1000 ಕೋಟಿ ಕ್ಲಬ್: ತೆಲುಗು-ಕನ್ನಡ ಸಿನಿಮಾರಂಗ ಮಾಡಿದ ಸಾಧನೆ ತಮಿಳು ಸಿನಿಮಾರಂಗದಿಂದ ಯಾಕೆ ಆಗಿಲ್ಲ?
ಭಾರತೀಯ ಸಿನಿಮಾರಂಗದ ಹಿರಿಯಣ್ಣ ಅಂತ ಬಾಲಿವುಡ್ ತನ್ನನ್ನು ತಾನು ಕರೆಸಿಕೊಳ್ಳುತ್ತಿತ್ತು. ಇದಕ್ಕೆ ಸರಿಯಾಗಿ ದಕ್ಷಿಣದಲ್ಲಿ ಬೆಳೆದು ನಿಂತಿದ್ದ ಚಿತ್ರರಂಗ ತಮಿಳು. ತನ್ನನ್ನು ತಾನು ದಕ್ಷಿಣ ಭಾರತದ ಹಿರಿಯಣ್ಣ ಅಂತ ಭಾವಿಸಿತ್ತು. ಬಾಲಿವುಡ್ ಮಂದಿ ಕೂಡ ದಕ್ಷಿಣ ಭಾರತೀಯ ಸಿನಿಮಾರಂಗದವರನ್ನು 'ಮದರಾಸಿ' ಅಂತಲೇ ಕರೆಯುತ್ತಿದ್ದರು. ಭಾರತೀಯ ಸಿನಿಮಾರಂಗದ ಮಟ್ಟಿಗೆ ಹಿಂದಿಯ ಬಳಿಕ ಅತಿ ಹೆಚ್ಚು ಜನಪ್ರಿಯವಾಗಿದ್ದ ಚಲನಚಿತ್ರರಂಗ ಎಂದರೆ ಅದು ತಮಿಳು ಸಿನಿಮಾ ರಂಗ. ಅಲ್ಲದೆ ದಕ್ಷಿಣ ಭಾರತದಿಂದ ಬಾಲಿವುಡ್‌ಗೆ ಹೋಗಿ ಅತ್ಯಂತ ಜನಪ್ರಿಯತೆಯನ್ನು ಪಡೆದ ತಾರೆಯರು ಮತ್ತು ತಾಂತ್ರಿಕ ವರ್ಗದಲ್ಲಿ ಬಹುತೇಕರು ತಮಿಳು ಸಿನಿಮಾ ರಂಗದವರೇ ಆಗಿದ್ದರು.
ಭಾರತೀಯ ಸಿನಿರಂಗದ ಅನೇಕ ಹೆಸರಾಂತ ಸಿನಿತಾರೆಯರು ಮೂಲತಃ ತಮಿಳು ಸಿನಿಮಾರಂಗ ಅಥವಾ ತಮಿಳುನಾಡಿನಿಂದ ಬಂದವರೇ ಆಗಿದ್ದಾರೆ. ಹಿರಿಯ ನಟಿಯರಾದ ವೈ ಜಯಂತಿಮಾಲಾ ಬಾಲಿ, ರೇಖಾ, ಶ್ರೀದೇವಿ, ಹೇಮಮಾಲಿನಿ ಇವರೆಲ್ಲಾ ಅಕ್ಷರಶಃ ಬಾಲಿವುಡ್ ಮೇಲೆ ಅಧಿಪತ್ಯವನ್ನು ಸ್ಥಾಪಿಸಿದ್ದರು. ಇನ್ನು ನಾಯಕ ನಟರ ವಿಚಾರಕ್ಕೆ ಬರುವುದಾದರೆ ಮಾಧವನ್, ಸಿದ್ಧಾರ್ಥ್ ತಮಿಳಿನ ಜೊತೆಗೆ ಬಾಲಿವುಡ್‌ನಲ್ಲೂ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದವರು. ಇನ್ನು ಇತ್ತೀಚಿನ ದಿನಗಳಲ್ಲಿ ನಟಿಯರಾದ ಆಸಿನ್, ಶ್ರುತಿ ಹಾಸನ್, ಧನುಷ್ ಮುಂತಾದ ತಾರೆಯರು ಕೂಡ ಬಾಲಿವುಡ್‌ನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. 'ಏಕ್ ತುಜೆ ಕೆ ಲಿಯೇ' ಚಿತ್ರದ ಮೂಲಕ ಕಮಲಹಾಸನ್ ಭಾರತದಲ್ಲಿ ದೊಡ್ಡ ಹೆಸರನ್ನು ಕೂಡ ಪಡೆದರು.
ಇನ್ನು ಛಾಯಾಗ್ರಾಹಕರಾದ ಪಿ.ಸಿ. ಶ್ರೀರಾಮ್, ರವಿ. ಕೆ ಚಂದ್ರನ್, ಸಂತೋಷ್ ಶಿವನ್ ಬಾಲಿವುಡ್‌ನಲ್ಲಿ ದೊಡ್ಡ ಹೆಸರನ್ನು ಪಡೆದಿದ್ದಾರೆ. ರಜನಿಕಾಂತ್ ಮೇನಿಯಾ ಬಾಲಿವುಡ್ ಅನ್ನು ಕೂಡ ಸಾಕಷ್ಟು ಕಾಡಿದೆ. ಎ .ಆರ್. ರೆಹಮಾನ್ ಅಕ್ಷರಶಃ ಬಾಲಿವುಡ್ ಅನ್ನು ಒಂದು ದಶಕದ ಕಾಲ ನಂಬರ್ 1 ಸಂಗೀತ ನಿರ್ದೇಶಕರಾಗಿ ಆಳಿದ್ದಾರೆ.

ಕಾಲಿವುಡ್ ನಿರ್ದೇಶಕರ ಸಿನಿರಂಗ
ಭಾರತದಲ್ಲಿ ಅತಿ ಹೆಚ್ಚು ಸಂವೇದನಾಶೀಲ ನಿರ್ದೇಶಕರನ್ನು ಹೊಂದಿರುವ ಚಲನ ಚಿತ್ರರಂಗವೆಂದರೆ ಅದು ತಮಿಳು ಮಾತ್ರ. ತಮಿಳು ಸಿನಿಮಾರಂಗ ಒಂದು ಅರ್ಥದಲ್ಲಿ ನಿರ್ದೇಶಕರನ್ನು ಹುಟ್ಟುಹಾಕುವ ಕಾರ್ಖಾನೆಯಂತೆ ಕೆಲಸ ಮಾಡಿದೆ. ಹಿಂದಿನ ತಲೆಮಾರಿನ ನಿರ್ದೇಶಕರನ್ನು ತೆಗೆದುಕೊಂಡರೆ ಕೆ. ಭಾಗ್ಯರಾಜ್, ಭಾರತಿರಾಜ, ಬಾಲಚಂದರ್, ಶ್ರೀಧರನ್, ಬಾಲು ಮಹೇಂದ್ರ ಅಂತಹ ಘಟಾನುಘಟಿ ನಿರ್ದೇಶಕರುಗಳು ಸಂವೇದನಶೀಲ ಚಿತ್ರಗಳ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿದರು. ಆ ಬಳಿಕ ಬಂದ ಜನರೇಶನ್ ಅಲ್ಲಿ ಹುಟ್ಟಿದ ಮಣಿರತ್ನಂ, ಎಸ್. ಶಂಕರ್ ತಾಂತ್ರಿಕವಾಗಿ ತಮಿಳು ಸಿನಿರಂಗವನ್ನು ಮತ್ತಷ್ಟು ಉನ್ನತಿಗೆ ತೆಗೆದುಕೊಂಡು ಹೋದರು. ಎ ಆರ್ ಮುರುಗದಾಸ್, ವಿಕ್ರಮನ್,ವೆಟ್ರಿಮಾರನ್, ಸೆಲ್ವರಾಘವನ್, ಪ ರಂಜಿತ್, ಗೌತಮ್ ಮೆನನ್ ಹೀಗೆ ಸಾಲು ಸಾಲು ಹೊಸತನದ ನಿರ್ದೇಶಕರ ಸಿನಿಮಾಗಳು ಇಡೀ ಭಾರತೀಯ ಸಿನಿಮಾರಂಗವನ್ನು ತನ್ನ ಕಡೆಗೆ ತಿರುಗಿ ನೋಡುವಂತೆ ಮಾಡುತ್ತಲೇ ಅದು ದೊಡ್ಡ ಮಟ್ಟದಲ್ಲಿ ಬೆಳೆಯಿತು.

ಮಣಿರತ್ನಂ-ಶಂಕರ್ ಸ್ಟಾರ್ ಡೈರೆಕ್ಟರ್‌ಗಳು
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆನೇ ಮಾತನಾಡುತ್ತಾರೆ. ಪ್ಯಾನ್ ಇಂಡಿಯಾ ಕಲ್ಪನೆಯೇ ಇಲ್ಲದ ಕಾಲದಲ್ಲಿ ಕೂಡ ತಮಿಳಿನ ಮಣಿರತ್ನಂ ಮತ್ತು ಶಂಕರ್ ತಮ್ಮ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಭಾರತೀಯ ಸಿನಿಮಾ ರಂಗದ ಗಮನಸೆಳೆದಿದ್ದರು. 'ನಾಯಗನ್','ರೋಜಾ','ಬಾಂಬೆ' ಮುಂತಾದ ಕಮರ್ಷಿಯಲ್ ಚಿತ್ರಗಳ ಮೂಲಕ ಇಡೀ ಭಾರತೀಯ ಸಿನಿಮಾ ರಂಗವನ್ನು ಮಣಿರತ್ನಂ ಆವರಿಸಿಕೊಂಡಿದ್ದರು. ಇನ್ನು ತಾಂತ್ರಿಕವಾಗಿ ಶಂಕರ್ ಭಾರತದಲ್ಲೇ ಅತ್ಯಂತ ಉನ್ನತ ಮಟ್ಟದ ತಂತ್ರಜ್ಞಾನವನ್ನು ಮೊದಲು ಪರಿಚಯಿಸಿದವರು. 'ಜೀನ್ಸ್' ಚಿತ್ರದ ಮೂಲಕ ಭಾರತೀಯ ಸಿನಿಮಾರಂಗಕ್ಕೆ ಗ್ರಾಫಿಕ್ಸ್ ನಿಜವಾಗಿಯೂ ಪರಿಚಯವಾಗಿತ್ತು. ಬಳಿಕ 'ರೋಬೋ', '2.0' 'ಅನ್ನಿಯನ್', 'ಐ' ಮೂಲಕ ಭಾರತೀಯ ಚಿತ್ರರಂಗ ಎಷ್ಟೊಂದು ಸದೃಢವಾಗಿದೆ ಅಂತ ತೋರಿಸಿಕೊಟ್ಟವರೇ ಶಂಕರ್. ಆದರೆ ಪ್ಯಾನ್ ಇಂಡಿಯಾ ಸಿನಿಮಾಗಳ ಕಲ್ಪನೆ 'ಬಾಹುಬಲಿ'ಯಿಂದ ಮೊದಲಾಯಿತು. ಆದರೆ ಶಂಕರ್ ಮತ್ತು ಮಣಿರತ್ನಂ ಅವರ ಚಿತ್ರಗಳು ಇದೆ ಸಮಯದಲ್ಲಿ ನೆಲ ಕಚ್ಚಲು ಮೊದಲಾಯಿತು. 'ಐ' ಶಂಕರ್ ಕೆರಿಯರ್‌ನಲ್ಲಿಯೇ ದೊಡ್ಡ ಡಿಸಾಸ್ಟರ್ ಎನಿಸಿಕೊಂಡು ದೊಡ್ಡ ಮಟ್ಟದಲ್ಲಿ ಫ್ಲಾಪ್ ಆಯಿತು. '2.0' ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡರೂ ಕೂಡ ಎಸ್. ಎಸ್ .ರಾಜಮೌಳಿಯವರ ಬಾಹುಬಲಿ ತರದ ಸಕ್ಸಸ್ ಅನ್ನು ಬಾಲಿವುಡ್‌ನಲ್ಲಿ ನೋಡಲು ಸಾಧ್ಯವಾಗಲಿಲ್ಲ.

ಒಂದೇ ಒಂದು ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಲಿಲ್ಲ
ಎಸ್. ಶಂಕರ್ ನಿರ್ದೇಶನದಲ್ಲಿ ರಜನಿಕಾಂತ್ ಅಭಿನಯದ 'ಶಿವಾಜಿ' 2007ರಲ್ಲಿ 100 ಕೋಟಿ ಕ್ಲಬ್ ಅನ್ನು ಸೇರುವ ಮೂಲಕ ದಕ್ಷಿಣ ಭಾರತದಿಂದ ಮೊದಲ 100 ಕೋಟಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ದಕ್ಷಿಣ ಭಾರತದಿಂದ 300 ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರ ಕೂಡ ಶಂಕರ್ ನಿರ್ದೇಶನದಲ್ಲಿ ರಜನಿಕಾಂತ್ ಅಭಿನಯದ 'ಎಂದಿರನ್'. ಆದರೆ ಮೊದಲ 500 ಕೋಟಿ ಕ್ಲಬ್ ಸೇರಿದ ಚಿತ್ರ ತೆಲುಗಿನ 'ಬಾಹುಬಲಿ'. ಮೊದಲ ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾ ತೆಲುಗಿನ 'ಬಾಹುಬಲಿ- 2' ಚಿತ್ರ. ತಮಿಳು ಸಿನಿಮಾರಂಗದ ಟಾಪ್ ಒನ್ ಚಿತ್ರ ಅಂದರೆ ಅದು ಎಸ್ ಶಂಕರ್ ನಿರ್ದೇಶನದಲ್ಲಿ ರಜನಿಕಾಂತ್ ಅಭಿನಯದ '2.0'. ಅದರ ಒಟ್ಟು ಗಳಿಕೆ 800 ಕೋಟಿ. ಇನ್ನು ಎಸ್. ಎಸ್ .ರಾಜಮೌಳಿ ನಿರ್ದೇಶನದ ಮತ್ತೊಂದು ತೆಲುಗು ಚಿತ್ರ RRR ಈ ವರ್ಷ ಸಾವಿರ ಕೋಟಿ ಕ್ಲಬ್ ಸೇರಿದ ಮತ್ತೊಂದು ಸಿನಿಮಾ. ನೂರು ಕೋಟಿ ಕ್ಲಬ್ ಕೂಡ ಸೇರಲು ಸಾಧ್ಯವಿಲ್ಲ ಅಂತ ಎಲ್ಲರೂ ಅಣಕ ಮಾಡುತ್ತಿದ್ದ ಕನ್ನಡ ಸಿನಿಮಾರಂಗದಿಂದ ಬಂದ 'ಕೆಜಿಎಫ್ -2' 1000 ಕೋಟಿ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದೆ. ಆದರೆ ತಮಿಳು ಸಿನಿಮಾರಂಗಕ್ಕೆ ಸಾವಿರ ಕೋಟಿಯ ಕ್ಲಬ್ ಇನ್ನೂ ಕೂಡ ಮರೀಚಿಕೆಯಾಗಿದೆ.

ತಮಿಳು ಸಿನಿಮಾ ಸಾವಿರ ಕೋಟಿ ಗಳಿಸಿಲ್ಲ
ಭಾರತೀಯ ಸಿನಿಮಾ ರಂಗದಲ್ಲಿ ಕೇವಲ ನಾಲ್ಕು ಸಿನಿಮಾಗಳು ಮಾತ್ರ ಇದುವರೆಗೆ ಸಾವಿರ ಕೋಟಿ ಕ್ಲಬ್‌ನ್ನು ನೋಡಿದೆ. ಅದರಲ್ಲಿ 2 ತೆಲುಗು 'ಬಾಹುಬಲಿ-2' ,'RRR', ಹಿಂದಿಯಿಂದ 'ದಂಗಲ್', ಕನ್ನಡದಿಂದ 'ಕೆಜಿಎಫ್ -2' ಮಾತ್ರ ಸಾವಿರ ಕೋಟಿ ಕ್ಲಬ್‌ನಲ್ಲಿ ಹೆಸರು ದಾಖಲಿಸಿವೆ. ಸದ್ಯಕ್ಕೆ ನಿರ್ಮಾಣವಾಗುತ್ತಿರುವ ಸಿನಿಮಾಗಳನ್ನು ಗಮನಿಸಿದರೆ ತೆಲುಗಿನ 'ಪ್ರಾಜೆಕ್ಟ್ -ಕೆ', ಎಸ್ಎಸ್ ರಾಜಮೌಳಿ- ಮಹೇಶ್ ಬಾಬು ಅವರ ಮುಂದಿನ ಚಿತ್ರ ಸಾವಿರ ಕೋಟಿ ಕ್ಲಬ್ ಸುಲಭವಾಗಿ ಸೇರಬಹುದಾದ ಚಿತ್ರಗಳಾಗಿ ಕಾಣುತ್ತಿದೆ. ಶಂಕರ್ ಮುಂದಿನ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವುದರಿಂದ ಅದು ಸಾವಿರ ಕೋಟಿ ಕ್ಲಬ್ ಸೇರಿದರೆ, ಅದರ ಕ್ರೆಡಿಟ್ ಕೂಡ ತೆಲುಗು ಸಿನಿಮಾ ರಂಗದ ಖಾತೆಗೆ ಹೋಗುತ್ತದೆ. ಮಣಿರತ್ನಂ ಮುಂದಿನ ಚಿತ್ರ ಕೂಡ ಅಷ್ಟೊಂದು ಆಶಾದಾಯಕವಾಗಿ ಕಾಣುತ್ತಿಲ್ಲ. ಉಳಿದಂತೆ ತೆಲುಗು ಮತ್ತು ಕನ್ನಡ ಹೀರೊಗಳಿಗೆ ಸಿಕ್ಕಿರುವ ಪ್ಯಾನ್ ಇಂಡಿಯಾ ಪಟ್ಟ ಇದುವರೆಗೂ ಕೂಡ ಯಾವುದೇ ತಮಿಳು ಸಿನಿಮಾ ನಟರಿಗೂ ಸಿಕ್ಕಿಲ್ಲ. ಅದು ಅಲ್ಲದೆ ಪ್ಯಾನ್ ಇಂಡಿಯಾ ಡೈರೆಕ್ಟರ್ ಸಾಲಿನಲ್ಲಿ ನೋಡುವುದಾದರೆ ಎಸ್ಎಸ್ ರಾಜಮೌಳಿ ,ಪ್ರಶಾಂತ್ ನೀಲ್, ಸುಕುಮಾರ್ ಮಾತ್ರ ಕಾಣುತ್ತಾರೆ.

ಕನೆಕ್ಟ್ ಆಗುತ್ತಿಲ್ಲ ತಮಿಳು ಸಿನಿಮಾ
ತಮಿಳು ಸಿನಿಮಾಗಳು ಒಂದು ಅರ್ಥದಲ್ಲಿ ಅಲ್ಲಿನ ಸ್ಥಳೀಯ ಸಾಂಸ್ಕೃತಿಕ ವಾತಾವರಣವನ್ನು ಹೆಚ್ಚಾಗಿ ಬಿಂಬಿಸುತ್ತಿರುವುದರಿಂದ ಬಹುಶಃ ಅದು ಇತರ ಭಾಗದ ಸಾಂಸ್ಕೃತಿಕ ಪರಿಸರಕ್ಕೆ ಸರಿಯಾಗಿ ಕನೆಕ್ಟ್ ಆಗುತ್ತಿಲ್ಲ. ಇದೇ ಕಾರಣದಿಂದಲೇ ವಿಜಯ್ ಅಂತಹ ದೊಡ್ಡ ತಮಿಳಿನ ಮಾಸ್ಟರ್ ಸಿನಿಮಾಗಳು ತಮಿಳುನಾಡಿನ ಅಥವಾ ತಮಿಳು ಸಿನಿಮಾ ಪ್ರಿಯರ ಹೊರಗೆ ಹೆಚ್ಚಿನ ಜನಪ್ರಿಯತೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ತಮಿಳಿನಲ್ಲಿ ಭಾರಿ ಯಶಸ್ಸನ್ನು ಕಂಡ ಅಜಿತ್ ಅಭಿನಯದ 'ವಾಲಿ ಮೈ' ಇತರ ಭಾಷೆಗಳಲ್ಲಿ ಇನ್ನಿಲ್ಲದಂತೆ ನೆಲಕಚ್ಚಿತ್ತು. ಈ ಎಲ್ಲಾ ಅಂಶಗಳನ್ನು ಲೆಕ್ಕಹಾಕಿ ನೋಡಿದಾಗ ಸದ್ಯಕ್ಕೆ ತಮಿಳಿನ ಯಾವುದೇ ಚಿತ್ರ ಕೂಡ ಸಾವಿರ ಕೋಟಿ ಕ್ಲಬ್ ನಲ್ಲಿ ಸದಸ್ಯತ್ವ ಪಡೆಯುವ ಅವಕಾಶಗಳು ಕಂಡುಬರುತ್ತಿಲ್ಲ.


Click it and Unblock the Notifications