Thaai Kizhavi Boxoffice Day 12: ರಾಧಿಕಾ ಮ್ಯಾಜಿಕ್.. ಬಾಕ್ಸಾಫೀಸ್‌ನಲ್ಲಿ 'ಥಾಯ್ ಕಿಳವಿ' ಹೊಸ ದಾಖಲೆ
ರಾಧಿಕಾ ಶರತ್‌ಕುಮಾರ್ ನಟನೆಯ 'ಥಾಯ್ ಕಿಳವಿ' ಸಿನಿಮಾ 2ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ತಮಿಳು ಚಿತ್ರರಂಗದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಿಳಾ ಪ್ರಧಾನ ಸಿನಿಮಾವೊಂದು ಕಾಲಿವುಡ್‌ನಲ್ಲಿ ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ಇದೇ ಮೊದಲು.
'ಥಾಯ್ ಕಿಳವಿ' ಚಿತ್ರಕ್ಕೆ ಶಿವಕುಮಾರ್ ಮುರುಗೇಶನ್ ಆಕ್ಷನ್ ಕಟ್ ಹೇಳಿದ್ದಾರೆ. ತಮಿಳು ನಟ ಶಿವಕಾರ್ತಿಕೇಯನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಕೇವಲ 9 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಫಸ್ಟ್ ವೀಕೆಂಡ್‌ನಲ್ಲೇ 20 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡವೇ ಮಾಹಿತಿ ನೀಡಿತ್ತು. ತಮಿಳಿನಲ್ಲಿ ಸದ್ಯ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬಂದಿಲ್ಲ. ಆ ಲಾಭವನ್ನು 'ಥಾಯ್ ಕಿಳವಿ' ಪಡೆದುಕೊಂಡಿತ್ತು.

ತಮಿಳು ಮಾತ್ರವಲ್ಲ ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಯಾವುದೇ ದೊಡ್ಡ ಸಿನಿಮಾ ಪ್ರದರ್ಶನವಾಗುತ್ತಿಲ್ಲ. ಹಾಗಾಗಿ ಪ್ರೇಕ್ಷಕರ ಮೊದಲ ಆಯ್ಕೆ 'ಥಾಯ್ ಕಿಳವಿ' ಎನಿಸಿಕೊಂಡಿದೆ. 10 ದಿನಕ್ಕೆ ವಿಶ್ವದಾದ್ಯಂತ 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವುದು ಅಷ್ಟು ಸುಲಭವಲ್ಲ. ಹಾಗಿರುವಾಗ ಸಿಂಪಲ್ ಕಥೆಯ ಮಹಿಳಾ ಪ್ರಧಾನ ಸಿನಿಮಾವೊಂದು ಕಮಾಲ್ ಮಾಡ್ತಿದೆ.
ಮಹಿಳಾ ದಿನಾಚರಣೆಗೂ ಮುನ್ನ 'ಥಾಯ್ ಕಿಳವಿ' ಸಿನಿಮಾ ಬಿಡುಗಡೆಯಾಗಿತ್ತು. ರಾಧಿಕಾ ಬಿಟ್ಟರೆ ಬಹುತೇಕ ಅಷ್ಟೇನು ಪರಿಚಯವಿಲ್ಲದ ಕಲಾವಿದರೇ ಚಿತ್ರದಲ್ಲಿ ನಟಿಸಿದ್ದಾರೆ. ಹಳ್ಳಿಯೊಂದರಲ್ಲಿ ನಡೆಯುವ ಕಥೆ ಪ್ರೇಕ್ಷಕರ ಮನಗೆದ್ದಿದೆ. ಯಾವುದೇ ಗ್ಲಾಮರ್ ಇಲ್ಲದೇ ಹಳ್ಳಿ ಸೊಗಡಿನ ಸಿನಿಮಾ ಗೆಲುವಿನ ನಗೆ ಬೀರಿದೆ. 50 ಕೋಟಿ ರೂ. ಗ್ರಾಸ್ ಕಲೆಕ್ಷನ್‌ನಲ್ಲಿ 40 ಕೋಟಿ ನೆಟ್ ಕಲೆಕ್ಷನ್ ಸೇರಿದೆ. 12ನೇ ದಿನ ಅಂದರೆ ಮಂಗಳವಾರ 1.79 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಮಂಗಳವಾರ 1180 ಶೋಗಳಲ್ಲಿ ಸಿನಿಮಾ ಪ್ರದರ್ಶನವಾಗಿತ್ತು.
ಫ್ಯಾಮಿಲಿ ಆಡಿಯನ್ಸ್ ನಿಧಾನವಾಗಿ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರ್ತಿದ್ದಾರೆ. ರಜಾ ಸಮಯದಲ್ಲಿ ಯಾವುದಾದರೂ ಸಿನಿಮಾ ನೋಡಬೇಕು ಎಂದುಕೊಳ್ಳುವವರಿಗೆ 'ಥಾಯ್ ಕಿಳವಿ' ಮೊದಲ ಆಯ್ಕೆ ಎನಿಸಿಕೊಂಡಿದೆ. ಅದೇ ಕಾರಣಕ್ಕೆ ಸಣ್ಣ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಸಿಂಗಂಪುಲಿ, ಅರುಲ್‌ದಾಸ್, ಮುನಿಶ್ ಕಾಂತ್, ಬಾಲ ಸರವಣನ್, ಇಳವರಸು ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.
AGS ಎಂಟರ್‌ಟೈನ್‌ಮೆಂಟ್ ಸಂಸ್ಥೆ ಸಿನಿಮಾ ವಿತರಣೆ ಮಾಡಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದ 'ಥಾಯ್ ಕಿಳವಿ' ಸಿನಿಮಾ ಈಗ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಶೀಘ್ರದಲ್ಲೇ 100 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎನ್ನುವ ಅಂದಾಜಿದೆ.
ಹಳ್ಳಿಯೊಂದರ ಪವುನುತಾಯಿ(ರಾಧಿಕಾ ಶರತ್‌ಕುಮಾರ್) ಎಂಬ ವಯಸ್ಸಾದ ಮದುಕಿಯ ಕಥೆ ಚಿತ್ರದಲ್ಲಿದೆ. ಬಡ್ಡಿ ವ್ಯವಹಾರ ಮಾಡುತ್ತಾ ಸಿಕ್ಕಾಪಟ್ಟೆ ರಗಡ್ ಆಗಿ ಊರಿನಲ್ಲಿ ಹವಾ ಕ್ರಿಯೇಟ್ ಮಾಡಿರುವ ಮುದುಕಿ. ಇದ್ದಕ್ಕಿದಂತೆ ಒಂದು ದಿನ ಆಕೆ ಪಾರ್ಶ್ವವಾಯು ಪೀಡಿತಳಾಗಿ ಹಾಸಿಗೆ ಹಿಡಿಯುತ್ತಾಳೆ. ಮುಂದೆ ಊರಿನಲ್ಲಿ ನಡೆಯುವ ಘಟನೆಗಳೇ ಚಿತ್ರದ ಕಥೆ. ಕೇಳೋಕೆ ಕಥೆ ಸಿಂಪಲ್ ಅನಿಸಬಹುದು. ಆದರೆ ಪರಿಣಾಮಕಾರಿಯಾಗಿ ತೆರೆಗೆ ತರಲಾಗಿದೆ.
ಕೆಲವೇ ಹೊತ್ತು ತೆರೆಮೇಲೆ ಅಬ್ಬರಿಸುವ ರಾಧಿಕಾ ಬಳಿಕ ಹಾಸಿಗೆ ಹಿಡಿದುಬಿಡುತ್ತಾರೆ. ಪಾತ್ರಕ್ಕಾಗಿ ಪ್ರಾಸ್ಥೆಟಿಕ್ ಮೇಕಪ್ ಹಾಕಿಕೊಂಡು ಆಕೆ ನಟಿಸಿದ್ದಾರೆ. ಆ ಪಾತ್ರವೇ ತಾನಾಗಿಬಿಟ್ಟಿದ್ದಾರೆ. ಅಲ್ಲಲ್ಲಿ ಕೊಂಚ ಲ್ಯಾಗ್ ಎನಿಸಿದರೂ ಕೊನೆ ಕೊನೆಗೆ ಸಿನಿಮಾ ಮತ್ತೆ ಟ್ರ್ಯಾಕ್‌ಗೆ ಮರಳುತ್ತದೆ. ಮಹಿಳಾ ಸಬಲೀಕರಣ, ಮಹಿಳಾ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಇದು ಮಹಿಳೆಯರನ್ನು ಸೆಳೆಯುತ್ತದೆ.


Click it and Unblock the Notifications











