2026 Kollywood First Half: 'ಕರುಪ್ಪು' ಗೆಲುವಿನ ಟಾನಿಕ್; ಈ ವರ್ಷ ಹೇಗಿತ್ತು ತಮಿಳು ಚಿತ್ರಗಳ ಹವಾ
ತಮಿಳು ಚಿತ್ರರಂಗದಲ್ಲಿ ಕಳೆದೆರಡು ವರ್ಷಗಳಿಂದ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಸ್ಟಾರ್ ನಟರ ಸಿನಿಮಾಗಳು ನಿರೀಕ್ಷೆ ಹುಸಿಯಾಗಿಸುತ್ತಿದ್ದವು. ಆದರೆ ಈ ವರ್ಷ ಕಾಲಿವುಡ್ ಕೊಂಚ ಚೇತರಿಸಿಕೊಂಡಿದೆ. 'ಕರುಪ್ಪು' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಇಂಡಸ್ಟ್ರಿಗೆ ಹೊಸ ಹುರುಪು ತಂದಿದೆ.
ಈ ವರ್ಷದ ಮೊದಲ 6 ತಿಂಗಳಲ್ಲಿ 90ಕ್ಕೂ ಅಧಿಕ ತಮಿಳು ಸಿನಿಮಾಗಳು ಬಿಡುಗಡೆಯಾಗಿವೆ. ನಾಲ್ಕೈದು ಸಿನಿಮಾ ಕೊಂಚ ಸದ್ದು ಮಾಡಿದ್ದು ಸುಳ್ಳಲ್ಲ. ಅದೇ ರೀತಿ ನಿರೀಕ್ಷೆ ಹುಟ್ಟಾಕ್ಕಿದ್ದ ಕೆಲ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ. ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಬಿಡುಗಡೆ ಆಗದೇ ಇರುವುದು ದೊಡ್ಡ ಹಿನ್ನಡೆಯಾಗಿದೆ. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ 6 ತಿಂಗಳು ಕಳೆದರೂ ತೆರೆಗೆ ಬರುವ ಸುಳಿವು ಸಿಕ್ತಿಲ್ಲ.

ರಜನಿಕಾಂತ್, ಅಜಿತ್, ಕಮಲ್ ಹಾಸನ್, ಕಾರ್ತಿ, ವಿಕ್ರಮ್ ರೀತಿಯ ಸ್ಟಾರ್ ನಟರು ನಟಿಸಿದ ಸಿನಿಮಾಗಳು ಇನ್ನು ಈ ವರ್ಷ ಬಿಡುಗಡೆ ಆಗಿಲ್ಲ. ರಾಧಿಕಾ ಶರತ್‌ಕುಮಾರ್ ನಟನೆಯ 'ತಾಯ್ ಕಿಳವಿ' ಸಿನಿಮಾ ಅಚ್ಚರಿಯ ಗೆಲುವು ಕಂಡು ಕಾಲಿವುಡ್‌ಗೆ ಬಲ ತುಂಬಿದೆ. ಮಿಶ್ರ ಪ್ರತಿಕ್ರಿಯೆ ಸಿಕ್ರು 'ಕರುಪ್ಪು' ಚಿತ್ರ 300 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಅಚ್ಚರಿಯ ಸಂಗತಿಯೇ ಸರಿ.
800 ಕೋಟಿ ರೂ. ಗಳಿಕೆ
ಈ ವರ್ಷ ಬಿಡುಗಡೆ ಆಗಿರುವ 90 ತಮಿಳು ಸಿನಿಮಾಗಳಿಂದ ಒಟ್ಟು 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. 'ಕರುಪ್ಪು' ಸಿನಿಮಾ 340 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ್ದಾಗಿ ಸ್ವತಃ ಚಿತ್ರತಂಡವೇ ಹೇಳಿದೆ. ಇನ್ನುಳಿದಂತೆ ಎಲ್ಲಾ ಸಿನಿಮಾಗಳು ಸೇರಿ 700-800 ಕೋಟಿ ರೂ. ಕಲೆಕ್ಷನ್ ಲೆಕ್ಕಾಚಾರ ನಡೀತಿದೆ.

'ಕರುಪ್ಪು' ಖದರ್
ನ್ಯಾಯಾಲಯಗಳಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಅಷ್ಟು ಸುಲಭವಾಗಿ ಸಿಗಲ್ಲ. ನಮ್ಮ ವ್ಯವಸ್ಥೆ, ವಕೀಲರು ಅದಕ್ಕೆ ಆಸ್ಪದ ಕೊಡುತ್ತಿಲ್ಲ. ದೇವರೇ ಬಂದರೂ ನ್ಯಾಯ ಸಿಗುವುದು ಕಷ್ಟ. ಒಂದೇ ವೇಳೆ ದೇವರೇ ವಕೀಲನಾಗಿ ಬಂದರೆ ಏನಾಗುತ್ತದೆ ಎನ್ನುವ ಕಾನ್ಸೆಪ್ಟ್‌ನಲ್ಲಿ 'ಕರುಪ್ಪು' ಸಿನಿಮಾ ಮೂಡಿ ಬಂದಿದೆ. ಆರ್‌ಜೆ ಬಾಲಾಜಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸೂರ್ಯ ಎದುರು ನೆಗೆಟಿವ್ ರೋಲ್‌ನಲ್ಲಿ ಕೂಡ ನಟಿಸಿದ್ದರು. ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ದೊಡ್ಡಮಟ್ಟದಲ್ಲಿ ಫ್ಯಾಮಿಲಿ ಆಡಿಯನ್ಸ್ ಮುಗಿಬಿದ್ದು ಸಿನಿಮಾ ನೋಡಿದ್ದರು. ಪರಿಣಾಮ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು.
'ತಾಯ್ ಕಿಳವಿ' ಅಚ್ಚರಿ
ರಾಧಿಕಾ ಶರತ್‌ಕುಮಾರ್ ನಟನೆಯ ಮಹಿಳಾ ಪ್ರಧಾನ ಸಿನಿಮಾ 'ತಾಯ್ ಕಿಳವಿ' ಕೂಡ ಗೆಲುವಿನ ದಡ ಸೇರಿತ್ತು. ನಟ ಶಿವಕಾರ್ತಿಕೇಯನ್ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದರು. ಕಡಿಮೆ ಬಜೆಟ್‌ನಲ್ಲಿ ಕಟ್ಟಿಕೊಟ್ಟಿದ್ದ ಸಿಂಪಲ್ ಕಥೆಯ ಹಳ್ಳಿ ಸೊಗಡಿನ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಬಲೀಕರಣದಂತಹ ವಿಚಾರಗಳು ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸಿನಿಮಾ 75 ಕೋಟಿ ರೂ. ಕಲೆಕ್ಷನ್ ಮಾಡಿದ್ದು ವಿಶೇಷ. 'ಯೂತ್' ಎಂಬ ಮತ್ತೊಂದು ಸಿನಿಮಾ ಕೂಡ 70 ಕೋಟಿ ರೂ. ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು.
ನಿರಾಸೆ ಮೂಡಿಸಿದ ಚಿತ್ರಗಳು
ಹಿಟ್ ಮಾತ್ರವಲ್ಲ ಸಾಕಷ್ಟು ಸಿನಿಮಾಗಳು ಸೋಲಿನ ಹಾದಿ ಹಿಡಿದವು. ಅದರಲ್ಲೂ ಬಹಳ ನಿರೀಕ್ಷೆ ಮೂಡಿಸಿದ್ದ 'ಪರಾಶಕ್ತಿ', 'ಕರ' ಹಾಗೂ 'ಲವ್ ಇನ್ಸುರೆನ್ಸ್ ಕಂಪನಿ' ಚಿತ್ರಗಳು ಸೋತು ನಷ್ಟ ತಂದೊಡ್ಡಿದ್ದವು. ಸುಧಾ ಕೊಂಗರ ನಿರ್ದೇಶನದ 'ಪರಾಶಕ್ತಿ' ಸಿನಿಮಾ ವರ್ಷದ ಆರಂಭದಲ್ಲೇ ತೆರೆಗೆ ಬಂದಿತ್ತು. ಶಿವಕಾರ್ತಿಕೇಯನ್, ಜಯಂ ರವಿ ಹಾಗೂ ಶ್ರೀಲೀಲಾ ಚಿತ್ರದ ತಾರಾಗಣದಲ್ಲಿದ್ದರು. ಆದರೆ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಬಳಿಕ ಓಟಿಟಿಯಲ್ಲಿ ಸದ್ದು ಮಾಡಿತ್ತು.
ಧನುಷ್ ನಟನೆಯ 'ಕರ' ಸಿನಿಮಾ ಕೂಡ ಬಹಳ ನಿರೀಕ್ಷೆ ಹುಟ್ಟಾಕ್ಕಿತ್ತು. ಆದರೆ ಸವಕಲು ಕಥೆ, ಧನುಷ್ ರೆಗ್ಯುಲರ್ ಪರ್ಫಾರ್ಮೆನ್ಸ್ ನಿರಾಸೆ ಮೂಡಿಸಿತ್ತು. ಓಟಿಟಿಯಲ್ಲಿ ಕೂಡ ಒಳ್ಳೆ ರೆಸ್ಪಾನ್ಸ್ ಸಿಗಲಿಲ್ಲ. ವಿಘ್ನೇಶ್ ಶಿವನ್ ನಿರ್ದೇಶನದ 'ಲವ್ ಇನ್ಸುರೆನ್ಸ್ ಕಂಪನಿ' ಸಿನಿಮಾ ಕೂಡ ಭಾರೀ ಸದ್ದು ಮಾಡಿತ್ತು. ಕಾರಣ ಪ್ರದೀಪ್ ರಂಗನಾಥನ್ ಹೀರೊ ಆಗಿ ನಟಿಸಿದ್ದರು. ಅವರು ನಟಿಸಿದ್ದ 'ಲವ್ ಟುಡೇ', 'ಡ್ರ್ಯಾಗನ್' ಹಾಗೂ 'ಡ್ಯೂಡ್' ಚಿತ್ರಗಳು ಹಿಟ್ ಆಗಿತ್ತು. ಆ ಮ್ಯಾಜಿಕ್ ರಿಪೀಟ್ ಮಾಡುವಲ್ಲಿ ವಿಘ್ನೇಶ್ ಸಿನಿಮಾ ಸೋತಿತ್ತು.


Click it and Unblock the Notifications