ಪುಷ್ಪರಾಜ್ ಮುಂದೆ ಮಂಡಿಯೂರಿದ ಧುರಂಧರ್ ; ಅಲ್ಲು ಅರ್ಜುನ್‌ಗೆ ಸೆಡ್ಡು ಹೊಡೆಯುವಲ್ಲಿ ರಣ್ವೀರ್ ಸಿಂಗ್ ವಿಫಲ
ಸಿನಿಮಾ ಅಂದರೆ ಗಿಮಿಕ್ ಅಲ್ಲ. ಗಿಮಿಕ್ ಮಾಡೋರಿಗೆ ಇಲ್ಲಿ ಉಳಿಗಾಲ ಇಲ್ಲ. ಯಾಕೆಂದರೆ ಸಿನಿಮಾ ಅಂದರೆ ಅದೊಂದು ತಪಸ್ಸು. ಧ್ಯಾನ. ಚಿತ್ರಕ್ಕೆ ಇಲ್ಲಿ ಕೇವಲ ಹಣ ಮಾತ್ರ ಮುಖ್ಯ ಅಲ್ಲ. ತನು-ಮನ ಅರ್ಪಿಸಿ ಸಿನಿಮಾ ಮಾಡಿದಾಗಲೇ ಪ್ರಯತ್ನಕ್ಕೆ ಫಲ ಸಿಗುತ್ತೆ. ಪ್ರೇಕ್ಷಕರ ಆಶೀರ್ವಾದ ಸಿಗುತ್ತೆ.
ಅದನ್ನೂ ಮಾಡದೇ ಪೆಟ್ರೋಲ್ ಕುಡಿದರೂ ಅಷ್ಟೇ.. ಫಿನಾಯಿಲ್ ಕುಡಿದರೂ ಅಷ್ಟೇ. ಎಷ್ಟೇ ತಿಪ್ಪರಲಾಗ ಹಾಕಿದರೂ ಕೂಡ ಅಷ್ಟೇ. ಪ್ರೇಕ್ಷಕರು ಇಲ್ಲಿ ಕ್ಯಾರೇ ಎನ್ನಲ್ಲ. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಮಾತ್ರ ಕಲೆಗೆ ಬೆಲೆ. ಇದಕ್ಕೆ ''ಧುರಂಧರ್ 2'' ಸದ್ಯದ ಉದಾಹರಣೆ.

ಹೌದು, ''ಧುರಂಧರ್ 2''..ಸಕ್ಸಸ್‌ಗೆ ಬಾಲಿವುಡ್‌ನ ಹೊಸ ಕೇರ್ ಆಫ್ ಅಡ್ರೆಸ್. ಇನ್ನೇನೂ ಬಾಲಿವುಡ್ ಖೇಲ್ ಖತಂ ಎಂದು ಊರಿನವರೆಲ್ಲಾ ಆಡಿಕೊಳ್ಳುತ್ತಿದ್ದ ಸಮಯದಲ್ಲಿ ಹಿಂದಿ ಉದ್ಯಮದ ಬಾಕ್ಸಾಫೀಸ್ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದ ''ಧುರಂಧರ್ 2'' ಸದ್ಯ 37 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಹತ್ತು ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿದೆ.
ಇಷ್ಟೇ ಅಲ್ಲ ಕೇವಲ ಭಾರತದಲ್ಲೇ 1000 ಕೋಟಿ ಕೊಳ್ಳೆ ಹೊಡೆದ ಮೊದಲ ಬಾಲಿವುಡ್ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ನಿಜಾ.. ''ದಂಗಲ್''.. ''ಪಠಾಣ್'' .. ಸೇರಿ ಕೆಲ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ 1000 ಕೋಟಿಯನ್ನು ಗಳಿಸಿವೆ.
ಆದರೆ.. ಆ ಗಳಿಕೆ ಕೇವಲ ಭಾರತದಲ್ಲಿ ಮಾಡಿದ್ದಲ್ಲ. ಬದಲಿಗೆ ವರ್ಲ್ಡ್ ವೈಡ್ ಪ್ರದರ್ಶನ ಕಂಡು ಚಿತ್ರ ಮಾಡಿದ್ದ ಗಳಿಕೆ ಅದು.ಹೀಗಾಗಿ ಈ ಸಾವಿರ ಕೋಟಿ ಗಳಿಕೆ ಬಾಲಿವುಡ್‌ಗೆ ತುಂಬಾನೇ ವಿಶೇಷವಾದದ್ದು. ಐತಿಹಾಸಿಕವಾದದ್ದು. ಅದರಲ್ಲಿ ಎರಡು ಮಾತಿಲ್ಲ.
ಆದರೆ, ಎಲ್ಲವನ್ನೂ ಸಾಧಿಸಿ ಭೇದಿಸಿದ, ಬಾಲಿವುಡ್ ನಲ್ಲಿ ಐತಿಹಾಸಿಕ ದಾಖಲೆಯನ್ನು ಬರೆದ ಈ ''ಧುರಂಧರ್'' ದಕ್ಷಿಣದ ''ಪುಷ್ಪಾ'' ಎದುರು ಮಂಡಿಯೂರುತ್ತಾನಾ..? ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಮತ್ತದೇ ಅಂಕಿ-ಅಂಶ.

ಹೌದು, ಜಾಗತಿಕ ಹಂತದಲ್ಲಿ ''ಪುಷ್ಪಾ 2'' ಚಿತ್ರದ ಗಳಿಕೆಯನ್ನು ''ಧುರಂಧರ್ 2'' ಹಿಂದಿಕ್ಕಿದೆ. ವರ್ಲ್ಡ್ ವೈಡ್ ಬಾಕ್ಸಾಫೀಸ್ ಸಮರದಲ್ಲಿ ''ಪುಷ್ಪಾ 2'' ₹1,742.10 ಕೋಟಿಯನ್ನು ದೋಚಿದ್ದರೆ ''ಧುರಂಧರ್ 2'' ₹1,768.66 ಕೋಟಿಯನ್ನು ಕೊಳ್ಳೆ ಹೊಡೆದಿದೆ.
ಆದರೆ. ಭಾರತದಲ್ಲಿ ಮಾತ್ರ ''ಧುರಂಧರ್ 2'' ಚಿತ್ರ ''ಪುಷ್ಪಾ 2'' ಚಿತ್ರಕ್ಕಿಂತ ಹಿಂದಿದೆ. ಭಾರತದಲ್ಲಿ ''ಪುಷ್ಪಾ 2'' ₹1234.1 ಕೋಟಿ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದೆ. ಪ್ರಸ್ತುತ ''ಧುರಂಧರ್ 2'' ಭಾರತದಲ್ಲಿ ₹1124.1 ಕೋಟಿ ಗಳಿಸಿದೆ.
ಪುಷ್ಪರಾಜ್‌ನ ದಾಖಲೆ ಮುರಿಯಲು ರಣವೀರ್ ಸಿಂಗ್‌ಗೆ ಇನ್ನೂ ₹110 ಕೋಟಿ ಬೇಕಿದೆ. ಆದರೆ ಇದು ಬಹುತೇಕ ಅಸಾಧ್ಯ. ಯಾಕೆಂದರೆ ಆಗಲೇ ಹೇಳಿದಂತೆ ''ಧುರಂಧರ್ 2'' ಆರನೇ ವಾರಕ್ಕೆ ಕಾಲಿಟ್ಟಿದೆ. ಅಲೆ ಕಡಿಮೆಯಾಗಿದೆ.
ಇನ್ನು ಅಕ್ಷಯ್ ಕುಮಾರ್ ಅಭಿನಯದ ''ಭೂತ್ ಬಂಗ್ಲಾ'' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಧುರಂಧರ್ 2 ನಿನ್ನೆ (ಏಪ್ರಿಲ್ 23) ಕೇವಲ ₹1.55 ಕೋಟಿಯನ್ನು ಮಾತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ.
ಮುಂಬರುವ ದಿನಗಳಲ್ಲಿ ವರುಣ್ ಧವನ್ ಅಭಿನಯದ ''ಯೇ ಜವಾನಿ ತೋ ಇಷ್ಕ್ ಹೋನಾ ಹೈ'' ಸೇರಿ ಇನ್ನೂ ಕೆಲ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಹಿನ್ನೆಲೆ ''ಪುಷ್ಪಾ 2'' ಚಿತ್ರವನ್ನು ಭಾರತದಲ್ಲಿ ''ಧುರಂಧರ್ 2'' ಸೆಡ್ಡು ಹೊಡೆಯುವುದು ಬಹುತೇಕ ಅನುಮಾನ ಎನ್ನುವ ಮಾತು ಬಾಲಿವುಡ್ ಟ್ರೇಡ್ ವಿಶ್ಲೇಷಕರ ವಲಯದಲ್ಲಿ ಕೇಳಿ ಬರುತ್ತಿದೆ.
ವರ್ಲ್ಡ್ ವೈಡ್ ಅತೀ ಹೆಚ್ಚು ಹಣ ಗಳಿಸಿದ ಭಾರತದ ಚಿತ್ರಗಳು
1.ದಂಗಲ್ ₹2,070 ಕೋಟಿ
2.ಬಾಹುಬಲಿ 2 ₹1,788 ಕೋಟಿ
3.ಧುರಂಧರ್ 2 ₹1,766 ಕೋಟಿ
4.ಪುಷ್ಪ 2 ₹1,742 ಕೋಟಿ
ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳು
1. ಪುಷ್ಪ 2 (2024 ) ₹1,234.1 ಕೋಟಿ
2. ಧುರಂಧರ್ 2 - ₹1,124.24 ಕೋಟಿ *
2.ಬಾಹುಬಲಿ 2 (2017) ₹1,030.4 ಕೋಟಿ
3.ಕೆಜಿಎಫ್ 2 (20220 ₹859.7 ಕೋಟಿ
4.ಧುರಂಧರ್* (2025) ₹786 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications