The Girlfriend Boxoffice Day 2; ನಾಲ್ಕು ಪಟ್ಟು ಹೆಚ್ಚಾಯ್ತು ಕಲೆಕ್ಷನ್, 'ಗರ್ಲ್‌ಫ್ರೆಂಡ್' ರಶ್ಮಿಕಾ ಮ್ಯಾಜಿಕ್!
ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಈಗ ಅಷ್ಟು ಸುಲಭವಲ್ಲ. ಮಾಸ್ ಕಮರ್ಷಿಯಲ್ ಸಿನಿಮಾಗಳ ಆರ್ಭಟದ ನಡುವೆ ಕ್ಲಾಸ್ ರೊಮ್ಯಾಂಟಿಕ್ ಸಿನಿಮಾಗಳು ಗೆಲ್ಲಬೇಕಂದರೆ ಮೌತ್ ಟಾಕ್ ಬಹಳ ಮುಖ್ಯ. ಪ್ರೇಕ್ಷಕರು ಇಂತಹ ಸಿನಿಮಾ ನೋಡಲು ಮುಗಿಬೀಳಲ್ಲ. ಸಿನಿಮಾ ನೋಡಿದವರು ಚೆನ್ನಾಗಿದೆ ಎಂದು 4 ಜನಕ್ಕೆ ಹೇಳಿದಾಗ ನಿಧಾನವಾಗಿ ಪ್ರೇಕ್ಷಕರ ಸಂಖ್ಯೆ ಹೆಚ್ಚಬಹುದು.
ರಾಹುಲ್ ರವೀಂದ್ರನ್ ನಿರ್ದೇಶನದ 'ದಿ ಗರ್ಲ್‌ಫ್ರೆಂಡ್' ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮೊದಲ ದಿನ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ 2ನೇ ದಿನ ಸಿನಿಮಾ ನಿಧಾನವಾಗಿ ಸದ್ದು ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟಾಕ್ಕಿದೆ. ನಿಧಾನವಾಗಿ ಮಹಿಳಾ ಪ್ರೇಕ್ಷಕರು ಮುಂದಾಗಿದ್ದಾರೆ. ಮೊದಲ ದಿನಕ್ಕಿಂತ 2ನೇ ದಿನ 4 ಪಟ್ಟು ಹೆಚ್ಚು ಗಳಿಕೆ ಕಂಡಿದೆ. 3ನೇ ದಿನವಾದ ಇಂದು(ಭಾನುವಾರ) ದೊಡ್ಡಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುವ ಅಂದಾಜಿದೆ.

ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ 'ದಿ ಗರ್ಲ್‌ಫ್ರೆಂಡ್' ಸಿನಿಮಾ ನಿರ್ಮಾಣವಾಗಿದೆ. ಕನ್ನಡ ಕಲಾವಿದರಾದ ದೀಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ನಟಿಸಿದ್ದಾರೆ. ಅನು ಇಮಾನ್ಯುಯೆಲ್, ರಾವು ರಮೇಶ್, ರೋಹಿಣಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರೀತಿಯಲ್ಲಿ ನೋವುಂಡ ಯುವತಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟನೆ ಪ್ರೇಕ್ಷಕರ ಮನಗೆದ್ದಿದೆ.
ರಶ್ಮಿಕಾ ನಟಿಸಿರುವ ಬಹುತೇಕ ಸಿನಿಮಾಗಳು ಗೆದ್ದಿವೆ. 'ದಿ ಗರ್ಲ್‌ಫ್ರೆಂಡ್' ಒಂದರ್ಥದಲ್ಲಿ ಮಹಿಳಾ ಪ್ರಧಾನ ಸಿನಿಮಾ. ಭೂಮ ದೇವಿ ಪಾತ್ರದ ಸುತ್ತಾ ಕಥೆ ಸುತ್ತುತ್ತದೆ. ಆ ಪಾತ್ರದ ಭಾವನೆಗಳನ್ನು ಭಾವೋದ್ವೇಗವನ್ನು ವ್ಯಕ್ತಪಡಿಸಿ ರಶ್ಮಿಕಾ ಮಂದಣ್ಣ ಸೊಗಸಾಗಿ ನಟಿಸಿದ್ದಾರೆ. ಆಕೆಯ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಇನ್ನುಳಿದಂತೆ ಟಾಕ್ಸಿಕ್ ಬಾಯ್‌ಫ್ರೆಂಡ್ ಆಗಿ ಕುಂದಾಪುರದ ಹುಡುಗ ದೀಕ್ಷಿತ್ ನಟನೆಗೂ ಒಳ್ಳೆ ಅಂಕಗಳು ಸಿಗುತ್ತಿದೆ.
ಬಾಕ್ಸಾಫೀಸ್ ಕಲೆಕ್ಷನ್ ವಿಚಾರಕ್ಕೆ ಬಂದರೆ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಮೊದಲ ದಿನ 1.3 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. 2ನೇ ದಿನ 2.50 ಕೋಟಿ ರೂ. ಗಳಿಕೆ ಮಾಡಿರುವುದಾಗಿ www.sacnilk.com ವೆಬ್‌ಸೈಟ್ ವರದಿ ಮಾಡಿದೆ. ಆ ಮೂಲಕ ಒಟ್ಟಾರೆ 2 ದಿನಕ್ಕೆ ಭಾರತದಲ್ಲಿ 3.80 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದಂತಾಗಿದೆ. ಇನ್ನು ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಕೂಡ ಸಿನಿಮಾ ಗಳಿಕೆ ಚೆನ್ನಾಗಿದೆ. 2ನೇ ದಿನಕ್ಕೆ ಪ್ರೇಕ್ಷಕರು ಚಿತ್ರದ ಮೇಲೆ ತೋರಿಸಿದ ಪ್ರೀತಿಗೆ ಚಿತ್ರತಂಡ ಖುಷಿಯಾಗಿದೆ.
ಮಹಿಳಾ ಪ್ರಧಾನ ಸಿನಿಮಾಗಳಿಗೆ ಭರ್ಜರಿ ಓಪನಿಂಗ್ ಸಿಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ನಿಧಾನವಾಗಿ ಸದ್ದು ಮಾಡುತ್ತವೆ. ರಶ್ಮಿಕಾ ಕ್ರೇಜ್ ಕೂಡ ಕೊಂಚಮಟ್ಟಿಗೆ ವರ್ಕ್ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿರುವರಿಗೆ ರಶ್ಮಿಕಾ, ನಿರ್ದೇಶಕ ರಾಹುಲ್ ಪ್ರತಿಕ್ರಿಯಿಸಿ ಧನ್ಯವಾದ ತಿಳಿಸುತ್ತಿದ್ದಾರೆ. ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡರೂ ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಕೆಲವರು ಇದು ನಮ್ಮದೇ ಕಥೆ ಎಂದು ಫೀಲ್ ಆಗುತ್ತಿದ್ದಾರೆ.
ರಶ್ಮಿಕಾ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ನಟನೆಯಲ್ಲಿ ಪಕ್ವವಾಗುತ್ತಿದ್ದು ಈ ಚಿತ್ರದಲ್ಲಿ ಕಮಾಲ್ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ಪ್ರೀ ಇಂಟರ್‌ವಲ್ ಹಾಗೂ ಕ್ಲೈಮ್ಯಾಕ್ಸ್‌ನಲ್ಲಿ ಗಮನ ಸೆಳೆದಿದ್ದಾರೆ.
ಹೇಶಮ್ ಅಬ್ದುಲ್ ವಹಾಬ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಮಹಿಳೆಯ ಭಾವನೆಗಳನ್ನು ನಿರ್ದೇಶಕ ರಾಹುಲ್ ಬಹಳ ಚೆನ್ನಾಗಿ ತೆರೆಗೆ ತಂದಿದ್ದಾರೆ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಈಗಿನ ಕಾಲದಲ್ಲಿ ಕೆಲ ರಿಲೇಷನ್‌ಶಿಪ್‌ಗಳು ಎಷ್ಟು ಟಾಕ್ಸಿಕ್ ಆಗಿ ಇರುತ್ತದೆ ಎಂದು ಚಿತ್ರದಲ್ಲಿ ತೋರಿಸಿರುವ ಬಗೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ.


Click it and Unblock the Notifications











