Karuppu Boxoffice Day 2; ಮೊದಲ ದಿನಕ್ಕಿಂತ 2ನೇ ದಿನ 'ಕುರುಪ್ಪು' ದಾಖಲೆ ಕಲೆಕ್ಷನ್
ಒಂದ್ಕಡೆ ವಿಜಯ್ ರಾಜಕೀಯರಂಗ ಪ್ರವೇಶಿಸಿ ತಮಿಳುನಾಡು ಸಿಎಂ ಆಗಿದ್ದಾರೆ. ಸದ್ಯಕ್ಕೆ ಅವರು ಸಿನಿಮಾಗಳಲ್ಲಿ ನಟಿಸುವುದು ಕಷ್ಟ ಎನ್ನುವಂತಾಗಿದೆ. ಮತ್ತೊಂದು ಕಡೆ ನಟ ಅಜಿತ್ ಕಾರ್ ರೇಸ್, ಬೈಕ್ ಟೂರ್ ಅಂತ ಬ್ಯುಸಿ ಆಗಿರುತ್ತಾರೆ. ಹಾಗಿರುವಾಗ ಕಾಲಿವುಡ್ ಮುಂದಿನ ಬಾಕ್ಸಾಫೀಸ್ ಸುಲ್ತಾನ್ ಯಾರು ಎನ್ನುವ ಪ್ರಶ್ನೆ ಶುರುವಾಗಿದೆ. ಅದಕ್ಕೆ ಉತ್ತರ ಸೂರ್ಯ ಎಂದು ಅಭಿಮಾನಿಗಳು ಚರ್ಚೆ ಹುಟ್ಟಾಕ್ಕಿದ್ದಾರೆ.
ಸೂರ್ಯ ಹಾಗೂ ತ್ರಿಷಾ ನಟನೆಯ 'ಕರುಪ್ಪು' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಐಪಿಎಲ್ ಆರ್ಭಟ ನಡುವೆ ಒಳ್ಳೆ ಸಿನಿಮಾಗಳಿಲ್ಲದೇ ಚಿತ್ರಮಂದಿರಗಳು ಖಾಲಿ ಹೊಡೀತಿವೆ. ಅಂತಹ ಸಮಯದಲ್ಲಿ ಬಂದ 'ಕರುಪ್ಪು' ಚಿತ್ರವನ್ನು ಪ್ರೇಕ್ಷಕರು ಅಪ್ಪಿಕೊಂಡಿದ್ದಾರೆ. ಮಕ್ಕಳಿಗೆ ಶಾಲಾ, ಕಾಲೇಜು ರಜೆ ಇದೆ. ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್‌ಗಾಗಿ ಕಾಯುತ್ತಿದ್ದವರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಮೊದಲ ದಿನಕ್ಕಿಂತ 2ನೇ ದಿನ ಗಳಿಕೆ ಚೆನ್ನಾಗಿದೆ. ಕರ್ನಾಟಕದಲ್ಲಿ ಕೂಡ ಈ ಫ್ಯಾಂಟಸಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ.

ಆರ್‌ಜೆ ಬಾಲಾಜಿ 'ಕರುಪ್ಪು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ವರ್ಷ ದೀಪಾವಳಿಗೆ ಸಿನಿಮಾ ಬಿಡುಗಡೆ ಪ್ರಯತ್ನ ನಡೆದಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಾ ಬಂದಿತ್ತು. ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ತೆರೆಗೆ ತರುವ ಪ್ರಯತ್ನ ನಡೆದರೂ ಪ್ರಯೋಜನವಾಗಿರಲಿಲ್ಲ. ಕೊನೆಯ ಕ್ಷಣದವರೆಗೂ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ನಾನಾ ಸಮಸ್ಯೆಗಳು ಎದುರಾಗಿತ್ತು. ಮೇ 14ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮೇ 15ಕ್ಕೆ ಸಿನಿಮಾ ಬಿಡುಗಡೆಯಾಗಿತ್ತು.
'ಕರುಪ್ಪು' ಕಲೆಕ್ಷನ್
ಮೊದಲ ದಿನಕ್ಕಿಂತ 2ನೇ ದಿನ 'ಕರುಪ್ಪು' ಸಿನಿಮಾ ಕಲೆಕ್ಷನ್ ಜೋರಾಗಿದೆ. 3ನೇ ದಿನವಾದ ಇಂದು(ಭಾನುವಾರ) ದೊಡ್ಡ ಮಟ್ಟದ ಗಳಿಕೆ ನಿರೀಕ್ಷಿಸಲಾಗುತ್ತಿದೆ. ಮೊದಲ ದಿನ ಭಾರತದಲ್ಲಿ 15.5 ಕೋಟಿ ರೂ. ಕೊಳ್ಳೆ ಹೊಡೆದಿದ್ದ ಸಿನಿಮಾ 2ನೇ ದಿನ 23.40 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಓವರ್‌ಸೀಸ್ ಸೇರಿ ಮೊದಲ 2 ದಿನಕ್ಕೆ ಸಿನಿಮಾ 60 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿರುವುದಾಗಿ ಅಂದಾಜಿಸಲಾಗುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಮಾತ್ರ ಸಿನಿಮಾ ತೆರೆಕಂಡಿದೆ.

ಕರ್ನಾಟಕ ಕಲೆಕ್ಷನ್
ಪರಭಾಷೆಯ ದೊಡ್ಡ ಸಿನಿಮಾಗಳಿಗೆ ಕರ್ನಾಟಕದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ. ಸೂರ್ಯ ನಟನೆಯ 'ಕರುಪ್ಪು' ಚಿತ್ರಕ್ಕೂ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಾಜ್ಯದಲ್ಲಿ ಮೊದಲ ದಿನ 1.85 ಕೋಟಿ ರೂ. ಗಳಿಕೆ ಕಂಡಿದ್ದ ಸಿನಿಮಾ 2ನೇ ದಿನ 3 ಕೋಟಿ ರೂ. ಬಾಚಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. 3ನೇ ದಿನದ ಅಡ್ವಾನ್ಸ್ ಬುಕ್ಕಿಂಗ್ ಕೂಡ ಚೆನ್ನಾಗಿದ್ದು ಭಾರೀ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ.
3 ದಿನಕ್ಕೆ 100 ಕೋಟಿ ರೂ?
ದೊಡ್ಡ ಸಿನಿಮಾಗಳು ಪಾಸಿಟಿವ್ ಟಾಕ್ ಪಡೆದುಕೊಳ್ಳುವುದೇ ಕಷ್ಟ ಎನ್ನುವಂತಾಗಿದೆ. ಅದರಲ್ಲೂ ಮಿಶ್ರ ಪ್ರತಿಕ್ರಿಯೆ ಸಿಕ್ಕ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತಿರುವುದು ವಿಶೇಷ. ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ಸೂರ್ಯಗೆ 'ಕರುಪ್ಪು' ಒಳ್ಳೆ ಬ್ರೇಕ್ ಕೊಟ್ಟಂತೆ ಆಗಿದೆ. ತಮಿಳು ಚಿತ್ರರಂಗಕ್ಕೂ ಇಂತಾದೊಂದು ಗೆಲುವಿನ ಅವಶ್ಯಕತೆಯಿತ್ತು. ಮೊದಲ 3 ದಿನಕ್ಕೆ ಸಿನಿಮಾ 100-120 ಕೋಟಿ ರೂ. ಕೊಳ್ಳೆ ಹೊಡೆಯುವ ಲೆಕ್ಕಾಚಾರ ಶುರುವಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications