'ಕರಿಮಣಿ ಮಾಲೀಕ', 'ರಾಹುಲ್ಲಾ' ಬಳಿಕ 'ಉಪ್ಪಿನಕಾಯಿ' ಗುಂಗು; ಏನಿದು ಹೊಸ ರೀಲ್ಸ್ ಹಾವಳಿ?
ಈ ಸೋಶಿಯಲ್ ಮೀಡಿಯಾ ಅನ್ನೋದು ವಿಚಿತ್ರ ಪ್ರಪಂಚ ಕಣ್ರೀ. ಯಾವುದು, ಯಾವಾಗ ಟ್ರೆಂಡ್ ಆಗುತ್ತೆ? ಅನ್ನೋದನ್ನು ಹೇಳೋದು ಕಷ್ಟ. ಸಾಮಾನ್ಯರು ಕೂಡ ರಾತ್ರೋರಾತ್ರಿ ಫೇಮಸ್ ಆಗಿಬಿಡುತ್ತಾರೆ. 25 ವರ್ಷಗಳ ಹಿಂದೆ ಬಂದಿದ್ದ 'ಓ ನಲ್ಲ ನೀ ನಲ್ಲ' ಸಾಂಗ್ ಈಗ ಟ್ರೆಂಡ್ ಆಗಿರುವುದು ಗೊತ್ತೇಯಿದೆ. ನಿಂತ್ರು ಕುಂತ್ರು ಮಂದಿ ಇದೇ ಹಾಡನ್ನು ಗುನುಗುವಂತಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ವಿಜಯನಗರದ ಕೊಟ್ಟೂರಿನ ಯುವಕ ಕನಕ ಮಾಡಿದ ಅದೊಂದು ರೀಲ್ಸ್‌ನಿಂದ 'ಓ ನಲ್ಲ ನೀ ನಲ್ಲ' ಹಾಡು ಈಗ ಸಖತ್ ಸೌಂಡ್ ಮಾಡ್ತಿದೆ. ಇನ್ನು ಉದ್ಯಮಿ, ಬಾಣಸಿಗ ಚಂದ್ರು 'ರಾಹುಲ್ಲಾ.. ರಾಹುಲ್ಲಾ' ಎಂದು ಕರೆದಿದ್ದು ಕೂಡ ಟ್ರೆಂಡ್ ಕ್ರಿಯೇಟ್ ಮಾಡಿಬಿಡ್ತು. 'ಓ ನಲ್ಲ ನೀ ನಲ್ಲ' ಜೊತೆ ಚಂದ್ರು 'ರಾಹುಲ್ಲಾ' ಸೇರಿಸಿ ವಿಕಾಸ್ ವಿಕ್ಕಿಪೀಡಿಯ ಮತ್ತಷ್ಟು ಮಜವಾದ ವಿಡಿಯೋ ಮಾಡಿರೋದು ಗೊತ್ತೇಯಿದೆ. ಹೀಗೆ ರೀಲ್ಸ್ ಪ್ರಪಂಚದಲ್ಲಿ ಏನೇನೋ ವೈರಲ್ ಆಗುವಂತಾಗಿದೆ. ಈ ಲಿಸ್ಟ್‌ಗೆ ಹೊಸ ಸೇರ್ಪಡೆ ಉಪ್ಪಿನ ಕಾಯಿ ರೀಲ್ಸ್.

ಯೂಟ್ಯೂಬ್ ಚಾನಲ್‌ವೊಂದಕ್ಕೆ ಯುವತಿಯೊಬ್ಬಳು ತಮಾಷೆಯಾಗಿ ಕೇಳಿದ ಒಂದು ಪ್ರಶ್ನೆ, ಅದಕ್ಕೆ ಯುವಕ ಕೊಟ್ಟ ಉತ್ತರ ಈಗ ಟ್ರೆಂಡಿಂಗ್‌ನಲ್ಲಿದೆ. ಆ ಯುವಕ ಉತ್ತರ ಕೊಟ್ಟ ದಾಟಿ ವಿಭಿನ್ನವಾಗಿದ್ದು ವಿಡಿಯೋ ವೈರಲ್ ಆಗುವಂತೆ ಮಾಡಿದೆ. ಕೆಲವರು ಆತ ಕುಡಿದು ಮಾತನಾಡುತ್ತಿದ್ದಾನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಆದರೂ ಕೆಲವರು ಇದನ್ನು ಇಷ್ಟಪಟ್ಟಿದ್ದಾರೆ. ಬೈದುಕೊಂಡೇ ಮೆಚ್ಚಿಕೊಳ್ಳುತ್ತಿದ್ದಾರೆ. ಈಗಾಗಲೇ 4 ಮಿಲಿಯನ್‌ಗೂ ಅಧಿಕ ವೀವ್ಸ್ ಈ ವಿಡಿಯೋಗೆ ಸಿಕ್ಕಿದೆ. ಇನ್ನು ನಟ ಕೃಷ್ಣ ಅಜಯ್ ರಾವ್ ಕೂಡ ಈ ವಿಡಿಯೋ ರೀಲ್ಸ್ ಮಾಡಿ ಶೇರ್ ಮಾಡಿದ್ದಾರೆ.
ಸಿನಿಮಾ ತಾರೆಯರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿ ಇರುತ್ತಾರೆ. ರೀಲ್ಸ್ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ನಟಿಯರು ಇನ್‌ಸ್ಟಾ ರೀಲ್ಸ್ ಮಾಡುತ್ತಾರೆ. ಆಗೊಮ್ಮೆ ಈಗೊಮ್ಮೆ ನಟರು ಕೂಡ ಟ್ರೈ ಮಾಡಿರೋದು ಇದೆ. ಸದ್ಯ ಉಪ್ಪಿನಕಾಯಿ ರೀಲ್ಸ್‌ಗೆ ಅಜಯ್ ರಾವ್ ಲಿಪ್‌ಸಿಂಕ್ ಮಾಡಿ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಕಿರುತೆರೆ ನಟಿ ಸಾರಾ ಅಣ್ಣಯ್ಯ ಕೂಡ ಇದನ್ನು ಟ್ರೈ ಮಾಡಿದ್ದಾರೆ.

ಮಲ್ಲೇಶ್ವರಂ ಮಂತ್ರಿ ಮಾಲ್ ಮುಂದೆ ಚಂದನಾ ಎಂಬ ಯುವತಿ ತನ್ನ ಯೂಟ್ಯೂಬ್ ಚಾನಲ್‌ಗಾಗಿ ಮೈಕ್ ಹಿಡಿದು ದಾರಿಹೋಕರಿಗೆ ಒಂದಷ್ಟು ತಮಾಷೆ ಪ್ರಶ್ನೆ ಕೇಳುತ್ತಿದ್ದರು. ಹೀಗೆ ಒಬ್ಬ ಯುವಕನ ಎದುರು ಮೈಕ್ ಹಿಡಿದು "ಮರದಲ್ಲಿ ಮತ್ತು ಗಿಡದಲ್ಲಿ ಬಿಡದೇ ಇರುವ ಕಾಯಿ ಯಾವುದು?" ಎಂದು ಆಕೆ ಕೇಳಿದ್ದಾಳೆ. ಅದಕ್ಕೆ ಆ ಯುವಕ "ನಮ್ಮ ಮನಸ್ಸು ನಮಗೆ ಒಳ್ಳೆಯದು ಮಾಡಿದರೆ ದೇವರು ಸಾಕು. ಮರ ಯಾಕೆ ನಮಗೆ. ಏನಂತೀರಾ? ತಾಯಿಗೆ ಕೈ ಮುಗಿಸಿ ದೇವರು ಒಳ್ಳೆಯದು ಮಾಡ್ತಾನೆ ನಮಗೆ, ಏನಂತೀರಾ ಅಷ್ಟೇ? ಎಂದು ಹೇಳಿದ್ದಾನೆ.
ಆಕೆ ಕೇಳಿದ ಪ್ರಶ್ನೆಗೂ ಆತ ಕೊಟ್ಟ ಉತ್ತರಕ್ಕೂ ಸಂಬಂಧವೇ ಇಲ್ಲ. ವಿಚಿತ್ರ ಎನಿಸಿದ ವಿಡಿಯೋ ನೋಡ ನೋಡುತ್ತಲೇ ಟ್ರೆಂಡ್ ಆಗಿಬಿಟ್ಟಿದೆ. ಸೆಲೆಬ್ರೆಟಿಗಳು ಕೂಡ ಇದನ್ನು ಅನುಕರಣೆ ಮಾಡಲು ಆರಂಭಿಸಿದ್ದಾರೆ. ಕೆಲ ಮೀಮ್ ಪೇಜ್‌ಗಳಲ್ಲಿ ಕನ್ನಡದ ಸೂಪರ್ ಹಿಟ್ ಸಿನಿಮಾ ದೃಶ್ಯಗಳಿಗೆ ಈ ಆಡಿಯೋ ಸಿಂಕ್ ಮಾಡಿ ವೈರಲ್ ಮಾಡಲಾಗುತ್ತಿದೆ. ಒಟ್ನಲ್ಲಿ ನಿಧಾನವಾಗಿ ಈ ರೀಲ್ಸ್ ಸದ್ದು ಮಾಡಲು ಆರಂಭಿಸಿದೆ.


Click it and Unblock the Notifications











