Border 2 Box Office Day 5 : ರಜೆಯ ಮಜಾ ಮುಗಿದರೂ ತಗ್ಗದ ಸನ್ನಿ ಡಿಯೋಲ್ ಹವಾ-5ನೇ ದಿನ ಬಾರ್ಡರ್ 2 ಗಳಿಸಿದ್ದೆಷ್ಟು?
ಸಾಮಾನ್ಯವಾಗಿ ಹಬ್ಬ ಹರಿದಿನಗಳಂದು .. ರಜಾದಿನಗಳಂದು .. ವಿಶೇಷ ದಿನಗಳಂದು.. ಬಿಡುಗಡೆಯಾದ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇರುತ್ತೆ. ಅದರಲ್ಲಿಯೂ ಆ ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿದ್ದರೆ ಮುಗೀತು. ಚಿತ್ರಮಂದಿರದ ಎದುರು ಜನಜಂಗುಳಿ ಕಂಡು ಬರುತ್ತದೆ. ಚಿತ್ರ ಚೆನ್ನಾಗಿದೆಯಾ.. ಚೆನ್ನಾಗಿಲ್ವಾ ? ಯಾವುದನ್ನೂ ಲೆಕ್ಕಿಸದೇ ಮಜಾ ಮಾಡುವ ಉದ್ದೇಶದಿಂದ ರಜಾದಿನದಂದು ಬಂದ ಚಿತ್ರವನ್ನು ಅನೇಕರು ನೋಡುತ್ತಾರೆ.
ಆದರೆ ಅಸಲಿ ಪರೀಕ್ಷೆ ಶುರುವಾಗುವುದೇ ಆ ನಂತರ. ಹಬ್ಬ ಮುಗಿದ ನಂತರ .. ರಜೆಯ ಮಜವೆಲ್ಲ ಮುಕ್ತಾಯವಾದ ನಂತರ.. ಆ ಚಿತ್ರ ನಿಜಕ್ಕೂ ಪ್ರೇಕ್ಷಕರಿಗೆ ಇಷ್ಟವಾಗಿದ್ದರೆ ಮಾತ್ರ ಚಿತ್ರಮಂದಿರದಲ್ಲಿ ಉಳಿಯುತ್ತೆ. ಗೆಲ್ಲುತ್ತೆ.

ಅದರಲ್ಲಿಯೂ ಪೈರಸಿಯ ಈ ಕಾಲದಲ್ಲಿ .. ಪ್ಯಾನ್ ಇಂಡಿಯಾದ ಗುಂಗಿನಲ್ಲಿ .. ಚಿತ್ರವೊಂದು ಚಿತ್ರಮಂದಿರದಲ್ಲಿ ಒಂದೆರಡು ವಾರ ಪ್ರದರ್ಶನ ಕಾಣುವುದೇ ಕಷ್ಟ ಎನ್ನುವಾಗ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುವುದಲ್ಲದೇ ಬಾಕ್ಸಾಫೀಸ್‌ನಲ್ಲಿ ಕೂಡ ಕೋಟಿ ಕೋಟಿ ಹಣ ದೋಚುತ್ತಿದೆ ಅಂದರೆ ಆ ಚಿತ್ರ ನಿಜಕ್ಕೂ ಗೆದ್ದಂತೆಯೇ. ಉದಾಹರಣೆಗೆ ''ಬಾರ್ಡರ್ 2''.
ಹೌದು, ''ಬಾರ್ಡರ್ -2''.. ವರ್ಷಾರಂಭದಲ್ಲಿಯೇ ಬಾಲಿವುಡ್ ಬಾಕ್ಸಾಫೀಸ್‌ಗೆ ಬಂದು ಅಪ್ಪಳಿಸಿರುವ ಸುನಾಮಿ. ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾದ ಈ ಚಿತ್ರ ಮಾಡ್ತಿರುವ ಸದ್ದು ಸದ್ಯ ಅಷ್ಟಿಷ್ಟಲ್ಲ. ಮೊದಲ ದಿನದಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತ ಬಂದ ಈ ಚಿತ್ರ ಸದ್ಯ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಇದಕ್ಕೆ ಕೈಗನ್ನಡಿಯೇ ಚಿತ್ರದ ಗಳಿಕೆ.
ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರದ ಮೊದಲ ನಾಲ್ಕು ದಿನದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿದೆ ಹೊರತು ಗಳಿಕೆ ಕಡಿಮೆಯಾಗಿಲ್ಲ. ಬಿಡುಗಡೆಯಾದ ಮೊದಲ ದಿನ ₹ 30 ಕೋಟಿ ಗಳಿಸಿದ್ದ ಈ ಚಿತ್ರ ಗಣರಾಜ್ಯೋತ್ಸವದ ದಿನದಂದು ₹ 59 ಕೋಟಿಯನ್ನು ಗಳಿಸಿದೆ.
ಇನ್ನೂ ಸ್ಟಾರ್ ಯಾರೇ ಇರಲಿ.. ಆ ಚಿತ್ರ ಯಾವುದೇ ಇರಲಿ.. ವಾರದ ದಿನಗಳಲ್ಲಿ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದೇ ಬರುತ್ತೆ. ''ಬಾರ್ಡರ್ 2'' ಚಿತ್ರದ ವಿಚಾರದಲ್ಲಿ ಕೂಡ ಇದೇ ಆಗಿದೆ. ಆದರೆ.. ಒಂದಂಕಿಗೆ ಚಿತ್ರದ ಗಳಿಕೆ ಕುಸಿದಿಲ್ಲ. ಬದಲಿಗೆ ಐದನೇ ದಿನವೂ (ಮಂಗಳವಾರ-ಜನವರಿ 27 ) ''ಬಾರ್ಡರ್ 2'' ದಾಖಲೆಯ ಗಳಿಕೆಯನ್ನು ಮಾಡಿದೆ. ₹ 19.50 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಕೇವಲ ಐದು ದಿನದಲ್ಲಿ ₹ 196.50 ಕೋಟಿಯನ್ನು ಚಿತ್ರ ಗಳಿಸಿದೆ.

''ಸ್ಯಾಕ್ನಿಲ್'' ಪ್ರಕಾರ ''ಬಾರ್ಡರ್ 2'' ಚಿತ್ರದ ಮೊದಲ 5 ದಿನದ ಗಳಿಕೆ ಈ ಕೆಳಗಿನಂತೆ ಇದೆ
ಮೊದಲ ದಿನ ( ಶುಕ್ರವಾರ )₹ 30 ಕೋಟಿ
ಎರಡನೇ ದಿನ (ಶನಿವಾರ ) ₹ 36.5 ಕೋಟಿ
ಮೂರನೇ ದಿನ (ಭಾನುವಾರ) ₹54.5 ಕೋಟಿ
ನಾಲ್ಕನೇ ದಿನ (ಸೋಮವಾರ) ₹59 ಕೋಟಿ
ಐದನೇ ದಿನ (ಮಂಗಳವಾರ) ₹19.50 ಕೋಟಿ
ಒಟ್ಟು ಗಳಿಕೆ - ₹196.50 ಕೋಟಿ
ಇನ್ನು ಚಿತ್ರತಂಡ ಕೂಡ ಚಿತ್ರದ ಗಳಿಕೆಯನ್ನು ಅಧಿಕೃತವಾಗಿ ಹಂಚಿಕೊಂಡಿದೆ. ಆ ಪ್ರಕಾರ ''ಬಾರ್ಡರ್ 2'' ಕೇವಲ ನಾಲ್ಕು ದಿನದಲ್ಲಿಯೇ ₹193.48 ಕೋಟಿ ಗಳಿಸಿದೆ. ಈ ಮೂಲಕ ''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವುದಕ್ಕಿಂತ ಹೆಚ್ಚಿನ ಹಣವನ್ನು ಚಿತ್ರ ಗಳಿಸಿದೆ ಎಂಬ ಸಂದೇಶವನ್ನು ಚಿತ್ರತಂಡ ರವಾನೆ ಮಾಡಿದೆ.
ಇನ್ನು ''ಸ್ಯಾಕ್ನಿಲ್'' ಲೆಕ್ಕಾಚಾರದ ಪ್ರಕಾರವೇ ಹೋದರೆ ಇಂದು (ಜನವರಿ 28 ) ಚಿತ್ರ ₹200 ಕೋಟಿಯ ಗಡಿಯನ್ನು ದಾಟಲಿದೆ. ಈ ಮೂಲಕ ಕೇವಲ ಆರು ದಿನದಲ್ಲಿ ₹200 ಕೋಟಿ ಗಡಿ ದಾಟಿದ ಬೆರಳಣಿಕೆಯ ಚಿತ್ರಗಳಲ್ಲಿ ''ಬಾರ್ಡರ್ 2'' ಕೂಡ ಒಂದಾಗಲಿದೆ. ಮುಂಬರುವ ದಿನಗಳಲ್ಲಿ ''ಬಾರ್ಡರ್ 2'' ಎಷ್ಟು ಗಳಿಸುತ್ತೆ..? ಬಾಕ್ಸಾಫೀಸ್‌ನಲ್ಲಿ ಸನ್ನಿಡಿಯೋಲ್ ತಮ್ಮದೇ ''ಗದರ್ 2'' ಚಿತ್ರದ ಗಳಿಕೆಯನ್ನು ಹಿಂದಿಕ್ಕುತ್ತಾರಾ..? ''ಬಾರ್ಡರ್ 2'' ಚಿತ್ರ ''ಧುರಂಧರ್'' ದಾಖಲೆ ಮುರಿಯುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











