90ರ ದಶಕದ ದುಬಾರಿ ಕನಸು ಅಮೆರಿಕಾ ಅಮೆರಿಕಾಗೆ 28ರ ಹರೆಯ, ತಮ್ಮ ಮನೆಯಲ್ಲಿ ಆಡಿಯೋ ಬಿಡುಗಡೆ ಮಾಡಿದ್ದರು ಡಾ.ರಾಜ್ !
ಕಥೆಗಾರರಾಗಿ, ಪಾಠ ಹೇಳುವ ಮೇಷ್ಟ್ರಾಗಿ, ಆ ನಂತರ ನಿರ್ದೇಶಕರಾಗಿ ಹೆಸರು ಮಾಡಿದವರು ನಾಗತಿಹಳ್ಳಿ ಚಂದ್ರಶೇಖರ್. ಉಂಡು ಹೋದ ಕೊಂಡು ಹೋದ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರಯಾಣ ಶುರು ಮಾಡಿದ ನಾಗತಿಹಳ್ಳಿ ಚಂದ್ರಶೇಖರ್ ಆ ನಂತರ ಬಾ ನಲ್ಲೆ ಮಧು ಚಂದ್ರಕೆ, ಕೊಟ್ರೇಶಿ ಕನಸು, ಹೂಮಳೆ ಚಿತ್ರಗಳನ್ನು ಮಾಡಿದರು. ಆ ನಂತರ
ಚಿತ್ರಮಂದಿರದಲ್ಲಿಯೇ ಕುಳಿತು ಅಮೆರಿಕಾ ನೋಡುವ ಅವಕಾಶವನ್ನು ಕನ್ನಡಿಗರಿಗೆ ನಾಗತಿಹಳ್ಳಿ ಚಂದ್ರಶೇಖರ್ ನೀಡಿದ್ದರು. ಆ ಕಾಲಕ್ಕೆ ಹಲವು ಮೊದಲುಗಳಿಗೆ ಸಾಕ್ಷಿಯಾದ ಚಿತ್ರ ಅಮೆರಿಕಾ ಅಮೆರಿಕಾ. ಇಂದು ಚಿತ್ರವೊಂದು ಚಿತ್ರಮಂದಿರದಲ್ಲಿ ಒಂದು ವಾರ ಪ್ರದರ್ಶನ ಕಾಣುವುದು ಕಷ್ಟವೆನ್ನುವ ವಾತಾವರಣ ಇದೆ. ಆದರೆ ಆ ಕಾಲದಲ್ಲಿ ಅಮೆರಿಕಾ ಅಮೆರಿಕಾ ಒಂದು ವರ್ಷ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಅಮೆರಿಕಾದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿತ್ತು.

ಇಂಥಾ ಅಮೆರಿಕಾ ಅಮೆರಿಕಾ ಚಿತ್ರಕ್ಕೆ ಈಗ 28ರ ಹರೆಯ. ಈ ಹಿನ್ನೆಲೆ ನಾಗತಿಹಳ್ಳಿ ಚಂದ್ರಶೇಖರ್ ನೆನಪಿನ ಅಂಗಳಕ್ಕೆ ಜಾರಿದ್ದಾರೆ. ಚಿತ್ರದ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಲೇಖನ ಇಲ್ಲಿದೆ.
ಕೇಳಿದ್ದೆಲ್ಲ ಕೊಟ್ಟ ಕಲ್ಪವೃಕ್ಷ, ಕಾಮಧೇನು
ಇದು ಶುಭದಿನ. ನನ್ನ ಪಾಲಿಗೆ ಧನ್ಯತೆ, ಸಾರ್ಥಕತೆ ಮತ್ತು ಕೃತಜ್ಞತೆಗಳ ಸಂತೃಪ್ತಿಯ ದಿನ.11 ಏಪ್ರಿಲ್ 1997ರ ಮುಂಜಾನೆ ಭಯ, ಹಿಂಜರಿಕೆಗಳಿಂದ ಕನ್ನಡಿಗರೆದುರು ಮಂಡಿಸಿದ ಈ ನನ್ನ ದೃಶ್ಯಕಾವ್ಯವನ್ನು ಮಹಾಜನತೆ ಕಣ್ಣಿಗೊತ್ತಿಕೊಂಡು ಆನಂದಿಸಿದರು. ಸತತ ಒಂದು ವರ್ಷ ದಿನವಹಿ ನಾಲ್ಕು ಪ್ರದರ್ಶನಗಳು. ವಿಶ್ವಾದ್ಯಂತ ಮೊದಲ ಅದ್ದೂರಿ ಪ್ರದರ್ಶನ ಕಂಡ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ; ಬಹುಭಾಷಾ ಅವತರಣಿಕೆಗಳು; ರಾಜ್ಯ, ರಾಷ್ಟ್ರಪ್ರಶಸ್ತಿಗಳ ಗೌರವ. ಗೆಳೆಯ ರಮೇಶ್ ಅರವಿಂದ್ ಹೇಳುವಂತೆ ಇದು ಕೇಳಿದ್ದೆಲ್ಲ ಕೊಟ್ಟ ಕಲ್ಪವೃಕ್ಷ- ಕಾಮಧೇನು!
ಅಣ್ಣಾವ್ರು ತಮ್ಮ ಮನೆಯಲ್ಲೇ ಆಡಿಯೋ ಬಿಡುಗಡೆ ಮಾಡಿದ್ದು, ಅವರು ದಾದಾ ಫಾಲ್ಕೆ ಪ್ರಶಸ್ತಿ ಪಡೆದ ವೇದಿಕೆಯಲ್ಲಿ ನಾನೂ ಪ್ರಶಸ್ತಿ ಪಡೆದಿದ್ದು, ಪೂರ್ಣಚಂದ್ರ ತೇಜಸ್ವಿಯವರು ಪ್ರಶಸ್ತಿ ಪಡೆದ ವೇದಿಕೆಯಲ್ಲಿ ನಾನೂ ಈ ಕೃತಿಗೆ ಮಂಗಳೂರಿನ ಮಹತ್ವದ 'ಸಂದೇಶ' ಪ್ರಶಸ್ತಿ ಪಡೆದದ್ದು, ಅಸಂಖ್ಯ ಪ್ರಶಸ್ತಿಗಳು. ನೂರಾರು ಹೆತ್ತವರು ತಮ್ಮ ಹೆಣ್ಣುಮಗುವಿಗೆ 'ಭೂಮಿಕಾ' ಎಂದು ಹೆಸರಿಟ್ಟದ್ದು, ಚಿತ್ರೀಕರಿಸಿದ ಹಲವು ತಾಣಗಳು ಪ್ರವಾಸೀ ತಾಣಗಳಂತಾದದ್ದು...ಸವಿ ನೆನಪುಗಳ ಶಾಶ್ವತ ಸರಮಾಲೆ.
ಹಿಡಿಯಷ್ಷು ವಿಷಾದಗಳೂ ಇವೆ. ಅಣ್ಣಾವ್ರು ನಿರ್ಗಮಿಸಿದರು. ಜೊತೆಗೆ ಚಿತ್ರದಲ್ಲಿ ಅಭಿನಯಿಸಿದ್ದ ವೈಶಾಲಿ ಕಾಸರವಳ್ಳಿ, ಸಿ.ಆರ್. ಸಿಂಹ, ಕಲಾನಿರ್ದೇಶಕ ಭದ್ರಾವತಿ ರಾಜು, ಗಾಯಕ ರಾಜು ಅನಂತಸ್ವಾಮಿ, ಅಮೆರಿಕೆಯಲ್ಲಿ ಹಲವು ಬಗೆಯಲ್ಲಿ ನೆರವಾಗಿದ್ದ ಹರಿಹರೇಶ್ವರ, ನಾಗಲಕ್ಷ್ಮಿ ಹರಿಹರೇಶ್ವರ, ರವೀಂದ್ರನಾಥ್ ಸಹ ನಿರ್ಗಮಿಸಿದರು. ಆಗೆಲ್ಲ ಏಕಪರದೆಗಳ ಸುಂದರಿಯರದೇ ಸಾಮ್ರಾಜ್ಯ. ಸಾವಿರ ಪ್ರದರ್ಶನ ನೀಡಿದ್ದ ಮೈಸೂರಿನ ಶಾಂತಲೆ ತೀರಿಕೊಂಡಳು. ಮಂಡ್ಯದ ಮತ್ತು ಬೆಂಗಳೂರಿನ ಶಾಂತಿ, ನಂದಾಗಳು ಇಲ್ಲವಾದರು. ಚಾಮರಾಜಪೇಟೆಯ ಉಮಾ ಹಾಸಿಗೆ ಹಿಡಿದು ಮಲಗಿ ಬಹುಕಾಲವಾಯಿತು.
ಕೊಟ್ರೇಶಿಯಂಥ ಕಲಾತ್ಮಕ ಚಿತ್ರ ನಿರ್ಮಿಸಿದ್ದ ಜಿ. ನಂದಕುಮಾರ್ ಈ ನನ್ನ ಹುಚ್ಚು ಸಾಹಸಕ್ಕೆ ಹಣ ಹೂಡಿದ್ದರು.ಅವರನ್ನು ಮತ್ತು ನನ್ನ ಎಲ್ಲ ಕಲಾವಿದ ತಂತ್ರಜ್ಞರನ್ನೂ ರಾಜಶ್ರೀ ಪಿಕ್ಚರ್ಸ್ ಸಂಸ್ಥೆಯನ್ನೂ ಮಾಧ್ಯಮ ಬಂಧುಗಳನ್ನೂ ಮುಖ್ಯವಾಗಿ ನೋಡಿದ ಈಗಲೂ ನೋಡುತ್ತಿರುವ ಮೆಚ್ಚುತ್ತಿರುವ ನಿಮ್ಮನ್ನು ಪ್ರೀತಿಯಿಂದ ನೆನೆಯುತ್ತಿದ್ದೇನೆ. ಆಗ ನನಗೆ 39 . ಈಗ 67. ಕಾಲ ಬದಲಾಗಿದೆ. ಮತ್ತೊಂದು ಕಾವ್ಯವನ್ನು ಸೃಷ್ಟಿಸಲು ಹೊರಟಿದ್ದೇನೆ. ಜೊತೆಗೆ ನೀವಿದ್ದೀರಿ ಎಂಬ ನಂಬುಗೆ.
ಹೀಗೆ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಅಮೆರಿಕಾ ಅಮೆರಿಕಾ ಚಿತ್ರವನ್ನು ನೆನಪು ಮಾಡಿಕೊಂಡಿದ್ದಾರೆ. ಅಂದ್ಹಾಗೇ 2020ರ ನಂತರ ನಿರ್ದೇಶನದಿಂದ ಅಂತರ ಕಾಪಾಡಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅಮೆರಿಕಾ ಅಮೆರಿಕಾ 2 ಚಿತ್ರವನ್ನು ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಮೇಷ್ಟ್ರು ಅಧಿಕೃತವಾಗಿ ಘೋಷಣೆ ಮಾಡಬೇಕಷ್ಟೇ.


Click it and Unblock the Notifications











