20 Years of Jogi: ಆ ವಿಚಾರದಲ್ಲಿ 'ಜೋಗಿ' ಮೀರಿಸೋ ಸಿನಿಮಾ ಮತ್ತೆ ಬರಲಿಲ್ಲ!
ಪ್ರೇಮ್ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ನಟಿಸಿ ಗೆದ್ದ 'ಜೋಗಿ' ಸಿನಿಮಾ 20 ವರ್ಷ ಪೂರೈಸಿದೆ. ಕನ್ನಡದ ಬೆಸ್ಟ್ ಕ್ಲಾಸಿಕ್ ಸಿನಿಮಾಗಳಲ್ಲಿ ಇದೂ ಒಂದು. ರೌಡಿಸಂ ಹಾಗೂ ಮದರ್ ಸೆಂಟಿಮೆಂಟ್ ಸೇರಿಸಿ ಪ್ರೇಮ್ ಕಟ್ಟಿಕೊಟ್ಟ ಸಿನಿಮಾ ಅಂದು ತೆರೆಮೇಲೆ ಅಕ್ಷರಶಃ ಮ್ಯಾಜಿಕ್ ಮಾಡಿಬಿಟ್ಟಿತ್ತು. ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ತೆರೆಗಪ್ಪಳಿಸಿದ್ದ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಪ್ರೇಕ್ಷಕರ ಮನ ತಣಿಸಿತ್ತು.
ಖುದ್ದು ಪ್ರೇಮ್ ಹಾಗೂ ಶಿವಣ್ಣ ಮತ್ತೆ ಜೊತೆಯಾದರೂ ಕೂಡ ಮತ್ತೊಮ್ಮೆ 'ಜೋಗಿ' ರೀತಿಯ ಅದ್ಭುತ ಸಿನಿಮಾ ಮಾಡೋಕೆ ಆಗೋಲ್ಲ. ಸಾಕಷ್ಟು ವಿಚಾರಗಳಲ್ಲಿ ಈ ಸಿನಿಮಾ ದಾಖಲೆ ಬರೆದಿತ್ತು. ಅವತ್ತಿನ ಕಾಲಕ್ಕೆ 1200 ರೂ.ಗೆ ಚಿತ್ರದ ಟಿಕೆಟ್‌ಗಳು ಬ್ಲಾಕ್‌ನಲ್ಲಿ ಮಾರಾಟವಾಗಿದ್ದವು. ಸಿನಿಮಾ ನೋಡಿ ಅಣ್ಣಾವ್ರು, ರಜನಿಕಾಂತ್ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು. ಈ ಸಿನಿಮಾ ನಾನೇ ತಮಿಳಿನಲ್ಲಿ ರೀಮೆಕ್ ಮಾಡ್ತೀನಿ ಅಂತ ರಜನಿಕಾಂತ್ ಪಟ್ಟು ಹಿಡಿದಿದ್ದರು. ಅಷ್ಟರಮಟ್ಟಿಗೆ ಈ ಸಿನಿಮಾ ಅವರ ಮನಸ್ಸಿಗೆ ಹತ್ತಿರವಾಗಿಬಿಟ್ಟಿತ್ತು.

ಕನ್ನಡದಲ್ಲಿ ರೌಡಿಸಂ ಚಿತ್ರಗಳಿಗೆ 'ಓಂ' ಮೂಲಕ ಉಪೇಂದ್ರ ನಾಂದಿ ಹಾಡಿದ್ದರು. ಅದರಿಂದ ಪ್ರೇರಣೆಗೊಂಡು ಪ್ರೇಮ್ 'ಕರಿಯ' ಕಥೆ ಹೇಳಿದ್ದರು. ಆದರೆ 'ಜೋಗಿ' ಸಿನಿಮಾ 'ಓಂ'ಗಿಂತ ಭಿನ್ನವಾಗಿ ನಿಲ್ಲುವುದು ಮದರ್ ಸೆಂಟಿಮೆಂಟ್ ವಿಚಾರದ ಕಾರಣಕ್ಕೆ. ಈ ಚಿತ್ರದ ಶಕ್ತಿಯೇ ಅದು. ಇನ್ನು ಪ್ರೇಮ್ ಕಟ್ಟಿದ ದೃಶ್ಯಗಳಿಗೆ ಗುರುಕಿರಣ್ ಸಂಗೀತದಿಂದ ಹೊಸ ಚೈತನ್ಯ ತುಂಬಿದ್ದರು.
ಅವತ್ತಿನ ಕಾಲಕ್ಕೆ ಪ್ರೇಮ್ ಬಹಳ ವಿಭಿನ್ನವಾಗಿ 'ಜೋಗಿ' ಚಿತ್ರದ ಪ್ರಚಾರ ಮಾಡಿದ್ದರು. ಎಲ್ಲಾ ಹಾಡುಗಳು ಹಿಟ್ ಆಗಿದ್ದವು. ಒಂದಕ್ಕಿಂತ ಒಂದು ಹಾಡು ಅಭಿಮಾನಿಗಳು ಗುನುಗುವಂತೆ ಮಾಡಿಬಿಟ್ಟಿತ್ತು. ಸೋಶಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಪ್ರೇಮ್ ತಮ್ಮ ವಿಭಿನ್ನ ಪ್ರಚಾರದಿಂದ ಭಾರೀ ಹೈಪ್ ಕ್ರಿಯೇಟ್ ಆಗುವಂತೆ ಮಾಡಿದ್ದರು. ಆಲ್ಬಮ್ ಹಿಟ್ ಆಗಿ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೆ ಏರಿತ್ತು. ಆ ನಿರೀಕ್ಷೆ ಎಳ್ಳಷ್ಟು ಹುಸಿಯಾಗದಂತೆ 'ಜೋಗಿ' ಪ್ರೇಕ್ಷಕರನ್ನು ರಂಜಿಸಿತ್ತು, ಭಾವುಕರನ್ನಾಗಿಸಿತ್ತು.
25 ವರ್ಷದಿಂದ ಈಚೆಗೆ ಹೀಗೆ ಭಾರೀ ಹೈಪ್ ಕ್ರಿಯೇಟ್ ಮಾಡಿ ದೊಡ್ಡದಾಗಿ ಗೆದ್ದ ಸಿನಿಮಾ 'ಜೋಗಿ' ಮಾತ್ರ ಅನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟರ ಸಿನಿಮಾಗಳು ಭಾರೀ ನಿರೀಕ್ಷೆ ಹುಟ್ಟಾಗಿ ತೆರೆಕಂಡ ಮೇಲೆ ನಿರಾಸೆ ಮೂಡಿಸಿಬಿಡುತ್ತವೆ. ಇನ್ನು ಮದರ್ ಸೆಂಟಿಮೆಂಟ್ ವಿಚಾರದಲ್ಲಿ ಕೂಡ 'ಜೋಗಿ'ಯನ್ನು ಮತ್ಯಾವುದೇ ಸಿನಿಮಾ ಮೀರಿಸಿಲ್ಲ ಎಂದರೆ ತಪ್ಪಾಗಲ್ಲ. 'ಕೆಜಿಎಫ್' ಸರಣಿ ಚಿತ್ರಗಳಲ್ಲಿ ಕೂಡ ಮದರ್ ಸೆಂಟಿಮೆಂಟ್ ಇತ್ತು. ಆದರೆ ಮಾದೇಶ ಹಾಗೂ ಭಾಗ್ಯಕ್ಕನ ಬಾಂಧವ್ಯ, ನೋವಿನ ಕಥೆಯ ಮುಂದೆ ಎಲ್ಲವೂ ಚಿಕ್ಕದಾಗಿ ಕಂಡಿತ್ತು.
ಅಶ್ವಿನಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಜೋಗಿ' ಸಿನಿಮಾ ನಿರ್ಮಾಣವಾಗಿತ್ತು. ಶಿವಣ್ಣನ ತಾಯಿ ಪಾತ್ರದಲ್ಲಿ ಅರುಂಧತಿ ನಾಗ್ ನಟನೆ ಅಮೋಘವಾಗಿತ್ತು. ದೊಡ್ಡ ಸ್ಟಾರ್ ಕಾಸ್ಟ್, ಖ್ಯಾತ ನಿರ್ದೇಶಕ, ಭಾರೀ ಬಜೆಟ್ ಹಾಕಿದ ಮಾತ್ರಕ್ಕೆ ಸಿನಿಮಾ ಗೆಲ್ಲಲ್ಲ. ಯಾವುದೇ ಸಿನಿಮಾ, ಸನ್ನಿವೇಶ ತೆರೆಮೇಲೆ ಅದ್ಭುತ ಸೃಷ್ಟಿ ಮಾಡಬೇಕು. ಆಗ ಮಾತ್ರ ಗೆಲ್ಲಲು ಸಾಧ್ಯ. 'ಜೋಗಿ' ಸಿನಿಮಾ ದೃಶ್ಯಗಳು ಅಂತಾದೊಂದು ಮ್ಯಾಜಿಕ್ ಮಾಡಿದ್ದವು. ಕ್ಲೈಮ್ಯಾಕ್ಸ್ ಅಂತೂ ಮರೆಯೋಕೆ ಸಾಧ್ಯವಿಲ್ಲ.
'ಜೋಗಿ' ಸಿನಿಮಾ ಕ್ರೇಜ್, ಆ ಫೀವರ್ ಬಳಿಕ ಮತ್ಯಾವುದೇ ಕನ್ನಡ ಸಿನಿಮಾ ಹುಟ್ಟು ಹಾಕಲಿಲ್ಲ. ಅದೇ ಕಥೆ ಮುಂದುವರೆಸಿ ಮತ್ತೆ ಶಿವಣ್ಣ- ಪ್ರೇಮ್ ಜೊತೆಯಾಗಿ ಮಾಡಿದ್ದ 'ಜೋಗಯ್ಯ' ಕೂಡ ಮುಗ್ಗರಿಸಿತ್ತು. ಸಿನಿಮಾ 20 ವರ್ಷ ಕಂಪ್ಲೀಟ್ ಮಾಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತೆ ಆ ಕ್ರೇಜ್ ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾ ರೀ-ರಿಲೀಸ್ ಮಾಡುವಂತೆ ಕೇಳುತ್ತಿದ್ದಾರೆ. ಶೀಘ್ರದಲ್ಲೇ 4k ವರ್ಷನ್‌ನಲ್ಲಿ ಮಾದೇಶ ತೆರೆಮೇಲೆ ಬರ್ತಿದ್ದಾನೆ.


Click it and Unblock the Notifications











