ನಿಜಕ್ಕೂ 'ಉಗ್ರಂ' ಹಿಟ್ಟಾ, ಫ್ಲಾಪಾ? ಇವತ್ತಿಗೂ ನೀಲ್‌ಗೆ ಆ ನೋವು ಕಾಡುತ್ತಿರುವುದ್ಯಾಕೆ?
ಶ್ರೀಮುರಳಿ ನಟಿಸಿದ 'ಉಗ್ರಂ' ಸಿನಿಮಾ 10 ಪೂರೈಸಿದೆ. 2014ರಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಸಖತ್ ಸೌಂಡ್ ಮಾಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಹಲವು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿತು. ಇವತ್ತಿಗೂ ಸಿನಿರಸಿಕರು ನೀಲ್ ಮಾಸ್ಟರ್‌ಪೀಸ್‌ನ ಮರೆತ್ತಿಲ್ಲ.
ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗಕ್ಕೆ ಒಂದು ಅದ್ಭುತ ಸಿನಿಮಾ ಕಟ್ಟಿಕೊಡಬೇಕು ಎಂದು ಕನಸು ಕಂಡರು. ಅದರ ಫಲವಾಗಿ ಮೂಡಿ ಬಂದ ಸಿನಿಮಾ 'ಉಗ್ರಂ'. ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಮುರಳಿಗೂ ಒಂದು ಬ್ರೇಕ್ ಬೇಕಾಗಿತ್ತು. ಇಬ್ಬರ ಕಿಚ್ಚು ಸೇರಿ ಅಗಸ್ತ್ಯನ ಆರ್ಭಟ ತೆರೆಗೆ ಬಂತು.

ಮುಗೋರ್ ಎನ್ನುವ ಭೂಗತ ಲೋಕದಲ್ಲಿ ಅಗಸ್ತ್ಯ ಹಾಗೂ ಬಾಲನ ಸ್ನೇಹ, ಸಮರ ಸಿನಿರಸಿಕರಿಗೆ ಇಷ್ಟವಾಗಿತ್ತು. ರವಿಬಸ್ರೂರು ಸಂಗೀತ, ಭುವನ್ ಗೌಡ ಹಾಗೂ ರವಿವರ್ಮನ್ ಛಾಯಾಗ್ರಹಣ ಎಲ್ಲವೂ ಸೇರಿ ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಆಗಿತ್ತು. ಪ್ರಶಾಂತ್ ನೀಲ್ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದರು. ಅಂದಾಜು 4 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು.
ಮನೆ ಮಾರಿ ಪ್ರಶಾಂತ್ ನೀಲ್ 'ಉಗ್ರಂ' ಸಿನಿಮಾ ಮಾಡಿದ್ದರು. ತಮ್ಮ ಕನಸು ನನಸು ಮಾಡಿಕೊಳ್ಳಲು ಹಗಲಿರುಳು ಶ್ರಮಿಸಿದ್ದರು. ಶ್ರೀಮುರಳಿ ಕೂಡ ತಮ್ಮ ಬಹಳ ಇಷ್ಟಪಟ್ಟು ಸಿನಿಮಾದಲ್ಲಿ ನಟಿಸಿದ್ದರು. ಕಾರಣಾಂತರಗಳಿಂದ ಬಹಳ ತಡವಾಗಿ ಸಿನಿಮಾ ತೆರೆಗೆ ಬಂತು. ಆದರೆ ಸಿನಿಮಾ ಫಸ್ಟ್ ಕಾಪಿ ಸಿದ್ಧವಾದ ಮೇಲೆ ಯಾರು ಕೂಡ ಸಿನಿಮಾ ಕೊಳ್ಳಲು ಬಂದಿರಲಿಲ್ಲ. ವಿತರಕರು ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕಿದ್ದರು. ಆಗ ನಟ ದರ್ಶನ್ ಹಾಗೂ ದಿನಕರ್ ಸಹೋದರರು ಸಿನಿಮಾ ವಿತರಣೆ ಮಾಡಿದ್ದರು.

'ಉಗ್ರಂ' ಸಿನಿಮಾ ಬಿಡುಗಡೆಯಾಗಿ 20 ದಿನಕ್ಕೆ ಪೈರಸಿ ಆಗಿತ್ತು. ಸಾಕಷ್ಟು ಜನ ಮೊಬೈಲ್, ಯೂಟ್ಯೂಬ್‌ನಲ್ಲಿ ನೋಡಿ ಸಿನಿಮಾ ಮೆಚ್ಚಿಕೊಂಡರು ಎಂದು ಇತ್ತೀಚೆಗೆ ಪ್ರಶಾಂತ್ ನೀಲ್ ಬೇಸರ ವ್ಯಕ್ತಪಡಿಸಿದ್ದರು. ಒಂದುಮಟ್ಟಕ್ಕೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಿಗಲಿಲ್ಲ ಎಂದು ನಿರ್ದೇಶಕರು ಹೇಳಿದ್ದರು.
'ಉಗ್ರಂ' ಕಥೆಯನ್ನು 'ಸಲಾರ್' ಸಿನಿಮಾ ಮಾಡುತ್ತಿರುವುದು ಯಾಕೆ? ಎನ್ನುವ ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರಿಸಿದ್ದರು. "ಉಗ್ರಂ ನನ್ನ ಮೊದಲ ಸಿನಿಮಾ. ಸಾಕಷ್ಟು ಕಷ್ಟಪಟ್ಟು ಮಾಡಿದ್ದೆ. ನನ್ನ ಒಂದು ಮನೆ ಮಾರಿಕೊಂಡಿದ್ದೆ. ಆದರೆ ಸಿನಿಮಾ ವಿತರಣೆಗೆ ಯಾರು ಮುಂದೆ ಬರಲಿಲ್ಲ. ಆಗ ದರ್ಶನ್ ಸರ್, ದಿನಕರ್ ಸರ್ ಬಂದ್ರು. 20 ದಿನಕ್ಕೆ ಸಿನಿಮಾ ಪೈರಸಿ ಆಯಿತು. 99ರಷ್ಟು ಜನ ನನ್ನ ಚಿತ್ರವನ್ನು ಮೊಬೈಲ್‌ನಲ್ಲಿ ನೋಡಿದ್ರು. ಅಥವಾ ಯೂಟ್ಯೂಬ್‌ನಲ್ಲಿ ನೋಡಿದ್ರು."
"ಒಳ್ಳೆ ಸಿನಿಮಾ ಮಾಡಿದಾಗ ಜನ ಥಿಯೇಟರ್‌ಗೆ ಬರಬೇಕು. ಮೊಬೈಲ್‌ನಲ್ಲಿ ನೋಡೊದಲ್ಲ. ಅದಕ್ಕಾಗಿ ನಾವು ಅಷ್ಟು ಕಷ್ಟಪಟ್ಟಿಲ್ಲ. ಅವತ್ತಿಗೆ ನಾನು ಬೆಸ್ಟ್ ಕ್ಯಾಮರಾ ಬಳಸಿದ್ದೆ. ಯಾರೂ ಅದನ್ನು ನೋಡಲಿಲ್ಲ. ಮೊಬೈಲ್‌ನಲ್ಲಿ ನೋಡೋಕಾ ಅಷ್ಟೆಲ್ಲ ಮಾಡಿದ್ದು? ಉಗ್ರಂ ಥಿಯೇಟರ್‌ಗೆ ಅಂತ ಮಾಡಿದ್ದ ಸಿನಿಮಾ. ನನಗೆ ಅದೊಂದು ಕೊರಗಿತ್ತು. 'KGF' ಸರಣಿ ಬಳಿಕ ನಾನು ಸಾಕಷ್ಟು ಕಥೆಗಳನ್ನು ಸಿನಿಮಾ ಮಾಡಬೇಕು ಎಂದುಕೊಂಡೆ. ಆದರೆ 'ಉಗ್ರಂ' ಚಿತ್ರವನ್ನು ಪ್ರಪಂಚಕ್ಕೆ ತೋರಿಸಬೇಕಿತ್ತು. ಅದನ್ನು ಉಗ್ರಂ ರೀಮೇಕ್ ಅಂದ್ರು ಪರವಾಗಿಲ್ಲ. ಆ ಕಥೆಯನ್ನು ಮತ್ತೆ ಹೇಳಬೇಕು ಎಂದುಕೊಂಡೆ. ಥಿಯೇಟರ್‌ಗಳನ್ನು ತುಂಬಿಸಬೇಕು ಎಂದುಕೊಂಡೆ." ಹಾಗಾಗಿ 'ಸಲಾರ್' ಸಿನಿಮಾ ಮಾಡ್ತಿದೀನಿ ಎಂದಿದ್ದರು.
'ಉಗ್ರಂ' ಸಿನಿಮಾ ತಕ್ಕಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಭುವನ್ ಗೌಡ, ರವಿಬಸ್ರೂರು, ನರ್ತನ್ ರೀತಿಯ ಅದ್ಭುತ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕೊಟ್ಟಿತ್ತು. ಆದರೆ ಪ್ರಶಾಂತ್ ನೀಲ್‌ಗೆ ಮಾತ್ರ ಆ ಚಿತ್ರವನ್ನು ಹೆಚ್ಚು ಜನ ಥಿಯೇಟರ್‌ನಲ್ಲಿ ನೋಡಲಿಲ್ಲ ಎನ್ನುವ ಬೇಸರ ಇವತ್ತಿಗೂ ಕಾಡುತ್ತಿದೆ. ಸಿನಿಮಾ 10 ವರ್ಷ ಪೂರೈಸಿದ ಸಂಭ್ರಮದಲ್ಲಿ ಅನುಶ್ರೀ ಯೂಟ್ಯೂಬ್ ಸಂದರ್ಶನದಲ್ಲಿ ಚಿತ್ರತಂಡ ಭಾಗಿ ಆಗಿ ಆ ಸಿನಿಮಾ ಮೇಕಿಂಗ್ ಮೆಲುಕು ಹಾಕಿದೆ.


Click it and Unblock the Notifications