ಒಂದು ದಶಕದ ಶಾಪ ವಿಮೋಚನೆ ; 10 ವರ್ಷಗಳ ನಂತರ ಗೆದ್ದ ಸೂರ್ಯ-18 ಕೋಟಿ ಲಾಭ ಕಂಡ 'ಕರುಪ್ಪು'
ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಸೋಲೇ ಗೆಲುವಿನ ಸೋಪಾನ ಎಂದು ನಿರಂತರ ಪ್ರಯತ್ನ ಮಾಡುತ್ತಾರೆ.
ಆದರೂ ಕೂಡ ಒಮ್ಮೊಮ್ಮೆ ಅದೆಷ್ಟೇ ಪ್ರಯತ್ನವನ್ನು ಮಾಡಿದರೂ ಕೂಡ ಗೆಲುವು ಎನ್ನುವುದು ಸಿಗದೇ ಮತ್ತೆ ಸತಾಯಿಸುತ್ತೆ. ಇಂಥಹದ್ದೊಂದು ಸೋಲಿನ ಕಮರಿಗೆ ಬಿದ್ದು ಒದ್ದಾಡುತ್ತಿದ್ದ ಸೂರ್ಯ ಸದ್ಯ ಮೈಕೊಡವಿ ಎದ್ದು ನಿಂತಿದ್ದಾರೆ. ಸಾಲು ಸಾಲು ಸೋಲುಗಳ ನಂತರ ''ಕರುಪ್ಪು'' ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಹೌದು, ''ಗಜಿನಿ''.. ''ಪಿತಾಮಗನ್''.. ''ಕಾಕ್ಕ-ಕಾಕ್ಕ''ದಂತಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು ತಮಿಳು ನಟ ಸೂರ್ಯ. ''ಸಿಂಗಂ'' ಅನ್ನೋ ಸರಣಿ ಸಿನಿಮಾವಂತೂ ಸೂರ್ಯನನ್ನು ಜಗದ್ವಿಖ್ಯಾತಿ ಮಾಡಿತ್ತು.
ಇಂಥಾ ಸೂರ್ಯಗೆ ಗ್ರಹಣ ಹಿಡಿದು ಒಂದಲ್ಲ, ಎರಡಲ್ಲ, ಬದಲಿಗೆ ಹತ್ತು ವರ್ಷಗಳಾಗಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ''ಸೂರರೈ ಪೊಟ್ರು''.. ಮತ್ತು ''ಜೈ ಭೀಮ್''..ಹೊರತು ಪಡಿಸಿದರೆ ಮಿಕ್ಕೆಲ್ಲಾ ಚಿತ್ರಗಳು ಮಕಾಡೆ ಮಲಗಿದ್ದವು. ಉದಾಹರಣೆಗೆ ''24''.. ''ತಾನಾ ಸೇಂದ ಕೂಟ್ಟಂ''.. ''ಎನ್.ಜಿ.ಕೆ.''.. ''ಕಾಪ್ಪನ್''.. ''ಎದರ್ಕ್ಕುಂ ತುಣಿಂದವನ್''.. ''ಕಂಗುವ''..
ಹೀಗೆ ಒಂದಾದ ಮೇಲೊಂದರಂತೆ ಎದುರಾದ ಈ ಸೋಲುಗಳಿಂದ ಖುದ್ದು ಸೂರ್ಯ ಹೈರಾಣಾಗಿದ್ದರು. ಆದರೆ ಈಗ ಈ ಸೋಲಿನ ಸರಪಳಿ ಕಳಚಿದೆ. ಹತ್ತು ವರ್ಷದ ಶಾಪ ವಿಮೋಚನೆ ಆಗಿದೆ. ''ಕರುಪ್ಪು'' ಗೆದ್ದಿದೆ.
ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಕರುಪ್ಪು'' ಈ ಹತ್ತು ದಿನದಲ್ಲಿ₹148.85 ಕೋಟಿಯನ್ನು ಕೊಳ್ಳೆ ಹೊಡೆದಿದೆ. ನೆನಪಿರಲಿ ಇದು ಕೇವಲ ಭಾರತದ ಲೆಕ್ಕ. ಹೊರ ದೇಶದ ಗಳಿಕೆಯನ್ನು ಕೂಡ ಇಲ್ಲಿ ಕೂಡಿಸಿದರೆ ಚಿತ್ರ ಕೇವಲ ಹತ್ತೇ ದಿನದಲ್ಲಿ ₹237.13 ಕೋಟಿಯನ್ನು ದೋಚಿದೆ.

ಇನ್ನು ಸೂರ್ಯ ವೃತ್ತಿ ಬದುಕಿನ ಕಪ್ಪುಚುಕ್ಕೆಯಾದ ''ಕಂಗುವ'' ಚಿತ್ರಕ್ಕೆ 300 ರಿಂದ 400 ಕೋಟಿಯನ್ನು ಸುರಿಯಲಾಗಿತ್ತು. ಆದರೆ.. ''KoiMoi'' ವರದಿಯ ಪ್ರಕಾರ ''ಕರುಪ್ಪು'' ಚಿತ್ರಕ್ಕೆ ಖರ್ಚಾಗಿದ್ದು ಕೇವಲ ₹130 ಕೋಟಿ ಮಾತ್ರ. ಹತ್ತೇ ದಿನದಲ್ಲಿ ಹಾಕಿದ ಬಂಡವಾಳದ ಮೇಲೆ 18 ಕೋಟಿಯ ಲಾಭ ಗಳಿಸಿದೆ ''ಕರುಪ್ಪು''.
''ಕರುಪ್ಪು '' ಚಿತ್ರದ ಬಜೆಟ್ ಮತ್ತು ಗಳಿಕೆಯ ವಿವರ
| ವಿವರಗಳು (Details) | ಬಾಕ್ಸ್ ಆಫೀಸ್ ಅಂಕಿ-ಅಂಶಗಳು (Box Office Figures) |
|---|---|
| ಬಜೆಟ್ (Budget) | ₹130 ಕೋಟಿ |
| ಭಾರತದ ಒಟ್ಟು ನಿವ್ವಳ ಗಳಿಕೆ (India Net Collection) | ₹148.85 ಕೋಟಿ |
| ಲಾಭ / ಹೂಡಿಕೆಯ ಮೇಲಿನ ಆದಾಯ (ROI) | ₹18.85 ಕೋಟಿ |
| ಲಾಭದ ಶೇಕಡಾವಾರು (ROI %) | 14.50% |
| ಬಾಕ್ಸ್ ಆಫೀಸ್ ಫಲಿತಾಂಶ (Verdict) | ಪ್ಲಸ್ / ಲಾಭದಾಯಕ (Plus) |
ಸಹಜವಾಗಿ ''ಕರುಪ್ಪು'' ಚಿತ್ರದ ಈ ಗೆಲುವಿನಿಂದ ಸೂರ್ಯ ಖುಷಿಯಾಗಿದ್ದಾರೆ. ತಮ್ಮ ಸಮಸ್ತ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ಧಾರೆ. ಇನ್ನು ''ಕರುಪ್ಪು'' ಕೇವಲ ತಮಿಳಿನಲ್ಲಿ ಮಾತ್ರ ಬಿಡುಗಡೆಯಾಗಿಲ್ಲ. ತೆಲುಗಿನಲ್ಲಿಯೂ ಕೂಡ ಬಿಡುಗಡೆಯಾಗಿದೆ. ವಿಶೇಷ ಅಂದರೆ ತೆಲುಗಿನ ಜನ ಕೂಡ ಸೂರ್ಯ ಚಮತ್ಕಾರಕ್ಕೆ ನಮಸ್ಕಾರ ಮಾಡಿದ್ಧಾರೆ. ಈ ಹತ್ತು ದಿನದಲ್ಲಿ ₹22.25 ಕೋಟಿಯನ್ನು ''ಕರುಪ್ಪು'' ಗಳಿಸಿದೆ. ಸೂರ್ಯ ಸಂಭ್ರಮ ಸಡಗರ ಹೆಚ್ಚಾಗಲು ಕೂಡ ಇದು ಕೂಡ ಕಾರಣ.
ಅಂದ್ಹಾಗೇ ಆಗಲೇ ಹೇಳಿದಂತೆ ಇಂತಹದ್ದೊಂದು ಗೆಲುವನ್ನು ಕಂಡು ಸೂರ್ಯ ಹತ್ತು ವರ್ಷಗಳಾಗಿತ್ತು. 2015ರಲ್ಲಿ ತೆರೆಗೆ ಬಂದ ' ''ಪಾಸ್ಸಾಂಗ 2'' ಪವಾಡ ಮಾಡಿತ್ತು. ವಿಶೇಷ ಅಂದರೆ ಮಕ್ಕಳ ಚಿತ್ರ ಇದು. ಆದರೂ ಕೂಡ ಕೇವಲ 3-4 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ 52 ಕೋಟಿಯನ್ನು ಗಳಿಸಿತ್ತು. ಇನ್ನು ವಿಶೇಷ ಅಂದರೆ ಖುದ್ದು ಸೂರ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈಗ ಹತ್ತು ವರ್ಷದ ನಂತರ ಸೂರ್ಯ ''ಕರುಪ್ಪು'' ಮೂಲಕ ಮತ್ತೆ ಗೆದ್ದಿದ್ಧಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications