2023 Roundup: ಯಾವುದೇ ನಿರೀಕ್ಷೆ ಇಲ್ಲದೇ ಬಂದು ಪ್ರೇಕ್ಷಕರ ಮನಗೆದ್ದ 5 ಕನ್ನಡ ಚಿತ್ರಗಳು
ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ 200ಕ್ಕೂ ಅಧಿಕ ಸಿನಿಮಾಗಳು ತೆರೆಕಂಡಿವೆ. ಅದರಲ್ಲಿ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ. ಸೂಪರ್ ಹಿಟ್ ಆದ ಸಿನಿಮಾಗಳ ಸಂಖ್ಯೆ ಕಮ್ಮಿನೇ ಇದೆ. ಆದರೆ ಕೆಲ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅದ್ಭುತ ಸೃಷ್ಟಿಸದಿದ್ದರೂ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದವು.
ಒಳ್ಳೆ ಸಿನಿಮಾಗಳನ್ನು ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ನೋಡಲ್ಲ ಎನ್ನುವ ಆರೋಪ ಪದೇ ಪದೆ ಕೇಳಿಬರುತ್ತಲೇ ಇರುತ್ತದೆ. ಛೇ ಈ ಸಿನಿಮಾ ಅಷ್ಟು ಚೆನ್ನಾಗಿದೆ, ಯಾಕೆ ಪ್ರೇಕ್ಷಕರು ನೋಡಲಿಲ್ಲ. ಗೆಲ್ಲಿಸಲಿಲ್ಲ ಎಂದು ಕೆಲವರು ಗೊಣಗುವುದು ಇದೆ. ಸಣ್ಣ ಸಿನಿಮಾಗಳು ಎನ್ನುವ ಕಾರಣಕ್ಕೆ ಕೆಲವರು ಓಟಿಟಿಯಲ್ಲಿ ನೋಡೋಣ ಎಂದು ಸುಮ್ಮನಾಗುವುದು ಇದೆ.

ಈ ವರ್ಷ ಕೆಲ ಹೊಸಬರ ಸಿನಿಮಾಗಳು ತೆರೆಮೇಲೆ ಮ್ಯಾಜಿಕ್ ಮಾಡಿವೆ. ಇನ್ನು ಕೆಲವು ಸಿನಿಮಾಗಳು ಗೆಲುವಿನ ದಡ ಸೇರಿವೆ. ಪ್ರೇಕ್ಷಕರನ್ನು ರಂಜಿಸಿವೆ. ಬಾಕ್ಸಾಫೀಸ್‌ನಲ್ಲೂ ತಕ್ಕಮಟ್ಟಿಗೆ ಸದ್ದು ಮಾಡಿವೆ. ಅಂತಹ ಕನ್ನಡ ಸಿನಿಮಾಗಳ ಲಿಸ್ಟ್ ಇಲ್ಲಿದೆ.
1. ಹೊಂದಿಸಿ ಬೆರೆಯಿರಿ
ಜಗನ್ನಾಥ್ ನಿರ್ದೇಶನದ 'ಹೊಂದಿಸಿ ಬರೆಯಿರಿ' ಸಿನಿಮಾ ಈ ವರ್ಷದ ಆರಂಭದಲ್ಲೇ ತೆರೆಗೆ ಬಂದಿತ್ತು.ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡ್, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹಾದೇವ್, ಅರ್ಚನಾ ಜೋಯಿಸ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದರು. ಐವರು ಸ್ನೇಹಿತರ 12 ವರ್ಷ ಜರ್ನಿಯ ಕಥೆ ಚಿತ್ರದಲ್ಲಿತ್ತು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡದಿದ್ದರೂ ಪ್ರೇಕ್ಷಕರ ಮನಗೆದ್ದಿತ್ತು.
2. ಡೇರ್ ಡೆವಿಲ್ ಮುಸ್ತಾಫಾ
ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ಸಣ್ಣ ಕಥೆ ಆಧರಿಸಿ ಮೂಡಿಬಂದ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾ ಕೂಡ ಗೆಲುವಿನ ನಗೆ ಬೀರಿತ್ತು. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿದ್ದ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಡಾಲಿ ಧನಂಜಯ್ ಚಿತ್ರತಂಡದ ಬೆನ್ನಿಗೆ ನಿಂತಿದ್ದರು. ಆದಿತ್ಯಾ ಆಶ್ರೀ, ಅಭಯ್, ಆಶಿತ್ ಶ್ರೀವತ್ಸ, ಪ್ರೇರಣಾ, ಎಂ. ಎಸ್ ಉಮೇಶ್, ಮಂಡ್ಯ ರಮೇಶ್, ಸುಪ್ರೀತ್ ಭಾರಧ್ವಜ್ ಚಿತ್ರದ ತಾರಾಗಣದಲ್ಲಿದ್ದರು. ಕೋಮು ಸೌಹಾರ್ದತೆ ಸಾರಿದ್ದ ಚಿತ್ರ 25 ದಿನ ಪೂರೈಸಿತ್ತು.

3. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
ಈ ವರ್ಷದ ಹಿಟ್ ಸಿನಿಮಾಗಳಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರವೂ ಇದೆ. ಹತ್ತಾರು ಕೋಟಿ ಅಲ್ಲೇ ಇದ್ದರೂ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಚಿತ್ರ ತಕ್ಕಮಟ್ಟಿಗೆ ಕಲೆಕ್ಷನ್ ಮಾಡಿತ್ತು. ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ರಮ್ಯಾ, ರಿಷಬ್ ಶೆಟ್ಟಿ, ಶಿವಣ್ಣ ಸೇರಿದಂತೆ ಹಲವರು ಚಿತ್ರತಂಡಕ್ಕೆ ಬೆಂಬಲವಾಗಿ ನಿಂತರು. ಬಾಯ್ಸ್ ಹಾಸ್ಟೆಲ್‌ವೊಂದರಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸಿತ್ತು.
4. ಕೌಸಲ್ಯ ಸುಪ್ರಜಾ ರಾಮ
ಈ ವರ್ಷ ಪ್ರೇಕ್ಷಕರ ಮನಮುಟ್ಟಿದ ಮತ್ತೊಂದು ಉತ್ತಮ ಸಿನಿಮಾ 'ಕೌಸಲ್ಯ ಸುಪ್ರಜಾ ರಾಮ'. ಶಶಾಂಕ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಬೃಂದಾ ಆಚಾರ್ ನಟಿಸಿದ್ದರು. ಜುಲೈ 28ಕ್ಕೆ ತೆರೆಕಂಡ ಸಿನಿಮಾ ಪ್ರೀಮಿಯರ್ ಶೋಗಳಿಂದಲೇ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಒಂದೊಳ್ಳೆ ಸಂದೇಶವನ್ನು ಹೊತ್ತು ಬಂದಿದ್ದ ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದರು.
5. ಟಗರುಪಲ್ಯ
ಡಾಲಿ ಧನಂಜಯ್ ನಿರ್ಮಾಣದ 'ಟಗರುಪಲ್ಯ' ಕೂಡ ಈ ಸಿನಿರಸಿರಕನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ನಾಗಭೂಷಣ್ ಹಾಗೂ ಅಮೃತಾ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ದೇವರಿಗೆ ಟಗರು ಬಲಿಕೊಟ್ಟು ಪೂಜೆ ಮಾಡಲು ಮುಂದಾಗುವ ಸಣ್ಣ ಕಥೆಯನ್ನು 2 ಗಂಟೆ ಸಿನಿಮಾ ಮಾಡಿ ನಿರ್ದೇಶಕ ಉಮೇಶ್ ಗೆದ್ದಿದ್ದರು. ಇತ್ತೀಚೆಗೆ ಸಿನಿಮಾ ಓಟಿಟಿಗೆ ಬಂದಿದೆ.


Click it and Unblock the Notifications











