ಯಾರ ಬಳಿಯೂ ನಿರ್ದೇಶನ ಕಲಿಯದ ಕಾಶಿನಾಥ್ ಆ ಕಾಲದಲ್ಲೇ ಬಾಲಿವುಡ್ ನಲ್ಲಿ ಸಿನಿಮಾ ಮಾಡಿದ್ರು ..!
ಕಾಶಿನಾಥ್ ಪ್ರಾರಂಭದ ದಿನಗಳಲ್ಲಿ ಅವರ ಜೊತೆಗೆ ಇದ್ದಿದ್ದು ಸುರೇಶ್ ಹೆಬ್ಳಿಕರ್, ರಾಮದಾಸ್ ನಾಯ್ಡು ರಂತಹ ಪ್ರತಿಭಾನ್ವಿತವರು. ಇವರೆಲ್ಲರೂ ಸೇರಿ ಅಸೀಮಾ ಅನ್ನೋ ತಂಡ ಕಟ್ಟಿಕೊಂಡು ಒಂದು ಸಿನಿಮಾ ಕ್ಲಬ್ ಮಾಡಿಕೊಂಡಿದ್ರು. ಈ ಕ್ಲಬ್ ನಲ್ಲಿ ಹಲವಾರು ವಿದೇಶಿ ಚಿತ್ರಗಳನ್ನ ನೋಡ್ತಾ ಸಿನಿಮಾ ಬಗ್ಗೆ ತಮ್ಮದೇ ಆದ ಚಿಂತನೆಗಳನ್ನ ಬೆಳೆಸಿಕೊಂಡ್ರು ಕಾಶಿನಾಥ್. ಆ ಕಾಲದಲ್ಲಿ ಕಾಶಿನಾಥ್ ಸ್ಲಿಪ್ ಅನ್ನೋ ಕಿರುಚಿತ್ರ ಮಾಡಿದ್ರಂತೆ. ಅದನ್ನ ಅಸೀಮಾ ನಡೆಸಿದ ಪ್ರದರ್ಶನದಲ್ಲಿ ನೋಡಿ ವಿದೇಶಿ ನಿರ್ದೇಶಕರೂ ಮೆಚ್ಚಿಕೊಂಡಿದ್ರು. ಅಲ್ಲಿಂದ ಮುಂದೆ ಕಾಶಿನಾಥ್ ಗೆ ಪೂರ್ಣಪ್ರಮಾಣದ ಸಿನಿಮಾ ಮಾಡೋ ಆತ್ಮವಿಶ್ವಾಸ ಬಂತು. ಸುರೇಶ್ ಹೆಬ್ಳಿಕರ್ ರನ್ನ ನಾಯಕನನ್ನಾಗಿಸಿ ಅಪರೂಪದ ಅತಿಥಿಗಳು ಅನ್ನೋ ಸಿನಿಮಾ ಮಾಡಿದ್ರು.
ಮೊದಲ ಸಿನಿಮಾನೇ ಸಕ್ಸಸ್ ಕಂಡ್ತು. ಬಳಿಕ ಅಪರಿಚಿತ ಅನ್ನೋ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಮಾಡಿದ್ರು. ಹಾಲಿವುಡ್ ಮಾಧರಿಯಲ್ಲಿದ್ದ ಈ ಥ್ರಿಲ್ಲರ್ ಮೂವಿ ನೋಡಿ ಆವತ್ತಿಗೆ ಇಡೀ ದಕ್ಷಿಣ ಭಾರತವೇ ಬೆರಗಾಗಿ ಹೋಗಿತ್ತು. ತೆಲುಗಿನಲ್ಲಿ ರಿಮೇಕ್ ಆದ ಸಿನಿಮಾ ಅಲ್ಲಿಯೂ ಶತದಿನ ಆಚರಿಸ್ತು. ಬಳಿಕ ಹಿಂದಿಗೂ ಈ ಸಿನಿಮಾ ರಿಮೇಕ್ ಆಯ್ತು. ಹಿಂದಿಯಲ್ಲಿ ಬೇಶಕ್ ಹೆಸರಿನಲ್ಲಿ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದು ಖುದ್ದು ಕಾಶಿನಾಥ್.

ಇವತ್ತಿಗೂ ನಮ್ಮ ನಿರ್ದೇಶಕರು ಬಾಲಿವುಡ್ ಗೆ ಹೋಗ್ತಿದ್ದೀವಿ ಅಂತ ಹೆಮ್ಮೆಯಿಂದ ಹೇಳಿಕೊಳ್ತಾರೆ. ಆದ್ರೆ ಕಾಶಿನಾಥ್ 1981ರಲ್ಲಿ ಬಾಲಿವುಡ್ ನಲ್ಲಿ ಸಿನಿಮಾ ನಿರ್ದೇಶನ ಮಾಡಿ ಬಂದಿದ್ದರು. ಮಿಥುನ್ ಚಕ್ರವರ್ತಿ, ಯೋಗಿತಾ ಬಾಲಿ ನಟನೆಯಲ್ಲಿ ಬಂದ ಬೇಶಕ್ ಸಿನಿಮಾ ಬಾಲಿವುಡ್ ಮಂದಿಯನ್ನೂ ಬೆರಗುಗೊಳಿಸಿತ್ತು. ಕೇವಲ ಹಿಂದಿಯಲ್ಲಿ ಅಷ್ಟೇ ಅಲ್ಲ ಅಂದಕಾಲತ್ತಿಲ್ ಈ ಸಿನಿಮಾ ಮಲಯಾಳಂನಲ್ಲಿಯೂ ರಿಮೇಕ್ ಆಗಿತ್ತು.
ಇನ್ನೂ ಕಾಶಿನಾಥ್ ತಾವೇ ನಾಯಕನಾಗಿ ನಟಿಸಿ ನಿರ್ದೇಶಿಸಿಸದ ಸಿನಿಮಾ ಅನುಭವ ಕೂಡ ಹಿಂದಿಗೆ ರಿಮೇಕ್ ಆಯ್ತು. ಅದನ್ನೂ ಕೂಡ ಹಿಂದಿಯಲ್ಲಿ ಡೈರೆಕ್ಟ್ ಮಾಡಿದ್ದು ಖುದ್ದು ಕಾಶಿನಾಥ್. ಶೇಖರ್ ಸುಮನ್, ಪದ್ಮಿನಿ ಕೊಲ್ಹಾಪುರಿ ನಟಿಸಿದ ಅನುಭವ್ ಸಿನಿಮಾ ಬಾಲಿವುಡ್ ನಟ-ನಿರ್ದೇಶಕರನ್ನ ದಂಗು ಬಡಿಸಿತ್ತು.
ಆಗ ಕಾಶಿನಾಥ್ ರನ್ನ ಮೆಚ್ಚಿಕೊಂಡವರಲ್ಲಿ ಈಗ ಮಿಸ್ಟರ್ ಪರ್ಫಕ್ಟ್ ಅಂತ ಹೆಸರು ಪಡೆದಿರೋ ಅಮೀರ್ ಖಾನ್ ಕೂಡ ಒಬ್ರು. ಮುಂದೆ ಕಾಶಿನಾಥ್ ರ ಅವಳೇ ನನ್ ಹೆಂಡತಿ ಸಿನಿಮಾ ಕೂಡ ಜವಾನಿ ಜಿಂದಾಬಾದ್ ಹೆಸರಿನಲ್ಲಿ ಹಿಂದಿಯಲ್ಲಿ ರಿಮೇಕ್ ಆಯ್ತು. ಅದ್ರಲ್ಲಿ ಕಾಶಿನಾಥ್ ನಟಿಸಿದ ಪಾತ್ರದಲ್ಲಿ ಅಮೀರ್ ಖಾನ್ ನಟಿಸಿದ್ರು.

ಹೀಗೆ ಆವತ್ತಿಗೆ ಕಾಶಿನಾಥ್ ಹೆಸರು ಟಾಲಿವುಡ್, ಕಾಲಿವುಡ್. ಮಾಲಿವುಡ್. ಬಾಲಿವುಡ್ ಎಲ್ಲೆಲ್ಲೂ ರಾರಾಜಿಸ್ತಾ ಇತ್ತು. ಚಿಕ್ಕ ಬಜೆಟ್ ನಲ್ಲಿ ಮನಮುಟ್ಟುವ ಕಾಶಿ ನಾಥ್ ರ ಕಲೆಗೆ ಆವತ್ತಿನ ಸಿನಿಕರ್ಮಿಗಳು ಬೆರಗಾಗಿ ಹೋಗಿದ್ರು. ಒಟ್ನಲ್ಲಿ ಕಾಶಿನಾಥ್ ಕನ್ನಡ ಚಿತ್ರರಂಗದ ಅಪರೂಪದ ಅತಿಥಿಯಾಗಿದ್ದರು. ಅಪರಿಚಿತನಾಗಿಯೇ ಬಂದು ತಾವು ಕಂಡು ಕೇಳಿದ ಅನುಭವದಿಂದಲೇ ಅಸಾಧ್ಯವಾದ್ದದ್ದನ್ನ ನಿರ್ಮಿಸಿ ಚಲನಚಿತ್ರ ಕಲೆಗೆ ವಿಶೇಷ ನೆಲೆಗಟ್ಟನ್ನೂ ನಿರ್ಮಿಸಿ ಕೊಟ್ಟು ಹೋದರು ಕಾಶಿನಾಥ್.


Click it and Unblock the Notifications











