twitter
    For Quick Alerts
    ALLOW NOTIFICATIONS  
    For Daily Alerts

    2021 ರಲ್ಲಿ ನಭ ಸೇರಿದ ಚಂದನವನದ ತಾರೆಗಳಿವರು

    |

    2020 ಚಿತ್ರರಂಗದ ಪಾಲಿಗೆ ಅತೀವ ಸಂಕಷ್ಟದ ವರ್ಷ. ಕೊರೊನಾ ಕಾರಣಕ್ಕೆ ಚಿತ್ರರಂಗವೇ ಬಂದ್ ಆಗಿ ಸಾವಿರಾರು ಮಂದಿ ಕಾರ್ಮಿಕರು, ತಂತ್ರಜ್ಞರು ಉದ್ಯೋಗವಿಲ್ಲದೆ, ದುಡಿಮೆ ಇಲ್ಲದೆ ಜೀವನಕ್ಕಾಗಿ ಪರದಾಡುವಂತಾಯಿತು. ಅದರ ನಡುವೆ ಕೊರೊನಾ ಮಹಾಮಾರಿ ಹಲವಾರು ನೆಚ್ಚಿನ ತಾರೆಯರನ್ನು ಉಸಿರುಗಟ್ಟಿಸಿತು.

    2020ರ ಕಹಿಯನ್ನು ಒಡಲೊಳಗಿರಿಸಿಕೊಂಡೇ 2021 ಆದರೂ ಶುಭ ತರಬಹುದೆಂಬ ಆಶಯದಿಂದ ಇದ್ದ ಚಿತ್ರರಂಗಕ್ಕೆ 2021 ಇನ್ನೂ ಕ್ರೂರವಾಗಿ ಕಾಡಿತು. 2020 ರಲ್ಲಿ ಪ್ರಾರಂಭವಾದ ಚಂದನವನದ ತಾರೆಯರ ಸಾವಿನ ಸರಣಿ 2021ರಲ್ಲಿಯೂ ಮುಂದುವರೆದು ಹಲವು ನೆಚ್ಚಿನ ತಾರೆಯರು ಹಠಾತ್ತನೆ ಮರೆಯಾಗಿಬಿಟ್ಟರು.

    2021 ರಲ್ಲಿ ಹಲಾವರು ಮಂದಿ ಚಂದನವದ ನಟರು, ನಿರ್ದೇಶಕರು, ತಂತ್ರಜ್ಞರು ನಿಧನ ಹೊಂದಿದರು. ಈ ವರ್ಷ ನಮ್ಮನ್ನು ಅಗಲಿದ ತಾರೆಯರ ಪಟ್ಟಿ ಇಲ್ಲಿದೆ.

    ನಟ ಶನಿ ಮಹದೇವಪ್ಪ ನಿಧನ

    ನಟ ಶನಿ ಮಹದೇವಪ್ಪ ನಿಧನ

    ಕನ್ನಡ ಸಿನಿಮಾರಂಗದಲ್ಲಿ ಸುಮಾರು 550ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಶನಿ ಮಹದೇವಪ್ಪನವರು ಜನವರಿ 03 ರಂದು ನಿಧನ ಹೊಂದಿದರು. ಡಾ.ರಾಜ್‌ಕುಮಾರ್ ನಟನೆಯ ಕವಿರತ್ನ ಕಾಳಿದಾಸ. ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ, ಮೂರುವರೆ ವಜ್ರಗಳು ಸೇರಿದಂತೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಎಲ್ಲ ರೀತಿ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದರು. ಅದರಲ್ಲೂ ವರನಟ ಡಾ ರಾಜ್ ಕುಮಾರ್ ಜೊತೆ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಕಲಾವಿದ ಶನಿ ಮಹಾದೇವಪ್ಪನವರು ಡಾ.ರಾಜ್ ಕುಮಾರ್ ಜೊತೆಯಲ್ಲಿಯೇ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಗ್ಗೆ ಮಾಹಿತಿ ಇದೆ.

    ಮಾಜಿ ಬಿಗ್‌ಬಾಸ್ ಸ್ಪರ್ಧಿ ಆತ್ಮಹತ್ಯೆ

    ಮಾಜಿ ಬಿಗ್‌ಬಾಸ್ ಸ್ಪರ್ಧಿ ಆತ್ಮಹತ್ಯೆ

    ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ ಜಯಶ್ರೀ ರಾಮಯ್ಯ ಜನವರಿ 25ರಂದು ಆತ್ಮಹತ್ಯೆಗೆ ಶರಣಾದರು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡರು. ಬಿಗ್‌ಬಾಸ್ ಸೀಸನ್ ಮೂರರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಜಯಶ್ರೀ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

    ಕನ್ನಡದ ಹಿರಿಯ ನಟಿ ಪ್ರತಿಮಾ ದೇವಿ

    ಕನ್ನಡದ ಹಿರಿಯ ನಟಿ ಪ್ರತಿಮಾ ದೇವಿ

    ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಹಾಗೂ ನಟಿ-ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ತಾಯಿ ಪ್ರತಿಮಾ ದೇವಿ ಏಪ್ರಿಲ್ 07 ರಂದು ನಿಧನ ಹೊಂದಿದರು. ಪ್ರತಿಮಾ ದೇವಿ ಅವರು 1947ರಲ್ಲಿ 'ಕೃಷ್ಣಲೀಲಾ' ಚಿತ್ರದಲ್ಲಿ ನಟಿಸುವ ಮೂಲಕ ವೃತ್ತಿ ಜೀವನ ಆರಂಭಿಸಿದರು. 1951ರಲ್ಲಿ ತೆರೆಕಂಡ 'ಜಗನ್ಮೋಹಿನಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಖ್ಯಾತಿ ಗಳಿಸಿಕೊಂಡರು. ಈ ಚಿತ್ರದಲ್ಲಿ ಕನ್ನಡ ಇಂಡಸ್ಟ್ರಿಯಲ್ಲಿ ಮೊದಲ ಶತದಿನ ಪೂರೈಸಿದ ಸಿನಿಮಾ ಎಂಬ ದಾಖಲೆ ಹೊಂದಿದೆ.

    ಹಿರಿಯ ಪೋಸ್ಟರ್ ಡಿಸೈನರ್

    ಹಿರಿಯ ಪೋಸ್ಟರ್ ಡಿಸೈನರ್

    ಸಿನಿಮಾ ಪೋಸ್ಟರ್ ಡಿಸೈನರ್ ಹಾಗೂ ಸಿನಿಮಾ ನಿರ್ದೇಶಕ ಮಸ್ತಾನ್ ಕೊರೊನಾ ಕಾರಣದಿಂದ ಏಪ್ರಿಲ್ 21 ರಂದು ನಿಧನರಾದರು. ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ಪೋಸ್ಟರ್ ಡಿಸೈನರ್ ಆಗಿ ಕೆಲಸ ಮಾಡಿದ್ದರು. 2000 ಕ್ಕೂ ಅಧಿಕ ಸಿನಿಮಾಗಳಿಗೆ ಅವರು ಪೋಸ್ಟರ್ ಡಿಸೈನ್ ಮಾಡಿದ್ದರು.

    ಏಪ್ರಿಲ್ 26 ರಂದು ದೊಡ್ಡ ಆಘಾತ

    ಏಪ್ರಿಲ್ 26 ರಂದು ದೊಡ್ಡ ಆಘಾತ

    ಏಪ್ರಿಲ್ 26 ರಂದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ಬಂದೆರಗಿತು. ಅಂದು ನಿರ್ಮಾಪಕ ಕೋಟಿ ರಾಮು ಕೊರೊನಾ ಕಾರಣದಿಂದ ನಿಧನ ಹೊಂದಿದರು. ಕೊರೊನಾ ಧೃಡವಾಗಿ ಒಂದು ವಾರ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಾಮು ಏಪ್ರಿಲ್ 26 ರಂದು ಮೃತರಾದರು. ಕನ್ನಡದ 'ಗೋಲಿಬಾರ್' ಸಿನಿಮಾ ಮೂಲಕ ಚಿತ್ರ ನಿರ್ಮಾಣ ಆರಂಭ ಮಾಡಿದ ರಾಮು ಅವರು, 'ಎಕೆ 47', 'ಲಾಕಪ್‌ ಡೆತ್', 'ಕಿಚ್ಚ', 'ಹಾಲಿವುಡ್', 'ಸಿಂಹದ ಮರಿ' ಇನ್ನೂ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ಪತ್ನಿ ನಟಿ ಮಾಲಾಶ್ರೀ ರಾಮು ಅವರ ನಿರ್ಮಾಣ ಸಂಸ್ಥೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

    ನಿರ್ದೇಶಕ ರೇಣುಕಾ ಶರ್ಮಾ ನಿಧನ

    ನಿರ್ದೇಶಕ ರೇಣುಕಾ ಶರ್ಮಾ ನಿಧನ

    ಕನ್ನಡಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಖ್ಯಾತ ನಿರ್ದೇಶಕ ರೇಣುಕಾ ಶರ್ಮಾ ಅವರು ಕೊರೊನಾದಿಂದಾಗಿ ಮೇ 05 ರಂದು ನಿಧನರಾದರು. 'ಕವಿರತ್ನ ಕಾಳಿದಾಸ', 'ಅಂಜದ ಗಂಡು', 'ಕಿಂದರ ಜೋಗಿ' ಸೇರಿದಂತೆ ಹಲವು ಸಿನಿಮಾಗಳನ್ನು ರೇಣುಕಾ ಶರ್ಮಾ ನಿರ್ದೇಶನ ಮಾಡಿದ್ದರು.

    'ಶಂಖನಾದ' ಅರವಿಂದ್ ನಿಧನ

    'ಶಂಖನಾದ' ಅರವಿಂದ್ ನಿಧನ

    ಕನ್ನಡ ಸಿನಿರಂಗದ ಖ್ಯಾತ ನಟ 'ಶಂಖನಾದ' ಅರವಿಂದ್ ಅವರು ಕೊರೊನಾ ಕಾರಣದಿಂದ ಮೇ 07 ರಂದು ನಿಧನ ಹೊಂದಿದರು. ಅಪರಿಚಿತ, ಆಗಂತುಕ, ಬೆಟ್ಟದ ಹೂವು, ಶಂಖನಾದ ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಅರವಿಂದ್ ರವರು ಇಂದು ಕೊರೊನಾ ವ್ಯಾಧಿಗೆ ತುತ್ತಾಗಿ ನಮ್ಮನ್ನು ಅಗಲಿದ್ದಾರೆ. ಬಹಳ ಅಪರೂಪದ ನಟರಾಗಿದ್ದ ಇವರು ಹಾಸ್ಯನಟರಾಗಿ, ಪೋಷಕ ನಟರಾಗಿ ಅನೇಕ ಚಿತ್ರಗಳಲ್ಲಿ ಅರವಿಂದ್ ನಟಿಸಿದ್ದರು.

    ಚಿತ್ರ ಸಾಹಿತಿ ಶ್ರೀರಂಗ ನಿಧನ

    ಚಿತ್ರ ಸಾಹಿತಿ ಶ್ರೀರಂಗ ನಿಧನ

    ಕನ್ನಡ ಸಿನಿಮಾರಂಗದ ಹಿರಿಯ ಚಿತ್ರ ಸಾಹಿತಿ ಶ್ರೀರಂಗ ಅವರು ಮೇ 10ರಂದು ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕನ್ನಡದ 1000 ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಗೀತ ರಚನೆ ಮಾಡಿದ್ದಾರೆ. 'ನಂಜುಂಡಿ ಕಲ್ಯಾಣ' ಸಿನಿಮಾದ 'ಒಳಗೆ ಸೇರಿದರೆ ಗುಂಡು' ಹಾಡಿನಿಂದ ಖ್ಯಾತಿ ಗಳಿಸಿದ ಶ್ರೀರಂಗ ಹಲವು ಎಂದೂ ಮರೆಯದ ಹಾಡುಗಳನ್ನು ಅವರು ನೀಡಿದ್ದಾರೆ. 'ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ', ಪುನೀತ್ ಅಭಿನಯದ 'ಅಪ್ಪು' ಸಿನಿಮಾದ 'ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ', ಅಭಿ ಸಿನಿಮಾದ 'ಸುಮ್‌ಸುಮ್ನೇ ಓಡಬೇಡ ಸುಂದರಿ' ಇನ್ನು ಹಲವು ಭಿನ್ನ ರೀತಿಯ ಹಾಡುಗಳನ್ನು ಶ್ರೀರಂಗ ರಚಿಸಿದ್ದರು.

    ಹಿರಿಯ ನಟಿ ಬಿ ಜಯಾ

    ಹಿರಿಯ ನಟಿ ಬಿ ಜಯಾ

    ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದ ಬಿ ಜಯಾ ಜೂನ್ 3 ರಂದು ನಿಧನರಾದರು. ಬಿ ಜಯಾ ಅವರು ಕಳೆದ ಆರು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಖ್ಯಾತಿ ಗಳಿಸಿದ್ದರು. 1958ರಲ್ಲಿ ಮೂಡಿ ಬಂದಿದ್ದ 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಬಿ ಜಯಾ ಚೊಚ್ಚಲ ಬಾರಿಗೆ ನಟಿಸಿದ್ದರು. ಅಲ್ಲಿಂದ ಡಾ ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಉದಯ್ ಕುಮಾರ್, ಕಲ್ಯಾಣ್ ಸೇರಿದಂತೆ ಇಂದಿನ ನಟರ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು.

    ನಿರ್ಮಾಪಕ ಕೆಸಿಎನ್ ಚಂದ್ರು ನಿಧನ

    ನಿರ್ಮಾಪಕ ಕೆಸಿಎನ್ ಚಂದ್ರು ನಿಧನ

    ಕನ್ನಡದ ಖ್ಯಾತ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂನ್ 13ರಂದು ನಿಧನ ಹೊಂದಿದರು. 69 ವರ್ಷದ ಕೆ.ಸಿ.ಎನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹುಲಿಯ ಹಾಲಿನ ಮೇವು, ಭಕ್ತ ಜ್ಞಾನದೇವ, ಧರ್ಮ ಯುದ್ಧ, ತಾಯಿ ಸೇರಿದಂತೆ ಅನೇಕ ಅದ್ಭುತ ಸಿನಿಮಾಗಳನ್ನು ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ ಕೆಸಿಎನ್ ಬ್ಯಾನರ್ ಮೂಲಕ ತಮಿಳು, ತೆಲುಗು ಮತ್ತು ಬಂಗಾಳಿ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಇವರದ್ದಾಗಿತ್ತು. ಕೆಸಿಎನ್ ಚಂದ್ರ ಅಗಲಿಕೆಗೆ ಆಗಿನ ಸಿಎಂ ಬಿಎಸ್‌ವೈ ಸಂತಾಪ ವ್ಯಕ್ತಪಡಿಸಿದ್ದರು.

    ಅಪಘಾತದಿಂದಾಗಿ ಸಂಚಾರಿ ವಿಜಯ್ ನಿಧನ

    ಅಪಘಾತದಿಂದಾಗಿ ಸಂಚಾರಿ ವಿಜಯ್ ನಿಧನ

    ಕನ್ನಡದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಜೂನ್ 15 ರಂದು ನಿಧನರಾದರು. ಜೂನ್ 13 ರಂದು ರಾತ್ರಿ ಸಂಚಾರಿ ವಿಜಯ್ ಅವರು ಸಂಚರಿಸುತ್ತಿದ್ದ ಬೈಕ್ ಅಪಘಾತಕ್ಕೆ ಈಡಾಗಿತ್ತು. ಅವರಿಗೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಮೆದುಳು ನಿಷ್ಕ್ರಿಯವಾದ ಕಾರಣ ಅವರನ್ನು ಮೃತರೆಂದು ಘೋಷಿಸಲಾಯ್ತು. ರಾಷ್ಟ್ರಪ್ರಶಸ್ತಿ ವಿಜೇತ ನಟರಾದ ಸಂಚಾರಿ ವಿಜಯ್ ಅಗಲಿಕೆಗೆ ಚಿತ್ರರಂಗ ಸೇರಿದಂತೆ ನಾಡಿನ ಹಲವು ಗಣ್ಯರು ಸಂತಾಪ ಸೂಚಿಸಿದರು.

    ಅಭಿನಯ ಶಾರದೆ ಜಯಂತಿ ನಿಧನ

    ಅಭಿನಯ ಶಾರದೆ ಜಯಂತಿ ನಿಧನ

    ಜುಲೈ 26 ರಂದು ಕನ್ನಡದ ಜನಪ್ರಿಯ ನಟಿ, ಅಭಿನಯ ಶಾರದೆ ಬಿರುದಾಂಕಿತೆ ಜಯಂತಿ ನಿಧನ ಹೊಂದಿದರು. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜಯಂತಿ ಕನ್ನಡ ಸೇರಿದಂತೆ 6 ಭಾಷೆಯಗಳಲ್ಲಿ ನಟಿಸಿದ್ದರು. ಡಾ.ರಾಜ್‌ಕುಮಾರ್ ಅವರೊಟ್ಟಿಗೆ ಆತ್ಮೀಯ ಸ್ನೇಹ ಹೊಂದಿದ್ದ ಜಯಂತಿ ನಿಧನಕ್ಕೆ ಇಡೀಯ ಚಿತ್ರರಂಗ ಸಂತಾಪ ಸೂಚಿಸಿತು. ಸರ್ಕಾರಿ ಗೌರವದೊಂದಿಗೆ ಜಯಂತಿಯವರ ಅಂತ್ಯಸಂಸ್ಕಾರ ನೆರವೇರಿತು.

    ಅವಘಡದಲ್ಲಿ ನಿಧನ ಹೊಂದಿದ ವಿವೇಕ್

    ಅವಘಡದಲ್ಲಿ ನಿಧನ ಹೊಂದಿದ ವಿವೇಕ್

    ಆಗಸ್ಟ್ 09ರಂದು ಚಿತ್ರರಂಗದಲ್ಲಿ ಅವಘಡವೊಂದು ಸಂಘಟಿಸಿತು. ಅಜಯ್ ರಾವ್, ರಚಿತಾ ರಾಮ್ ನಟಿಸುತ್ತಿದ್ದ 'ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಸಾಹಸ ಕಲಾವಿದ ವಿವೇಕ್ ಮೃತಪಟ್ಟರು. ಈ ಘಟನೆ ಸಂಬಂಧ ಸಿನಿಮಾದ ನಿರ್ದೇಶಕ, ಫೈಟ್ ಮಾಸ್ಟರ್ ಹಾಗೂ ಕ್ರೇನ್ ಚಾಲಕನನ್ನು ರಾಮನಗರ ಪೊಲೀಸರು ಬಂಧಿಸಿದರು. ನಿರ್ಮಾಪಕ ಗುರು ದೇಶಪಾಂಡೆ ವಿರುದ್ಧವೂ ಪ್ರಕರಣ ದಾಖಲಾಯ್ತು ಆದರೆ ಅವರು ತಲೆ ಮರೆಸಿಕೊಂಡರು. ಕೆಲವು ದಿನಗಳ ಬಳಿಕ ಜಾಮೀನಿನ ಮೇಲೆ ಬಂಧಿತರ ಬಿಡುಗಡೆ ಆಯ್ತು. ಗುರು ದೇಶಪಾಂಡೆ, ಮೃತ ವಿವೇಕ್ ಕುಟುಂಬಕ್ಕೆ ಹಣ ಸಹಾಯ ಮಾಡಿದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಿ.ವಿಜಯ್ ಕುಮಾರ್

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಿ.ವಿಜಯ್ ಕುಮಾರ್

    ಚಂದನವನದ ಹಿರಿಯ ನಿರ್ಮಾಪಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಿ.ವಿಜಯ್ ಕುಮಾರ್ ಆಗಸ್ಟ್ 16ರಂದು ಹೃದಯಾಘಾತದಿಂದ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಕನ್ನಡದ ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು. ವಿಷ್ಣುವರ್ಧನ್‌ಗೆ ಆಪ್ತರಾಗಿದ್ದ ವಿಜಯ್ ಕುಮಾರ್ ಸೂಪರ್ ಹಿಟ್ ಸಿನಿಮಾ 'ಸಿಂಹಾದ್ರಿಯ ಸಿಂಹ', 'ಲಯನ್ ಜಗಪತಿರಾವ್', 'ಸ್ವಚ್ಛ ಭಾರತ' ಸಿನಿಮಾ ಸೇರಿ ಇನ್ನೂ ಕೆಲವು ಸಿನಿಮಾ ನಿರ್ಮಾಣ ಮಾಡಿದ್ದರು.

    ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನ

    ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನ

    ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ಡೈಲಾಗ್ ರೈಟರ್ ಗುರು ಕಶ್ಯಪ್ ಸೆಪ್ಟಂಬರ್ 13 ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 45 ವರ್ಷ ವಯಸ್ಸಾಗಿತ್ತು. ಗಣೇಶ್​ಅಭಿನಯದ 'ಸುಂದರಾಂಗ ಜಾಣ', ರಮೇಶ್​ಅರವಿಂದ್​ನಟನೆಯ 'ಪುಷ್ಪಕ ವಿಮಾನ', ಪ್ರಿಯಾಂಕಾ ಉಪೇಂದ್ರ ಅಭಿನಯದ 'ದೇವಕಿ' ಮುಂತಾದ ಸಿನಿಮಾಗಳಿಗೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದರು.

    ನಟಿ ಸವಿ ಮಾದಪ್ಪ ಆತ್ಮಹತ್ಯೆ

    ನಟಿ ಸವಿ ಮಾದಪ್ಪ ಆತ್ಮಹತ್ಯೆ

    ಸೆಪ್ಟೆಂಬರ್ 30 ರಂದು ಕನ್ನಡದ ಕಿರುತೆರೆ ನಟಿ ಸವಿ ಮಾದಪ್ಪ ಆತ್ಮಹತ್ಯೆಗೆ ಶರಣಾದರು. ಮೂಲತಃ ಕೊಡಗಿನರಾಗಿದ್ದ ಸವಿ ಮಾದಪ್ಪ 'ಚೌಕಟ್ಟು', 'ಫನ್' ಹೆಸರಿನ ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲಿಯೂ ನಟಿಸಿದ್ದರು. ಕುಂಬಳಗೋಡು ಸಮೀಪ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸವಿದ್ದರು. ಗೆಳೆಯ ತಿಂಡಿ ತರಲೆಂದು ಹೊರಗೆ ಹೋದಾಗ. ಆತ್ಮಹತ್ಯೆ ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಸವಿ ಮಾದಪ್ಪ ತಂದೆ ನಟಿಯ ಬಾಯ್‌ಫ್ರೆಂಡ್ ಹಾಗೂ ಮ್ಯಾನೇಜರ್ ವಿರುದ್ಧ ದೂರು ನೀಡಿದ್ದರು.

    ಹಿರಿಯ ನಟ ಸತ್ಯಜಿತ್ ನಿಧನ

    ಹಿರಿಯ ನಟ ಸತ್ಯಜಿತ್ ನಿಧನ

    ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಅಕ್ಟೋಬರ್ 10 ರಂದು ನಿಧನ ಹೊಂದಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತ್ಯಜಿತ್ ಸುಮಾರು 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವೇ ಅಲ್ಲದೆ ಹಿಂದಿ ಸಿನಿಮಾಗಳಲ್ಲಿಯೂ ಸತ್ಯಜಿತ್ ನಟಿಸಿದ್ದರು. 'ಆಪ್ತಮಿತ್ರ', 'ಅಪ್ಪು' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರ ನಟನೆ ನೆನಪುಳಿಯುವಂತಹದ್ದು.

    ಹಿರಿಯ ನಟ ಗೋವಿಂದ ರಾವ್ ನಿಧನ

    ಹಿರಿಯ ನಟ ಗೋವಿಂದ ರಾವ್ ನಿಧನ

    ಕನ್ನಡ ಚಿತ್ರರಂಗ, ಕಿರುತೆರೆಯ ಹಿರಿಯ ನಟ ಫ್ರೊ.ಜಿ.ಕೆ ಗೋವಿಂದ ರಾವ್ ಅಕ್ಟೋಬರ್ 15 ರಂದು ನಿಧನ ಹೊಂದಿದರು.. ಅವರಿಗೆ 84 ವರ್ಷ ವಯಸ್ಸಾಗಿತ್ತು. ಚಿಂತಕರು, ಲೇಖಕರೂ, ಪ್ರಾಧ್ಯಾಪಕರೂ ಆಗಿದ್ದ ಗೋವಿಂದ ರಾವ್ ರಂಗಭೂಮಿ, ಸಿನಿಮಾ, ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದರು. ಟಿ.ಎನ್.ಸೀತಾರಾಮ್ ನಿರ್ದೇಶನದ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ಗೋವಿಂದ ರಾವ್, ಶಂಕರ್ ನಾಗ್ ನಿರ್ದೇಶಿಸಿದ್ದ 'ಮಾಲ್ಗುಡಿ ಡೇಸ್' ನಲ್ಲಿಯೂ ನಟಿಸಿದ್ದರು. ಜೊತೆಗೆ ಹಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದರು. ಅವರ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದರು.

    ನಟ ಶಂಕರ್ ರಾವ್ ನಿಧನ

    ನಟ ಶಂಕರ್ ರಾವ್ ನಿಧನ

    'ಪಾಪಾ ಪಾಂಡು' ಸೇರಿ ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದ ಶಂಕರ್ ರಾವ್ ಅಕ್ಟೋಬರ್ 18 ರಂದು ನಿಧನ ಹೊಂದಿದರು. 'ಸಿಲ್ಲಿ-ಲಲ್ಲಿ', 'ಪರ್ವ' ಧಾರಾವಾಹಿಗಳಲ್ಲಿ ನಟಿಸಿದ್ದ ಅವರು 'ಬಿಸಿ-ಬಿಸಿ', 'ಮಿಲನ', 'ನೀರ್ ದೋಸೆ', 'ಸಿದ್ಲಿಂಗು' ಸಿನಿಮಾಗಳಲ್ಲಿಯೂ ನಟಿಸಿದ್ದರು.

    ಪುನೀತ್ ರಾಜ್‌ಕುಮಾರ್ ನಿಧನ

    ಪುನೀತ್ ರಾಜ್‌ಕುಮಾರ್ ನಿಧನ

    ಅಕ್ಟೋಬರ್ 29 ರಂದು ಚಿತ್ರರಂಗಕ್ಕೆ ಮರೆಯಲಾಗದ ಆಘಾತ ಬಂದೆರಗತಿ. ನಟ ಪುನೀತ್ ರಾಜ್‌ಕುಮಾರ್ ಹಠಾತ್ತನೆ ಹೃದಯಾಘಾತದಿಂದ ಸಾವಿಗೀಡಾದರು. ಪುನೀತ್ ಸಾವು ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿತು. ಲಕ್ಷಾಂತರ ಮಂದಿ ಅಪ್ಪು ಅಂತಿಮ ದರ್ಶನದಲ್ಲಿ, ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದರು. ಪುನೀತ್ ಅಗಲಿಕೆಯ ದುಃಖ ತಾಳಲಾರದೆ ಹಲವು ಅಭಿಮಾನಿಗಳು ಪ್ರಾಣ ಬಿಟ್ಟರು. ಲಕ್ಷಾಂತರ ಮಂದಿ ಅಪ್ಪುವಿನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು.

    ಹಿರಿಯ ನಟ ಶಿವರಾಂ ನಿಧನ

    ಹಿರಿಯ ನಟ ಶಿವರಾಂ ನಿಧನ

    ಡಿಸೆಂಬರ್ 04 ರಂದು ಕನ್ನಡದ ಹಿರಿಯ ನಟ ಶಿವರಾಂ ನಿಧನ ಹೊಂದಿದರು. ಅಯ್ಯಪ್ಪ ಸ್ವಾಮಿ ಪೂಜೆ ಮಾಡಲು ಮನೆಗೆ ತೆರಳಿದ್ದ ಅವರು ಆಯ ತಪ್ಪಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಅವರಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ಶಿವರಾಂ ಅವರ ವಯಸ್ಸು ಪರಿಗಣಿಸಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಲಿಲ್ಲ. ಕೊನೆಗೆ ಅವರು ಡಿಸೆಂಬರ್ 04 ರಂದು ಕೊನೆ ಉಸಿರೆಳೆದರು. ಶಿವರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಶಿವರಾಂ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

    English summary
    Here is the list of actors, directors, producers who left us this year. Many people took last breath this year.
    Wednesday, December 15, 2021, 9:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X