ತೆರಿಗೆ ವಿನಾಯಿತಿ ಸಿಕ್ಕಾಗ ಮಧ್ಯಮ ವರ್ಗದ ಕುಟುಂಬಗಳು ಚಿತ್ರಮಂದಿರಗಳತ್ತ ಬರುತ್ತಾರೆ. ಆದರೆ ''ಭಾರತ್ ಭಾಗ್ಯ ವಿಧಾತ'' ಚಿತ್ರಕ್ಕೆ ಈ ತಂತ್ರ ಕೂಡ ಕೆಲಸ ಮಾಡಲಿಲ್ಲ. ಕಥೆಯಲ್ಲಿ ದಮ್ಮಿಲ್ಲದಿದ್ದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ತಮ್ಮ ಸಮಯ ವ್ಯರ್ಥ ಮಾಡುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ.
ಒಟ್ನಲ್ಲಿ ಸದ್ಯ ಕಂಗನಾ ರಣಾವತ್ ಮತ್ತೊಮ್ಮೆ ಸೋತಿದ್ಧಾರೆ. ಈ ಸತತ ಸೋಲುಗಳಿಂದ ಕಂಗನಾ ಪಾಠ ಕಲಿಯುತ್ತಾರಾ..? ಮುಂಬರುವ ದಿನಗಳಲ್ಲಿ ಮೈಕೊಡವಿ ಎದ್ದು ನಿಲ್ಲುತ್ತಾರಾ..? ''ಭಾರತ್ ಭಾಗ್ಯ ವಿಧಾತ'' ಅಂತಿಮವಾಗಿ ಎಷ್ಟು ಹಣ ಗಳಿಸುತ್ತೆ ..? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.
.


Click it and Unblock the Notifications