14 Years of Jackie: 'ಜಾಕಿ' ಚಿತ್ರದಲ್ಲಿ ಶಿವಣ್ಣ ಕೂಡ ಇರಬೇಕಿತ್ತು!
ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಚಿತ್ರವನ್ನು ಅಭಿಮಾನಿಗಳು ಮರೆಯೋಕೆ ಸಾಧ್ಯವಿಲ್ಲ. ಈ ವರ್ಷ ಅಪ್ಪು ಹುಟ್ಟುಹಬ್ಬಕ್ಕೆ ಮತ್ತೊಮ್ಮೆ ಸಿನಿಮಾ ತೆರೆಗಪ್ಪಳಿಸಿ ಪ್ರೇಕ್ಷಕರನ್ನು ರಂಜಿಸಿತ್ತು. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ದುನಿಯಾ ಸೂರಿ ನಿರ್ದೇಶನದ 'ಜಾಕಿ' ಚಿತ್ರ 14 ವರ್ಷ ಪೂರೈಸಿದೆ.
2010, ಅಕ್ಟೋಬರ್ 14ರಂದು 'ಜಾಕಿ' ಸಿನಿಮಾ ಬಿಡುಗಡೆ ಆಗಿತ್ತು. ಅದು ಸೂರಿ ಹಾಗೂ ಅಪ್ಪು ಕಾಂಬಿನೇಷನ್ ಮೊದಲ ಸಿನಿಮಾ ಆಗಿತ್ತು. ವಿ. ಹರಿಕೃಷ್ಣ ಸಂಗೀತ ಹಾಗೂ ಯೋಗರಾಜ್ ಭಟ್ ಸಾಹಿತ್ಯ ಚಿತ್ರಕ್ಕಿತ್ತು. ಸಿನಿಮಾ ಬರೋಕು ಮುನ್ನ ಸಾಂಗ್ಸ್ ಹಿಟ್ ನಿರೀಕ್ಷೆ ಹೆಚ್ಚಿಸಿತ್ತು. ಅಲ್ಲಿಯವರೆಗೆ ಪುನೀತ್ ಮಾಡಿದ್ದ ಚಿತ್ರಗಳಿಗೂ 'ಜಾಕಿ' ಚಿತ್ರಕ್ಕೂ ಬಹಳ ವ್ಯತ್ಯಾಸವಿತ್ತು. ಪಕ್ಕಾ ಲೋಕಲ್ ಹುಡುಗನಾಗಿ ಅಪ್ಪು ತೆರೆಮೇಲೆ ಜಾದೂ ಮಾಡಿದ್ದರು.

ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಸ್ವತಃ ಪಾರ್ವತಮ್ಮ ರಾಜ್‌ಕುಮಾರ್ 'ಜಾಕಿ' ಚಿತ್ರ ನಿರ್ಮಾಣ ಮಾಡಿದ್ದರು. 'ದುನಿಯಾ' ಸಿನಿಮಾ ನೋಡಿದಾಗಲೇ ಸೂರಿ ಜೊತೆ ಕೆಲಸ ಮಾಡಲು ಅಪ್ಪು ಬಯಸಿದ್ದರು. 'ಜಂಗ್ಲಿ' ಸಿನಿಮಾ ಮಾಡಿ ಗೆದ್ದ ಬಳಿಕ ಪುನೀತ್ ಅವರೊಟ್ಟಿಗೆ ಸೂರಿ ಸಿನಿಮಾ ಮಾಡುವ ಧೈರ್ಯ ಮಾಡಿದ್ದರು. ಸಾಕಷ್ಟು ಐಡಿಯಾ ಮಾಡಿ ಕೊನೆಗೆ ಮಾನವ ಕಳ್ಳಸಾಗಣೆ ವಿಚಾರದ ಸುತ್ತಾ ಕಥೆ ಸಿದ್ಧವಾಗಿತ್ತು.
ಮೊದಲಿಗೆ ಅಪ್ಪು- ಸೂರಿ ಕಾಂಬಿನೇಷನ್ ಚಿತ್ರಕ್ಕೆ ಬೇರೆ ಬೇರೆ ಕಥೆಗಳು, ಟೈಟಲ್‌ಗಳು ಚರ್ಚೆಗೆ ಬಂದಿತ್ತು. ಕೊನೆಗೆ ಪಾರ್ವತಮ್ಮ ರಾಜ್‌ಕುಮಾರ್ 'ಜಾಕಿ' ಟೈಟಲ್ ಫೈನಲ್ ಮಾಡಿದ್ದರು. ಒಂದ್ಕಡೆ ಸಾಂಪ್ರಾದಾಯಿಕ ಶೈಲಿಯನ್ನು ಬಿಟ್ಟು ಹೊಸ ರೀತಿಯಲ್ಲಿ ಸೂರಿ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದರು. ಅತ್ತ ರಾಘಣ್ಣ ಏನೇ ಆಗಿದ್ದರೂ ಸಾಂಪ್ರಾದಾಯಿಕ ಶೈಲಿ ಬಿಟ್ಟು ಸಿನಿಮಾ ಮಾಡಬಾರದು ಎಂದು ಪಟ್ಟು ಹಿಡಿದರು. ಹಾಗಾಗಿ ಎರಡನ್ನು ಸೇರಿ ಕೊನೆಗೆ 'ಜಾಕಿ' ಸಿನಿಮಾ ಮೂಡಿ ಬಂದಿತ್ತು.
ಅಂದಾಜು 7 ಕೋಟಿ ರೂ. ಬಜೆಟ್ 'ಜಾಕಿ' ಸಿನಿಮಾ ಎರಡು ವಾರಕ್ಕೆ 18 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಮುಂದೆ ಶತದಿನೋತ್ಸವ ಆಚರಿಸಿ ಸದ್ದು ಮಾಡಿತ್ತು. 'ಜಾಕಿ' ಚಿತ್ರದ ಮೇಕಿಂಗ್‌ನಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಕಥೆಗಳಿವೆ. ಕುಂ. ವೀರಭದ್ರಪ್ಪ ಅವರ 'ಕನಕಾಂಗಿ ಕಲ್ಯಾಣ' ಎನ್ನುವ ಕಥೆಯನ್ನು ಆಗ ಸಿನಿಮಾ ಮಾಡಲು ಸಿದ್ಧತೆ ನಡೆದಿತ್ತು. ಆಗ ಆ ಸಿನಿಮಾ ಬಿಟ್ಟು ಪುನೀತ್ 'ಜಾಕಿ' ಕಥೆ ಒಪ್ಪಿದ್ದರು.

ನಿಮಗೆ ಗೊತ್ತಾ 'ಜಾಕಿ' ಚಿತ್ರದ ಸಣ್ಣ ಝಲಕ್‌ನಲ್ಲಿ ಶಿವರಾಜ್‌ಕುಮಾರ್ ಸಹ ಕಾಣಿಸಿಕೊಳ್ಳಬೇಕಿತ್ತು. 'ಜಾಕಿ ಜಾಕಿ ಜಾಕಿ' ಸಾಂಗ್ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಈ ಸಾಂಗ್ ಆರಂಭದಲ್ಲಿ ಯೋಗರಾಜ್ ಭಟ್, ದುನಿಯಾ ಸೂರಿ ಹಾಗೂ ವಿ. ಹರಿಕೃಷ್ಣ ಮಿಂಚಿದ್ದಾರೆ. ವಾಯ್ಸ್ ಓವರ್ ರೀತಿ ಸಣ್ಣ ಡೈಲಾಗ್ ಹೇಳ್ತಾರೆ. ಅಸಲಿಗೆ ಈ ಸನ್ನಿವೇಶದಲ್ಲಿ ಶಿವಣ್ಣ ಕಾಣಿಸಿಕೊಳ್ಳಬೇಕಿತ್ತಂತೆ. ಬಳಿಕ ಸೂರಿ ತಾವೇ ಕುಳಿತುಕೊಳ್ಳಲು ತೀರ್ಮಾನಿಸಿದ್ದರಂತೆ. ಒಟ್ಟಾರೆ 'ಜಾಕಿ' ಚಿತ್ರದಲ್ಲಿ ಸೆಂಚುರಿ ಸ್ಟಾರ್‌ನ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗಲಿಲ್ಲ.
'ಜಾಕಿ' ಸಕ್ಸಸ್ ಬಳಿಕ ಸೂರಿ ಹಾಗೂ ಅಪ್ಪು ಜೋಡಿ 'ಅಣ್ಣಾಬಾಂಡ್' ಹಾಗೂ 'ದೊಡ್ಮನೆ ಹುಡ್ಗ' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 'ಜಾಕಿ-2' ಮಾಡುವ ಆಸೆ ಕೂಡ ಪುನೀತ್ ಅವರಿಗೆ ಇತ್ತು. ಆ ಪಾತ್ರವನ್ನು ಮಾತ್ರ ಬಳಸಿಕೊಂಡು ಬೇರೆ ಕಥೆ ಹೇಳಬೇಕು ಎನ್ನುವುದು ಸೂರಿ ಆಸೆಯಾಗಿತ್ತು. ಆದರೆ ಅಪ್ಪು ಅಗಲಿಕೆ ಬಳಿಕ ಅದು ಈಡೇರದೇ ಉಳಿದು ಬಿಟ್ಟಿದೆ.
'ಜಾಕಿ' ಸಿನಿಮಾ 14 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಮತ್ತೊಮ್ಮೆ ಚಿತ್ರವನ್ನು ನೆನಪಿಸಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ನೆಚ್ಚಿನ ನಟನನ್ನು ನೆನೆದು ಭಾವುಕರಾಗುತ್ತಿದ್ದಾರೆ.


Click it and Unblock the Notifications











