'ವಾಮನ' 2 ದಿನಗಳ ಕಲೆಕ್ಷನ್ ಎಷ್ಟು? ಆ ಪೋಸ್ಟರ್‌ಗಳು ನಿಜವೇ?
ಧನ್ವೀರ್ ಗೌಡ ನಟನೆಯ 'ವಾಮನ' ಸಿನಿಮಾ ಈ ವಾರ ತೆರೆಗೆ ಬಂದಿದೆ. ಜೊತೆಗೆ 'ವಿದ್ಯಾಪತಿ' ಹಾಗೂ 'ಅಜ್ಞಾತವಾಸಿ' ಸಿನಿಮಾಗಳು ತೆರೆಗಪ್ಪಳಿಸಿದೆ. 'ವಾಮನ' ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ. ನಟ ದರ್ಶನ್ ಕೂಡ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.
ಶಂಕರ್ ರಮಣ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್ ಗೌಡ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಇನ್ನುಳಿದಂತೆ ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್. ಪೇಟೆ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಆಕ್ಷನ್, ಮದರ್ ಸೆಂಟಿಮೆಂಟ್, ಲವ್ ಹೀಗೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಹದವಾಗಿ ಬೆರಸಿ 'ವಾಮನ' ಸಿನಿಮಾ ನಿರ್ಮಿಸಲಾಗಿದೆ.

ಧನ್ವೀರ್ ನಟನೆಯ 4ನೇ ಸಿನಿಮಾ ಇದು. ಲಾಂಗ್ ವೀಕೆಂಡ್ ಟಾರ್ಗೆಟ್ ಮಾಡಿ ಸಿನಿಮಾ ಬಿಡುಗಡೆ ಮಾಡಲಾಗಿದೆ. ದರ್ಶನ್ ಅಭಿಮಾನಿಗಳಿಂದ ಚಿತ್ರಕ್ಕೆ ಅದ್ಧೂರಿ ಸ್ವಾಗತವೇ ಸಿಕ್ಕಿದೆ. ಕೆಲ ಶೋಗಳು ಹೌಸ್‌ಫುಲ್ ಸಹ ಆಗಿದೆ. ಆದರೂ ಈ ವಾರ ಬಿಡುಗಡೆ ಆಗಿರುವ 3 ಕನ್ನಡ ಸಿನಿಮಾಗಳಿಗೆ ನಿರೀಕ್ಷಿತ ಮಟ್ಟದಲ್ಲಿ ರೆಸ್ಪಾನ್ಸ್ ಸಿಗುತ್ತಿಲ್ಲ. ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಈ ಸಿನಿಮಾಗಳು ವಿಫಲವಾಗಿವೆ.
ಶನಿವಾರ, ಭಾನುವಾರ, ಸೋಮವಾರ ಸಿನಿಮಾಗಳನ್ನು ನೋಡಲು ಜನ ಬರುವ ಲೆಕ್ಕಾಚಾರವಿದೆ. ಮೆಕಾನಿಕ್ ಗುಣ(ಧನ್ವೀರ್ ಗೌಡ) ಹಾಗೂ ಗ್ಯಾಂಗ್‌ಸ್ಟರ್ ಪಾಪಣ್ಣ(ಸಂಪತ್ ರಾಜ್) ನಡುವಿನ ಜಿದ್ದಾಜಿದ್ದಿನ ಕಥೆ ಚಿತ್ರದಲ್ಲಿದೆ. ರಗಡ್ ಹೈದನ ಪಾತ್ರದಲ್ಲಿ ಧನ್ವೀರ್ ಗೌಡ ಅಬ್ಬರಿಸಿದ್ದಾರೆ. ತಾಯಿ ಪಾತ್ರದಲ್ಲಿ ತಾರಾ ಕಾಣಿಸಿಕೊಂಡಿದ್ಧಾರೆ. ತಾಯಿ ಸೆಂಟಿಮೆಂಟ್ ಚಿತ್ರದಲ್ಲಿ ಹೈಲೆಟ್ ಆಗಿದೆ.
ಫಸ್ಟ್ ಹಾಫ್ ಬರೀ ಆರ್ಭಟದಲ್ಲೇ ಮುಗಿದು ಹೋಗುತ್ತದೆ. ಆದರೆ ನಿಜವಾದ ಕಥೆ ಶುರುವಾಗುವುದೇ ಸೆಕೆಂಡ್ ಹಾಫ್‌ನಲ್ಲಿ. ಆದರೆ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸುವಲ್ಲಿ ಸಿನಿಮಾ ವಿಫಲವಾಗಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ತಿದೆ. ಆದರೂ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಇನ್ನು ಸಿನಿಮಾ ಕಲೆಕ್ಷನ್ ಬಗ್ಗೆಯೂ ಭಾರೀ ಚರ್ಚೆ ನಡೀತಿದೆ. ಮೊದಲ ದಿನವೇ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.
ಮೊದಲ ದಿನವೇ 'ವಾಮನ' ಸಿನಿಮಾ 2.72 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಅಭಿಮಾನಿಗಳು ಈ ಬಗ್ಗೆ ಪೋಸ್ಟರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಇನ್ನು 2ನೇ ದಿನವಾದ ಶುಕ್ರವಾರ 54 ಲಕ್ಷ ರೂ. ಕಲೆಕ್ಷನ್ ಮಾಡಿದೆ. ಒಟ್ಟಾರೆ ಮೊದಲ 2 ದಿನಕ್ಕೆ ಸಿನಿಮಾ 3.26 ಕೋಟಿ ರೂ. ಕೊಳ್ಳೆ ಹೊಡೆದಿದೆ ಥ್ಯಾಂಕ್ಯೂ ಸೆಲೆಬ್ರೆಟೀಸ್ ಎಂಬ ಪೋಸ್ಟರ್‌ಗಳು ಹರಿದಾಡುತ್ತಿದೆ.
ಚಿತ್ರತಂಡದಿಂದ 'ವಾಮನ' ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮೊದಲ ದಿನವೇ 2.72 ಕೋಟಿ ರೂ. ಗ್ರಾಸ್ ಕಲೆಕ್ಷನ್ ಎನ್ನುವುದೆಲ್ಲಾ ಸುಳ್ಳು ಎನ್ನಲಾಗ್ತಿದೆ. ಫ್ಯಾನ್ಸ್ ತಮ್ಮ ಖುಷಿಗೆ ಪೋಸ್ಟರ್ ಹಾಕಿಕೊಂಡಿದ್ದಾರೆ. ಆದರೆ ಅಷ್ಟು ದೊಡ್ಡಮಟ್ಟದಲ್ಲಿ ಸಿನಿಮಾ 2 ದಿನಕ್ಕೆ ಕಲೆಕ್ಷನ್ ಮಾಡಿಲ್ಲ ಎಂದು ಹೇಳಲಾಗ್ತಿದೆ. ಐಪಿಎಲ್ ಟೂರ್ನಿ ಕೂಡ ಕನ್ನಡ ಚಿತ್ರಗಳಿಗೆ ಪೆಟ್ಟು ಕೊಡುತ್ತಿದೆ. ಜನ ಕ್ರಿಕೆಟ್ ಗುಂಗಿನಲ್ಲಿ ಮುಳುಗಿದ್ದಾರೆ. ಇಂತಹ ಸಮಯದಲ್ಲಿ ಸಿನಿಮಾ ನೋಡಲು ಅವರನ್ನು ಸೆಳೆಯುವುದು ನಿಜಕ್ಕೂ ಸವಾಲಿನ ಕೆಲಸ.


Click it and Unblock the Notifications











