ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ದ ಪ್ಯಾರಿಸ್ ಪ್ರಣಯ ಚಿತ್ರಕ್ಕೆ 22ರ ಹರೆಯ, ಚಿತ್ರ ಬರೆದ ದಾಖಲೆಗಳ ಪಟ್ಟಿ ಇಲ್ಲಿದೆ..!
ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ಮಾಡುತ್ತಲೇ ಚಿತ್ರ ರಸಿಕರನ್ನು ಸೆಳೆದವರು ನಾಗತಿಹಳ್ಳಿ ಚಂದ್ರಶೇಖರ್. ಪ್ರೇಮ ಕಾವ್ಯಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರತಿಬಿಂಬಿಸುವ ನಾಗತಿಹಳ್ಳಿ ಚಂದ್ರಶೇಖರ್ ಇಲ್ಲಿಯವರೆಗೆ ಅನೇಕ ಪ್ರೇಮ ಕಥೆಗಳನ್ನು ಬೆಳ್ಳಿ ತೆರೆಯ ಮೂಲಕ ಹೇಳಿದ್ದಾರೆ.ತಮ್ಮ ಪ್ರಯತ್ನಗಳಲ್ಲಿ ಅನೇಕ ಸಲ ಗೆದ್ದಿದ್ದಾರೆ. ಕೆಲವೊಮ್ಮೆ ಸೋಲನ್ನೂ ಕೂಡ ಕಂಡಿದ್ದಾರೆ. ಇಂಥಾ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರಗಳಲ್ಲಿ ಪ್ಯಾರಿಸ್ ಪ್ರಣಯ ಕೂಡ ಒಂದು.
ರಘು ಮುಖರ್ಜಿ, ಮಿನಲ್ ಪಾಟಿಲ್, ರಾಜೇಶ್, ಶರತ್ ಲೋಹಿತಾಶ್ವ, ತಾರಾ, ಸುಮಲತಾ, ಸುಧಾ ಬೆಳವಾಡಿ ಅಭಿನಯಿಸಿದ್ದ ಈ ಚಿತ್ರ ಆ ಕಾಲಕ್ಕೆ ಹಲವು ಮೊದಲುಗಳಿಗೆ ಸಾಕ್ಷಿಯಾದ ಚಿತ್ರವೂ ಹೌದು. ಇಂತಹ ಪ್ಯಾರಿಸ್ ಪ್ರಣಯ ಚಿತ್ರ ಮೊನ್ನೆ ಏಪ್ರಿಲ್ 18ರಂದು 22 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆ ಚಿತ್ರದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರ ಮಾಡಿದ್ದ ದಾಖಲೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಚಿತ್ರದ ಕುರಿತು ಬರೆದುಕೊಂಡಿದ್ದಾರೆ. ಅವರ ಬರಹ ಈ ಕೆಳಗಿನಂತೆ ಇದೆ.

ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಾಣಲಿಲ್ಲ, ಆದರೆ..
ಹಲವು ಗದ್ದಲದಲ್ಲಿ ಮುಳುಗಿ ಮರೆತಿದ್ದೆ. ಇಂದು ಏಪ್ರಿಲ್ 18 ! ನನ್ನ ಹಲವು ಚಿತ್ರಗಳು ಬಿಡುಗಡೆಯಾದದ್ದು ಇದೇ ತಿಂಗಳಿನಲ್ಲಿ. 22ವರ್ಷದ ಹಿಂದೆ ಬಿಡುಗಡೆಯಾದ ಈ ಚಿತ್ರ ಕಲ್ಪನಾ ಚಿತ್ರಮಂದಿರದಲ್ಲಿ 50 ದಿನಗಳನ್ನು ತುಂಬಿಸಿತ್ತು.ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಕಾಣಲಿಲ್ಲ. ಆದರೆ ಹಲವು ಪ್ರಯೋಗಗಳಿಂದ ಗಮನ ಸೆಳೆಯಿತು.
1) ಫಿಲಂ ಫೇರ್ ಮತ್ತು ರಾಜ್ಯಪ್ರಶಸ್ತಿ.
2) ಪಾಶ್ಚಾತ್ಯ-ಪೌರ್ವಾತ್ಯ ಸಂಗೀತ ಸಂಗಮ.
3)ಪ್ರಥಮ ಪರಿಚಯದ ಸಂಗೀತ ನಿರ್ದೇಶಕ 'ಪ್ರಯೋಗ್'ಗೆ ರಾಜ್ಯ ಪ್ರಶಸ್ತಿ.
4)ಶ್ರೇಯಾ ಘೋಶಲ್ "ಕೃಷ್ಣಾ ನೀ ಬೇಗನೆ ಬಾರೋ" ಹಾಡಿನ ಮೂಲಕ ಕನ್ನಡಕ್ಕೆ ಪ್ರವೇಶ.
5) ರಘು ಮುಖರ್ಜಿ, ಮಿನಲ್ ಪಾಟೀಲ್ ಪ್ರಥಮ ರಂಗಪ್ರವೇಶ.
6)ಫ್ರಾನ್ಸ್,ಇಟಲಿ,ಸ್ಪೈನ್ಗಳಲ್ಲಿ ಪ್ರಥಮ ಬಾರಿಗೆ ಚಿತ್ರೀಕರಿಸಿದ ಕನ್ನಡ ಸಿನಿಮಾ.
7)ನಿರ್ಮಿಸಿದ್ದು ಅಮೆರಿಕಾ ನಿವಾಸಿಗಳಾದ ತುಮಕೂರು ದಯಾನಂದ್, ಅಮರನಾಥ್ ಗೌಡ,ಹರನಾಥ್ ಪೊಲಿಚೆರ್ಲ ಈ ತ್ರಿವಳಿ ಗೆಳೆಯರು.
-ಕಲಾವಿದ,ತಂತ್ರಜ್ಞರೊಂದಿಗೆ ನನ್ನ ಪ್ರೀತಿಯ ಪ್ರೇಕ್ಷಕರನ್ನು ನೆನೆಯುತ್ತಿದ್ದೇನೆ.
ಹೀಗೆ ತಮ್ಮ ಚಿತ್ರದ ಕುರಿತು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಂದ್ಹಾಗೇ ಪ್ಯಾರಿಸ್ ಪ್ರಣಯ ರಘು ಮುಖರ್ಜಿ ಅಭಿನಯದ ಚೊಚ್ಚಲ ಸಿನಿಮಾ. ಆಗಷ್ಟೇ ಮಿಸ್ಟರ್ ಇಂಟರ್ ನ್ಯಾಷನಲ್' ಟೈಟಲ್ ಗೆದ್ದ ಮೇಲೆ 'ಪ್ಯಾರಿಸ್ ಪ್ರಣಯ' ಚಿತ್ರಕ್ಕಾಗಿ ರಘು ಮುಖರ್ಜಿ ರವರಿಗೆ ನಾಗತಿಹಳ್ಳಿ ಚಂದ್ರಶೇಖರ್ ಆಫರ್ ಮಾಡಿದ್ದರು.
ಆದರೆ, ಫಿಟ್ ನೆಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ರಘು ಮುಖರ್ಜಿ ರವರಿಗೆ ಚಿತ್ರರಂಗದ ಗಂಧ ಗಾಳಿ ಗೊತ್ತಿರಲಿಲ್ಲ. ಅದರಲ್ಲೂ ನಾಗತಿಹಳ್ಳಿ ಚಂದ್ರಶೇಖರ್ ಅಂದ್ರೆ ಯಾರೂ ಅನ್ನೋದೇ ಅವರಿಗೆ ಮೊದಲು ಗೊತ್ತಿರಲಿಲ್ಲ.
ಹೀಗಾಗಿ ನಾಗತಿಹಳ್ಳಿ ಚಂದ್ರಶೇಖರ್ ಬಗ್ಗೆ ಗೊತ್ತಿಲ್ಲದ ಕಾರಣ ಹಲವು ದಿನ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ರಘು ಮುಖರ್ಜಿ ಪ್ರತಿಕ್ರಿಯೆ ನೀಡಿರಲಿಲ್ಲ. ಕೊನೆಗೆ ನಾಗತಿಹಳ್ಳಿ ಚಂದ್ರಶೇಖರ್ ರವರ 'ಅಮೇರಿಕ..ಅಮೇರಿಕ' ಹಾಗೂ 'ನನ್ನ ಪ್ರೀತಿಯ ಹುಡುಗಿ' ಚಿತ್ರಗಳ ಬಗ್ಗೆ ತಿಳಿದುಕೊಂಡ ಮೇಲೆ ರಘು ಅವರ ಜೊತೆ ಮಾತನಾಡಿದ್ದರು.
ಈ ಕುರಿತು ಹಿಂದೊಮ್ಮೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗಿಯಾದಾಗ ಮಾತನಾಡಿದ್ದ ರಘು ಮುಖರ್ಜಿ ''ಸಿನಿಮಾ ಬಗ್ಗೆ ನನಗೆ ಇಂಟ್ರೆಸ್ಟ್ ಇರಲಿಲ್ಲ. ನಾಗತಿಹಳ್ಳಿ ಚಂದ್ರಶೇಖರ್ ಯಾರು ಅನ್ನೋದೇ ಗೊತ್ತಿರಲಿಲ್ಲ. ಅವರು ಫೋನ್ ಮಾಡಿ ಸುಮಾರು ದಿನ ಆಗಿದ್ದರೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆಮೇಲೆ ನಾಗತಿಹಳ್ಳಿ ಚಂದ್ರಶೇಖರ್ ರವರ ಬಗ್ಗೆ ಗೊತ್ತಾಯ್ತು. ನಾನು 'ಪ್ಯಾರಿಸ್ ಪ್ರಣಯ' ಸಿನಿಮಾ ಮಾಡಿದ್ದು ಒಂದೇ ಕಾರಣಕ್ಕಾಗಿ... ಯೂರೋಪ್ ಗೆ ಹೋಗುವ ಅವಕಾಶ ಸಿಗುತ್ತೆ. ಒಂದು ತಿಂಗಳು ಅಲ್ಲಿ ಇರಬಹುದು ಅಂತ ಒಪ್ಪಿಕೊಂಡೆ'' ಎಂದಿದ್ದರು.


Click it and Unblock the Notifications











