War-2 Boxoffice: 'ವಾರ್- 2' ಕಲೆಕ್ಷನ್ ಪೈಸಾ ಪೈಸಾ ಲೆಕ್ಕ ಕೊಟ್ಟ ಯಶ್ ರಾಜ್ ಫಿಲ್ಮ್ಸ್
ಅಯಾನ್ ಮುಖರ್ಜಿ ನಿರ್ದೇಶನದ 'ವಾರ್- 2' ಸಿನಿಮಾ 2ನೇ ವಾರದತ್ತ ಮುನ್ನುಗ್ಗುತ್ತಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಕಲೆಕ್ಷನ್ ಲೆಕ್ಕ ಕೊಟ್ಟಿದೆ. ಆಗಸ್ಟ್ 14ರಂದು ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬಂದಿತ್ತು.
ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲಿ ಮತ್ತೊಂದು ಸಿನಿಮಾ ಇದು. ಈ ಬಾರಿ ಬಾಲಿವುಡ್ ನಟ ಹೃತಿಕ್ ಜೊತೆ ತೆಲುಗು ನಟ ತಾರಕ್ ನಟಿಸಿದ್ದು ವಿಶೇಷ. ಇದೇ ಕಾರಣಕ್ಕೆ ಆಂಧ್ರ, ತೆಲಂಗಾಣದಲ್ಲಿ ಚಿತ್ರದಲ್ಲಿ ಕಲೆಕ್ಷನ್ ಚೆನ್ನಾಗಿದೆ. ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಭಾರೀ ಪೈಪೋಟಿ ನಡುವೆಯೂ 'ವಾರ್-2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ.

ಕಿಯಾರಾ ಅದ್ವಾನಿ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಆಕೆಯ ಬಿಕಿನಿ ದೃಶ್ಯಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇನ್ನುಳಿದಂತೆ ಟೀಸರ್, ಸಾಂಗ್ಸ್, ಟ್ರೈಲರ್ ದೊಡ್ಡ ಮಟ್ಟಕ್ಕೆ ಸದ್ದು ಮಾಡಲಿಲ್ಲ. ಆದರೂ 'ವಾರ್-2' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಫಸ್ಟ್ ಸೂಪರ್ ಸೆಕೆಂಡ್ ಹಾಫ್ ಡಮಾರ್ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಸ್ಯಾತಂತ್ರ್ಯ ದಿನಾಚರಣೆ ವೀಕೆಂಡ್ ಚಿತ್ರದ ಗಳಿಕೆಗೆ ವರವಾಗಿತ್ತು.
'ವಾರ್-2' ಕಲೆಕ್ಷನ್
ಅದ್ಯಾಕೋ 'ವಾರ್- 2' ಚಿತ್ರದ ಬಗ್ಗೆ ಚಿತ್ರತಂಡ ಹೆಚ್ಚು ಪ್ರಚಾರ ಮಾಡಲಿಲ್ಲ. ಬಿಡುಗಡೆಗೂ ಮುನ್ನ ನಂತರ ಪ್ರಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಈ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕಲೆಕ್ಷನ್ ಬಗ್ಗೆ ಕೂಡ ಪ್ರತಿಕ್ರಿಯಿಸಲಿಲ್ಲ. 5 ದಿನಗಳ ಬಳಿಕ ಇದೀಗ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಚಿತ್ರದ ಕಲೆಕ್ಷನ್ ಲೆಕ್ಕ ಕೊಟ್ಟಿದೆ.
ವಿಶ್ವದಾದ್ಯಂತ ಆಕ್ಷನ್ ಥ್ರಿಲ್ಲರ್ ಸಿನಿಮಾ 300.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಭಾರತದಲ್ಲಿ 240 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದ್ದು 196 ಕೋಟಿ ರೂ. ನೆಟ್ ಬ್ಯುಸಿನೆಸ್ ಆಗಿದೆ. 60.50 ಕೋಟಿ ರೂ. ಓವರ್‌ಸೀಸ್ ಗ್ರಾಸ್ ಕಲೆಕ್ಷನ್ ಎಂದು ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ತಿಳಿಸಿದೆ.
'ಕೂಲಿ' ಪೈಪೋಟಿ
ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ 'ವಾರ್- 2' ಚಿತ್ರಕ್ಕೆ ಗಟ್ಟಿ ಪೈಪೋಟಿ ಕೊಡುತ್ತಿದೆ. ಅದು ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕ್ರೇಜ್ ವಿಚಾರಕ್ಕೆ ಬಂದರೂ ಮಲ್ಟಿಸ್ಟಾರರ್ 'ಕೂಲಿ' ಚಿತ್ರದ ಕೈ ಮೇಲಾಗಿತ್ತು. ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್ ರೀತಿಯ ಸ್ಟಾರ್ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಹೆಚ್ಚಿಸಿತ್ತು. ಆದರೆ ಒಂದೊಳ್ಳೆ ಸಿನಿಮಾ ಕಟ್ಟಿಕೊಡುವ ಅವಕಾಶವನ್ನು ನಿರ್ದೇಶಕ ಲೋಕೇಶ್ ಕನಕರಾಜ್ ಕೈಚೆಲ್ಲಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 404 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಸನ್ ಪಿಕ್ಚರ್ಸ್ ಸಂಸ್ಥೆ ಘೋಷಿಸಿದೆ.
ಅಭಿಮಾನಿಗಳ ಬೇಸರ
'ವಾರ್- 2' ಕಲೆಕ್ಷನ್ ಲೆಕ್ಕವನ್ನು ಕೆಲವರು ನಂಬಲು ಸಿದ್ದರಿಲ್ಲ. ಸುಳ್ಳು ಲೆಕ್ಕ ಕೊಡಬೇಡಿ, ಸಿನಿಮಾ ಅಷ್ಟು ಕಲೆಕ್ಷನ್ ಮಾಡಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸರಿಯಾಗಿ ಪ್ರಚಾರ ಮಾಡಲಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಹಳೇ ಪೋಸ್ಟರ್ ಬಿಟ್ಟು ಕಲೆಕ್ಷನ್ ಲೆಕ್ಕ ಕೊಟ್ಟಿದ್ದಾರೆ. ಬೇರೆ ಫೋಟೊಗಳನ್ನು ಬಳಸಿ ಹೊಸ ಪೋಸ್ಟರ್ ಡಿಸೈನ್ ಮಾಡುವುದಕ್ಕೂ ಕಷ್ಟನಾ? ಎಂದು ಟೀಕಿಸುವವರು ಇದ್ದಾರೆ.


Click it and Unblock the Notifications











