Kingdom Box Office Day 4: ಕಂಪಿಸದ 'ಕಿಂಗ್‌ಡಮ್', ತಮ್ಮದೇ 'ಲೈಗರ್' ಗಳಿಕೆ ಹಿಂದಿಕ್ಕುವಲ್ಲಿ ಸೋತ ದೇವರಕೊಂಡ
2017ರಲ್ಲಿ ''ಅರ್ಜುನ್ ರೆಡ್ಡಿ'' ಎಂಬ ಚಿತ್ರ ಬಂದಿದ್ದೇ ಬಂದಿದ್ದು ವಿಜಯ್ ದೇವರಕೊಂಡ ನಸೀಬೇ ಬದಲಾಗಿ ಹೋಗಿತ್ತು. ಅಲ್ಲಿಯವರೆಗೆ ಅದೆಷ್ಟೇ ಸೈಕಲ್ ಹೊಡೆದರೂ ಸಿಗದ ಗೆಲುವು ಈ ಚಿತ್ರದ ಮೂಲಕ ಸಿಕ್ಕಿತ್ತು. ಯಾರಿದು ವಿಜಯ್ ದೇವರಕೊಂಡ ಎಂದು ಅನೇಕ ಜನ ಆಗ ಗೂಗಲ್‌ನಲ್ಲಿ ಸರ್ಚು ಮಾಡಿದ್ದರು. ನೋಡ ನೋಡುತ್ತಾ ಏಕಾಏಕಿ ಮಹಿಳಾ ಅಭಿಮಾನಿಗಳು ಕೂಡ ಸೃಷ್ಟಿಯಾದರು.
ಆದರೆ.. ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಕೂಡ ಚಿತ್ರಾನ್ನವಾಗುತ್ತೆ. ವಿಜಯ್ ದೇವರಕೊಂಡ ವಿಚಾರದಲ್ಲಿ ಕೂಡ ಇದೇ ಆಯ್ತು.

''ಗೀತಾ ಗೋವಿಂದಂ'' ಹೊರತು ಪಡಿಸಿದರೆ ವಿಜಯ್ ದೇವರಕೊಂಡ ಅಭಿನಯದ ಸಾಲು ಸಾಲು ಸಿನಿಮಾಗಳು ಮಕಾಡೆ ಮಲಗಿದವು. ಅದರಲ್ಲಿಯೂ ''ಲೈಗರ್'' ಕೊಟ್ಟ ಪೆಟ್ಟು ದೇವರಕೊಂಡ ಜೀವನ ಪರ್ಯಂತ ಮರೆಯಲಾರರು.
ಹೀಗಿರುವಾಗ ಇದೀಗ ''ಜೆರ್ಸಿ'' ಖ್ಯಾತಿಯ ಗೌತಮ್ ತಿನ್ನನೂರಿ ನಿರ್ದೇಶನದ ''ಕಿಂಗ್‌ಡಮ್'' ಬಂದಿದೆ. ಮೊದಲ ದಿನ ಭರ್ಜರಿ ಗಳಿಕೆಯನ್ನು ಕೂಡ ಮಾಡಿದೆ. ಆದರೆ.. ಆ ನಂತರದ ಅಂಕಿ-ಸಂಖ್ಯೆಗಳೆಲ್ಲಾ ದೇವರಕೊಂಡ ''ಕಿಂಗ್ಡಮ್'' ಬೋರಲಾಗಿ ಬಿದ್ದ ಕಥೆಯನ್ನೇ ಹೇಳುತ್ತಿವೆ.
ಹೌದು, ಬಾಕ್ಸಾಫೀಸ್‌ನ ಅಂಕಿ-ಅಂಶವನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ [ ಜುಲೈ 31 ] ಈ ಚಿತ್ರ ₹ 18 ಕೋಟಿಯನ್ನು ಗಳಿಸಿತ್ತು. ಆದರೆ.. ಈ ಗಳಿಕೆಯಲ್ಲಿ ಎರಡನೇ ದಿನ [ ಆಗಸ್ಟ್ 1] ಶೇಕಡಾ 58.33% ಕುಸಿತ ಕಂಡು ಬಂದಿತ್ತು. ಕೇವಲ ₹ 7.5 ಕೋಟಿಯನ್ನಷ್ಟೇ ಗಳಿಸಿತ್ತು.
ಶುಕ್ರವಾರವಾದ ಕಾರಣ ಚಿತ್ರದ ಗಳಿಕೆ ಕಡಿಮೆಯಾಗಿರಬಹುದು ಎಂದು ಅನೇಕರು ಅಂದುಕೊಂಡಿದ್ದರು. ವಾರಾಂತ್ಯದಲ್ಲಿ ''ಕಿಂಗ್‌ಡಮ್''ನಲ್ಲಿ ಭಾರೀ ಕಂಪನದ ಸದ್ದು ಕೇಳಿ ಬರುತ್ತೆ ಎಂದು ಭಾವಿಸಿದ್ದರು. ಆದರೆ.. ಶನಿವಾರ ಅಂದರೆ ಮೂರನೇ ದಿನ [ ಆಗಸ್ಟ್ 2 ] ₹8 ಕೋಟಿಯನ್ನು ಮಾತ್ರ ಗಳಿಸಿತು. ಇನ್ನು ನಿನ್ನೆ ಕೂಡ ''ಕಿಂಗ್‌ಡಮ್''ನಲ್ಲಿ ಯಾವ ಕಂಪನದ ಸದ್ದು ಕೇಳಿ ಬಂದಿಲ್ಲ. ಶೇಕಡಾ 11.75% ಕುಸಿತ ಕಂಡು ಬಂದಿದೆ. ನಾಲ್ಕನೇ ದಿನ [ ಆಗಸ್ಟ್ 3 ] ಈ ಚಿತ್ರ ಕೇವಲ ₹7.6 ಕೋಟಿಯನ್ನು ಮಾತ್ರ ಗಳಿಸಿದೆ.ಈ ಮೂಲಕ ವಾರಾಂತ್ಯವನ್ನು ₹ 40.58 ಕೋಟಿ ಗಳಿಸುವ ಮೂಲಕ ಅಂತ್ಯ ಮಾಡಿದೆ ಎಂದು ''ಸ್ಯಾಕ್ನಿಲ್'' ವರದಿಯನ್ನು ಮಾಡಿದೆ.

ಅಂದ್ಹಾಗೇ ವಿಜಯ್ ದೇವರಕೊಂಡ ವೃತ್ತಿ ಬದುಕಿನ ಕಪ್ಪು ಚುಕ್ಕೆ ''ಲೈಗರ್'', ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ₹ 41.17 ಕೋಟಿಯನ್ನು ಗಳಿಸಿತ್ತು. ತಮ್ಮದೇ ಈ ಪರಮತೋಪು ಚಿತ್ರದ ಗಳಿಕೆಯನ್ನು ನಾಲ್ಕು ದಿನವಾದರೂ ಕೂಡ ವಿಜಯ್ ದೇವರಕೊಂಡ ಅವರ ಕೈಯಿಂದ ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಈ ವಿಚಾರ ಈಗ ಆಂಧ್ರದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ವಿಜಯ್ ದೇವರಕೊಂಡ ಅವರ ಸ್ಟಾರ್ ಇಮೇಜ್ ಮೇಲೆ ಕೂಡ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.
ಇನ್ನು ಚಿತ್ರದ ಒಟ್ಟಾರೆ ಬಜೆಟ್ 130 ಕೋಟಿ ಎಂದು ತೆಲುಗು ಮಾಧ್ಯಮಗಳು ವರದಿಯನ್ನು ಮಾಡಿವೆ. ಹೀಗಾಗಿ ಹಾಕಿದ ಬಂಡವಾಳದ ಮೇಲೆ ಲಾಭ ಬಿಡಿ, ಸದ್ಯ ಹೂಡಿರುವ ಹಣದಲ್ಲಿ ಅರ್ಧ ಹಣ ಬಂದರೆ ಸಾಕು ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











