ಭಾರತದಲ್ಲಿ 'ಕೆಜಿಎಫ್' ಕೋಟೆ ನೆಲಕ್ಕುರುಳಿಸಲು 'ಧುರಂಧರ್'ಗೆ ಇನ್ನೆಷ್ಟು ಕೋಟಿ ಬೇಕು ? ಸಾಧ್ಯನಾ ?
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಹಿಂದಿ ಚಿತ್ರರಂಗದಲ್ಲಿ ಹಲವು ಚಿತ್ರಗಳು ಅಬ್ಬರಿಸಿವೆ. ಹಲವಾರು ದಾಖಲೆಗಳನ್ನು ಕೂಡ ಬರೆದಿವೆ. ಆದರೆ.. ಎಲ್ಲವನ್ನೂ ಸಾಧಿಸಿ ಭೇದಿಸಿದ ಬಾಲಿವುಡ್‌ಗೆ ಮಾತ್ರ ಇಲ್ಲಿಯವರೆಗೆ ಕೇವಲ ಭಾರತದಲ್ಲಿ ₹700 ಕೋಟಿಯನ್ನು ಕೊಳ್ಳೆ ಹೊಡೆಯಲು ಸಾಧ್ಯವಾಗಿರಲಿಲ್ಲ. ನಿಜಾ.. ''ದಂಗಲ್''.. ''ಪಠಾಣ್'' .. ಸೇರಿ ಕೆಲ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ 1000 ಕೋಟಿಯನ್ನು ಗಳಿಸಿವೆ.
ಆದರೆ.. ಆ ಗಳಿಕೆ ಕೇವಲ ಭಾರತದಲ್ಲಿ ಮಾಡಿದ್ದಲ್ಲ. ಬದಲಿಗೆ ವರ್ಲ್ಡ್ ವೈಡ್ ಪ್ರದರ್ಶನ ಕಂಡು ಚಿತ್ರ ಮಾಡಿದ್ದ ಗಳಿಕೆ ಅದು. ವಿಶೇಷ ಅಂದರೆ ಹಿಂದಿ ಉದ್ಯಮದ ಘಟಾನುಘಟಿಗಳಿಂದ ಮಾಡಲಾಗದ ಈ ಸಾಧನೆಯನ್ನು ದಕ್ಷಿಣ ಭಾರತದ ಚಿತ್ರಗಳು ಮಾಡಿವೆ. ಕೇವಲ ಭಾರತದಲ್ಲಿಯೇ ₹700.. ₹800 ಕೋಟಿಯನ್ನು ದೋಚಿವೆ. ಉದಾಹರಣೆಗೆ ನಮ್ಮ ನೆಲದ ''ಕೆಜಿಎಫ್ 2'' ಚಿತ್ರವನ್ನೇ ತೆಗೆದುಕೊಳ್ಳಿ.

2022ರಲ್ಲಿ ಬಿಡುಗಡೆಯಾದ ''ಕೆಜಿಎಫ್ 2''₹859 ಕೋಟಿಯನ್ನು ಕೇವಲ ಭಾರತದಲ್ಲಿ ಕೊಳ್ಳೆ ಹೊಡೆದಿತ್ತು. ಅಲ್ಲು ಅರ್ಜುನ್ ಅಭಿನಯದ ''ಪುಷ್ಪಾ 2'' ₹1,234 ಕೋಟಿಯನ್ನು ಲೂಟಿ ಮಾಡಿತ್ತು. ಆದರೆ ಸೌತ್‌ನವರು ಮಾಡಿದ ಈ ಸಾಧನೆಯನ್ನು ಹಿಂದಿಯವರಿಂದ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹಲವರು ಈ ಸಾಧನೆಯ ಶಿಖರಕ್ಕೆ ಬಾಲಿವುಡ್ ಏರಲು ಸಾಧ್ಯ ಇಲ್ಲ ಎಂದುಕೊಂಡಿದ್ದರು.
ಆದರೆ.. ಈಗ ಬಾಲಿವುಡ್ ಕಣ್ಣಿಗೆ ಹೊಸದೊಂದು ಬೆಳಕು ಕಂಡಿದೆ. ದಾಖಲೆ ಮುರಿಯುವುದು ಅಸಾಧ್ಯವೇನಲ್ಲ ಎಂಬ ಭಾವನೆ ಬಾಲಿವುಡ್‌ನವರಲ್ಲಿ ಮೂಡಿದೆ. ಆ ಭರವಸೆಯ ಬೆಳಕಿನ ಹೆಸರೇ ''ಧುರಂಧರ್''.
ಹೌದು, ''ಧುರಂಧರ್''.. ಕಳೆದ ವರ್ಷಾಂತ್ಯದಲ್ಲಿ ಬಾಕ್ಸಾಫೀಸ್‌ಗೆ ಅಪ್ಪಳಿಸಿರುವ ಜ್ವಾಲಾಮುಖಿ. ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ, ಅಂದರೆ ಕಳೆದ 35 ದಿನಗಳಿಂದ ಬೆಳ್ಳಿಪರದೆಯ ಮೇಲೆ ಧಗಧಗಿಸುತ್ತಲೇ ಇರುವ ಈ ಸಿನಿಮಾ ಇಲ್ಲಿಯವರೆಗೆ ಹಲವು ದಾಖಲೆಗಳನ್ನು ಮುರಿದಿದೆ ಬಾಲಿವುಡ್‌ನ ಇತಿಹಾಸದಲ್ಲಿಯೇ ಹಿಂದೆಂದೂ ಯಾವ ಸಿನಿಮಾ ಮಾಡದ ದಾಖಲೆಯನ್ನು ಮಾಡಿದೆ. ಈ 35 ದಿನದಲ್ಲಿ ₹800 ಕೋಟಿಯನ್ನು ಕೇವಲ ಭಾರತದಲ್ಲಿ ದೋಚಿದೆ. ಈ ಮೂಲಕ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂತಹ ''ಧುರಂಧರ್'' ಭಾರತದ ಬಾಕ್ಸಾಫೀಸ್‌ನಲ್ಲಿ ಕನ್ನಡದ ಕೆಜಿಎಫ್ ಕೋಟೆಯನ್ನು ನೆಲಕ್ಕುರಳಿಸುತ್ತಾ ? ಎನ್ನುವ ಪ್ರಶ್ನೆ ಸದ್ಯ ಟ್ರೇಡ್ ಪಂಡಿತರಿಗೆ ಕಾಡುತ್ತಿದೆ.

ಹೌದು, ನಿಮಗೆ ಗೊತ್ತಿರಲಿ.. ಈಗಾಗಲೇ ವಿಶ್ವದೆಲ್ಲೆಡೆಯ ಗಳಿಕೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ''ಕೆಜಿಎಫ್ 2'' ಚಿತ್ರವನ್ನು ''ಧುರಂಧರ್'' ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿದೆ. ವಿಶ್ವ ಮಾರುಕಟ್ಟೆಯಲ್ಲಿ ''ಕೆಜಿಎಫ್ 2'' ₹1,215 - ₹1,230 ಕೋಟಿಯನ್ನು ಗಳಿಸಿದ್ದರೆ ''ಧುರಂಧರ್'' ₹1,265 ಕೋಟಿಯನ್ನು ಈಗಾಗಲೇ ದೋಚಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಯಶಸ್ವಿ ಪ್ರದರ್ಶನವನ್ನು ಕಾಣ್ತಿದೆ.
ಇನ್ನು ಕೇವಲ ಹಿಂದಿಯಲ್ಲಿ ''ಕೆಜಿಎಫ್ 2'' ಭಾರತದಲ್ಲಿ ₹434.70 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಬೇರೆ ಭಾಷೆಯ ಸಹಾಯದಿಂದ ಈ ಗಳಿಕೆ ಭಾರತದಲ್ಲಿ ₹859.70 ಕೋಟಿಯಾಗಿತ್ತು. ಸದ್ಯ ''ಧುರಂಧರ್'' ಕೇವಲ ಹಿಂದಿ ಭಾಷೆಯಲ್ಲಿ ₹ 790.25 ಕೋಟಿ ಗಳಿಸಿದೆ. ಈ ಮೂಲಕ ಹಿಂದಿ ಮಾರುಕಟ್ಟೆಯಲ್ಲಿ ''ಕೆಜಿಎಫ್ 2''ನ ಹಿಂದಿಕ್ಕಿದೆ.
ಆದರೆ.. ಭಾರತದ ಮಾರುಕಟ್ಟೆಯಲ್ಲಿ ''ಕೆಜಿಎಫ್2''ನ ಹಿಂದಿಕ್ಕಲು ''ಧುರಂಧರ್''ಗೆ ಇನ್ನೂ ₹69.45 ಕೋಟಿ ಬೇಕಿದೆ. ಇನ್ನು ಚಿತ್ರತಂಡದವರೇ ಎರಡು ದಿನದ ಹಿಂದೆ ಅಧಿಕೃತವಾಗಿ ಹಂಚಿಕೊಂಡ ಲೆಕ್ಕದ ಪ್ರಕಾರ ಭಾರತದಲ್ಲಿ ''ಧುರಂಧರ್'' ₹831.40 ಕೋಟಿಯನ್ನು ಗಳಿಸಿದೆ. ಆ ಪ್ರಕಾರ ''ಕೆಜಿಎಫ್2'' ಹಿಂದಿಕ್ಕಲು ''ಧುರಂಧರ್''ಗೆ ಇನ್ನೂ ₹27.8 ಕೋಟಿ ಅವಶ್ಯಕತೆ ಇದೆ. ''ಧುರಂಧರ್'' ಕೈಯಿಂದ ಇದು ಸಾಧ್ಯವಾಗುತ್ತಾ..? ಎನ್ನುವುದೇ ಸದ್ಯದ ಪ್ರಶ್ನೆ ಮತ್ತು ಚರ್ಚೆ.
ಯಾಕೆಂದರೆ.. ''ಧುರಂಧರ್'' ಕ್ರೇಜ್ ಕಡಿಮೆಯಾಗಿದೆ. ಎರಡಂಕಿಯಿಂದ ಒಂದಂಕಿಗೆ ಗಳಿಕೆ ಬಂದಿದೆ. ಈ ವಾರಾಂತ್ಯದಲ್ಲಿ ಪವಾಡ ನಡೆದು ಮತ್ತೆ ಗಳಿಕೆ ಎರಡಂಕಿಯನ್ನು ದಾಟಿದರೆ ಭಾರತದಲ್ಲಿ ''ಕೆಜಿಎಫ್2'' ಚಿತ್ರವನ್ನು ''ಧುರಂಧರ್'' ಹಿಂದಿಕ್ಕಲಿದೆ. ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದೆ. ಇಲ್ಲದಿದ್ದರೆ ''ಧುರಂಧರ್''ಗೆ 4ನೇ ಸ್ಥಾನ ತೃಪ್ತಿ ಪಡಲಿದೆ.
ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ 5 ಚಿತ್ರಗಳ ಪಟ್ಟಿ ಇಲ್ಲಿದೆ.
1. ಪುಷ್ಪ 2 (2024 ) ₹1,234.1 ಕೋಟಿ
2.ಬಾಹುಬಲಿ 2 (2017) ₹1,030.4 ಕೋಟಿ
3.ಕೆಜಿಎಫ್ 2 (20220 ₹859.7 ಕೋಟಿ
4.ಧುರಂಧರ್* (2025) ₹786 ಕೋಟಿ
5.ಆರ್‌ಆರ್‌ಆರ್ (2022) ₹790.25 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications