ಹಾಲು ಜೇನಿನಂತೆ ಇದ್ದ ಸಂಸಾರ ಒಡೆದ ಹಾಲು; ನಟಿಯಾಗಿರುವ ಪತ್ನಿಗೆ 300 ಕೋಟಿ ಜೀವನಾಂಶ ನೀಡಿ ದೂರ ಆದ ಸ್ಟಾರ್ ಕ್ರಿಕೆಟರ್
ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ್ಲಿ ಇಲ್ಲಿಯವರೆಗೆ ಹಲವಾರು ಕ್ರಿಕೆಟ್ ಸ್ಟಾರ್‌ಗಳು ಸಿಲುಕಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ತಮ್ಮ ಪರಾಕ್ರಮದ ಪ್ರದರ್ಶನ ಮಾಡುವ ಹಲವರು ಬೆಳ್ಳಿತೆರೆಯ ಮಹಾರಾಣಿಯರ ಸೌಂದರ್ಯಕ್ಕೆ ಮನ ಸೋತಿದ್ದಾರೆ.
ಇದಕ್ಕೆ ಕೈಗನ್ನಡಿ ಎಂಬಂತೆ ''ಬಿಲ್ಲಾ''.. ''ಮ್ಯಾಕ್ಸಿಮಮ್''.. ''ಬಾಡಿಗಾರ್ಡ್''.. ಚಿತ್ರಗಳ ಚೆಲುವೆ ಹೇಜಲ್ ಕೀಚ್ ಅವರ ಜೊತೆ ಯುವರಾಜ್ ಸಿಂಗ್ ಮದುವೆಯಾಗಿದ್ದಾರೆ. ''ದಿಲ್ ದಿಯಾ ಹೈ''.. ''ದಿ ಟ್ರೈನ್''.. ''ಜಿಲ್ಲಾ ಗಾಜಿಯಾಬಾದ್''.. ನಾಯಕಿ ಗೀತಾ ಬಸ್ರಾ ಜೊತೆ ಹರ್ಭಜನ್ ಸಿಂಗ್ ಸಪ್ತಪದಿ ತುಳಿದಿದ್ದಾರೆ. ''ಚಕ್ ದೇ ಇಂಡಿಯಾ'' ಚೆಲುವೆ ಸಾಗರಿಕಾಗೆ ಜಹೀರ್ ಖಾನ್ ಶರಣಾಗಿದ್ದಾರೆ.

ಇವರಷ್ಟೇ ಅಲ್ಲ ಕೆ.ಎಲ್.ರಾಹುಲ್.. ವಿರಾಟ್ ಕೊಹ್ಲಿ.. ಒಬ್ಬರಾ.. ಇಬ್ಬರಾ.. ಹೀಗೆ ಹಲವರು ಚಿತ್ರರಂಗದ ನಾಯಕಿಯರ ಜೊತೆ ಹೊಸ ಬದುಕು ಶುರು ಮಾಡಿದ್ಧಾರೆ.ಕೇವಲ ಭಾರತದ ಕ್ರಿಕೆಟ್ ಪ್ಲೇಯರ್ಸ್ ಮಾತ್ರ ಅಲ್ಲ ವಿದೇಶದ ಸ್ಟಾರ್ ಆಟಗಾರರು ಕೂಡ ನಾಯಕಿಯರ ಬೆಡಗು ಭಿನ್ನಾಣಕ್ಕೆ ಮನ ಸೋತಿದ್ದಾರೆ.
ಆದರೆ ಹೀಗೆ ಮದುವೆಯಾದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್, ತಂಡದ ಪ್ರಮುಖ ಮತ್ತು ಮಹತ್ವದ ಸದಸ್ಯ ಮೈಕಲ್ ಕ್ಲಾರ್ಕ್‌ಗೆ ತಮ್ಮ ಮದುವೆ ತುಂಬಾನೇ ದುಬಾರಿಯಾಗಿ ಪರಿಣಮಿಸಿತ್ತು ಎನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ.
ಹೌದು, ಅಸಲಿಗೆ 2010ರ ಆಸುಪಾಸು ಮೈಕಲ್ ಕ್ಲಾರ್ಕ್ ತಮ್ಮ ಬಾಲ್ಯದ ಗೆಳತಿ ಕೈಲಿ ಬೋಲ್ಡಿ ಅವರ ಜೊತೆ ಪ್ರೀತಿಯಲ್ಲಿ ಬಿದ್ದರು. ಈ ಕೈಲಿ ಬೇರೆ ಯಾರು ಅಲ್ಲ ಬದಲಿಗೆ ಆಸ್ಟ್ರೇಲಿಯಾದ ಸೂಪರ್ ಮಾಡೆಲ್. ಇಷ್ಟೇ ಅಲ್ಲ ಖ್ಯಾತ ನಿರೂಪಕಿ ಕೂಡ ಹೌದು. ''ಆಸ್ಟ್ರೇಲಿಯನ್ ಥಿಯೇಟರ್ ಫಾರ್ ಯಂಗ್ ಪೀಪಲ್' '(ATYP) ನಲ್ಲಿ ಅಭಿನಯದ ಅ,ಆ,ಇ,ಈ ಕೂಡ ಕಲಿತ ಕೈಲಿ 2002ರಲ್ಲಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋ ''ಟೆಂಪ್ಟೇಶನ್ ಐಲ್ಯಾಂಡ್'' ನಲ್ಲಿ ಭಾಗವಹಿಸಿದ್ದರು. ''ಡಾನ್ಸಿಂಗ್ ವಿತ್ ದ ಸ್ಟಾರ್ಸ್''ನ 14 ನೇ ಸೀಸನ್‌ನಲ್ಲಿ ಕೂಡ ಸ್ಪರ್ಧಿಯಾಗಿದ್ದರು.
ಇಂಥಾ ಕೈಲಿಯನ್ನು 2 ವರ್ಷ ಪ್ರೀತಿಸಿದ ಕ್ಲಾರ್ಕ್ 2012ರಲ್ಲಿ ಮದುವೆಯಾದರು. ಕೈಲಿ ಕಾಲ್ಗುಣ ಮೈಕಲ್ ಕ್ಲಾರ್ಕ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ವಿಶ್ವಕಪ್‌ನ್ನು 2015ರಲ್ಲಿ ಮುಡಿಗೇರಿಸಿಕೊಂಡಿತು. ಆ ನಂತರ ಮಾರ್ಚ್ 29, 2015ರಲ್ಲಿ ಕ್ರಿಕೆಟ್ ಕಣದಿಂದ ಹಿಂದೆ ಸರಿದ ಮೈಕಲ್ ಕ್ಲಾರ್ಕ್ ನಿವೃತ್ತಿ ಘೋಷಿಸಿದರು. ವಿಶೇಷ ಅಂದರೆ ಇದೇ ವರ್ಷ ಮೈಕಲ್ ಕ್ಲಾರ್ಕ್ ತಂದೆಯಾಗಿ ಬಡ್ತಿಯನ್ನು ಕೂಡ ಪಡೆದರು. ಕೈಲಿ ಮತ್ತು ಕ್ಲಾರ್ಕ್ ನವೆಂಬರ್ 17, 2015ರಲ್ಲಿ ಮುದ್ದಾದ ಹೆಣ್ಣು ಮಗಳಿಗೆ ಜನ್ಮ ನೀಡಿದರು. ಮಗಳಿಗೆ ಕೆಲ್ಸಿ ಲೀ ಎಂದು ನಾಮಕರಣ ಕೂಡ ಮಾಡಿದರು.

ಹಾಲು ಜೇನಿನಂತೆ ಇತ್ತು ಇವರ ಸಂಸಾರ. ಆದರೆ ಅದ್ಯಾರ ಕಣ್ಣು ಬಿತ್ತೋ. ಇವರ ದಾಂಪತ್ಯ ಒಡೆದ ಹಾಲಿನಂತಾಯ್ತು. 2019ರಲ್ಲಿ ಇವರ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಯ್ತು. ತನ್ನ ಅಸಿಸ್ಟೆಂಟ್ ಜೊತೆ ಮೈಕಲ್ ಕ್ಲಾರ್ಕ್ ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನುವ ಸುದ್ದಿ ಹರಿದಾಡಲು ಶುರುವಾಯ್ತು. ಕೈಲಿ ಕೈಗೆ ಕ್ಲಾರ್ಕ್ ರೆಡ್ ಹ್ಯಾಡ್ ಆಗಿ ಸಿಕ್ಕಿ ಬಿದ್ದರು ಎಂದು ಕೂಡ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ವರದಿಯಾಯ್ತು.
ಕೊನೆಗೆ 2020ರಲ್ಲಿ ಮೈಕಲ್ ಕ್ಲಾರ್ಕ್ ಮತ್ತು ಕೈಲಿ ಬೋಲ್ಡಿ ಅವರ 8 ವರ್ಷದ ದಾಂಪತ್ಯ ಜೀವನ ಮುರಿದು ಬಿತ್ತು. ವಿಚ್ಚೇದನವೂ ಆಯ್ತು. ಆದರೆ, ಈ ವಿಚ್ಚೇದನ ಕ್ಲಾರ್ಕ್ ಪಾಲಿಗೆ ತುಂಬಾನೇ ದುಬಾರಿಯಾಗಿತ್ತು. ಯಾಕೆಂದರೆ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ವರದಿಯಾದಂತೆ ಮೈಕಲ್ ಕ್ಲಾರ್ಕ್ 40 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 300 ಕೋಟಿಯನ್ನು ಕೈಲಿಗೆ ಜೀವನಾಂಶವಾಗಿ ನೀಡಬೇಕಾಯ್ತು. ನೀಡಿದರು ಕೂಡ. ಈ ಹಿನ್ನೆಲೆ ಕ್ರಿಕೆಟ್ ಜಗತ್ತಿನ ಇತಿಹಾಸದಲ್ಲಿ ಇವರ ಡಿವೋರ್ಸ್ ಪ್ರಕರಣ ತುಂಬಾನೇ ದುಬಾರಿ ವಿಚ್ಛೇದನ ಪ್ರಕರಣಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತೆ.
ಸದ್ಯ ಕೈಲಿ ಬೋಲ್ಡಿ ತಮ್ಮ ಮಗಳು ಕೆಲ್ಸಿ ಲೀ ಜೊತೆ ಇದ್ದಾರೆ. ಮೈಕಲ್ ಕಾರ್ಕ್ ಆಗಾಗ ಬಂದು ಮಗಳನ್ನು ನೋಡಿಕೊಂಡು ಹೋಗುತ್ತಾರೆ. ಗಂಡ ಹೆಂಡತಿಯಾಗಿ ದೂರ ಆದರು ಕೂಡ ಮಗಳ ಭವಿಷ್ಯದ ದೃಷ್ಟಿಯಿಂದ ಮೈಕಲ್ ಕ್ಲಾರ್ಕ್ ಮತ್ತು ಕೈಲಿ ಇವತ್ತು ಕೂಡ ಸ್ನೇಹಿತರಾಗಿದ್ದಾರೆ. ಕೈಲಿ ಅವರಿಗೆ ಕೈ ಕೊಟ್ಟು ಬಂದ ಮೈಕಲ್ ಕ್ಲಾರ್ಕ್ ಸದ್ಯ ಆಸ್ಟ್ರೇಲಿಯಾದ ಫ್ಯಾಷನ್ ಲೋಕದಲ್ಲಿ ಹೆಸರು ಮಾಡಿರುವ ಅರಾಬೆಲ್ಲಾ ಶೆರ್ಬೋರ್ನ್ ಅವರ ಜೊತೆ ಸುತ್ತಾಡುತ್ತಿದ್ದಾರೆ. ಇಬ್ಬರು ಶೀಘ್ರದಲ್ಲಿಯೇ ಮದುವೆ ಕೂಡ ಆಗಲಿದ್ದಾರೆ ಎನ್ನುವ ಸುದ್ದಿ ಇದೆ.
ಇನ್ನು ಮೈಕಲ್ ಕ್ಲಾರ್ಕ್ ಅವರ ಮಗಳು ಕೆಲ್ಸಿ ಲೀಗೆ ಕೂಡ ಅರಾಬೆಲ್ಲ ಅಂದರೆ ಅಚ್ಚು ಮೆಚ್ಚು. ಇದಕ್ಕೆ ಪುರಾವೆ ಎನ್ನುವಂತೆ ಕ್ಲಾರ್ಕ್ ತಮ್ಮ ಮಗಳನ್ನು ಕರೆದುಕೊಂಡು ಅರಾಬೆಲ್ಲ ಶೆರ್ಬೋರ್ನ್ ಜೊತೆ ಆಗಾಗ ಸುತ್ತಾಡುತ್ತಾರೆ. ಮೂವರು ಫೋಟೊಗಳನ್ನು ಕ್ಲಿಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿರ್ತಾರೆ.

ವಿಶೇಷ ಅಂದರೆ ಮೈಕಲ್ ಕ್ಲಾರ್ಕ್ ತಮ್ಮಿಂದ ದೂರ ಆದರೂ ಕೂಡ ಕೈಲಿ ಮಾತ್ರ ಮೈಕಲ್ ಕ್ಲಾರ್ಕ್ ಅವರ ಯಾವ ನೆನಪನ್ನು ಕೂಡ ಅಳಿಸಿ ಹಾಕಿಲ್ಲ. ತಮ್ಮ ಹೆಸರಿನ ಮುಂದಿರುವ ಕ್ಲಾರ್ಕ್ ಹೆಸರನ್ನು ಕೂಡ ತೆಗೆದಿಲ್ಲ. ಮೈಕಲ್ ಕ್ಲಾರ್ಕ್ ಜೊತೆ ಕಳೆದ ಹಲವಾರು ಸುಮಧುರ ಕ್ಷಣಗಳನ್ನು ಕೈಲಿ ಇವತ್ತು ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಗೇ ಉಳಿಸಿಕೊಂಡಿದ್ದಾರೆ. ಇನ್ನುಳಿದಂತೆ ಕೈಲಿ ಆಸ್ಟ್ರೇಲಿಯಾದ ಉದ್ಯಮಿ ಜೇಮ್ಸ್ ಆಡಮ್ಸ್ ಅವರನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ, ಇವರ ಸೋಶಿಯಲ್ ಮೀಡಿಯಾದಲ್ಲಿ ಇದರ ಕುರಿತು ಯಾವುದೇ ಸುಳಿವು ಇಲ್ಲ.


Click it and Unblock the Notifications











