War 2 vs War Box Office ; ತಮ್ಮದೇ 'ವಾರ್' ಚಿತ್ರದ ದಾಖಲೆಯನ್ನು ಮುರಿಯುತ್ತಾರಾ ಹೃತಿಕ್ ರೋಷನ್ ?
ಈಗೀಗ ಯಾವ ಭಾಷೆಯಲ್ಲಿ ನೋಡಿದರೂ ಕೂಡ ಸಿಕ್ವೆಲ್‌ಗಳ ಟ್ರೆಂಡ್ ಶುರುವಾಗಿದೆ. ಎಲ್ಲರಲ್ಲಿಯೂ ಈಗ ತಮ್ಮದೇ ಆದ ಫ್ರಾಂಚೈಸಿಯನ್ನು ತೆರೆಯುವ ಬಯಕೆ. ತಮ್ಮದೇ ಆದ ಯೂನಿವರ್ಸ್‌ಗೆ ಪ್ರೇಕ್ಷಕರನ್ನು ಕರೆದೊಯ್ಯುವ ಆಸೆ. ಆದರೆ .. ಅದು ಸುಲಭ ಅಲ್ಲ. ಯಾಕೆಂದರೆ ಮೊದಲ ಭಾಗ ಗೆದ್ದ ಹಿನ್ನೆಲೆ ಎರಡನೇ ಭಾಗದ ಮೇಲೆ ನಿರೀಕ್ಷೆಗಳು ಹೆಚ್ಚಿರುತ್ತವೆ. ಎರಡನೇ ಭಾಗ ಗೆದ್ದರೆ ಮೂರನೇ ಭಾಗದ ಮೇಲಿನ ನಿರೀಕ್ಷೆ ಇನ್ನೂ ಹೆಚ್ಚಾಗುತ್ತೆ.
ಅಪ್ಪಿ.. ತಪ್ಪಿ.. ಚೂರು ಯಾಮಾರಿದರೂ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತೆ. ಚಿತ್ರ ಪಾತಾಳಕ್ಕೆ ಬೀಳುವ ಸಾಧ್ಯತೆ ಇರುತ್ತೆ. ಕೇವಲ ಸ್ಟಾರ್ ವ್ಯಾಲ್ಯೂ ಎನ್ ಕ್ಯಾಶ್ ಮಾಡಿಕೊಂಡು ಇಂದಿನ ಕಾಲದಲ್ಲಿ ಕ್ಯಾಶ್ ಎಣಿಸುವುದು ತುಂಬಾನೇ ಕಷ್ಟ. ಇದಕ್ಕೆ ''ವಾರ್ 2'' ಸದ್ಯದ ಉದಾಹರಣೆ.

ಹೌದು, ''ವಾರ್ 2''.. 2019ರಲ್ಲಿ ಬಂದ ''ವಾರ್'' ಚಿತ್ರದ ಎರಡನೇ ಭಾಗ. ಹೃತಿಕ್ ರೋಷನ್ ಮತ್ತು ಜ್ಯೂ.ಎನ್.ಟಿ.ಆರ್ ಅಭಿನಯದ ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿದ್ದವು. 2019ರಲ್ಲಿ ಬಂದಿದ್ದ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ ''ವಾರ್'' ಚಿತ್ರವನ್ನು ಈ ಚಿತ್ರ ಅನಾಯಾಸವಾಗಿ ಹಿಂದಿಕ್ಕುತ್ತೆ ಎಂಬ ಮಾತುಗಳು ಚಿತ್ರದ ಬಿಡುಗಡೆಯ ಮೊದಲು ಕೇಳಿ ಬಂದಿದ್ದವು.
ಆದರೆ. ಆಗಿದ್ದೇ ಬೇರೆ.. 2019ರಲ್ಲಿ ಬಂದ ''ವಾರ್'' ಚಿತ್ರದ ದಾಖಲೆಯನ್ನು ''ವಾರ್ 2'' ಮುರಿಯುವುದಿರಲಿ ಆ ಚಿತ್ರದ ಗಳಿಕೆಯ ಸಮೀಪವಾದರೂ ಈ ಚಿತ್ರ ಹೋಗುತ್ತಾ ಎನ್ನುವ ಪ್ರಶ್ನೆ ಈಗ ಎಲ್ಲರಲ್ಲಿ ಇದೆ. ಹಾಗಿದ್ದರೆ ''ವಾರ್'' ಚಿತ್ರ ಗಳಿಸಿದ್ದೆಷ್ಟು ? ''ವಾರ್ 2'' ಇಲ್ಲಿಯವರೆಗೆ ಗಳಿಸಿದ್ದೆಷ್ಟು ? ಎಂದು ತಿಳಿಯಲು ಮುಂದೆ ಓದಿ.
ವಾರ್ 2 VS ವಾರ್ ಮೊದಲ ದಿನ
ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ, 2019ರಲ್ಲಿ ತೆರೆಗೆ ಬಂದಿದ್ದ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ಅಭಿನಯದ ''ವಾರ್'' ಚಿತ್ರ ಮೊದಲ ದಿನ ಭಾರತದಲ್ಲಿ ₹ 53.35 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಇದರಲ್ಲಿ ಹಿಂದಿಯ ಪಾಲೇ ಹೆಚ್ಚಿತ್ತು. ಹಿಂದಿಯಲ್ಲಿಯೇ ಚಿತ್ರ ₹ 51.60 ಕೋಟಿ ಗಳಿಸಿತ್ತು. ಉಳಿದ ಹಣ ತೆಲುಗು ಮತ್ತು ತಮಿಳಿನಿಂದ ಹರಿದು ಬಂದಿತ್ತು.
ಇನ್ನು ಕಳೆದ ಆಗಸ್ಟ್ 14ರಂದು ''ಕೂಲಿ'' ಎದುರು ತೆರೆಗೆ ಬಂದ ''ವಾರ್ 2'' ಚಿತ್ರ ಮೊದಲ ದಿನ ₹ 52 ಕೋಟಿಯನ್ನು ದೋಚಿತ್ತು. ಆದರೆ.. ಹೃತಿಕ್ ರೋಷನ್ ಸ್ಟಾರ್ ಪವರ್ ಇಲ್ಲಿ ಶಕ್ತಿ ಕಳೆದುಕೊಂಡಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಹಿಂದಿಯಲ್ಲಿ ಈ ಚಿತ್ರ ಮೊದಲ ದಿನ ಗಳಿಸಿದ್ದು ಕೇವಲ ₹29 ಕೋಟಿ ಮಾತ್ರ. ಬಾಕಿ ಉಳಿದ ₹22.75 ಕೋಟಿ ಹಣ ತೆಲುಗು ಪ್ರೇಕ್ಷಕರು ತಾರಕ್ ಮುಖ ನೋಡಿ ನೀಡಿದ್ದರು.

ವಾರ್ 2 VS ವಾರ್ ಮೊದಲ ವಾರ
ಇನ್ನು ''ಸಿದ್ಧಾರ್ಥ್ ಆನಂದ್'' ನಿರ್ದೇಶನದಲ್ಲಿ ಬಂದಿದ್ದ ''ವಾರ್'' ಮೊದಲ ವಾರ ₹ 238 ಕೋಟಿ ಹಣ ಗಳಿಸಿತ್ತು. ಆದರೆ ಈ ಗಳಿಕೆಯನ್ನು ಹಿಂದಿಕ್ಕುವಲ್ಲಿ ಕೂಡ ''ಅಯಾನ್ ಮುಖರ್ಜಿ'' ನಿರ್ದೇಶನದಲ್ಲಿ ಬಂದ ''ವಾರ್ 2'' ವಿಫಲವಾಗಿದೆ. ''ಸ್ಯಾಕ್ನಿಲ್'' ವೆಬ್ ಸೈಟ್ ಪ್ರಕಾರ ಸ್ವಾತಂತ್ರ್ಯ ದಿನಾಚಾರಣೆಯ ವೀಕೆಂಡ್‌ನಲ್ಲಿ ''ವಾರ್ 2'' ಬಂದರೂ ಕೂಡ ಈ ಚಿತ್ರ ಇಲ್ಲಿಯವರೆಗೆ ಕೇವಲ ₹ 199 ಕೋಟಿಯನ್ನು ಮಾತ್ರ ಗಳಿಸಿದೆ.
ವಾರ್ ಚಿತ್ರವನ್ನು ಹಿಂದಿಕ್ಕುತ್ತಾ ವಾರ್ 2 ?
ಚಿತ್ರಮಂದಿರದಲ್ಲಿ ಒಟ್ಟು 8 ವಾರಗಳ ಕಾಲ ಪ್ರದರ್ಶನ ಕಂಡಿದ್ದ 2019ರಲ್ಲಿ ಬಂದಿದ್ದ ''ವಾರ್'' ಚಿತ್ರ ಒಟ್ಟಾರೆಯಾಗಿ ಭಾರತದಲ್ಲಿ₹ 318.01 ಕೋಟಿ ಹಣ ಗಳಿಸಿತ್ತು. ಈ ದಾಖಲೆಯನ್ನು ''ವಾರ್ 2'' ಮುರಿಯುವುದು ಸದ್ಯ ಕಷ್ಟ. ಯಾಕೆಂದರೆ.. ಈ ''ವಾರ್''ಗೆ ಪ್ರೇಕ್ಷಕರ ಪ್ಯಾರ್ ಸಿಕ್ಕಿಲ್ಲ. ವಿಮರ್ಷಕರು ಮತ್ತು ಮಾಧ್ಯಮದವರು ಕೂಡ ಈ ಚಿತ್ರವನ್ನು ಕೈ ಬಿಟ್ಟಿದ್ದಾರೆ.
ಇನ್ನು ತೆಲಗು ಮಾರುಕಟ್ಟೆ ಈ ಬಾರಿ ಈ ಚಿತ್ರಕ್ಕೆ ತುಂಬಾ ಸಹಕಾರಿಯಾಗಬೇಕಿತ್ತು. ಆದರೆ ಅಲ್ಲಿಯೇ ಚಿತ್ರ ತೋಪೆದ್ದು ಹೋಗಿದೆ. ಇನ್ನೂ ಹಿಂದಿಯಲ್ಲಿ ಕೂಡ ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆ ಹೆಚ್ಚೆಂದರೆ ''ವಾರ್ 2'' ₹250ಕೋಟಿಯ ಆಸು ಪಾಸು ಹಣ ಗಳಿಸುತ್ತೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ''ವಾರ್'' ಚಿತ್ರದ ಗಳಿಕೆಯನ್ನು ''ವಾರ್ 2'' ಹಿಂದಿಕ್ಕುವುದು ಅಸಾಧ್ಯ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











