2022ರ ನೀರೀಕ್ಷೆಯ ಚಿತ್ರಗಳ ಪಟ್ಟಿ: RRR, KGFಗೆ ಅಗ್ರಸ್ಥಾನ!
2021 ಇನ್ನು ಹಳೆ ವರ್ಷ, 2022 ಹೊಸ ವರ್ಷ. ಹೊಸ ವರ್ಷ ಬಂತು ಅಂದರೆ ಸಾಕು ಎಲ್ಲರೂ ಸಾಕಷ್ಟು ಹೊಸ ಯೋಜನೆಗಳನ್ನು ಹಾಕಿ ಕೊಳ್ಳುತ್ತಾರೆ. ಹೊಸ ಬದಲಾವಣೆಗೆ ಹಾತೊರೆಯುತ್ತಾರೆ. ಇದು ಚಿತ್ರರಂಗಕ್ಕೂ ಅನ್ವಯಿಸುತ್ತದೆ. 2022ರಲ್ಲಿ ಕೂಡ ಸಾಕಷ್ಟು ಚಿತ್ರಗಳು ಹೊಸ ರಿಲೀಸ್‌ಗೆ ರೆಡಿ ಆಗಿವೆ.
2021 ಚಿತ್ರರಂಗಕ್ಕೆ ಖುಷಿ ಕೊಟ್ಟಿಲ್ಲ. ಕೊರೊನಾ ಕಾರಣಕ್ಕೆ ಅಂದು ಕೊಂಡ ಹಾಗೆ ಸಿನಿಮಾಗಳು ತೆರೆಗೆ ಬಂದಿಲ್ಲ. ಹಾಗಾಗಿ ಅತ್ಯಂತ ನಿರೀಕ್ಷೆ ಮತ್ತು ಸಂಭ್ರಮದಿಂದ 2022ನ್ನು ಚಿತ್ರರಂಗ ಬರ ಮಾಡಿಕೊಳ್ಳುತ್ತಿದೆ. 2022ರಲ್ಲಿ ಸಾಕಷ್ಟು ನಿರೀಕ್ಷಿತ ಚಿತ್ರಗಳು ಇವೆ. ಸಿನಿಮಾ ಪ್ರಿಯರಿಗೆ 2022 ಸಿನಿಮಾ ಹಬ್ಬವೇ ಆಗಿರಲಿದೆ.
ನಿರೀಕ್ಷಿತ ಚಿತ್ರಗಳ ಪಟ್ಟಿ ಬಿಡುಗಡೆ ಆಗಿದೆ. ಅದರಲ್ಲಿ ಕನ್ನಡದ ಕೆಜಿಎಫ್, RRR, ರಾಧೆ ಶ್ಯಾಮ್, ಸೇರಿದಂತೆ ಹಲವು ಚಿತ್ರಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಎಲ್ಲವೂ ಅಂದು ಕೊಂಡಂತೆ ಆದರೆ 2022 ಚಿತ್ರರಂಗಕ್ಕೆ ವರವಾಗಲಿದೆ.

2022ನ್ನು ಸ್ವಾಗತಿಸುತ್ತಿದೆ RRR!
RRR ಚಿತ್ರ ಹೊಸ ವರ್ಷವನ್ನು ಬರ ಮಾಡಿ ಕೊಳ್ಳುತ್ತಿದೆ. ಜನವರಿ 7ರಂದು ಆರ್‌ಆರ್‌ಆರ್ ತೆರೆ ಕಾಣುತ್ತಿದೆ. ಈ ಮೂಲಕ ಹೊಸ ವರ್ಷವ ಹರ್ಷವನ್ನು ಹೆಚ್ಚಿಸುತ್ತಿದೆ. ಆರ್‌ಆರ್‌ಆರ್ ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡದಲ್ಲಿ ತೆರೆಕಾಣುತ್ತಿದೆ. ರಾಮ್ ಚರಣ್ ತೇಜ, ಜೂನಿಯರ್ ಎನ್ ಟಿ ಆರ್, ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ಇರುವ ಈ ಚಿತ್ರಕ್ಕೆ ಎಸ್, ಎಸ್ ರಾಜಮೌಳಿ ನಿರ್ದಶನ ಇದೆ.
RRR ಬಳಿಕ ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರ ರಿಲೀಸ್ ಆಗಲಿದೆ. ರಾಧೆ ಶ್ಯಾಮ್ ಚಿತ್ರ ಸಾಕಷ್ಟು ನಿರೀಕ್ಷೆ ಇರುವ ಚಿತ್ರ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಕಾಂಬಿನೇಷನ್‌ನಲ್ಲಿ ಚಿತ್ರ ಮೂಡಿ ಬಂದಿದೆ. ಜನವರಿ 14ಕ್ಕೆ ರಾಧೆ ಶ್ಯಾಮ್ ಚಿತ್ರದ ರಿಲೀಸ್ ದಿನಾಂಕ ನಿಗಧಿ ಆಗಿದೆ.

2022ರ ಏಪ್ರಿಲ್‌ನಲ್ಲಿ kgf 2 ಚಿತ್ರದ ಅಬ್ಬರ!
2022ರ ಏಪ್ರಿಲ್ ತಿಂಗಳಲ್ಲಿ ಕೆಜಿಎಫ್ ಅಬ್ಬರಿಸಲಿದೆ. ಕೆಜಿಎಫ್ 2 ಭಾರತೀಯ ಚಿತ್ರರಂಗದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ನಿರೀಕ್ಷೆಯೊಂದಿಗೆ ತೆರೆಗೆ ಬರ್ತಿರುವ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಕೆಜಿಎಫ್2 ಕೂಡ ಒಂದಾಗಿದೆ. ಯಶ್, ಶ್ರೀ ನಿಧಿ ಶೆಟ್ಟಿ ಅಭಿನಯದ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿದೆ. ಕೆಜಿಎಫ್ ಚಿತ್ರತಂಡ ಸದ್ಯ ಬಾಕಿ ಇರುವ ಚಿತ್ರದ ಕೆಲಸಗಳನ್ನು ಮಾಡಿ ಮುಗಿಸುತ್ತಿದೆ. ರಿಲೀಸ್ ಹತ್ತಿರ ಆಗುತ್ತಿದ್ದಂತೆ. ಚಿತ್ರದ ಪ್ರಚಾರ ಕಾರ್ಯಗಳು ಆರಂಭ ಆಗಲಿವೆ. ಏಪ್ರಿಲ್ 14ಕ್ಕೆ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ.

2022ರಲ್ಲಿ ಪ್ರಭಾಸ ಚಿತ್ರಗಳದ್ದೇ ಮೇಲುಗೈ!
ಇನ್ನು ನಟ ಪ್ರಭಾಸ್ ಚಿತ್ರಗಳು ಈ ಪಟ್ಟಿಯಲ್ಲಿ ಮೇಲುಗೈ ಸಾಧಿಸಿವೆ. ಪ್ರಭಾಸ್ ಅಭಿನಯದ ಮೂರು ಚಿತ್ರಗಳು 2022ರ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿವೆ. ರಾಧೆ ಶ್ಯಾಮ್ ಬಳಿಕ ಸಲಾರ್ ಮತ್ತು ಆದಿ ಪುರುಷ್ ಚಿತ್ರಗಳು ಕೂಡ ಇವೆ. ಈಗಾಗಲೇ 'ಸಲಾರ್' ಚಿತ್ರದ ರಿಲೀಸ್ ದಿನಾಂಕ ಕೂಡ ನಿಗದಿ ಆಗಿದೆ. ಏಪ್ರಿಲ್ 14ಕ್ಕೆ ಕೆಜಿಎಫ್2 ಜೊತೆಗೆ ತೆರೆಗೆ ಬರಲಿದೆ ಸಲಾರ್. ಆದರೆ ಈ ರಿಲೀಸ್ ದಿನಾಂಕ ಬದಲಾಗುವ ಸಾಧ್ಯತೆ ಕೂಡ ಇದೆ. ಇನ್ನು ಆದಿ ಪುರುಷ್ ಚಿತ್ರದ ರಿಲೀಸ್ ದಿನಾಂಕವನ್ನು ಆಗಸ್ಟ್ 11ಕ್ಕೆ ನಿಗದಿ ಮಾಡಲಾಗಿದೆ.

2022 ಅಂತ್ಯಕ್ಕೆ ಲೈಗರ್, ಇಂಡಿಯನ್2, ಪೊನ್ನಿಯಿನ್ ಸೆಲ್ವನ್!
ಇನ್ನು 2022ರಲ್ಲಿ ತೆರೆಗೆ ಬರುವ ಚಿತ್ರಗಳ ಸಾಲಿನಲ್ಲಿ ಲೈಗರ್, ಇಂಡಿಯನ್2, ಪೊನ್ನಿಯಿನ್ ಸೆಲ್ವನ್ ಚಿತ್ರಗಳು ಇವೆ. ಆಗಸ್ಟ್ 25ಕ್ಕೆ ಲೈಗರ್ ಚಿತ್ರದ ರಿಲೀಸ್ ದಿನಾಂಕ ನಿಗದಿ ಆಗಿದೆ. ಇನ್ನು ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್, ಕಮಲ್ ಹಾಸನ್ ಅವರ ಇಂಡಿಯನ್ 2 ಕೂಡಾ ರಿಲೀಸ್ ಆಗುವ ಸಾಧ್ಯತೆ ಇದೆ. ಇವಿಷ್ಟು 2022ರಲ್ಲಿ ರಿಲೀಸ್ ಆಗಲಿರುವ ಬಹು ನಿರೀಕ್ಷೆಯ ಸಿನಿಮಾಗಳು.


Click it and Unblock the Notifications











