Dhurandhar Box Office Day 4 ; ರಣವೀರ್ ಸಿಂಗ್ ಅಬ್ಬರ, ಸೋಮವಾರವೂ ದಾಖಲೆ ಬರೆದ ಧುರಂಧರ್-ನಾಲ್ಕನೇ ದಿನ ಕೋಟಿ ಲೂಟಿ
ಚಿತ್ರರಂಗ ಮಾತ್ರ ಅಲ್ಲ ಯಾವುದೇ ಕ್ಷೇತ್ರವಾದರು ಕೂಡ ಅಲ್ಲಿ ಗೆಲುವು ಮತ್ತು ಸೋಲು ಮಾಮೂಲು. ಆದರೆ .. ಗೆದ್ದಾಗ ಹಿರಿಹಿರಿ ಹಿಗ್ಗುವ ಅನೇಕರು ಸೋತಾಗ ಕುಗ್ಗಿ ಹೋಗುತ್ತಾರೆ. ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಳ್ಳುತ್ತಾರೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಸೋಲೇ ಗೆಲುವಿನ ಸೋಪಾನ ಎಂದು ನಿರಂತರ ಪ್ರಯತ್ನ ಮಾಡುತ್ತಾರೆ. ಆದರೂ ಕೂಡ ಒಮ್ಮೊಮ್ಮೆ....
ಅದೆಷ್ಟೇ ಪ್ರಯತ್ನವನ್ನು ಮಾಡಿದರೂ ಕೂಡ ಗೆಲುವು ಎನ್ನುವುದು ಸಿಗದೇ ಮತ್ತೆ ಸತಾಯಿಸುತ್ತೆ. ಇನ್ನೂ ಕೆಲ ಒಮ್ಮೆ ಅದೃಷ್ಟ ಕೈ ಕೊಡುತ್ತೆ. ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಸಾಲು ಸಾಲು ಸಿನಿಮಾಗಳು ಶುರುವಾದಷ್ಟೇ ಬೇಗ ನಿಂತು ಹೋಗುತ್ತವೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹಲವರು ತಮ್ಮ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಇವರ ಈ ಪ್ರಯತ್ನಕ್ಕೆ ಒಂದಲ್ಲೊಂದು ಪ್ರಯತ್ನಕ್ಕೆ ಬೆಲೆ ಸಿಗುತ್ತೆ. ಇದಕ್ಕೆ ರಣವೀರ್ ಸಿಂಗ್ ಸದ್ಯದ ಉದಾಹರಣೆ.

ಹೌದು, ಕಳೆದ ಎರಡು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರ ಇದ್ದ ರಣವೀರ್ ಸಿಂಗ್ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದರು. ಆದರೆ.. ದಕ್ಕಿದ್ದು ಕೇವಲ ನಿರಾಸೆ ಮಾತ್ರ. ಕರಣ್ ಜೋಹರ್ ನಿರ್ಮಾಣದ ''ತಖ್ತ್ ''.. ಶಂಕರ್ ನಿರ್ದೇಶನದಲ್ಲಿ ಬರಬೇಕಿದ್ದ ''ಅನ್ನಿಯನ್'' ಚಿತ್ರದ ರಿಮೇಕ್, ಹನುಮಾನ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ''ರಾಕ್ಷಸ್''.. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ''ಬೈಜೂ ಬವರಾ''.. ಹೀಗೆ ಅನೇಕ ಸಿನಿಮಾಗಳು ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಒಂದಿಲ್ಲೊಂದು ವಿಘ್ನಗಳಿಂದಾಗಿ ನಿಂತು ಹೋದವು.
ಇದೆಲ್ಲದರಿಂದ ಖುದ್ದು ರಣ್ವೀರ್ ಸಿಂಗ್ ಬೇಸತ್ತು ಹೋಗಿದ್ದರು. ಆದರೆ ಈಗ ರಣವೀರ್ ಸಿಂಗ್ ಶ್ರಮ ಸಾರ್ಥಕವಾಗಿದೆ. ಬಾಕ್ಸಾಫೀಸ್‌ನಲ್ಲಿ ''ಧುರಂಧರ್'' ಅಕ್ಷರಶಃ ಅಬ್ಬರಿಸುತ್ತಿದೆ. ವಿಶೇಷ ಅಂದರೆ ಸೋಮವಾರ ಚಿತ್ರ ಯಾವುದೇ ಇರಲಿ.. ಆ ಚಿತ್ರದ ಸ್ಟಾರ್ ಯಾರೇ ಇರಲಿ.. ವಾಡಿಕೆಯಂತೆ ಸೋಮವಾರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತೆ. ''ಧುರಂಧರ್'' ಗಳಿಕೆಯಲ್ಲಿ ಕೂಡ ಕುಸಿತ ಕಂಡು ಬಂದಿದೆ. ಆದರೆ.. ಚಿತ್ರದ ಗಳಿಕೆ ಎರಡಂಕಿಯನ್ನು ದಾಟಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ, ಮೊದಲ ದಿನ ₹ 28 ಕೋಟಿಯನ್ನು ಗಳಿಸಿದ ಈ ಚಿತ್ರ ನಿನ್ನೆ ಅಂದರೆ ನಾಲ್ಕನೇ ದಿನ (ಸೋಮವಾರ) ₹ 23 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಭಾರತದಲ್ಲಿ ಈ ನಾಲ್ಕೇ ದಿನದಲ್ಲಿ ಭಾರತದಲ್ಲಿ ₹ 126 ಕೋಟಿಯನ್ನು ಕೊಳ್ಳೆ ಹೊಡೆದಿದೆ ''ಧುರಂಧರ್''.
''ಸ್ಯಾಕ್ನಿಲ್'' ಪ್ರಕಾರ ''ಧುರಂಧರ್'' ಚಿತ್ರದ ನಾಲ್ಕು ದಿನಗಳ ಗಳಿಕೆ ಕೆಳಗಿನಂತೆ ಇದೆ.
ಮೊದಲ ದಿನ [ಶುಕ್ರವಾರ] ₹ 28 ಕೋಟಿ
ಎರಡನೇ ದಿನ [ಶನಿವಾರ] ₹ 32 ಕೋಟಿ
ಮೂರನೇ ದಿನ [ಭಾನುವಾರ]₹ 43 ಕೋಟಿ
ನಾಲ್ಕನೇ ದಿನ [ಸೋಮವಾರ]₹ 23 ಕೋಟಿ *
ಒಟ್ಟು ಗಳಿಕೆ ₹ 126 ಕೋಟಿ
ಹೀಗೆ ಕೇವಲ ನಾಲ್ಕು ದಿನದಲ್ಲಿ ₹126 ಕೋಟಿಯನ್ನು ದೋಚಿರುವ ''ಧುರಂಧರ್'' ಇಂದು (ಡಿಸೆಂಬರ್ 9) ಕೂಡ ಎರಡಂಕಿಯ ಗಳಿಕೆಯನ್ನು ಕಾಣುವ ವಿಶ್ವಾಸ ಬಾಲಿವುಡ್ ಪಂಡಿತರಿಗಿದೆ. ಮೂರುವರೆ ಗಂಟೆಯ ಸಿನಿಮಾ ಆದರೂ ಈ ಚಿತ್ರಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯ ಮತ್ತು ಚಿತ್ರದ ಈ ಗಳಿಕೆ ಹಲವರ ಅಚ್ಚರಿಗೆ ಕೂಡ ಕಾರಣವಾಗಿದೆ. ''ಧುರಂಧರ್'' ಮುಂಬರುವ ದಿನಗಳಲ್ಲಿ ಇನ್ನೆಷ್ಟು ಹಣ ಗಳಿಸುವಲ್ಲಿ ಯಶಸ್ವಿಯಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











