Jaat Box Office Day 3 ; ಐಪಿಎಲ್ ನಡುವೆಯೂ ಬಾಕ್ಸಾಫೀಸ್‌ನಲ್ಲಿ ಸನ್ನಿ ಡಿಯೋಲ್ ಅಬ್ಬರ..!
ಕಳೆದ ವರ್ಷ ಬಾಲಿವುಡ್ ಚಿನ್ನದ ಬೆಳೆ ಬೆಳೆಯಲಿಲ್ಲ.ಭೂಲ್ ಭೂಲಯ್ಯ 3, ಸಿಂಗಂ ಅಗೇನ್, ಹೊರತು ಪಡಿಸಿದರೆ ಬೇರೆ ಯಾವ ಸೂಪರ್ ಸ್ಟಾರ್ ಅಭಿನಯಿಸಿದ ಚಿತ್ರ ಗೆಲ್ಲಲಿಲ್ಲ.ಆದರೆ, ಆಶ್ಚರ್ಯಕರವೆಂಬಂತೆ ಕಳೆದ ವರ್ಷ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರಗಳು ಹಿಂದಿ ಉದ್ಯಮದ ಕೈ ಹಿಡಿದಿವೆ.ಮುಂಜ್ಯಾ, ಸ್ತ್ರೀ 2 ಅಂತಹ ಚಿತ್ರಗಳು ಹಾಕಿದ ಬಂಡವಾಳದ ಮೇಲೆ ಭಾರೀ ಭಯಂಕರ ಲಾಭವನ್ನು ಮಾಡಿವೆ.
ಈ ವರ್ಷ ಕೂಡ ಈ ಟ್ರೆಂಡ್ ಮುಂದುವರೆಯುವ ನಿರೀಕ್ಷೆ ಹಿಂದಿ ಉದ್ಯಮಕ್ಕಿದೆ. ಇದರ ನಡುವೆ ಸ್ಟಾರ್‌ಗಳ ಮೇಲೆ ಕೂಡ ಬ್ಲಾಕ್‌ಬಸ್ಟರ್ ರಿಸಲ್ಟ್ ಕೊಡುವ ಒತ್ತಡ ಇದೆ. ಆದರೆ ಸಲ್ಮಾನ್ ಖಾನ್ ಈ ವರ್ಷ ಸೋಲಿನ ಮೂಲಕ ತಮ್ಮ ಖಾತೆ ತೆರೆದಿದ್ದಾರೆ. ಸಿಕಂದರ್ ಅಂದುಕೊಂಡ ವ್ಯಾಪಾರ ಮಾಡಲಿಲ್ಲ. ಇನ್ನು, ಶಾರುಖ್ ಖಾನ್ ಅಭಿನಯದ ಯಾವ ಚಿತ್ರ ಕೂಡ ಈ ವರ್ಷ ತೆರೆಗೆ ಬರುವುದಿಲ್ಲ. ಅಮೀರ್ ಖಾನ್ ಚಿತ್ರ ಬರುವುದು ವರ್ಷದ ಅಂತ್ಯಕ್ಕೆ. ಇನ್ನು ಅಕ್ಷಯ್ ಕುಮಾರ್ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ.

ಹೀಗಾಗಿ ಅಜಯ್ ದೇವಗನ್ ಮತ್ತು ಸನ್ನಿ ಡಿಯೋಲ್ ಅವರ ಮೇಲೀಗ ಬಾಲಿವುಡ್ ಭರವಸೆಯನ್ನಿಟ್ಟು ಕುಂತಿದೆ. ಈ ಭರವಸೆಗೆ ತಕ್ಕಂತೆ ಇಬ್ಬರ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಾವಾ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಸನ್ನಿ ಡಿಯೋಲ್ ಅಭಿನಯದ ಜಾಟ್ ನಿಧಾನಕ್ಕೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
ಹೌದು, ಕಳೆದ ಗುರುವಾರ ತೆರೆಗೆ ಬಂದ ಜಾಟ್ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರ ಆರಕ್ಕೇರದೇ ಮೂರಕ್ಕಿಳಿಯದೇ ನಿಂತ ಜಾಗದಲ್ಲಿಯೇ ನಿಂತುಕೊಂಡಿದೆ. ಚಿತ್ರದ ಗಳಿಕೆಯ ಲೆಕ್ಕಾಚಾರವನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಜಾಟ್ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ಯ ₹25 ಕೋಟಿಯ ಗಡಿಯನ್ನು ದಾಟಿದೆ. ಮೊದಲ ದಿನ ₹9.50 ಕೋಟಿ ಹಣವನ್ನು ಗಳಿಸಿದ್ದ ಈ ಚಿತ್ರ ನಿನ್ನೆ ₹10 ಕೋಟಿಯನ್ನು ಗಳಿಸಿದೆ.
ಮೊನ್ನೆ ಶುಕ್ರವಾರ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡಿತ್ತಾದರೂ ನಿನ್ನೆ ಶನಿವಾರ ಪ್ರೇಕ್ಷಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅದರಲ್ಲಿಯೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಜಾಟ್ ಅನೇಕ ಕಡೆ ಹೌಸ್‌ಫುಲ್ ಪ್ರದರ್ಶನವನ್ನು ಕಂಡಿದೆ. ಇನ್ನು, ಇಂದು ಚಿತ್ರದ ಗಳಿಕೆ ಇನ್ನು ಹೆಚ್ಚಾಗುವ ಸಾಧ್ಯತೆ ಇದ್ದು ಬಾಲಿವುಡ್ ಪಂಡಿತರು ಜಾಟ್ ಇಂದು ₹15 ಕೋಟಿ ಗಳಿಸಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.
ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಜಾಟ್ ಚಿತ್ರದ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ - ₹ 9.5 ಕೋಟಿ
ಎರಡನೇ ದಿನ - ₹ 7 ಕೋಟಿ
ಮೂರನೇ ದಿನ - ₹ 10 ಕೋಟಿ
ಒಟ್ಟು ಗಳಿಕೆ - ₹ 26.5 ಕೋಟಿ
ಇನ್ನುಳಿದಂತೆ ಜಾಟ್ ಚಿತ್ರದಲ್ಲಿ ಸನ್ನಿ ಡಿಯೋಲ್ ಎದುರು ಖಳನಾಯಕನಾಗಿ ರಣ್‌ದೀಪ್ ಹೂಡಾ ಕಾಣಿಸಿಕೊಂಡಿದ್ದಾರೆ. ರೆಜಿನಾ ಕ್ಯಾಸಂಡ್ರಾ, ವಿನೀತ್ ಕುಮಾರ್ ಸಿಂಗ್, ಸಯಾಮಿ ಖೇರ್ ಚಿತ್ರದಲ್ಲಿದ್ದಾರೆ.ತೆಲುಗು ನಿರ್ದೇಶಕ ಗೋಪಿಚಂದ್ ಮಲಿನೇನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ.
Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











