ಕನ್ನಡಿಗರಿಗೆ ಕನ್ನಡಿಗರೇ ಶತ್ರು; ಹಿಂದಿ ಯೂಟ್ಯೂಬರ್ ಜೊತೆ ಸೇರಿ ಮಾಡಿದ ಕೆಲಸಕ್ಕೆ ವ್ಯಾಪಕ ಆಕ್ರೋಶ
ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರು ಸಿಡಿದೇಳುತ್ತಲೇ ಇದ್ದಾರೆ. ಇತ್ತೀಚೆಗೆ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಕೆಲವರು ಮಾತ್ರ ಇದನ್ನು ಒಪ್ಪದೇ ಹುಚ್ಚಾಟ ಮೆರೆಯುತ್ತಾರೆ. ಕನ್ನಡಪರ ಹೋರಾಟವನ್ನು ಕೂಡ ಪ್ರಶ್ನಿಸುತ್ತಾರೆ. ಸದ್ಯ ಇದೇ ರೀತಿ ಕನ್ನಡಿಗರನ್ನು ಕೆಣಕಿದ ಹಿಂದಿ ಯೂಟ್ಯೂಬರ್ ಮಾಡಿರುವ ರೀಲ್ಸ್ ಒಂದು ವೈರಲ್ ಆಗ್ತಿದೆ. ವಿಪರ್ಯಾಸ ಅಂದ್ರೆ ಕನ್ನಡದ ಇಬ್ಬರು ಇನ್‌ಫ್ಲುರೆನ್ಸರ್ ಆತನ ಜೊತೆ ಕೈ ಜೋಡಿಸಿದ್ದಾರೆ.
ಕಂಟೆಂಟ್‌ಗೋಸ್ಕರ ಹೀಗೆ ಕನ್ನಡದ ಬಗ್ಗೆ ಕನ್ನಡಪರ ಹೋರಾಟವನ್ನು ಗೇಲಿ ಮಾಡುವಂತೆ ವೀಡಿಯೋ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ಶುರುವಾಗಿದೆ. ಕಳೆದ ಎರಡು ದಿನಗಳಿಂದ ವೀಡಿಯೋ ವೈರಲ್ ಆಗಿ ಟೀಕೆ ಹೆಚ್ಚಾಗುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಡಿಲೀಟ್ ಮಾಡಿದ್ದಾರೆ. ಆದರೂ ಕನ್ನಡಿಗರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಕ್ಕೆ ಅವಮಾನ ಮಾಡಿದ ಹಿಂದಿ ಯೂಟ್ಯೂಬರ್ ಜೊತೆ ಕನ್ನಡಿಗರು ಕೈ ಜೋಡಿಸಿರುವ ಬಗ್ಗೆ ಆಕ್ರೋಶ ಮುಂದುವರೆದಿದೆ.

ಮಹಾರಾಷ್ಟ್ರದ ಯೂಟ್ಯೂಬರ್ ನಿಕುಂಜ್ ಲೋಟಿಯಾ ಹಾಗೂ ಕರ್ನಾಟಕದ ಮೂಲಕ ಇನ್‌ಫ್ಲುಯೆನ್ಸರ್ಸ್ ಆಗಿರುವ ಚೇತನ್ ಮರಂಬೀದ್ ಮತ್ತು ಶಿವು ಎನ್ಜಿ ಒಂದು ವೀಡಿಯೋ ಮಾಡಿದ್ದಾರೆ. ಅದೇ ವೀಡಿಯೋ ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗರಿಬ್ಬರು ಅಂಗಡಿ ಮುಂದೆ ನಿಂತಿರುತ್ತಾರೆ. ಆಗ ಕಳ್ಳ ಆವರ ಪರ್ಸ್ ಕದ್ದು ಓಡಿ ಹೋಗುತ್ತಾನೆ. ಅದನ್ನು ನೋಡಿ ಹಿಂದಿವಾಲಾ(ನಿಕುಂಜ್ ಲೋಟಿಯಾ) ಒಬ್ಬ ಅಲ್ಲಿಗೆ ಬರ್ತಾನೆ. ನಿಮಗೆ ಏನೋ ವಿಷಯ ಹೇಳಬೇಕು ಎಂದು ಹಿಂದಿಯಲ್ಲಿ ಮಾತನಾಡಲು ಮುಂದಾಗುತ್ತಾನೆ.
ಕೂಡಲೇ ಅವರಿಬ್ಬರು ಏಯ್ ಕನ್ನಡದಲ್ಲಿ ಮಾತನಾಡು ಜೋರು ಮಾಡುತ್ತಾರೆ. ಬಳಿಕ ಫೋನ್ ತೆಗೆದು ತಾನು ಹೇಳಬೇಕು ಎಂದುಕೊಂಡಿದ್ದನ್ನು ಕನ್ನಡಕ್ಕೆ ಟ್ರಾನ್ಸ್‌ಲೇಟ್ ಮಾಡಿ ಕೇಳಿಸುತ್ತಾನೆ. ಆಗ ಇಬ್ಬರಿಗೂ ಪರ್ಸ್ ಕಳುವಾಗಿರುವ ವಿಷಯ ಗೊತ್ತಾಗುತ್ತದೆ. ಮೊದ್ಲೆ ಯಾಕೆ ಹೇಳಲಿಲ್ಲ ಎಂದು ಇಬ್ಬರು ಹಿಂದಿಯಲ್ಲೇ ಕೇಳ್ತಾರೆ.. ಭಾಷೆ ಗೊತ್ತಿಲ್ಲ ಅಂದ್ರೆ ಏನೆಲ್ಲಾ ಆಗುತ್ತೆ ನೋಡಿ ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಹಂಚಿಕೊಂಡಿದ್ದಾರೆ. ರೀಲ್ಸ್ ಸಖತ್ ವೈರಲ್ ಆಗಿದೆ.
ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರು ಧ್ವನಿ ಎತ್ತುವುದನ್ನು ಅಣಕ ಮಾಡುವಂತೆ ವೀಡಿಯೋ ಮಾಡಿರುವುದು ಗೊತ್ತಾಗ್ತಿದೆ. ಆದರೆ ಅದಕ್ಕಾಗಿ ಹಿಂದಿ ಇನ್‌ಫ್ಲುಯೆನ್ಸರ್ ಜೊತೆ ಕನ್ನಡದ ಇಬ್ಬರು ಇನ್‌ಫ್ಲುಯೆನ್ಸರ್ಸ್ ಸೇರಿಕೊಂಡಿರುವುದು ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಸಿ ಬಿಸಿ ಚರ್ಚೆ ನಡೀತಿದೆ.
ಹಿಂದಿ ಹೇರಿಕೆ ವಿರುದ್ಧ ಬರೀ ಕರ್ನಾಟಕದಲ್ಲಿ ಹೋರಾಟ ನಡೆಯುತ್ತಿಲ್ಲ. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತದೆ. ಮಹಾರಾಷ್ಟ್ರದಲ್ಲಿ ಕೂಡ ಮರಾಠಿ ಭಾಷಿಕರು ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿದ್ದಾರೆ. ಹಾಗಿರುವಾಗ ಮರಾಠಿ ಯೂಟ್ಯೂಬರ್ ಈ ರೀತಿ ಕನ್ನಡಿಗರನ್ನು ಅಣಕಿಸುವುದು, ಅದಕ್ಕೆ ಉತ್ತರ ಕರ್ನಾಟಕದವರು ಸಾಥ್ ಕೊಡುವುದು ಎಷ್ಟು ಸರಿ ಎಂದು ಚರ್ಚೆ ಶುರುವಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ರಿಪೋರ್ಟ್ ಮಾಡಿದ್ದಕ್ಕೆ ವಿಡಿಯೋ ಡಿಲೀಟ್ ಆಗಿದೆ. ಫೇಸ್‌ಬುಕ್‌ನಲ್ಲಿ ಕೂಡ ರಿಪೋರ್ಟ್ ಮಾಡಿ ವಿಡಿಯೋ ತೆಗೆಯುವಂತೆ ಮಾಡಬೇಕು ಎಂದು ಮನವಿ ಮಾಡಲಾಗುತ್ತಿದೆ. ಕನ್ನಡ ಸಿನಿಮಾ ತಾರೆಯರು ಸೇರಿದಂತೆ ಕೆಲವರು ಇನ್‌ಸ್ಟಾಗ್ರಾಮ್‌ನಲ್ಲಿ ನಿಕುಂಜ್ ಲೋಟಿಯಾ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಕೆಲವರು ಆ ವಿಡಿಯೋ ನೋಡಿ ಲೈಕ್ ಮಾಡಿದ್ದಾರೆ. ಈ ಬಗ್ಗೆ ಕೂಡ ಬೇಸರ ವ್ಯಕ್ತವಾಗುತ್ತಿದೆ.
ರೀಲ್ಸ್ ಮಾಡೋಕೆ ಸಾಕಷ್ಟು ವಿಚಾರಗಳಿವೆ. ಅದನ್ನೆಲ್ಲ ಬಿಟ್ಟು ಭಾಷೆ, ಹೋರಾಟದ ಸೂಕ್ಷ್ಮತೆ ಗೊತ್ತಿಲ್ಲದೇ ಹೀಗೆಲ್ಲಾ ವ್ಯಂಗ್ಯ ಮಾಡಿ ಹುಚ್ಚಾಟ ಮೆರೆಯಬಾರದು ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಹೀಗೆ ರೀಲ್ಸ್ ಮಾಡುವವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಹೇಳುತ್ತಿದ್ದಾರೆ.


Click it and Unblock the Notifications











