200 + ಚಿತ್ರಮಂದಿರ..1546% ಲಾಭ.. ಮಹಾವತಾರ್ ನರಸಿಂಹ ಘರ್ಜನೆಗೆ 50 ದಿನ
ಬಾಕ್ಸಾಫೀಸ್ ಅಚ್ಚರಿಯ ಗೂಡು. ಇಲ್ಲಿ ಯಾವತ್ತು ಯಾವ ಸಿನಿಮಾ ಚಿನ್ನದ ಬೆಳೆ ಬೆಳೆಯುತ್ತೆ. ಯಾವ ಸಿನಿಮಾ ಹೇಳ ಹೆಸರಿಲ್ಲದಂತೆ ಕಾಣೆಯಾಗುತ್ತೆ ಎನ್ನುವುದು ಹೇಳಲು ಸಾಧ್ಯ ಇಲ್ಲ. ಕೆಲ ಒಮ್ಮೆ ವ್ಯಾಪಕವಾದ ನಿರೀಕ್ಷೆಯನ್ನು ಮೂಡಿಸಿದ ಚಿತ್ರ ಇಲ್ಲಿ ಮಕಾಡೆ ಮಲಗಿದರೆ, ಇನ್ನೂ ಕೆಲ ಒಮ್ಮೆ ಯಾವ ನಿರೀಕ್ಷೆ ಇರದ ಚಿತ್ರ ದಿಗ್ಗನೆ ಎದ್ದು ಬಂದು ಸದ್ದು ಮಾಡಲು ಶುರು ಮಾಡುತ್ತೆ.
ಎಲ್ಲರನ್ನೂ ತನ್ನತ್ತ ಆಯಸ್ಕಾಂತದಂತೆ ಸೆಳೆದು ಅಚ್ಚರಿಯನ್ನು ಮೂಡಿಸುತ್ತೆ. ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಕೂಡ ಬರೆಯುತ್ತೆ. ಓಟಿಟಿ..ಪೈರಸಿಯ ಯುಗದಲ್ಲಿ ಕೂಡ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತೆ. ಇದಕ್ಕೆ ''ಮಹಾವತಾರ್ ನರಸಿಂಹ'' ಸದ್ಯದ ಉದಾಹರಣೆ.

ಹೌದು, ''ಮಹಾವತಾರ್ ನರಸಿಂಹ'' .. ಕನ್ನಡದ ಹೊಂಬಾಳೆ ಸಂಸ್ಥೆಯ ಸಹಯೋಗದೊಂದಿಗೆ ಬೆಳ್ಳಿತೆರೆಯಲ್ಲಿ ಅರಳಿದ ವಿಸ್ಮಯ. ಚಿತ್ರಮಂದಿರಗಳಲ್ಲಿ ಚಿತ್ರವೊಂದು ಒಂದು ವಾರ ಪ್ರದರ್ಶನ ಕಾಣುವುದೇ ಕಷ್ಟ ಎನ್ನುವಂತಹ ವಾತಾವರಣದಲ್ಲಿ ತೆರೆಗೆ ಬಂದ ಈ ಚಿತ್ರ ಸದ್ಯ ಚಿತ್ರಮಂದಿರಗಳಲ್ಲಿ ಐವತ್ತು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಈ ಐವತ್ತು ದಿನಗಳಲ್ಲಿ ''ಪರಮ ಸುಂದರಿ''.. ''ಬಾಘಿ-4''.. ''ಲೋಕಾ''.. ''ಮದರಾಸಿ''.. ''ಸು ಫ್ರಮ್ ಸೋ''.. ''ಏಳುಮಲೆ'' ಹೀಗೆ ಬೇರೆ ಬೇರೆ ಭಾಷೆಯಲ್ಲಿ ಹಲವು ಚಿತ್ರಗಳು ಬಂದಿವೆ. ಆದರೆ.. "ಮಹಾವತಾರ್ ನರಸಿಂಹ" ಘರ್ಜನೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿಯೇ ಈ ಚಿತ್ರದ ಗಳಿಕೆ ಮತ್ತು 50 ದಿನವಾದರೂ ಈ ಚಿತ್ರವನ್ನು ಪ್ರದರ್ಶನ ಮಾಡುತ್ತಿರುವ ಸ್ಕ್ರೀನ್ ಗಳ ಸಂಖ್ಯೆ.
ಹೌದು. ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದಾದರೂ, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ "ಮಹಾವತಾರ್ ನರಸಿಂಹ" ಈ 50 ದಿನಗಳಲ್ಲಿ ಕೇವಲ ಭಾರತದಲ್ಲೇ ₹ 249.52 ಕೋಟಿಯನ್ನು ಗಳಿಸಿದೆ. ಹೊರದೇಶದಲ್ಲಿ ಈ ಚಿತ್ರ ₹ 28 ಕೋಟಿಯನ್ನು ಗಳಿಸಿದೆ.
''ಹೊಂಬಾಳೆ ಸಂಸ್ಥೆ'' ಖುದ್ದು ಮಾಹಿತಿಯನ್ನು ಹಂಚಿಕೊಂಡತೆ 50 ದಿನಗಳಾದರೂ ಕೂಡ ಈ ಚಿತ್ರ ಇನ್ನೂ 200+ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅಲ್ಲಿಗೆ "ಮಹಾವತಾರ್ ನರಸಿಂಹ"ನ ಅಬ್ಬರ ಹೇಗಿದೆ ಎನ್ನುವುದನ್ನು ನೀವೆ ಊಹಿಸಿ.

''ಸ್ಯಾಕ್ನಿಲ್'' ಪ್ರಕಾರ ಬೇರೆ ಬೇರೆ ಭಾಷೆಯಲ್ಲಿ ''ಮಹಾವತಾರ್ ನರಸಿಂಹ'' ಚಿತ್ರದ ಗಳಿಕೆ ಈ ಕೆಳಗಿನಂತೆ ಇದೆ.
ಹಿಂದಿ: ₹ 187.21 ಕೋಟಿ
ತೆಲುಗು:₹ 49.06 ಕೋಟಿ
ಕನ್ನಡ : ₹ 9.8 ಕೋಟಿ
ತಮಿಳು : ₹ 2.89 ಕೋಟಿ
ಮಲಯಾಳಂ : ₹56 ಲಕ್ಷ
ಒಟ್ಟು ಗಳಿಕೆ : ₹ 249.52 ಕೋಟಿ
ಇನ್ನೂ ''Koimoi'' ವರದಿಯ ಪ್ರಕಾರ ₹15ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ "ಮಹಾವತಾರ್ ನರಸಿಂಹ" ಚಿತ್ರದಿಂದ ನಿರ್ಮಾಣ ಸಂಸ್ಥೆಗೆ 1546% ಲಾಭ ಆಗಿದೆ. ಕೇವಲ ಹಿಂದಿಯಲ್ಲಿ ಮಾತ್ರ ₹184.72 ಕೋಟಿಯನ್ನು ಈ ಚಿತ್ರ ಗಳಿಸಿದೆ.
ಹೀಗೆ ಕಳೆದ 50 ದಿನಗಳಿಂದ ''ಮಹಾವತಾರ್ ನರಸಿಂಹ'' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಕೋಟಿ ಕೋಟಿ ಹಣವನ್ನು ಕೂಡ ದೋಚಿದೆ. ಇನ್ನೂ ಎಷ್ಟು ದಿನಗಳ ಕಾಲ ಈ ಆನಿಮೇಷನ್ ಚಿತ್ರದ ಅಬ್ಬರ ಮುಂದುವರೆಯಲಿದೆ..? ಇನ್ನೆಷ್ಟು ಕೋಟಿ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











