'ಆಸ್ಫೋಟ' To 'ಸರ್ವಾಂತರ್ಯಾಮಿ' ಮಾತುಕತೆಯಲ್ಲೇ ನಿಂತ ದರ್ಶನ್ ಚಿತ್ರಗಳು; ಈ 6 ಕಥೆಗಳು ತೆರೆಗೆ ಬಂದ್ರೆ ಅಭಿಮಾನಿಗಳಿಗೆ ಹಬ್ಬ
ಯಾವುದೇ ಚಿತ್ರವನ್ನು ಅಷ್ಟು ಸುಲಭವಾಗಿ ತೆರೆಗೆ ತರುವುದಕ್ಕೆ ಸಾಧ್ಯವಿಲ್ಲ. ನೂರಾರು ಕಲಾವಿದರು, ತಂತ್ರಜ್ಞರ ಹಲವು ದಿನಗಳ ಪರಿಶ್ರಮದ ಕಥೆ ಒಂದು ಸಿನಿಮಾ. ಈ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುತ್ತವೆ. ಅದೆಲ್ಲವನ್ನು ಮೀರಿ ಸಿನಿಮಾ ನಿರ್ಮಾಣವಾಗಿ ತೆರೆಗೆ ಬರುವುದು ಅಷ್ಟು ಸುಲಭವಲ್ಲ.
ಸಾಕಷ್ಟು ಸಿನಿಮಾಗಳು ಘೋಷಣೆ ಆಗಿ ನಿಂತು ಬಿಡುತ್ತವೆ. ಮತ್ತೆ ಕೆಲವರು ಮುಹೂರ್ತ ನೆರವೇರಿದ ಬಳಿಕ, ಅರ್ಧ ಚಿತ್ರೀಕರಣ ಮುಗಿದ ಬಳಿಕ ನಿಂತ ಉದಾಹರಣೆಗಳಿವೆ. ಸಂಪೂರ್ಣವಾಗಿ ನಿರ್ಮಾಣವಾಗಿ ಕಾರಣಾಂತರಗಳಿಂದ ಡಬ್ಬಾದಲ್ಲೇ ಉಳಿದ ಚಿತ್ರಗಳು ನಮ್ಮ ಕಣ್ಮುಂದೆ ಇವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿಬೇಕಿದ್ದ ಒಂದಷ್ಟು ಸಿನಿಮಾಗಳು ಇದೇ ರೀತಿ ಕಾರಣಾಂತರಗಳಿಂದ ನಿಂತಿವೆ. ಅದರಲ್ಲಿ ಕೆಲವು ಅಧಿಕೃವಾಗಿ ಘೋಷಣೆ ಸಹ ಆಗಿರಲಿಲ್ಲ.

ಸ್ಟಾರ್ ನಟರ ಸಿನಿಮಾಗಳು ಸೆಟ್ಟೇರುವ ಮುನ್ನವೇ ಹೈಪ್ ಕ್ರಿಯೇಟ್ ಮಾಡುತ್ತವೆ. ಇನ್ನು ನಟ ದರ್ಶನ್ ನಟಿಸುತ್ತಾರೆ ಎಂದು ಹೇಳಿದರೆ ಸಾಕು ಸಹಜವಾಗಿಯೇ ಆ ಸಿನಿಮಾ ಚರ್ಚೆ ಹುಟ್ಟುಹಾಕುತ್ತದೆ. ಈ ರೀತಿ ದರ್ಶನ್ ನಟಿಸುತ್ತಾರೆ ಎಂದು ಸುದ್ದಿಯಾಗಿ ನಿಂತುಹೋದ ಸಿನಿಮಾಗಳು ಯಾವುವು? ಒಂದು ವಾರ ಚಿತ್ರೀಕರಣ ಬಳಿಕ 'ರಾಜವೀರ ಮದಕರಿ ನಾಯಕ' ನಿಂತಿದ್ದೇಕೆ? ಮುಂದೆ ಓದಿ.
1. ರಾಜವೀರಮದಕರಿ ನಾಯಕ
ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ಸೆಟ್ಟೇರಿದ್ದ ಐತಿಹಾಸಿಕ ಸಿನಿಮಾ ರಾಜವೀರಮದಕರಿ ನಾಯಕ. ಮದಕರಿ ನಾಯಕರ ಕುರಿತು ಸಿನಿಮಾ ಮಾಡಲು ದರ್ಶನ್ ಹಾಗೂ ಸುದೀಪ್ ನಡುವೆ ಪೈಪೋಟಿ ನಡೆದಿದ್ದು ಸುಳ್ಳಲ್ಲ. ಕೊನೆಗೆ ದರ್ಶನ್ ಹೀರೊ ಆಗಿ ಸಿನಿಮಾ ಶುರುವಾಗಿತ್ತು. ಕೇರಳದಲ್ಲಿ ಒಂದು ವಾರ ಚಿತ್ರೀಕರಣ ಕೂಡ ನಡೀತು. ಆದರೆ ಚಿತ್ರದ ಮೇಲೆ ಯಾಕೋ ಹಿಡಿತ ಸಿಗಲಿಲ್ಲ ಎನ್ನುವ ಕಾರಣಕ್ಕೆ ಸಿನಿಮಾ ನಿಲ್ಲಿಸಿದ್ದಾಗಿ ಇತ್ತೀಚೆಗೆ ಖುದ್ದಿ ದರ್ಶನ್ ಹೇಳಿಕೊಂಡಿದ್ದರು.

2. ಸಿಂಧೂರ ಲಕ್ಷ್ಮಣ
'ರಾಬರ್ಟ್' ಸಿನಿಮಾ ಸಕ್ಸಸ್ ಬೆನ್ನಲ್ಲೇ ಅದೇ ಕಾಂಬಿನೇಷನ್‌ನಲಲಿ ಬರಬೇಕಿದ್ದ ಸಿನಿಮಾ 'ಸಿಂಧೂರ ಲಕ್ಷ್ಮಣ'. ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣ ಜೀವನವನ್ನಾಧರಿಸಿ ಸಿನಿಮಾ ಮಾಡಲು ತರುಣ್ ಸುಧೀರ್ ನಿರ್ಧರಿಸಿದ್ದರು. ದರ್ಶನ್ ಸಹ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದರು. ತರುಣ್ ಕಥೆಗಾಗಿ ರೀಸರ್ಚ್ ಕೂಡ ನಡೆಸಿದ್ದರು. ಆದರೆ ಕಾರಣಾಂತರಗಳಿಂದ ಈ ಪ್ರಯತ್ನ ಮುಂದುವರೆಯಲಿಲ್ಲ. ಇವತ್ತಿಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಈ ಸಿನಿಮಾ ಬಗ್ಗೆ ಭರವಸೆಯಿಂದ ಇದ್ದಾರೆ.
3. ಸರ್ವಾಂತರ್ಯಾಮಿ
'ಸಾರಥಿ' ಸಕ್ಸಸ್ ಬೆನ್ನಲ್ಲೇ ದಿನಕರ್ ನಿರ್ದೇಶನದಲ್ಲಿ 'ಸರ್ವಾಂತರ್ಯಾಮಿ' ಟೈಟಲ್‌ನಲ್ಲಿ ಸಿನಿಮಾ ಬರುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಅದು ನಿಜವಾಗಲಿಲ್ಲ. ದರ್ಶನ್ 50ನೇ ಸಿನಿಮಾ 'ಸರ್ವಾಂತರ್ಯಾಮಿ' ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಚಾಲೆಂಜಿಂಗ್ 56 ಸಿನಿಮಾ ಮುಗಿಸಿದರೂ ಆ ಸಿನಿಮಾ ಮಾತ್ರ ಬರಲಿಲ್ಲ.
4. ನವಗ್ರಹ
ದಿನಕರ್ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬಂದಿದ್ದ ಪ್ರಯೋಗಾತ್ಮಕ ಸಿನಿಮಾ 'ನವಗ್ರಹ'. ಅವತ್ತಿನ ಕಾಲಕ್ಕೆ ಸಿನಿಮಾ ದೊಡ್ಡದಾಗಿ ಸದ್ದು ಮಾಡದೇ ಇರಬಹುದು. ಆದರೆ ಅಭಿಮಾನಿಗಳು ಆ ಚಿತ್ರವನ್ನು ಇನ್ನು ಮರೆತ್ತಿಲ್ಲ. ಚಿತ್ರದ ಸೀಕ್ವೆಲ್ ಮಾಡಲು ದಿನಕರ್ ಮೊದಲೇ ತೀರ್ಮಾನಿಸಿದ್ದರು. ಅದೇ ಕಾರಣಕ್ಕೆ ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಇಟ್ಟಿದ್ದರು. ಇವತ್ತಿಗೂ ಆ ಸಿನಿಮಾ ಮುಂದುವರೆದ ಭಾಗ ಮಾಡಲು ದಿನಕರ್ ಉತ್ಸುಕರಾಗಿದ್ದಾರೆ. ಆದರೆ ಅದಕ್ಕೆ ಕಾಲ ಕೂಡಿಬರಬೇಕಿದೆ.
5. ಗೋಲ್ಡ್ ರಿಂಗ್
ಎರಡು ವರ್ಷಗಳ ಹಿಂದೆ ದರ್ಶನ್ 'ಗೋಲ್ಡ್ ರಿಂಗ್' ಎನ್ನುವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಬಂದಿತ್ತು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಈ ವಿಚಾರ ಖಚಿತಪಡಿಸಿದ್ದರು. ಚಿತ್ರದಲ್ಲಿ ದರ್ಶನ್ ನೇವಿ ಆಫೀಸರ್ ಆಗಿ ನಟಿಸುತ್ತಾರೆ ಎನ್ನಲಾಗ್ತಿತ್ತು. 'ರಾಜವೀರ ಮದಕರಿ ನಾಯಕ' ಸಿನಿಮಾ ನಿಂತ ಬೆನ್ನಲ್ಲೇ ಈ ಸಿನಿಮಾ ಬಗ್ಗೆ ಸುದ್ದಿ ವೈರಲ್ ಆಗಿತ್ತು. ಆದರೆ ಕೊನೆಗೆ ರಾಕ್‌ಲೈನ್- ದರ್ಶನ್ ಕಾಂಬಿನೇಷನ್‌ನಲ್ಲಿ 'ಕಾಟೇರ' ಸಿನಿಮಾ ಬಂತು. 'ಗೋಲ್ಡ್ ರಿಂಗ್' ಕಥೆ ಏನಾಯ್ತು? ಗೊತ್ತಿಲ್ಲ.
6. ಆಸ್ಫೋಟ
ಬರೋಬ್ಬರಿ 11 ವರ್ಷಗಳ ಹಿಂದೆ ದರ್ಶನ್ 'ಆಸ್ಫೋಟ' ಎನ್ನುವ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಎಎಂಆರ್ ರಮೇಶ್ ಈ ಚಿತ್ರ ಕಟ್ಟಿಕೊಡಲು ಮುಂದಾಗಿದ್ದರು. ರಾಜೀವ್ ಗಾಂಧಿ ಹತ್ಯೆ ಸುತ್ತಾ ಈ ಕಥೆ ಕೂಡ ಸುತ್ತುತ್ತದೆ. ಚಿತ್ರದಲ್ಲಿ ತಮಿಳುನಾಡಿನ ನಿಷ್ಠಾವಂತ ಪೊಲೀಸ್ ಅಧಿಕಾರಿ ಕಾರ್ತಿಕೇಯನ್ ಕಥೆ ಕಟ್ಟಿಕೊಡಲು ನಿರ್ಧರಿಸಿದ್ದರು. ದರ್ಶನ್ ಜೊತೆಗೂ ಮಾತುಕತೆ ನಡೆಸಿದ್ದರು. ದರ್ಶನ್ ಸಹ ಕಥೆ ಹೇಳಿ ಥ್ರಿಲ್ಲಾಗಿದ್ದರು ಎಂದು ನಿರ್ದೇಶಕರು ಹೇಳಿದ್ದರು. ಆದರೆ ಆ ಸಿನಿಮಾ ಮಾತ್ರ ಬರಲೇಯಿಲ್ಲ.


Click it and Unblock the Notifications











