'ಬಂಗಾರದ ಮನುಷ್ಯ'ನಿಗೆ 52 ವರ್ಷ; ಈ ಚಿತ್ರದ ಬಜೆಟ್, ಕಲೆಕ್ಷನ್, ಅಣ್ಣಾವ್ರ ಸಂಭಾವನೆ ಎಷ್ಟಾಗಿತ್ತು?
ಕನ್ನಡ ಚಿತ್ರರಂಗದಲ್ಲಿ ಎಂದೂ ಮರೆಯಲಾಗದ ಸಿನಿಮಾ 'ಬಂಗಾರದ ಮನುಷ್ಯ'. ಸಿದ್ದಲಿಂಗಯ್ಯ ಕಟ್ಟಿಕೊಟ್ಟಿದ್ದ ಈ ಮಾಸ್ಟರ್ ಪೀಸ್ ಸಿನಿಮಾ ಸಾರ್ವಕಾಲಿಕ ದಾಖಲೆ ಬರೆದಿತ್ತು. ಬರೋಬ್ಬರಿ 2 ವರ್ಷ ಪ್ರದರ್ಶನ ಕಂಡ ಸಿನಿಮಾ ಇದು. ಡಾ. ರಾಜ್‌ಕುಮಾರ್ ಹಾಗೂ ಭಾರತೀ ವಿಷ್ಣುವರ್ಧನ್ ನಟನೆಯ ಈ ಚಿತ್ರ ಇದೀಗ 52 ವರ್ಷ ಪೂರೈಸಿದೆ.
ಹೌದು. 1972, ಮಾರ್ಚ್ 31ರಂದು ತೆರೆಕಂಡಿದ್ದ 'ಬಂಗಾರದ ಮನುಷ್ಯ' ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಮೊದಲ ಮೂರ್ನಾಲ್ಕು ದಿನ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕರೂ ಬಳಿಕ ಚಿತ್ರ ಬಂಗಾರದ ಹೊಳೆ ಹರಿಸಿತ್ತು. ಹತ್ತಾರು ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಹುಬ್ಬೇರಿಸಿತ್ತು. ಬೆಂಗಳೂರಿನ ಸ್ಟೇಟ್ಸ್ ಥಿಯೇಟರ್‌ನಲ್ಲಿ (ಈಗಿನ ಭೂಮಿಕಾ ಥಿಯೇಟರ್) ಎರಡು ವರ್ಷ, ಮೈಸೂರಿನ ಚಾಮುಂಡೇಶ್ವರಿ ಥಿಯೇಟರ್‌ನಲ್ಲಿ 60 ವಾರಗಳ ಕಾಲ ಪ್ರದರ್ಶನಗೊಂಡಿತ್ತು. ಇನ್ನು ಕೆಲವೆಡೆ 1 ವರ್ಷ, ಮತ್ತೆ ಕೆಲವೆಡೆ 25 ವಾರ ಓಡಿತ್ತು.

1988ರಲ್ಲಿ 'ಬಂಗಾರದ ಮನುಷ್ಯ' ಸಿನಿಮಾ ಮರು-ಬಿಡುಗಡೆಯಾದಾಗ 25 ವಾರಗಳ ಪ್ರದರ್ಶನ ಕಂಡು ಸದ್ದು ಮಾಡಿತ್ತು. ಟಿ. ಕೆ ರಾಮಾರಾವ್ ಬರೆದ 'ಬಂಗಾರದ ಮನುಷ್ಯ' ಆಧರಿಸಿ ಸಿದ್ಧಲಿಂಗಯ್ಯ ಚಿತ್ರ ಕಟ್ಟಿಕೊಟ್ಟಿದ್ದರು. ಡಿ. ವಿ ರಾಜಾರಾಮ್ ಛಾಯಾಗ್ರಹಣ, ಜಿ. ಕೆ ವೆಂಕಟೇಶ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಯಾವುದೇ ಮಾಸ್ ಎಲಿಮೆಂಟ್ಸ್ ಇಲ್ಲದ ಚಿತ್ರವನ್ನು ಪ್ರೇಕ್ಷಕರನ್ನು ಅಪ್ಪಿಕೊಂಡ ಪರಿ ಮರೆಯೋಕೆ ಸಾಧ್ಯವಿಲ್ಲ.
ಪಟ್ಟಣದಿಂದ ಹಳ್ಳಿ ಸೇರಿ ರಾಜೀವ(ಡಾ. ರಾಜ್‌ಕುಮಾರ್) ಬರಡು ಭೂಮಿಯಲ್ಲಿ ಕೃಷಿ ಮಾಡಿ ಗೆಲ್ಲುವ ಕಥೆ ಅನೇಕರಿಗೆ ಸ್ಫೂರ್ತಿಯಾಗಿತ್ತು. ಈ ಸಿನಿಮಾ ನೋಡಿ ಪ್ರೇರಣೆಗೊಂಡು ಕೆಲವರು ಪಟ್ಟಣ ಬಿಟ್ಟು ಹಳ್ಳಿ ಸೇರಿ ಕೃಷಿ ಆರಂಭಿಸಿದ ಉದಾಹರಣೆಗಳಿವೆ. ಅಷ್ಟರಮಟ್ಟಿಗೆ ಸಿನಿಮಾ ಪರಿಣಾಮ ಬೀರಿತ್ತು. ಚಿತ್ರದ ಸಂದೇಶ ಜನರನ್ನು ಆಲೋಚನೆಗೆ ಹಚ್ಚಿತ್ತು. ಇನ್ನು ರಾಜೀವನ ಸಾಧನೆಯ ಕಥೆಯಲ್ಲಿ ಒಂದು ಪ್ರೇಮಕಥೆ, ತ್ಯಾಗದ ವಿಚಾರವೂ ಚಿತ್ರದಲ್ಲಿತ್ತು. ಇನ್ನು 'ಬಂಗಾರದ ಮನುಷ್ಯ' ಚಿತ್ರದ ಎಲ್ಲಾ ಹಾಡುಗಳು ಇಂದಿಗೂ ಜನಜನಿತ.
'ಬಂಗಾರದ ಮನುಷ್ಯ' ಸಿನಿಮಾ ನೋಡಿ ಕೆಲವರು ಆಡಿಕೊಂಡಿದ್ದರು. ಸಿನಿಮಾ ಹೆಚ್ಚು ಜನ ಓಡಲ್ಲ. ಅಬ್ಬಬ್ಬಾ ಅಂದರೆ ಐದಾರು ವಾರ ಪ್ರದರ್ಶನ ಕಂಡರೆ ಹೆಚ್ಚು ಎಂದುಬಿಟ್ಟಿದ್ದರು. ಕೆಸಿಎನ್ ಗೌಡರು ಸಿನಿಮಾ ನಿರ್ಮಾಣ ಮಾಡಿದ್ದರು. ಪುಟ್ಟಣ್ಣ ಕಣಗಾಲ್ ಕೂಡ ಸಿನಿಮಾ ನೋಡಿ 'ಗೌಡರನ್ನು ದೇವರೇ ಕಾಪಾಡಬೇಕು' ಎಂದುಬಿಟ್ಟಿದ್ದರಂತೆ. ಆದರೆ ಬಳಿಕ ಸಿನಿಮಾ ಇತಿಹಾಸ ನಿರ್ಮಿಸಿ ಎಲ್ಲರ ಬಾಯಿ ಮುಚ್ಚಿಸಿತ್ತು.

ಅಂದಹಾಗೆ ಅವತ್ತಿನ ಕಾಲಕ್ಕೆ ಕನ್ನಡದಲ್ಲಿ 3ರಿಂದ 4 ಲಕ್ಷ ರೂಪಾಯಿಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ನಿರ್ಮಾಣ ಆಗುತ್ತಿದ್ದವು. ಆದರೆ 'ಬಂಗಾರದ ಮನುಷ್ಯ' ಸಿನಿಮಾ ಬಂಡವಾಳ 3 ಪಟ್ಟು ಹೆಚ್ಚಾಗಿತ್ತು. ಅಂದಾಜು 13 ಲಕ್ಷ ರೂಪಾಯಿ ಖರ್ಚು ಮಾಡಿ ಸಿನಿಮಾ ನಿರ್ಮಿಸಲಾಗಿತ್ತು. ಆದರೆ ಹಲವು ಪಟ್ಟು ಸಿನಿಮಾ ಲಾಭ ಮಾಡಿತ್ತು. ಬರೋಬ್ಬರಿ 2.5 ಕೋಟಿ ರೂ. ಗಳಿಕೆ ಕಂಡಿತ್ತು ಎನ್ನುವ ಅಂದಾಜಿದೆ. ಇವತ್ತಿನ ಲೆಕ್ಕದಲ್ಲಿ ಕಲೆಕ್ಷನ್ 100 ಕೋಟಿ ರೂ.ಗೂ ಹೆಚ್ಚು ಎನ್ನಬಹುದು.
ಇನ್ನು 'ಬಂಗಾರದ ಮನುಷ್ಯ' ಚಿತ್ರಕ್ಕೆ ಡಾ. ರಾಜ್‌ಕುಮಾರ್ ಸಂಭಾವನೆ 30 ಸಾವಿರ ರೂಪಾಯಿ. ಭಾರತೀ ವಿಷ್ಣುವರ್ಧನ್ 20 ಸಾವಿರ ರೂಪಾಯಿ ಪಡೆದಿದ್ದರು. ಅವತ್ತಿನ ಕಾಲಕ್ಕೆ ಇದು ದೊಡ್ಡ ಸಂಭಾವನೆ ಆಗಿತ್ತು. ಚಿಕ್ಕಮಗಳೂರಿನ ಕಳಸಾಪುರದಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿತ್ತು. 1975ರಲ್ಲಿ ಸಿನಿಮಾ ತೆಲುಗಿಗೆ ರೀಮೆಕ್ ಆಗಿತ್ತು. 'ದೇವುಡುಲಾಂಟಿ ಮನಿಷಿ' ಟೈಟನಲ್‌ನಲ್ಲಿ ಸೂಪರ್ ಸ್ಟಾರ್ ಕೃಷ್ಣ ಹೀರೊ ಆಗಿ ನಟಿಸಿದ್ದರು.


Click it and Unblock the Notifications











