12 Years For Paramathma: ಅದು ಗಣಿ, ದಿಗ್ಗಿ ಮಾಡ್ಬೇಕಿದ್ದ ಕತೆನಾ? 'ಪರಮಾತ್ಮ' ಸಿನಿಮಾ ಸೋಲಿಗೆ ಕಾರಣ ಏನು?
ಪುನೀತ್ ರಾಜ್‌ಕುಮಾರ್ ಹಾಗೂ ದೀಪಾ ಸನ್ನಿಧಿ ನಟನೆಯ 'ಪರಮಾತ್ಮ' ಸಿನಿಮಾ 12 ವರ್ಷಗಳ ಸಂಭ್ರಮದಲ್ಲಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಯೋಗರಾಜ್ ಭಟ್ ಕೊಟ್ಟಿಕೊಟ್ಟ 'ಪರಮಾತ್ಮ' ಸಿನಿಮಾವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈಗ ಕಲ್ಟ್ ಕ್ಲಾಸಿಕ್ ಎನ್ನುತ್ತಿರುವ ಸಿನಿಮಾ 12 ವರ್ಷಗಳ ಹಿಂದೆ ಸೋಲುಂಡಿತ್ತು.
ಅಕ್ಟೋಬರ್ 6, 2011ರಲ್ಲಿ 'ಪರಮಾತ್ಮ' ಸಿನಿಮಾ ತೆರೆಕಂಡಿತ್ತು. ಭಟ್ಟರ ನಿರ್ದೇಶನ, ಅಪ್ಪು ಅಭಿನಯ, ವಿ. ಹರಿಕೃಷ್ಣ ಮ್ಯೂಸಿಕ್ ಎಲ್ಲಾ ಸೇರಿ ಸಿನಿಮಾ ದೊಡ್ಡಮಟ್ಟದಲ್ಲೇ ಸದ್ದು ಮಾಡಿತ್ತು. ಆದರೆ ಊಹಿಸಿದ ಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಕಲೆಕ್ಷನ್ ಮಾಡಲಿಲ್ಲ. ಈ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಐಂದ್ರಿತಾ ರೇ, ರಮ್ಯಾ ಬಾರ್ನ, ಅವಿನಾಶ್, ದತ್ತಣ್ಣ ಸೇರಿದಂತೆ ದೊಡ್ಡ ತಾರಾಗಣವಿತ್ತು.

ಜಯಣ್ಣ, ಭೋಗೇಂದ್ರ 'ಪರಮಾತ್ಮ' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಿನಿಮಾ ರಿಲೀಸ್‌ಗೂ ಮೊದ್ಲೆ ಆಲ್ಬಮ್ ಹಿಟ್ ಆಗಿತ್ತು. ಇನ್ನು ಪುನೀತ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಎನ್ನುವ ಕಾರಣಕ್ಕೆ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಆ ನಿರೀಕ್ಷೆ ತಲುಪುವಲ್ಲಿ ಸಿನಿಮಾ ವಿಫಲವಾಗಿತ್ತು ಎನ್ನಬಹುದು. ಅದೇ ಕಾರಣಕ್ಕೆ ಯಾಕೋ ಸಿನಿಮಾ ಥಿಯೇಟರ್‌ಗಳಲ್ಲಿ ಸದ್ದು ಮಾಡಲಿಲ್ಲ. ಬಳಿಕ ಟಿವಿಯಲ್ಲಿ ಪ್ರಸಾರವಾಗಿ ಜನಮನ್ನಣೆ ಪಡೆಯಿತು.
'ಪರಮಾತ್ಮ' 12 ವರ್ಷ ಪೂರೈಸಿದ ಸಂತಸವನ್ನು ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರಕಾಶ್ ರಾಜ್ ಮೇಹು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸಣ್ಣ ಪಾತ್ರದಲ್ಲೂ ಅವರು ನಟಿಸಿದ್ದರು. "ಪರಮಾತ್ಮ ಚಿತ್ರ ಹನ್ನೆರಡನೆ ವರ್ಷದ ಹುಟ್ಟುಹಬ್ಬ ಆಚರಿಸುತ್ತಿದೆ. ನಾನು ಸಹ-ನಿರ್ದೇಶಕನಾಗಿ ಕೆಲಸ ಮಾಡಿದ ಕೊನೆಯ ಸಿನಿಮಾ ಇದು. ಭಟ್ಟರ ಬಲವಂತಕ್ಕೆ ಒಂದು ಪಾತ್ರವನ್ನು ಮಾಡಿರುವೆ. ಬಿಡುಗಡೆಯಾದಾಗ ಮೂರು-ನಾಲ್ಕು ದಿನ ನಾನು ಸಂತೋಷ್ ಚಿತ್ರಮಂದಿರದಲ್ಲೇ ಇರುತ್ತಿದ್ದೆ, ಮೊದಲ ದಿನವೇ ಡಿಸಪಾಯಿಂಟ್! ಸಿನಿಮಾ ನೋಡಿದವರು ಚಿತ್ರದ ಬಗ್ಗೆ ಒಳ್ಳೆಯ ಮಾತನಾಡುತ್ತಿರಲಿಲ್ಲ ಮುಖ್ಯವಾಗಿ ಸಿನಿಮಾ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ"
"ಇಡೀ ಕರ್ನಾಟಕದಲ್ಲಿ ಕಲೆಕ್ಷನ್ ಡಲ್!! ನಾನು ಸಹ-ನಿರ್ದೇಶಕನಾಗಿ ಕೆಲಸ ಮಾಡಿದ ಮೊದಲ ಸಿನಿಮಾ "ಜನುಮದ ಜೋಡಿ" (ಅದಕ್ಕೆ ಒಂದಷ್ಟು ಸಂಭಾಷಣೆಯನ್ನೂ ಸಹ ಬರೆದಿದ್ದೆ) ಸಿನಿಮಾ ಕೂಡ ಮೊದಲ ವಾರ ಸೋತು ಆ ನಂತರ ಪಿಕಪ್ ಆದದ್ದು ಸತತ ಒಂದು ವರ್ಷ ಇಡೀ ಕರ್ನಾಟಕದಲ್ಲಿ ವಿಜೃಂಭಿಸಿದ ಇತಿಹಾಸ ನನ್ನ ಕಣ್ಣ ಮುಂದೆಯೇ ಇದ್ದದ್ದರಿಂದ ಇದೂ ಸಹ ಫ್ಯಾಮಿಲಿ ಪ್ರೇಕ್ಷಕರು ಬಂದ ಮೇಲೆ ಪಿಕಪ್ ಆಗಬಹುದು ಅನ್ನುವುದು ನನ್ನ ನಿರೀಕ್ಷೆಯಾಗಿತ್ತು. ಆದರೆ ಸಿನಿಮಾ ಚಿತ್ರಮಂದಿರಗಳಲ್ಲಿ ಸೋಲು ಕಂಡಿತು. ಅದರಿಂದ ನಿರಾಶೆಯಾಯಿತು"

"ಚಿತ್ರ ಯಾಕೆ ಜನರಿಗೆ ಇಷ್ಟವಾಗಲಿಲ್ಲ ಅಂತ ಹಲವರನ್ನು ವಿಚಾರಿಸಿದೆ. ಹಲವಾರು ರೀತಿಯ ಪ್ರತಿಕ್ರಿಯೆಗಳು ಬಂದವು. ಅದರಲ್ಲಿ ಅಭಿಮಾನಿಯೊಬ್ಬ ಹೇಳಿದ ಮಾತು ಇನ್ನೂ ನೆನಪಿದೆ. ಅದೇನೆಂದರೆ "ಅಪ್ಪು ಅಣ್ಣುನ್ ಹಿಂದೆ ಹೀರೋ ಇನ್ ಇರ್ಬೇಕು, ಅಪ್ಪು ಅಣ್ಣ ಅವ್ಳಿಂದೆ ಇರೋದು ನಮಗಿಷ್ಟ ಆಗ್ಲಿಲ್ಲ. ಅದೇನಿದ್ರು ಗಣೇಶ್, ದಿಗಂತ್ ಅಂತವರಿಗೆ ಸರಿ" ಅಂದ."
"ಸಿನಿಮಾ ಟಿವಿಯಲ್ಲಿ ಬಂತು ನೋಡಿ!!! ದಿನದಿಂದ ದಿನಕ್ಕೆ ವಾರದಿಂದ ವಾರಕ್ಕೆ ವರ್ಷದಿಂದ ವರ್ಷಕ್ಕೆ ಅದರ ಜನಪ್ರಿಯತೆ ಬೆಳೆಯುತ್ತಲೇ ಹೋಯ್ತು. ಯಾರು ಸಿನಿಮಾ ಇಷ್ಟ ಆಗಲಿಲ್ಲ ಅಂದರೋ ಅವರೇ ಮತ್ತೆ ಮತ್ತೆ ನೋಡಿದರು. ನೂರು ಬಾರಿಗಿಂತಲೂ ಹೆಚ್ಚು ನೋಡಿರುವವರಿದ್ದಾರೆ. ಪುನೀತ್ ರಾಜಕುಮಾರ್, ಯೋಗರಾಜ್ ಭಟ್ ಅವರ ಕೆರಿಯರ್‌ನಲ್ಲೇ "ಪರಮಾತ್ಮ ಬೆಸ್ಟ್ ಸಿನಿಮಾ" ಅನ್ನುವವರಿದ್ದಾರೆ. "ಪರಮಾತ್ಮ ಸಿನಿಮಾ ಅಭಿಮಾನಿಗಳು" ಅನ್ನುವ ಗ್ರೂಪ್‌ಗಳಿವೆ. ಈ ಮಾಯೆಗೆ ಈ ಮರ್ಮಕ್ಕೆ ಏನನ್ನುವುದು?" ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











