"ಹೀರೊನ ಓವರ್‌ಟೇಕ್ ಮಾಡ್ತೀಯಾ ಅಂತ ತಲೆಗೆ ರಫ್ ರಫ್ ಅಂತ ಹೊಡೆದ್ರು.. ನನ್ನ ಡ್ಯಾನ್ಸ್ ನೋಡಿ ಅಣ್ಣಾವ್ರು ತಬ್ಬಿಕೊಂಡ್ರು"
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅಭಿಜಿತ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕಿರುತೆರೆಯ 'ಸತ್ಯ' ಧಾರಾವಾಹಿಯಲ್ಲಿ ಪ್ರಮುಖವಾದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ರಾಮಚಂದ್ರರಾಯರಿಗೆ ತಕ್ಕ ತಮ್ಮ ಲಕ್ಷಣನಾಗಿ ವೀಕ್ಷಕರ ಗಮನ ಸೆಳೆದಿದ್ದಾರೆ. ಒಂದ್ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಅಭಿಜಿತ್ ಮಿಂಚಿದ್ದರು. ನಂತರ ಪೋಷಕ ಪಾತ್ರಗಳಲ್ಲಿ ಗಮನ ಸೆಳೆದರು. ಕೆಲ ದಿನಗಳಿಂದ ಅವಕಾಶಗಳು ಇಲ್ಲದೇ ಕಣ್ಮರೆ ಆಗಿದ್ದರು.
ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅಭಿಜಿತ್ ಶೀಘ್ರದಲ್ಲೇ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಇದೆಲ್ಲದರ ನಡುವೆ ಅನುಶ್ರೀ ಆಂಕರ್ ಯೂಟ್ಯೂಬ್ ಚಾನಲ್‌ಗೆ ಸಂದರ್ಶನ ನೀಡಿದ್ದಾರೆ. ಚಿತ್ರರಂಗದ ತಮ್ಮ ಏಳುಬೀಳಿನ ಕಥೆಯನ್ನು ತಾವೇ ವಿವರಿಸಿದ್ದಾರೆ. ಹುಟ್ಟಿನಿಂದ ಹಿಡಿದು ಈಗ ಕಿರುತೆರೆಯಲ್ಲಿ ನಟಿಸುತ್ತಿರುವವರೆಗೆ ತಮ್ಮ ಜೀವನದ ಅಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅವಕಾಶಗಳಿಗಾಗಿ ಅಲೆದಾಡಿದ್ದು ಒಂದೊತ್ತಿನ ಊಟಕ್ಕೂ ಬೆಂಗಳೂರಿನಲ್ಲಿ ಪರದಾಡಿದ್ದು ಮದುವೆ ಆಗಿಯೂ ಕೆಲಸವಿಲ್ಲದೇ ಒದ್ದಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಸಾಕಷ್ಟು ಅವಮಾನಗಳನ್ನು ಅಭಿಜಿತ್ ಎದುರಿಸಿದ್ದಾರೆ. ಮನೆಯಲ್ಲಿ ಯಾರಿಗೂ ಇಷ್ಟವಿಲ್ಲದಿದ್ದರೂ ನಟನಾಗುವ ಹಂಬಲದಿಂದ ಪಟ್ಟ ಪಾಡು ಅಷ್ಟಿಷ್ಟಲ್ಲ. ಮನೆಯಿಲ್ಲದೇ ಮೆಜೆಸ್ಟಿಕ್ ಬಸ್ಟ್‌ಸ್ಯಾಂಡ್, ರೈಲ್ವೆ ಸ್ಟೇಷನ್‌ನಲ್ಲಿ ದಿನಗಳನ್ನು ದೂಡಿದ ಸಂಗತಿಯನ್ನು ಅಭಿಜಿತ್ ಹಂಚಿಕೊಂಡಿದ್ದಾರೆ. ಚೆನ್ನಾಗಿ ನಟಿಸಿದ್ದಕ್ಕೂ, ಚೆನ್ನಾಗಿ ಡ್ಯಾನ್ಸ್ ಮಾಡಿದ್ದಕ್ಕೂ ಅವಮಾನ ಎದುರಿಸಿದ ಪ್ರಸಂಗಗಳನ್ನು ಬಿಚ್ಚಿಟ್ಟಿದ್ದಾರೆ.
ಗುಂಪಲ್ಲಿ ಗೋವಿಂದ ಪಾತ್ರ
"ಒಂದು ಸಿನಿಮಾ. ದೊಡ್ಡ ಸ್ಟಾರ್ ನಟನ ಜೊತೆ ನಾನು ನಟಿಸುತ್ತಿದ್ದೆ. ಒಂದು ಸಾಂಗ್ ಶೂಟಿಂಗ್. 150 ಜನ ಡ್ಯಾನ್ಸರ್ಸ್ ಇದ್ದರು. ಆ ನೂರೈವತ್ತು ಜನರಲ್ಲಿ ಪ್ರೇಕ್ಷಕರು ನೋಡೋದು ಸ್ಟಾರ್‌ನ ಅಲ್ವಾ? ಅದರಲ್ಲಿ ನಾನು ನಾಯಕನ ಸ್ನೇಹಿತನ ಪಾತ್ರ ಮಾಡಿದ್ದೆ. ಒಂದು ಸ್ಟೆಪ್ ಹಾಕಬೇಕಿತ್ತು. ಮೊದಲಿನಿಂದಲೂ ಯಾವುದೇ ಪಾತ್ರ ಕೊಟ್ಟರು ಚೆನ್ನಾಗಿ ಮಾಡ್ತಿದ್ದೆ. ಗುಂಪಲ್ಲಿ ಗೋವಿಂದ ಪಾತ್ರ. ಆದರೂ ಮಾಡ್ತಿದ್ದೆ. ಉಡುಪಿ ಜಯರಾಂ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡುತ್ತಿದ್ದರು.

ನನ್ನನ್ನು ಬಲಿಪಶು ಮಾಡಿದರು
ಶೂಟಿಂಗ್ ನಡುವೆ ದೇವಿ ಅಂತ ಉಡುಪಿ ಜಯರಾಂ ಅಸಿಸ್ಟೆಂಟ್ ದೇವಿ ಅಂತ, ಅವರ ಹೆಸರು ಹೇಳುತ್ತೇನೆ. ಅವರು ಕಟ್ ಕಟ್ ಎಂದು ಹೇಳಿ ಬಂದ ರಫ್ ರಫ್ ಅಂತ ಹೊಡೆದು ಔಟ್, ಗೆಟ್ ಔಟ್ ಅಂದ್ರು. ಹೋಗು ನೀನು. ಹೀರೊನ ಓವರ್‌ಟೇಕ್ ಮಾಡಿ ಡ್ಯಾನ್ಸ್ ಮಾಡ್ತೀಯಾ ಅಂತ ಹೊಡೆದ್ರು. ಹೀರೊನ ಇಂಪ್ರೆಸ್ ಮಾಡೋಕೆ ನನ್ನನ್ನು ಬಲಿಪಶು ಮಾಡಿದರು. ಅದನ್ನು ಇಡೀ ಸೆಟ್ ನೋಡುತ್ತಿತ್ತು.
'ಜೀವನಚೈತ್ರ' ಚಿತ್ರದಲ್ಲಿ ಅವಕಾಶ
ಇದೇ ಕೊರಿಯೋಗ್ರಫರ್ ಜೊತೆ 'ಜೀವನಚೈತ್ರ' ಸಿನಿಮಾ ಚಿತ್ರೀಕರಣ ನಡೀತು. ಅಣ್ಣಾವ್ರು ಹೀರೊ. ನಾನು ಅವರ ಮಗನ ಪಾತ್ರ ಮಾಡಿದ್ದೆ. ಸೇಮ್ ಇದೇ ಕೊರಿಯೋಫರ್, ಅಸಿಸ್ಟೆಂಟ್ ಅಲ್ಲಿ ಬಂದರು. ಅವರು ಅಂದಿನಿಂದ ನನ್ನನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ನನ್ನನ್ನು ಸೈಡ್‌ಗೆ ಇಟ್ಟು ಬಾಲ್‌ರಾಜ್, ಗುರುದತ್ ಅವರ ಶಾಟ್ಸ್ ತೆಗೆಯುತ್ತಿದ್ದರು. ನಾನು ಸರಿ ಬಿಡು, ಅಣ್ಣಾವ್ರ ಸಿನಿಮಾ, ನಮಗೆ ಅವಕಾಶ ಸಿಕ್ಕಿರುವುದೇ ದೊಡ್ಡ ವಿಚಾರ ಅಂತ ಸುಮ್ಮನಿದ್ದೆ"

ಚೆನ್ನಾಗಿ ಡ್ಯಾನ್ಸ್ ಮಾಡ್ತೀನಿ ಎಂದೆ
ರಾಜ್‌ಕುಮಾರ್ ಶೂಟಿಂಗ್ ನೋಡುತ್ತಿದ್ದರು. ಜಯರಾಂ ಅಭಿಜಿತ್ ಒಳ್ಳೆ ಡ್ಯಾನ್ಸ್ ಮಾಡ್ತಾರೆ. ಅವ್ರನ್ನ ಯಾಕೆ ಅಲ್ಲಿ ಕೂರಿಸಿದ್ದೀರಾ. ಆಗ ಇಲ್ಲ ಅಣ್ಣ, ಓಕೆ ಓಕೆ ಅಂತ ಹೇಳಿ ಕರೆಸಿದ್ರು. ನನಗೆ ಡ್ರಿಲ್ ಮಾಡುವ ತರ ಒಂದು ಮೂಮೆಂಟ್ ಇಟ್ಟರು. ಆಗ ನಾನು ಮೇಡಂ ನಾನು ಚೆನ್ನಾಗಿ ಡ್ಯಾನ್ಸ್ ಮಾಡ್ತೀನಿ. ಈ ಬೀಟ್‌ಗೆ ನಾನು ಡ್ಯಾನ್ಸ್ ಮಾಡ್ಲಾ ಎಂದೆ. ಜಯರಾಂ ಮಾಸ್ಟರ್ ಫಸ್ಟ್ ಕ್ಲಾಸ್ ಮಾಡಿ ಎಂದರು. ಇಲ್ಲ ಇಲ್ಲ ಆ ಟೈಮ್‌ಗೆ ಸಿಂಕ್ ಮಾಡೋಕೆ ಆಗಲ್ಲ ಅಂದ್ರು. ಇಲ್ಲ ಮೇಡಂ ಮಾಡ್ತೀನಿ ಎಂದೆ.
ಕ್ರೆಡಿಟ್ ಅಣ್ಣಾವ್ರಿಗೆ ಹೋಗಬೇಕು
"ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ದೇವರ ಮೇಲೆ ಭಾರ ಹಾಕಿ ಒಂದೇ ಟೇಕ್‌ನಲ್ಲಿ ಮಾಡ್ದೆ. ಎಲ್ಲರೂ ಮೆಚ್ಚಿಕೊಂಡರು. ಅಣ್ಣಾವ್ರು ಬಂದು ತಬ್ಬಿಕೊಂಡರು. ಅವತ್ತು ಎಲ್ಲರೂ ಬ್ಯೂಟಿಫುಲ್ ಎಂದರು. ಒಟ್ನಲ್ಲಿ ಅಣ್ಣಾವ್ರು ಹೇಳಿದ್ದಕ್ಕೆ ಮಾಡಿದೆ. ಅವರ ಮಾತು ಉಳಿಸಿಕೊಟ್ಟೆ. ಆ ಕ್ರೆಡಿಟ್ ಅಣ್ಣಾವ್ರಿಗೆ ಹೋಗಬೇಕು" ಎಂದು ಆ ಘಟನೆಯನ್ನು ಅಭಿಜಿತ್ ವಿವರಿಸಿದ್ದಾರೆ.


Click it and Unblock the Notifications











