Welcome To The Jungle BO Day 2 ; ಜಂಗಲ್‌ನಲ್ಲಿ ಜನಜಂಗುಳಿ, ಅಕ್ಷಯ್ ಕುಮಾರ್ ಆಂಡ್ ಗ್ಯಾಂಗ್‌ಗೆ 2ನೇ ದಿನ ಬಂಪರ್ ಲಾಟರಿ
ದಕ್ಷಿಣ ಭಾರತೀಯ ಚಿತ್ರರಂಗದ ಅಬ್ಬರ, ಬಾಲಿವುಡ್ ನ ಬಾವಿಗೆ ತಳ್ಳಿದೆ ಎನ್ನುವುದು ಅನೇಕರ ಅಭಿಪ್ರಾಯ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡಾ ಹೌದು. ಯಾಕೆಂದರೆ ಕೊರೊನಾ ನಂತರದ ದಿನಗಳಲ್ಲಿ ಬಾಲಿವುಡ್ ಎದ್ದಿದ್ದು ಕಡಿಮೆ. ಬೋರಲು ಬಿದ್ದಿದ್ದೇ ಹೆಚ್ಚು. ಕೊರೊನಾ ನಂತರ ಒಂದು ಕಡೆ ''ಬಾಹುಬಲಿ 1 ಮತ್ತು 2''.. ''ಕೆಜಿಎಫ್ 1 ಮತ್ತು 2'' ..
''ಪುಷ್ಪ 1 ಮತ್ತು 2'' ..''ಆರ್‌ಆರ್‌ಆರ್'' .. ''ಕಾಂತಾರ'' .. ''777 ಚಾರ್ಲಿ'' ...ಅಂತಹ ಚಿತ್ರಗಳು ಅಬ್ಬರಿಸಿದ್ದರೆ ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳೆಲ್ಲವೂ ನೆಲಕಚ್ಚಿದ್ದವು. ಆದರೆ.. 2023ರ ಸುಮಾರು ಬಾಲಿವುಡ್ ನಿಧಾನವಾಗಿ ಚೇತರಿಸಿಕೊಳ್ಳಲು ಶುರು ಮಾಡಿತ್ತು. ಹಾಗಂಥ.. ಮೊದಲಿನ ಲಯಕ್ಕೆ ಹಿಂದಿ ಉದ್ಯಮ ಆಗಲೂ ಮರಳಲಿಲ್ಲ. ಈಗಲೂ ಕೂಡ ಮರಳಿಲ್ಲ. ಅಲ್ಲೊಂದು.. ಇಲ್ಲೊಂದು.. ಚಿತ್ರಗಳು ಮಾತ್ರ ಮಕಾಡೆ ಮಲಗಿದ ಬಾಲಿವುಡ್‌ನ ಬಡಿದೆಬ್ಬಿಸುತ್ತಿವೆ. ಗೆಲ್ಲುತ್ತಿವೆ. ಈ ಸಾಲಿಗೆ ''ವೆಲ್ಕಮ್ ಟು ದಿ ಜಂಗಲ್'' ಸೇರುತ್ತಾ ಗೊತ್ತಿಲ್ಲ. ಆದರೆ .. ಚಿತ್ರದ ಆರಂಭ ಮಾತ್ರ ಹಿಂದಿ ಉದ್ಯಮದ ಪಾಲಿಗೆ ಆಶಾದಾಯಕವಾಗಿದೆ.

ಹೌದು. ಮೊದಲ ದಿನ ಉತ್ತಮವಾದ ಆರಂಭ ಪಡೆದಿದ್ದ ''ವೆಲ್ಕಮ್ ಟು ದಿ ಜಂಗಲ್'' ಚಿತ್ರಕ್ಕೆ ಎರಡನೇ ದಿನ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರದ ಗಳಿಕೆಯಲ್ಲಿ 30% ಏರಿಕೆಯಾಗಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 10,396 ಪ್ರದರ್ಶನಗಳನ್ನು ಭಾರತದೆಲ್ಲೆಡೆ ಕಂಡ ಈ ಬಹುತಾರಾಗಣದ ಚಿತ್ರ ₹20 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಕೇವಲ ಎರಡು ದಿನದಲ್ಲಿ ₹39 ಕೋಟಿಯನ್ನು ಭಾರತದಲ್ಲಿ ದೋಚಿದೆ ''ವೆಲ್ಕಮ್ ಟು ದಿ ಜಂಗಲ್''.
''ಸ್ಯಾಕ್ನಿಲ್'' ಪ್ರಕಾರ ''ವೆಲ್ಕಮ್ ಟು ದಿ ಜಂಗಲ್'' ಚಿತ್ರದ 2 ದಿನದ ಗಳಿಕೆ ಈ ಕೆಳಗಿನಂತಿದೆ
| ದಿನ | ಭಾರತದ ಒಟ್ಟು ನಿವ್ವಳ ಗಳಿಕೆ (India Net) |
|---|---|
| ಪೇಯ್ಡ್ ಪ್ರೀಮಿಯರ್ (ಗುರುವಾರ) | ₹3.75 ಕೋಟಿ |
| ಮೊದಲನೇ ದಿನ (ಶುಕ್ರವಾರ) | ₹15.25 ಕೋಟಿ |
| ಎರಡನೇ ದಿನ (ಶನಿವಾರ) | ₹20.00 ಕೋಟಿ |
| ಒಟ್ಟು ಮೊತ್ತದ ಕಲೆಕ್ಷನ್ | ₹39.00 ಕೋಟಿ |
ಚಿತ್ರತಂಡ ಕೊಟ್ಟಿರುವ ಲೆಕ್ಕ ಎಷ್ಟು..?
ಇನ್ನು ಕನ್ನಡದಲ್ಲಿ ಚಿತ್ರದ ಗಳಿಕೆಯ ಕುರಿತು ನಿರ್ಮಾಪಕರು ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಆದರೆ, ಬಾಲಿವುಡ್ ಇದಕ್ಕೆ ತದ್ವಿರುದ್ದ. ಪೈಪೋಟಿಯ ಮೇಲೆ ಇಲ್ಲಿ ತಮ್ಮ ಚಿತ್ರದ ಗಳಿಕೆಯ ಲೆಕ್ಕವನ್ನು ಹಲವರು ಕೊಡುತ್ತಾರೆ.
ಇದಕ್ಕೆ ಪುರಾವೆ ಎಂಬಂತೆ ''ವೆಲ್ಕಮ್ ಟು ದಿ ಜಂಗಲ್'' ಅಂಕಿ ಅಂಶಗಳನ್ನು ನಿರ್ಮಾಣ ಸಂಸ್ಥೆ ಹಂಚಿಕೊಂಡಿದ್ದು ಆ ಪ್ರಕಾರ ಮೊದಲ ದಿನ ಮತ್ತು ಪೇಯ್ಡ್ ಪ್ರೀಮಿಯರ್ ದಿಂದ ಚಿತ್ರ ₹15.33 ಕೋಟಿಯನ್ನು ಕೇವಲ ಭಾರತದಲ್ಲಿ ಗಳಿಸಿದೆ. ಹೊರ ದೇಶದ ಲೆಕ್ಕ ಕೂಡ ಸೇರಿಸಿದರೆ ಮೊದಲ ದಿನದ ಗಳಿಕೆ ₹27.60 ಕೋಟಿ. ಎರಡನೇ ದಿನದ ಲೆಕ್ಕಾಚಾರವನ್ನು ಚಿತ್ರತಂಡ ಇನ್ನು ಹಂಚಿಕೊಳ್ಳಬೇಕಿದೆ.

ಇನ್ನು, ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ವರುಣ್ ಧವನ್ ಅಭಿನಯದ ''ಹೈ ಜವಾನಿ ತೋ ಇಷ್ಕ್ ಹೋನಾ ಹೈ'' ಚಿತ್ರ ಮೊದಲ ಮೂರು ದಿನದಲ್ಲಿ ₹28.51 ಕೋಟಿಯನ್ನು ಗಳಿಸಿತ್ತು. ಆ ನಂತರ ''ಕಾಕ್‌ಟೇಲ್ 2'' ಮೂರು ದಿನದಲ್ಲಿ ₹47.50 ಕೋಟಿಯನ್ನು ಗಳಿಸಿತ್ತು. ಆದರೆ '' ವೆಲ್ಕಮ್ ಟು ದಿ ಜಂಗಲ್'' ಚಿತ್ರ ಕೇವಲ ಎರಡು ದಿನದಲ್ಲಿ ₹39 ಕೋಟಿ ಗಳಿಸಿದೆ. ಸಹಜವಾಗಿಯೇ ಇಂದು (ಜೂನ್ 28) ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ.
2026ರ ಬಾಲಿವುಡ್ ಚಿತ್ರಗಳ ಟಾಪ್ ಓಪನಿಂಗ್ ವೀಕೆಂಡ್ ಕಲೆಕ್ಷನ್ ಪಟ್ಟಿ
| ಶ್ರೇಣಿ | ಚಲನಚಿತ್ರದ ಹೆಸರು | ಓಪನಿಂಗ್ ವೀಕೆಂಡ್ ಗಳಿಕೆ (ಭಾರತದ ನಿವ್ವಳ ಕಲೆಕ್ಷನ್) |
|---|---|---|
| 1 | ಧುರಂಧರ್ 2 | ₹466 ಕೋಟಿ (4 ದಿನಗಳಲ್ಲಿ) |
| 2 | ಬಾರ್ಡರ್ 2 | ₹129.89 ಕೋಟಿ |
| 3 | ಭೂತ್ ಬಾಂಗ್ಲಾ | ₹65.65 ಕೋಟಿ |
| 4 | ಕಾಕ್‌ಟೇಲ್ 2 | ₹47.50 ಕೋಟಿ |
| 5 | ವೆಲ್‌ಕಮ್ ಟು ದಿ ಜಂಗಲ್* | ₹39.00 ಕೋಟಿ* |
ಪ್ರೇಕ್ಷಕ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ
''ವೆಲ್ಕಮ್ ಟು ದಿ ಜಂಗಲ್'' ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರನ್ನು ನಗಿಸಬೇಕೆಂಬ ಉದ್ದೇಶದಿಂದಲೇ ಮಾಡಲಾದ ಈ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಇಂದು(ಜೂನ್ 28) ಕೂಡ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ, ಅಸಲಿ ಪರೀಕ್ಷೆ ಶುರುವಾಗುವುದು ನಾಳೆಯಿಂದ. ವಾರದ ದಿನಗಳಲ್ಲಿ ಈ ಚಿತ್ರ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications