"ಪ್ರೇಮ್ ಅದು ಹೇಗೆ ಪ್ರೀತ್ಸಿ ಮದ್ವೆ ಆದ್ರೋ ಗೊತ್ತಿಲ್ಲ, ನನಗೆ ಶಾಕ್ ಆಗಿತ್ತು"; 'ಕರಿಯ' ನಟಿ ಅಭಿನಯಶ್ರೀ
ನಿರ್ದೇಶಕ ಪ್ರೇಮ್ ಹಾಗೂ ನಟಿ ರಕ್ಷಿತಾ ಪ್ರೀತಿಸಿ ಮದುವೆ ಆಗಿದ್ದು ಗೊತ್ತೇಯಿದೆ. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಸದ್ಯ ಪ್ರೇಮ್ 'KD' ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಮತ್ತೊಂದು ರಕ್ಷಿತಾ ಪ್ರೇಮ್ 'ಡಿಕೆಡಿ' ಹಾಗೂ 'ಕಾಮಿಡಿ ಕಿಲಾಡಿಗಳು' ಶೋ ತೀರ್ಪುಗಾರರಾಗಿ ಮುಂದುವರೆದಿದ್ದಾರೆ.
'ಕರಿಯ' ಪ್ರೇಮ್ ನಿರ್ದೇಶಿಸಿದ ಚೊಚ್ಚಲ ಸಿನಿಮಾ. ಮುಂದೆ 'ಎಕ್ಸ್‌ಕ್ಯೂಸ್ ಮೀ', 'ಜೋಗಿ' ಹೀಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದಿದ್ದರು. 'ರಾಜ್- ದಿ ಶೋಮ್ಯಾನ್', 'ಜೋಗಯ್ಯ', 'ದಿ ವಿಲನ್' ರೀತಿಯ ವಿಭಿನ್ನ ಪ್ರಯತ್ನಗಳಿಂದ ಸದ್ದು ಮಾಡಿದ್ದರು. ಇತ್ತೀಚೆಗೆ ದರ್ಶನ್ ನಟಿಸಿದ್ದ 'ಕರಿಯ' ಸಿನಿಮಾ ರೀ-ರಿಲೀಸ್ ಸಹ ಆಗಿತ್ತು.

2003ರಲ್ಲಿ 'ಕರಿಯ' ಸಿನಿಮಾ ತೆರೆಕಂಡು ಹಿಟ್ ಆಗಿತ್ತು. ಎರಡೆರಡು ಬಾರಿ ತೆರೆಕಂಡು ಅಭಿಮಾನಿಗಳ ಮನಗೆದ್ದಿತ್ತು. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಅಭಿನಯಶ್ರೀ ನಟಿಸಿದ್ದರು. ಬಹಳ ವರ್ಷಗಳ ಬಳಿಕ 'ಕರಿಯ' ಚಿತ್ರದಲ್ಲಿ ನಟಿಸಿದ ಅನುಭವವನ್ನು ನಟಿ ಅಭಿನಯ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ದರ್ಶನ್ ಹಾಗೂ ಪ್ರೇಮ್ ಬಗ್ಗೆ ಮಾತನಾಡಿದ್ದಾರೆ.
ತೆಲುಗು ಸಂದರ್ಶನದಲ್ಲಿ ಅಭಿನಯಶ್ರೀ ಮಾತನಾಡಿದ್ದಾರೆ. ಈ ವೇಳೆ ದರ್ಶನ್ ಜೊತೆಗೆ ನಟಿಸಿದ ಬಗ್ಗೆ ಪ್ರಶ್ನೆ ಎದುರಾಗಿದೆ. "ದರ್ಶನ್ ಬಹಳ ಸೈಲೆಂಟ್. ಫನ್ನಿ ಅಂದ್ರೆ ನಿರ್ದೇಶಕ ಪ್ರೇಮ್. ಆತ ಬೆಳಗ್ಗೆ ಗುಡ್ ಮಾರ್ನಿಂಗ್ ಹೇಳೊಕೆ ಕೈ ಕೂಡ ಕುಲುಕುತ್ತಿರಲಿಲ್ಲ. ಹೆಣ್ಣುಮಕ್ಕಳನ್ನು ಮುಟ್ಟುತ್ತಿರಲಿಲ್ಲ. ಆತ ಹೇಗೆ ರಕ್ಷಿತಾ ಅವರನ್ನು ಪ್ರೀತಿಸಿ ಮದುವೆ ಆದ್ರು ಎನ್ನುವುದು ಗೊತ್ತಿಲ್ಲ" ಎಂದು ಅಭಿನಯಶ್ರೀ ಹುಬ್ಬೇರಿಸಿದ್ದಾರೆ.

"ನಿರ್ದೇಶಕ ಪ್ರೇಮ್ ಪ್ರೀತಿಸಿ ಮದುವೆ ಆಗಿದ್ದು ಎಂದು ಗೊತ್ತಾದಾಗ ನನಗೆ ಶಾಕ್ ಆಗಿತ್ತು. ಆತ ಪ್ರೀತ್ಸೋದಾ? ಹೇಗೆ ಸಾಧ್ಯ ಎನಿಸಿತ್ತು. ಯಾಕಂದ್ರೆ ಆತ ಹೆಣ್ಣುಮಕ್ಕಳನ್ನು ಮುಟ್ಟುವವನಲ್ಲ. ನಟಿಸಿ ತೋರಿಸುತ್ತಿದ್ದರು. ಹೀಗೆ ಮಾಡಬೇಕು, ಹಾಗೆ ಮಾಡಬೇಕು ಅಂತ ಹೇಳುತ್ತಿದ್ದರು. ಆದರೆ ಕೈ ಹಿಡಿದು ಮಾತನಾಡುತ್ತಿರಲಿಲ್ಲ ಪ್ರೇಮ್. ಆತ ಹೇಗೆ ಮದುವೆ ಆಗ್ತಾನೆ, ಹೇಗಿರ್ತಾನೆ ಎಂದುಕೊಂಡಿದ್ದೆ. ಕೊನೆಗೆ ನೋಡಿದೆ ಆತ ಖ್ಯಾತ ನಟಿಯನ್ನು ಮದುವೆಯಾದರು" ಎಂದು ನಕ್ಕಿದ್ದಾರೆ.
"ಕೆಲವರು ಮಾತ್ರ ಇಂಡಸ್ಟ್ರಿಯಲ್ಲಿ ಹೀಗೆ ಇರ್ತಾರೆ. ಹೆಣ್ಣುಮಕ್ಕಳನ್ನು ಮುಟ್ಟುವುದಕ್ಕೂ ಹಿಂದು ಮುಂದು ನೋಡ್ತಾರೆ. ವಿಚಿತ್ರ ಎನಿಸಬಹುದು. ಆದರೆ ಒಳ್ಳೆಯದು. ಎಲ್ಲರೂ ಒಂದೇ ರೀತಿ ಇರಬೇಕು ಎನ್ನುವ ನಿಯಮ ಇಲ್ಲ ಅಲ್ಲವೇ? ಪ್ರೇಮ್- ರಕ್ಷಿತಾ ಮದುವೆ ಆದಾಗ ನನಗೆ ನಗು ಬಂತು. ಆಕೆಗೆ ಪ್ರೇಮ್ ಯಾಕೆ ಇಷ್ಟವಾದರೂ ಎನ್ನುವುದು ನಮಗೆ ಗೊತ್ತಿಲ್ಲ. ಒಟ್ನಲ್ಲಿ ಸೂಪರ್" ಎಂದು ಅಭಿನಯಶ್ರೀ ವಿವರಿಸಿದ್ದಾರೆ.
'ಕರಿಯ' ಬಳಿಕ ಅಭಿನಯಶ್ರೀ ಕನ್ನಡದಲ್ಲಿ 'ಶ್ವೇತ ನಾಗು', 'ಜೂಟಾಟ', 'ವಾರೆವಾ', 'ಸೌಂದರ್ಯ ನಿಲಯ' ಸಿನಿಮಾಗಳಲ್ಲಿ ಮಿಂಚಿದ್ದರು. ಸ್ಪೆಷಲ್ ಸಾಂಗ್ಸ್‌ಗೆ ಹೆಜ್ಜೆ ಹಾಕಿ ಗಮನ ಸೆಳೆದ ಅನುರಾಧ ಮಗಳು ಅಭಿನಯಶ್ರೀ. ಈಕೆ ಕೂಡ ನಟಿಸಿದ್ದಕ್ಕಿಂತ ಹೆಚ್ಚು ಬಿಂದಾಸ್ ಸಾಂಗ್ಸ್‌ಗೆ ಡ್ಯಾನ್ಸ್ ಮಾಡಿ ಮೋಡಿ ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅಭಿನಯಶ್ರೀ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಕಳೆದ ವರ್ಷ ತಮಿಳಿನ 'ಸ್ಟೈಕರ್' ಎನ್ನುವ ಚಿತ್ರದಲ್ಲಿ ಮಿಂಚಿದ್ದರು. ತೆಲುಗು ಬಿಗ್‌ಬಾಸ್ ಸೀಸನ್-6 ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ಎರಡು ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿದ್ದರು.


Click it and Unblock the Notifications











