ಕೆಜಿಎಫ್ 2ಗೆ ವರ್ಷದ ಸಂಭ್ರಮ; ಬಿಡುಗಡೆ ಹಿಂದಿನ ದಿನವೇ ಅಬ್ಬರಿಸಿದ್ದವು ದಾಖಲೆಗಳು; ಹೇಗಿತ್ತು ಏಪ್ರಿಲ್ 13?
ಕನ್ನಡ ಚಿತ್ರರಂಗದ ಪಥ ಬದಲಿಸಿದ ಚಿತ್ರ ಎಂದೇ ಖ್ಯಾತಿಯನ್ನು ಪಡೆದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾಗಿ ನಾಳೆಗೆ ( ಏಪ್ರಿಲ್ 14 ) ವರ್ಷ ಕಳೆಯಲಿದೆ. 2018ರಲ್ಲಿ ಕೆಜಿಎಫ್ ಚಾಪ್ಟರ್ 1 ಚಿತ್ರ ಮಾಡಿ ಭಾರತ ಬಾಕ್ಸ್ ಆಫೀಸ್‌ನಲ್ಲಿ ಪುಟ್ಟ ಹೆಜ್ಜೆ ಇಟ್ಟಿದ್ದ ತಂಡ ಎರಡನೇ ಭಾಗದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸಿತ್ತು.
ಮೊದಲ ಭಾಗದ ಕ್ಲೈಮ್ಯಾಕ್ಸ್‌ನಲ್ಲಿ ಅಧೀರನನ್ನು ಕೊಚ್ಚಿಹಾಕಿದ್ದ ರಾಕಿ ಮುಂದೇನು ಮಾಡ್ತಾನೆ, ಕೆಜಿಎಫ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ತಾನಾ ಎಂಬ ಕುತೂಹಲಗಳೊಂದಿಗೆ ಸಿನಿ ರಸಿಕರು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದರು. ಹೀಗೆ ಭಾರೀ ನಿರೀಕ್ಷೆಯೊಂದಿಗೆ ಚಿತ್ರಮಂದಿರಕ್ಕೆ ಬಂದಿದ್ದ ಪ್ರೇಕ್ಷಕರು ಚಿತ್ರ ನೋಡಿ ಮೆಚ್ಚಿಕೊಂಡು ಫುಲ್ ಮಾರ್ಕ್ಸ್ ನೀಡಿದ್ದರು. ಪರಿಣಾಮ ಚಿತ್ರ ಮೊದಲ ದಿನ ಕೇವಲ ಭಾರತದಲ್ಲಿಯೇ 134.5 ಕೋಟಿ ಗಳಿಕೆಯನ್ನು ಮಾಡಿತು.

ಅಂತಿಮವಾಗಿ ಕೆಜಿಎಫ್ ಚಾಪ್ಟರ್ 2 ಎಂಬ ಮಾನ್‌ಸ್ಟರ್ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 1250 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತ್ತು. ಹೀಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ ಆ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಚಿತ್ರ ಎನಿಸಿಕೊಂಡ ಕೆಜಿಎಫ್ ಚಾಪ್ಟರ್ 2 ಇಂದಿಗೂ ಸ್ಯಾಂಡಲ್‌ವುಡ್‌ನ ಇಂಡಸ್ಟ್ರಿ ಹಿಟ್ ಆಗಿ ಉಳಿದುಕೊಂಡಿದೆ.
ಇನ್ನು ಚಿತ್ರ ಬಿಡುಗಡೆಯಾಗುವ ಮುನ್ನವೇ ಸಾಲು ಸಾಲು ದಾಖಲೆಗಳನ್ನು ಮಾಡಿತ್ತು. ಚಿತ್ರದ ಕ್ರೇಜ್ ಎಷ್ಟಿತ್ತೆಂದರೆ ಟಿಕೆಟ್ ಬುಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದ್ದವು. ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿದ್ದವು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ತಮಿಳು ನಾಡು, ಕೇರಳ ಹಾಗೂ ತೆಲುಗು ರಾಜ್ಯಗಳಲ್ಲಿಯೂ ಸಹ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರದರ್ಶನಗಳು ಬೆಳಗ್ಗಿನ ಜಾವ ಮೂರು ಗಂಟೆ ಹಾಗೂ ನಾಲ್ಕು ಗಂಟೆಗೇ ಆರಂಭಗೊಂಡಿದ್ದವು.

ಹೀಗೆ ಅಬ್ಬರಿಸಿದ್ದ ಕೆಜಿಎಫ್ ಚಾಪ್ಟರ್ 2 ರಿಲೀಸ್‌ಗೂ ಮುನ್ನ ಕ್ರೇಜ್ ಹೇಗಿತ್ತು ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಕೆಜಿಎಫ್ ಚಾಪ್ಟರ್ 2 ಚಿತ್ರದ 40 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್ ಮೈ ಶೋ ಹಾಗೂ ಪೇಟಿಎಂ ಅಪ್ಲಿಕೇಶನ್‌ಗಳ ಅಡ್ವಾನ್ಸ್ ಬುಕಿಂಗ್ ಮೂಲಕವೇ ಸೋಲ್ಡ್ ಔಟ್ ಆಗಿದ್ದವು.
* ಕೆಜಿಎಫ್ ಚಾಪ್ಟರ್ 2 ಚಿತ್ರ ಬೆಂಗಳೂರಿನ ಐಕಾನಿಕ್ ಊರ್ವಶಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12 ಗಂಟೆಗೆ ಆರಂಭಗೊಂಡಿತ್ತು.
* ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ತ್ರಿವೇಣಿ, ವೀರೇಶ್, ಪ್ರಸನ್ನ, ಊರ್ವಶಿ ಹಾಗೂ ನವರಂಗ್ ಸೇರಿ ಒಟ್ಟು ಐದು ಮುಖ್ಯ ಚಿತ್ರಮಂದಿರಗಳು ಬೆಂಗಳೂರು ಒಂದರಲ್ಲಿಯೇ ಆಯೋಜನೆಗೊಂಡಿದ್ದವು.
* ಊರ್ವಶಿ ಚಿತ್ರಮಂದಿರದಲ್ಲಿ ಮೊದಲ ದಿನ ಬರೋಬ್ಬರಿ 43,52,300 ರೂಪಾಯಿಗಳನ್ನು ಗಳಿಸಿತ್ತು. ಇಂದಿಗೂ ಸಹ ಈ ದಾಖಲೆಯನ್ನು ಯಾವ ಚಿತ್ರವೂ ಮುರಿದಿಲ್ಲ.
* ಮೈಸೂರಿನ ವುಡ್‌ಲ್ಯಾಂಡ್ಸ್ ಚಿತ್ರಮಂದಿರದಲ್ಲಿ ಕೇವಲ 53 ನಿಮಿಷಗಳಲ್ಲಿ ಬರೋಬ್ಬರಿ 5000 ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದವು. ಈ ದಾಖಲೆಯನ್ನೂ ಸಹ ಇನ್ನೂ ಸಹ ಯಾರೂ ಮುರಿದಿಲ್ಲ.
* ಮೈಸೂರಿನ ಡಿಆರ್‌ಸಿ ಚಿತ್ರಮಂದಿರದಲ್ಲಿಯೂ ಸಹ ಮಿಡ್ ನೈಟ್ ಶೋ ಇತ್ತು. ಅಲ್ಲದೇ ಈ ಚಿತ್ರಮಂದಿರದ 4 ಪ್ರದರ್ಶನಗಳು ಕೇವಲ 4 ನಿಮಿಷಗಳಲ್ಲಿಯೇ ಸೋಲ್ಡ್ ಔಟ್ ಆಗಿತ್ತು. ಅಲ್ಲದೇ ಮೈಸೂರಿನ ಎಲ್ಲಾ ಚಿತ್ರಮಂದಿರಗಳ ಎಲ್ಲಾ ಪ್ರದರ್ಶನಗಳೂ ಸಹ ಮುಂಗಡ ಬುಕಿಂಗ್‌ನಲ್ಲಿಯೇ ಸೋಲ್ಡ್ ಔಟ್ ಆಗಿದ್ದವು.
* ಇನ್ನು ಉತ್ತರ ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ಮೂಲಕ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನೂ ಸಹ ಕೆಜಿಎಫ್ ಚಾಪ್ಟರ್ 2 ನಿರ್ಮಿಸಿತ್ತು. ಅಲ್ಲಿನ ಹಲವು ನಗರಗಳಲ್ಲಿ ರಾರ್ತಿ ಎರಡು ಗಂಟೆಗೆ ಕೆಜಿಎಫ್ ಚಾಪ್ಟರ್ 2 ಮೊದಲ ಪ್ರದರ್ಶನ ಶುರುವಾಗಿತ್ತು.
* ಚಿತ್ರ ಬಿಡುಗಡೆಯಾಗಲು ಇನ್ನು ಒಂದು ದಿನ ಬಾಕಿ ಇರುವಾಗ ಚಿತ್ರತಂಡ ಸುಲ್ತಾನ ಹಾಡನ್ನು ಬಿಡುಗಡೆ ಮಾಡುವ ಮೂಲಕ ಇದ್ದ ಹೈಪನ್ನು ಮತ್ತಷ್ಟು ಹೆಚ್ಚಿಸಿತ್ತು.
* ಏಪ್ರಿಲ್ 13ರಂದು ತಮಿಳಿನಲ್ಲಿ ವಿಜಯ್ ನಟನೆಯ ಬೀಸ್ಟ್ ಬಿಡುಗಡೆಯಾಗಿತ್ತು. ಆದರೆ ಬಿಡುಗಡೆ ದಿನ ಚೆನ್ನೈ ನಗರದಲ್ಲಿ ಬೀಸ್ಟ್ ಚಿತ್ರಕ್ಕೆ ಇದ್ದ ಬುಕಿಂಗ್ಸ್‌ಗಿಂತ ಕೆಜಿಎಫ್ ಚಾಪ್ಟರ್ 2 ಮುಂಗಡ ಬುಕಿಂಗ್ ಭರ್ಜರಿಯಾಗಿತ್ತು.


Click it and Unblock the Notifications











