ಅವತ್ತಿನ ಕಾಲಕ್ಕೆ 'ಆಕಾಶ್' ಸಿನಿಮಾ ಬಜೆಟ್, ಕಲೆಕ್ಷನ್ ಎಷ್ಟಾಗಿತ್ತು? ಎಲ್ಲೆಲ್ಲಿ ಶೂಟಿಂಗ್ ನಡೆದಿತ್ತು?
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ವಾರ 'ಆಕಾಶ್' ಸಿನಿಮಾ ರೀ-ರಿಲೀಸ್ ಆಗ್ತಿದೆ. ಹೊಸ ತಂತ್ರಜ್ಞಾನದಲ್ಲಿ ಚಿತ್ರವನ್ನು ಮತ್ತೆ ತೆರೆಮೇಲೆ ತರಲಾಗುತ್ತಿದೆ. 2005, ಏಪ್ರಿಲ್ 29ರಂದು ಈ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ತೆರೆಕಂಡಿತ್ತು. ಮಹೇಶ್ ಬಾಬು ನಿರ್ದೇಶನ, ಆರ್.ಪಿ ಪಟ್ನಾಯಕ್ ಸಂಗೀತ, ಪುನೀತ್-ರಮ್ಯಾ ನಟನೆ ಎಲ್ಲಾ ಸೇರಿ ಸಿನಿಮಾ ಗೆದ್ದಿತ್ತು.
ಕಳೆದ 3 ವರ್ಷಗಳಿಂದ ಅಪ್ಪು ಹುಟ್ಟುಹಬ್ಬಕ್ಕೆ ಅವರ ಸೂಪರ್ ಹಿಟ್ ಸಿನಿಮಾಗಳು ಮತ್ತೆ ತೆರೆಬರ್ತಿದೆ. 'ಜಾಕಿ' ಹಾಗೂ 'ಅಪ್ಪು' ಬಳಿಕ ಈ ಬಾರಿ 'ಆಕಾಶ್' ಸಿನಿಮಾ ಸರದಿ. ಅಶ್ವನಿ ಪುನೀತ್ ರಾಜ್‌ಕುಮಾರ್ ಚಿತ್ರವನ್ನು ಮತ್ತೆ ಬೆಳ್ಳಿತೆರೆಗೆ ತರ್ತಿದ್ದಾರೆ. ಶ್ರೀ ಚಕ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅಂದು ಸಿನಿಮಾ ನಿರ್ಮಾಣ ಮಾಡಿದ್ದರು. ಮೊದಲ ಬಾರಿ ತಮ್ಮ ಸಂಸ್ಥೆಯ ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಿಸಿದ್ದರು. ಹಾಗಾಗಿ ಬಜೆಟ್ ಕೊಂಚ ಜಾಸ್ತಿ ಆಗಿತ್ತು.

ನಾಯಕ ಆಕಾಶ್(ಪುನೀತ್ ರಾಜ್‌ಕುಮಾರ್). ಕಷ್ಟಾನೋ ಸುಖಾನೋ ಸದಾ ನಗುತ್ತಿರಬೇಕು ಎನ್ನುವುದು ಅವನ ಪಾಲಿಸಿ. ಮಾತಿನಿಂದಲೇ ಎಂಥವರನ್ನು ಮರಳು ಮಾಡುವ ಆಸಾಮಿ. ತಂಗಿ ಮದುವೆಗಾಗಿ ವಿಡಿಯೋಗ್ರಾಫರ್, ಸ್ವಿಮ್ಮಿಂಗ್ ಕೋಚ್, ಕಾರ್ ಡ್ರೈವಿಂಗ್ ಟೀಚರ್ ಎಲ್ಲವೂ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ಆಕಾಶ್ ಒಳ್ಳೆ ಗುಣಕ್ಕೆ ಶ್ರೀಮಂತರ ಮನೆ ಹುಡುಗಿ ನಂದಿನಿ(ರಮ್ಯಾ) ಫಿದಾ ಆಗಿ ಪ್ರೀತಿಲಿ ಬೀಳುತ್ತಾಳೆ. ಆದರೆ ಶ್ರೀಮಂತ ಅಣ್ಣಂದಿರು ಇಬ್ಬರ ಮದುವೆಗೆ ಒಪ್ತಾರಾ? ಇಲ್ವಾ? ಅನ್ನುವುದೇ ಸಿನಿಮಾ ಕಥೆ.
ಸಿಂಪಲ್ ಕಥೆಯನ್ನು ಮಹೇಶ್ ಬಾಬು ಬಹಳ ಸೊಗಸಾಗಿ ತೆರೆಗೆ ತಂದಿದ್ದರು. ಆರ್. ಪಿ ಪಟ್ನಾಯಕ್ ಸಂಗೀತ ಅದಕ್ಕೆ ಹೆಚ್ಚಿನ ಬಲ ತುಂಬಿತ್ತು. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಬಹುತೇಕ ಚಿತ್ರೀಕರಣ ನಡೆದಿತ್ತು. 2 ಸಾಂಗ್ಸ್ ಮಾತ್ರ ವಿದೇಶದಲ್ಲಿ ಸೆರೆಹಿಡಿಯಲಾಗಿತ್ತು. ಇದೇ ಕಾರಣಕ್ಕೆ ಬಜೆಟ್ ಒಂದು ಪಟ್ಟು ಜಾಸ್ತಿ ಆಗಿತ್ತು. ಕರ್ನಾಟಕದಲ್ಲಿ ನಡೆದ ಸಿನಿಮಾ ಚಿತ್ರೀಕರಣಕ್ಕೆ 90 ಲಕ್ಷ ರೂ.ವರೆಗೆ ಖರ್ಚಾಗಿತ್ತು. ಆದರೆ ವಿದೇಶದ ಚಿತ್ರೀಕರಣಕ್ಕೆ 90 ಲಕ್ಷ ರೂ. ಖರ್ಚು ಮಾಡುವಂತಾಗಿತ್ತು. ಒಟ್ಟಾರೆ 2 ಕೋಟಿ ರೂ. ವೆಚ್ಚದಲ್ಲಿ 'ಆಕಾಶ್' ಸಿನಿಮಾ ನಿರ್ಮಾಣವಾಗಿತ್ತು.
ಅವತ್ತಿನ ಕಾಲಕ್ಕೆ 2 ಕೋಟಿ ರೂ. ಎನ್ನುವುದು ಕನ್ನಡದಲ್ಲಿ ದೊಡ್ಡ ಬಜೆಟ್. ಶತದಿನೋತ್ಸವ ಆಚರಿಸಿದ್ದ ಸಿನಿಮಾ 10 ಕೋಟಿ ರೂ.ವರೆಗೆ ಬ್ಯುಸಿನೆಸ್ ಮಾಡಿತ್ತು. ಮೊದಲ 3 ವಾರಕ್ಕೆ 2 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿ ಆಗಿತ್ತು. ಅಲ್ಲಿವರೆಗೆ ಡಾ. ರಾಜ್‌ಕುಮಾರ್ ಸಂಸ್ಥೆಯಲ್ಲಿ ನಿರ್ಮಾಣವಾಗಿದ್ದ ಎಲ್ಲಾ ಸಿನಿಮಾಗಳ ಗಳಿಕೆಯನ್ನು 'ಆಕಾಶ್' ಮೀರಿಸಿತ್ತು. ಬಜೆಟ್ ವಿಚಾರದಲ್ಲಿ ಪಾರ್ವತಮ್ಮ ಮೊದಲಿನಿಂದಲೂ ಬಹಳ ಕಟ್ಟುನಿಟ್ಟು. ಆದರೆ 'ಆಕಾಶ್' ಚಿತ್ರದ ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಬೇಕು ಎಂದು ಅಪ್ಪು ಪಟ್ಟುಹಿಡಿದಿದ್ದರಂತೆ. ಆರಂಭದಲ್ಲಿ ಬೇಡ ಅಂದಿದ್ದ ಪಾರ್ವತಮ್ಮ ಕೊನೆಗೆ ಒಪ್ಪಿದ್ದರು.
ಚಿತ್ರದಲ್ಲಿ ರಮ್ಯಾ ಅವರಿಗೆ ಪುನೀತ್ ಕಾರ್ ಡ್ರೈವಿಂಗ್ ಹೇಳಿಕೊಡುವ ದೃಶ್ಯಗಳಿವೆ. ಅಭಿಮಾನಿಯೊಬ್ಬರು ಪ್ರೀತಿಯಿಂದ ಮಾರುತಿ ಕಾರ್ ಅನ್ನು ಚಿತ್ರೀಕರಣಕ್ಕಾಗಿ ಕೊಟ್ಟಿದ್ದರಂತೆ. ಭೋವಿಪಾಳ್ಯ, ವಿಂಡ್ಸರ್ ಮ್ಯಾನರ್ ರೋಡ್, ರಾಜಾಜಿನಗರ, ಬಿಟಿಎಂ ಬಡಾವಣೆಯಲ್ಲಿ ಚಿತ್ರದ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. 35 ಚಿತ್ರಮಂದಿರಗಳಲ್ಲಿ 'ಆಕಾಶ್' ಸಿನಿಮಾ ತೆರೆಕಂಡಿತ್ತು. 20ಕ್ಕೂ ಅಧಿಕ ಕಡೆಗಳಲ್ಲಿ 100 ದಿನ ಆಚರಿಸಿಕೊಂಡಿತ್ತು. ಶತದಿನೋತ್ಸವ ಕಾರ್ಯಕ್ರಮಕ್ಕೆ ತೆಲುಗು ನಟ ಚಿರಂಜೀವಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಾರ್ ಚೇಸಿಂಗ್ ದೃಶ್ಯದ ಚಿತ್ರೀಕರಣದ ವೇಳೆ ಪುನೀತ್ ಕಾಲಿಗೆ ಪೆಟ್ಟಾಗಿತ್ತು. ಕೆ. ಜಿ ರಸ್ತೆಯ ಮೇನಕಾ ಚಿತ್ರಮಂದಿರದಲ್ಲಿ ತೆರೆಕಂಡಿದ್ದ 'ಆಕಾಶ್' ಚಿತ್ರದ 48 ಶೋಗಳು ಹೌಸ್‌ಫುಲ್ ಆಗಿ ದಾಖಲೆ ಬರೆದಿತ್ತು. ಒಟ್ಟಾರೆ ಈ ವಾರ ಸಿನಿಮಾ ಮತ್ತೆ ತೆರೆಗೆ ಬರ್ತಿರೋದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.


Click it and Unblock the Notifications











