50 years of Superstar; "ಅಂದು ಕನ್ನಡ ಸಿನ್ಮಾ ಚಾನ್ಸ್ ಸಿಗದಿದ್ದಾಗ ರಜನಿಕಾಂತ್ ಕಣ್ಣೀರು ಹಾಕಿದ್ರು"; ರಘುನಂದನ್
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಿವಾಜಿರಾವ್ ಗಾಯಕ್‌ವಾಡ್ ಮುಂದೆ ಸೂಪರ್ ಸ್ಟಾರ್ ರಜನಿಕಾಂತ್ ಆಗಿದ್ದು ಕಣ್ಣಮುಂದಿದೆ. ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ಮದ್ರಾಸ್ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ನಟನೆಯ ಪಟ್ಟುಗಳನ್ನು ಕಲಿತು ಚಿತ್ರರಂಗ ಪ್ರವೇಶಿಸಿದ್ದರು. ಆರಂಭದಲ್ಲಿ ಖಳನಟನಾಗಿ ಅಬ್ಬರಿಸಿದ್ದ ರಜನಿಕಾಂತ್ ಮುಂದೆ ಹೀರೊ ಆಗಿ ಸಕ್ಸಸ್ ಕಂಡವರು.
ತಮಿಳು ಜನ ರಜನಿಕಾಂತ್ ಅವರನ್ನು ಸೂಪರ್ ಸ್ಟಾರ್ ಆಗಿ ಮೆರೆಸಿದ್ದಾರೆ. ನಿಜ ಹೇಳಬೇಕು ಅಂದರೆ ಶಿವಾಜಿ ತಮಿಳು ಸಿನಿಮಾಗಳಲ್ಲಿ ನಟಿಸಬೇಕು ಎಂದು ಬಯಸಿರಲಿಲ್ಲ. ಆರಂಭದಲ್ಲಿ ಕನ್ನಡ ಸಿನಿಮಾಗಳಲ್ಲೇ ಅವಕಾಶಕ್ಕಾಗಿ ಹುಡುಕಾಟ ನಡೆಸಿದ್ದರು. ಒಂದೆರಡು ಕನ್ನಡ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿ ಬಳಿಕ ಕಳೆದುಕೊಂಡಿದ್ದರು. ಕೊನೆಗೆ ಕೆ. ಬಾಲಚಂದರ್ ತಮ್ಮ 'ಅಪೂರ್ವ ರಾಗಂಗಳ್' ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು.

ರಜನಿಕಾಂತ್ ಮೊದಲು ನಟಿಸಿದ 'ಅಪೂರ್ವ ರಾಗಂಗಳ್' ಸಿನಿಮಾ 50 ವರ್ಷ ಪೂರೈಸುತ್ತಿದೆ. ಅಂದರೆ ತಲೈವಾ ಚಿತ್ರರಂಗದಲ್ಲಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದಾರೆ. 1975 ಆಗಸ್ಟ್ 15ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಸರಿಯಾಗಿ 50 ವರ್ಷಗಳ ಬಳಿಕ ಅದೇ ದಿನ 'ಕೂಲಿ' ಸಿನಿಮಾ ಬಿಡುಗಡೆ ಆಗುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು ರಜನಿಕಾಂತ್ ಚಿತ್ರರಂಗದಲ್ಲಿ 50 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಸ್ನೇಹಿತ ರಘುನಂದ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. 'ಅಪೂರ್ವ ರಾಗಂಗಳ್' ದಿನಗಳನ್ನು ಮೆಲುಕು ಹಾಕಿದ್ದಾರೆ.
ಮದ್ರಾಸ್ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ರಜನಿಕಾಂತ್ ಅವರ ಸಹಪಾಠಿ ಆಗಿದ್ದವರು ರಘುನಂದನ್. ಆ ಬಳಿಕ ಕೂಡ ಅವರ ಸ್ನೇಹ ಮುಂದುವರೆಯಿತು. ರಘುನಂದನ್ ಸಹ ನಿರ್ದೇಶಕರಾಗಿ ಗುರ್ತಿಸಿಕೊಂಡರು. ಸಾಕಷ್ಟು ಸಿನಿಮಾಗಳಿಗೆ ಅವರು ಕೆಲಸ ಮಾಡಿದ್ದಾರೆ. ಸ್ನೇಹಿತ ರಜನಿಕಾಂತ್ ಜೊತೆ ಅವರಿಗೆ ಸಾಕಷ್ಟು ಸುಂದರ ನೆನಪುಗಳಿವೆ. ಕೇರಳದಲ್ಲಿ ನಡೆದ 'ಜೈಲರ್'-2 ಸಿನಿಮಾ ಚಿತ್ರೀಕರಣದ ಸೆಟ್‌ಗೆ ಕೂಡ ರಘುನಂದನ್ ಹೋಗಿದ್ದರು. ಕೆಲ ಸಮಯ ಸ್ನೇಹಿತನ ಜೊತೆ ಕಳೆದು ಬಂದಿದ್ದಾರೆ.
"50 ವರ್ಷಗಳ ಹಿಂದೆ 'ಅಪೂರ್ವ ರಾಗಂಗಳ್' ಸಿನಿಮಾ ಬಂದಿತ್ತು. ನಟ ರಘುವರನ್ ಹಾಗೂ ಕೆಲ ಸ್ನೇಹಿತರ ಜೊತೆ ಮದ್ರಾಸ್‌ನಲ್ಲೇ ಸಿನಿಮಾ ವೀಕ್ಷಿಸಿದ್ದೆವು. ರಘುವರನ್ ಇನ್ಸಿಟ್ಯೂಟ್ ಅಲ್ಲಿ ನಮ್ಮ ಜ್ಯೂನಿಯರ್ ಆಗಿದ್ದರು. ಆಗ ಸಾಮಾನ್ಯ ಪ್ರೇಕ್ಷಕರಾಗಿ ಆ ಸಿನಿಮಾ ನೋಡಿದ್ದೆವು. ಕಾರಣ ಆಗ ರಜನಿಕಾಂತ್ ಸ್ಟಾರ್ ಆಗಿರಲಿಲ್ಲ. ಹಾಗಾಗಿ ಎಲ್ಲಾ ಸಿನಿಮಾ ನೋಡುವಂತೆ ಆ ಸಿನಿಮಾ ಕೂಡ ವೀಕ್ಷಿಸಿದ್ದೆವು" ಎಂದು ರಘುನಂದನ್ ಮೆಲುಕು ಹಾಕಿದ್ದಾರೆ.

ನಿಮಗೆ ಗೊತ್ತಾ ರಜನಿಕಾಂತ್ ಅವಕಾಶ ಕೇಳಿ ಕನ್ನಡ ಸಿನಿಮಾ ಶೂಟಿಂಗ್ ಸೆಟ್‌ಗಳಿಗೆ ಹೋಗಿ ಬರುತ್ತಿದ್ದರು. ನಿರ್ದೇಶಕ, ನಿರ್ಮಾಪಕರ ಜೊತೆ ಮಾತನಾಡಿ ತಮ್ಮ ಫೋಟೊ ಕೊಟ್ಟು ಬರುತ್ತಿದ್ದರು. ಯಾವುದಾದರೂ ಪಾತ್ರ ಇದ್ದರೆ ಹೇಳಿ ಎನ್ನುತ್ತಿದ್ದರು. ಡಾ. ರಾಜ್‌ಕುಮಾರ್ ನಟನೆಯ 'ಪ್ರೇಮದ ಕಾಣಿಕೆ' ಚಿತ್ರದ ಸನ್ನಿವೇಶವೊಂದರಲ್ಲಿ ರಜನಿಕಾಂತ್ ಫೋಟೊವನ್ನು ಬಳಸಲಾಗಿದೆ. ಅದೇ ಚಿತ್ರದಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ರಜನಿಕಾಂತ್ ತೆರೆಮೇಲೆ ಬರುವಂತಾಗಿತ್ತು. "ಕನ್ನಡದಲ್ಲಿ ರಜನಿಕಾಂತ್‌ಗೆ ಅವಕಾಶಗಳು ಸಿಗದೇ ತಮಿಳಿನಲ್ಲಿ ನಟಿಸಿದರು ಎನ್ನುವುದನ್ನು ನಾನು ಕೇಳಿದ್ದೇನೆ. ಕಾರಣ ಆಗಿನ್ನು ಅವರು ಹೆಸರು ಮಾಡಿರಲಿಲ್ಲ. ಎಲ್ಲಾ ಕಲಾವಿದರು ಅವಕಾಶ ಕೇಳಿ ಹೋಗುವಂತೆ ರಜನಿಕಾಂತ್ ಕೂಡ ಹೋಗಿದ್ರು ಅನ್ನಿಸುತ್ತೆ" ಎಂದು ರಘುನಂದನ್ ವಿವರಿಸಿದ್ದಾರೆ.
ರಜನಿಕಾಂತ್ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಎರಡು ವರ್ಷ ಕಂಪ್ಲೀಟ್ ಮಾಡಿರಲಿಲ್ಲ. ಅದೇ ಸಮಯದಲ್ಲಿ ಒಂದು ಕನ್ನಡ ಚಿತ್ರದ ಅವಕಾಶ ಸಿಕ್ಕಿ ಬಳಿಕ ಮಿಸ್ ಆಗಿತ್ತು. ಬಹಳ ಅತ್ತಿದ್ದ ಎಂದು ರಘುನಂದನ್ ನೆನಪಿಸಿಕೊಂಡಿದ್ದಾರೆ. "ದೊರೆ ಭಗವಾನ್ ಆ ಚಿತ್ರದ ನಿರ್ದೇಶಕರು. 'ರಾಜ ನನ್ನ ರಾಜ' ಸಿನಿಮಾ ಅನ್ಸತ್ತೆ. ಅಬ್ಬಯ್ಯ ನಾಯ್ಡು ನಿರ್ಮಾಪಕರು. ಮೇಕಪ್ ಹಾಕಿ ಎರಡ್ಮೂರು ದಿನ ಕೂರಿಸಿ ಬಳಿಕ ವಾಪಸ್ ಕಳುಹಿಸಿದ್ದರಂತೆ. ಆಗ ಬಂದು ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಕಣ್ಣೀರಾಕಿದ್ದರು" ಎಂದಿದ್ದಾರೆ.
ಆ ವಿಷಯ ತಮಗೆ ಹೇಗೆ ಗೊತ್ತಾಯಿತು ಎನ್ನುವುದನ್ನು ರಘುನಂದನ್ ಹೇಳಿದ್ದಾರೆ. "ಗುಬ್ಬಿ ವೀರಣ್ಣ ಅವರ ಪುತ್ರ ಜಿ. ವಿ ಶಿವಾನಂದ್ ನಮ್ಮ ಇನ್ಸಿಟ್ಯೂಟ್‌ಗೆ ಬಂದಿದ್ದರು. ಅವತ್ತು ಡೈಲಾಗ್ ಇಲ್ಲದೇ ನಟಿಸಿ ತೋರಿಸುವ ಸನ್ನಿವೇಶ. ರಜನಿಕಾಂತ್‌ಗೆ ನಟಿಸೋಕೆ ಹೇಳಿದಾಗ ಗ್ಲಿಸರಿನ್ ಇಲ್ಲದೇ ಅಳಲು ಆರಂಭಿಸಿದ್ದರು. ಆಗ ಶಿವಾನಂದ್ ಕೇಳಿದ್ರು, ಆ ಶಿವಾನಂದ್ ಕೇಳಿದ್ರು, ಖ್ಯಾತ ನಟಿರಿಗೆ ಗ್ಲಿಸರಿನ್ ಇಲ್ಲದೇ ಅಳಲು ಸಾಧ್ಯವಿಲ್ಲ, ನಿಮಗೆ ಕಣ್ಣಲ್ಲಿ ಇದ್ದಕ್ಕಿಂದಂತೆ ನೀರು ಬಂತಲ್ಲ ಎಂದ್ರು. ಆಗ ರಜನಿಕಾಂತ್ ಆ ಘಟನೆ ಹೇಳಿದ್ರು. ಹೀಗೆ ಮೇಕಪ್ ಹಾಕಿ ಕೂರಿಸಿ, ಬಳಿಕ ಅವಕಾಶ ಇಲ್ಲ ಎಂದುಬಿಟ್ರು. ಬಹಳ ನೋವಾಯಿತು ಎಂದು ರಜನಿಕಾಂತ್ ಹೇಳಿದ್ದರು. ಅವತ್ತು ಹಣ ಇಲ್ಲದೇ, ಹೇಗೋ ಚೆನ್ನೈಗೆ ವಾಪಸ್ ಬಂದೆ. ಆ ಅವಕಾಶ ಸಿಕ್ಕಿದ್ದರೆ ಹೇಗೋ ಚಿತ್ರರಂಗದಲ್ಲಿ ನಟಿಸುತ್ತಾ ಹೋಗಬಹುದು ಎಂದುಕೊಂಡೆ. ಇನ್ಸಿಟ್ಯೂಟ್‌ನಲ್ಲಿ ಇನ್ನು ಒಂದು ವರ್ಷ ಕಲಿಯುವುದು, ಮದ್ರಾಸ್‌ನಲ್ಲಿ ಉಳಿಯುವುದು ಅವರಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ರಜನಿ ಅವತ್ತು ಬಹಳ ಬೇಸರ ಮಾಡಿಕೊಂಡಿದ್ರು" ಎಂದಿದ್ದಾರೆ.

ಆ ಅವಕಾಶ ಸಿಗಲಿಲ್ಲ. ಬಳಿಕ ಇನ್ಸಿಟ್ಯೂಟ್‌ನಲ್ಲಿ ಆಕ್ಟಿಂಗ್ ಕೋರ್ಸ್ ಕಂಪ್ಲೀಟ್ ಮಾಡಿದ್ದರು ರಜನಿಕಾಂತ್. ಕೊನೆಗೆ ಸರ್ಟಿಫಿಕೇಟ್ ಪಡೆಯುವ ದಿನ ಒಂದು ಕಾರ್ಯಕ್ರಮ ನಡೀತು. ಪುಟ್ಟಣ್ಣ ಕಣಗಾಲ್, ಕೆ. ಬಾಲಚಂದರ್ ಸೇರಿದಂತೆ ಸಾಕಷ್ಟು ಜನ ಬಂದಿದ್ದರು. ಅವತ್ತು ನಾವು ಒಂದು ನಾಟಕ ಮಾಡಿದ್ದೆವು. ನಾನು ಕೂಡ ರಜನಿಕಾಂತ್ ಜೊತೆ ಅಂದು ನಟಿಸಿದ್ದೆ. ಅದೇ ನಾಟಕದಲ್ಲಿ ರಜನಿಕಾಂತ್ ಅಭಿನಯ ನೋಡಿ ಬಾಲಚಂದರ್ 'ಅಪೂರ್ವ ರಾಗಂಗಳ್' ಚಿತ್ರದಲ್ಲಿ ಅವಕಾಶ ಕೊಟ್ಟಿದ್ರು. ಅದೇ ದಿನ ಪುಟ್ಟಣ್ಣ ಕೂಡ ನೋಡಿ ಬಳಿಕ 'ಕಥಾ ಸಂಗಮ' ಚಿತ್ರದಲ್ಲಿ ಅವಕಾಶ ಕೊಟ್ಟರು ಎಂದು ರಘುನಂದನ್ ಬಿಚ್ಚಿಟ್ಟಿದ್ದಾರೆ.
ಹುಬ್ಬಳ್ಳಿ ಭಾಷೆಯ ನಾಟಕದಲ್ಲಿ ನಾವು ಅಂದು ನಟಿಸಿದ್ದೆವು. ಕನ್ನಡ ನಾಟಕವೇ ಅದು. ಅದರಲ್ಲಿ ಕೂಡ ರಜನಿಕಾಂತ್ ಸ್ಟೈಲ್, ಅದೇ ನಟನೆ ಇತ್ತು. ಅದು ಬಾಲಚಂದರ್ ಗಮನ ಸೆಳೆದಿತ್ತು. ಅವತ್ತು ರಜನಿಕಾಂತ್ ನಟನೆ, ಅವರ ಶೈಲಿ, ಬಣ್ಣ ಎಲ್ಲವೂ ತಮಿಳು ಚಿತ್ರಕ್ಕೆ ಹೊಂದಿಕೆ ಆಗಿಬಿಡ್ತು. ಬಾಲಚಂದರ್ ಕೂಡ ಅದನ್ನೆಲ್ಲಾ ಊಹಿಸಿರಲಿಲ್ಲ ಎನಿಸುತ್ತಿದೆ. ಹೀಗೆಲ್ಲಾ ಆಗುತ್ತದೆ ಎಂದ ಅಂದುಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.
ರಜನಿಕಾಂತ್ ಫಿಲ್ಮ್ ಇನ್ಸಿಟ್ಯೂಟ್‌ಗೆ ಸೇರಿದ ಬಳಿಕ ಕೂಡ ಬೆಂಗಳೂರಿಗೆ ಬಂದು ಬಸ್ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಹಣ ಬೇಕಿತ್ತಲ್ಲ. ಡ್ಯೂಟಿಗೆ ರಜೆ ಹಾಕಿ ಅಲ್ಲಿ ಕ್ಲಾಸ್‌ಗೆ ಬರುತ್ತಿದ್ದರು. ಆಗ ಒಬ್ಬರು ಪ್ರಿನ್ಸಿಪಾಲ್ ಇದ್ದರು. ಅವರು ಹಾಲಿವುಡ್‌ನಲ್ಲಿ ಹೋಗಿ ಕಲಿತು ಬಂದಿದ್ರು. ಅವ್ರು ಕೊಂಚ ಸ್ಟ್ರಿಕ್ಟ್ ಆಗಿ ರಜನಿಕಾಂತ್‌ಗೆ ಹೇಳಿದ್ರು. ಕೋರ್ಸ್ ಕಂಪ್ಲೀಟ್ ಮಾಡೋದು ಬಿಟ್ಟು ನೀನು ಹೀಗೆ ಪದೇ ಪದೇ ರಜೆ ಹಾಕಿ ಅಲ್ಲಿಗೆ ಹೋಗಿ ಕೆಲಸ ಮಾಡುವುದು, ಸರಿಯಲ್ಲ ಎಂದ್ರು. ಹಾಗಾಗಿ ರಜನಿಕಾಂತ್ ಕೆಲಸ ಬಿಟ್ಟು ಆಕ್ಟಿಂಗ್ ಕೋರ್ಸ್ ಮುಂದುವರೆಸಿದರು ಎಂದು ರಘುನಂದನ್ ಆ ದಿನಗಳನ್ನು ತೆರೆದಿಟ್ಟಿದ್ದಾರೆ.


Click it and Unblock the Notifications











