ಯಾವ ಸ್ಟಾಕ್ಸ್‌ನಲ್ಲಿ ಹೂಡಿಕೆ ಮಾಡಿದರೆ ಉತ್ತಮ? ಉಳಿತಾಯಕ್ಕೆ ಡಾರ್ಲಿಂಗ್ ಕೃಷ್ಣ ಸಲಹೆ ಏನು?
ನಟ ಡಾರ್ಲಿಂಗ್ ಕೃಷ್ಣ ನಿರ್ದೇಶಕರಾಗಿಯೂ ಸೈ ಎನಿಕೊಂಡಿದ್ದಾರೆ. 'ಲವ್ ಮಾಕ್ಟೇಲ್' ಸರಣಿ ಸಿನಿಮಾಗಳಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಶೀಘ್ರದಲ್ಲೇ ತಂದೆಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಕಿರುತೆರೆಯಲ್ಲೂ ಈ ಹಿಂದೆ ಮಿಂಚಿದ್ದರು. 'ಜಾಕಿ' ಚಿತ್ರಕ್ಕೆ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು.
'ಮದರಂಗಿ' ಚಿತ್ರದಲ್ಲಿ ಮೊದಲಿಗೆ ಹೀರೊ ಆಗಿ ಕೃಷ್ಣ ನಟಿಸಿದ್ದರು. 'ಚಾರ್ಲಿ', 'ಮುಂಬೈ', 'ಹುಚ್ಚ-2', 'ಲಕ್ಕಿಮ್ಯಾನ್', 'ದಿಲ್‌ಪಸಂದ್', 'ಲವ್ ಬರ್ಡ್ಸ್' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ 'ಶುಗರ್ ಫ್ಯಾಕ್ಟರಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 'ಲವ್ ಮಿ ಆರ್ ಹೇಟ್ ಮಿ' ಎನ್ನುವ ಚಿತ್ರದಲ್ಲಿ ಸದ್ಯ ನಟಿಸುತ್ತಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಕೃಷ್ಣ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಹಾಗೂ ಸಿನಿಜೀವನದ ಬಗ್ಗೆ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ.

ತಮ್ಮ ಜೀವನದಲ್ಲಿ ಹಣ ಎಷ್ಟು ಮುಖ್ಯ? ಹೂಡಿಕೆ ಮಾಡುವುದು ಹೇಗೆ? ಮೊದಲು ಪಡೆದ ಸಂಭಾವನೆ ಎಷ್ಟು? ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ. "ನಾನು ಹೂಡಿಕೆಯಲ್ಲಿ ನಂಬಿಕೆ ಇಟ್ಟಿದ್ದೀನಿ. ಎಲ್ಲರೂ ಹಣ ಹೂಡಿಕೆ ಮಾಡಬೇಕು. ನಾವು ಏನೇ ಗಳಿಸಿದರೂ ಅದರಲ್ಲಿ 75%ರಷ್ಟು ಹೂಡಿಕೆ ಮಾಡಬೇಕು, ಅಂದ್ರೆ ಉಳಿಸಬೇಕು. 25%ರಷ್ಟು ಖರ್ಚು ಮಾಡಬೇಕು. ಕೆಲವರಿಗೆ ಅದು ಸಾಧ್ಯವಾಗದಿರಬಹುದು. ಸಾಧ್ಯವಾದಷ್ಟು ಮಾಡಬೇಕು. ನಾನು 75%ರಷ್ಟು ಹೂಡಿಕೆ ಮಾಡುತ್ತೇನೆ" ಎಂದು ಕೃಷ್ಣ ಹೇಳಿದ್ದಾರೆ.
"ನಾನು ಸ್ಟಾಕ್ಸ್ ಅಲ್ಲಿ ಹೂಡಿಕೆ ಮಾಡ್ತೀನಿ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ(NPS) ಹೂಡಿಕೆ ಮಾಡ್ತೀನಿ. ಮ್ಯೂಚುವಲ್ ಫಂಡ್ಸ್ ಅಲ್ಲಿ ಹೂಡಿಕೆ ಮಾಡ್ತೀನಿ. ನಾನು, ನಮ್ಮ ಫ್ರೆಂಡ್ಸ್ ಎಲ್ಲಾ ಸೇರಿ ಮಾಡ್ತೀವಿ. ಈ ಬಗ್ಗೆ ಚರ್ಚಿಸ್ತೀವಿ. ಅದಕ್ಕೆ ವಾಟ್ಸಪ್‌ನಲ್ಲಿ ಒಂದು ಗ್ರೂಪ್ ಮಾಡಿಕೊಂಡಿದ್ದೇವೆ. 'ಆಫ್ಟರ್ 10 ಇಯರ್ಸ್ ಜಿಂಗಾಲಾಲ' ಅಂತ ಗ್ರೂಪ್ ಹೆಸರು. ಹೇಗೆ ಅಂದ್ರೆ ತಿಂಗಳಿಗೆ ನಾಲ್ಕೈದು ಸ್ಟಾಕ್, ಆಯ್ಕೆ ಮಾಡಿಕೊಂಡಿರ್ತೀವಿ. ಎಲ್ಲರೂ ಅದಕ್ಕೆ ತಿಂಗಳಿಗೆ 5 ಸಾವಿರ ಹಾಕಬೇಕು. 10 ವರ್ಷ ಅದನ್ನು ತೆಗೆಯಲ್ಲ. 10 ವರ್ಷಗಳ ಬಳಿಕ ಒಟ್ಟು ಹಣ ಮಜಾ ಮಾಡಿ ಅಂತ"

"ಏನೇನಕ್ಕೋ ವಾಟ್ಸಪ್ ಗ್ರೂಪ್ ಮಾಡ್ತೀವಿ. ಈ ರೀತಿ ಹಣ ಉಳಿಸಲು, ಹೂಡಿಕೆ ಮಾಡಲು ಯಾಕೆ ಮಾಡಬಾರದು. ಟಾಟಾ ಸ್ಟಾಕ್ಸ್ ಸೇಫ್. ಟಾಟಾ ಮೋಟರ್ಸ್ ನಾನು ತಗೊಂಡಿದ್ದೀನಿ. ಟಾಟಾ ಇನ್ವೆಸ್ಟ್‌ಮೆಂಟ್ ಚೆನ್ನಾಗಿರುತ್ತೆ. ಟಾಟಾ ಪವರ್ ಹಾಗೂ ಇನ್ಫಿ, ಚೆನ್ನಾಗಿದೆ. ಮೊದಲು ನನಗೂ ಭಯ ಇತ್ತು. 4 ವರ್ಷದ ಹಿಂದೆ ಶುರು ಮಾಡಿದ್ದು. ಮೊದಲಿಗೆ ಒಂದು ಲಕ್ಷ, ಎರಡು ಲಕ್ಷ ಹೀಗೆ ಹೂಡಿಕೆ ಮಾಡಿ ಮಾಡಿ ಈಗ ಸ್ವಲ್ಪ ಧೈರ್ಯ ಬಂತು."
"ಲವ್ ಮಾಕ್ಟೇಲ್ ಸರಣಿ ಸಿನಿಮಾಗಳಿಂದಲೇ ನಾನು ಹೆಚ್ಚು ಹಣ ಗಳಿಸಿದ್ದು. ಅದೇ ಹಣದಲ್ಲೇ ಮನೆ ಎಲ್ಲಾ ಖರೀಸಿದಿದ್ದು. 'ನಮ್ ದುನಿಯಾ ನಮ್ ಲೈಫ್' ಚಿತ್ರಕ್ಕೆ ಸಂಭಾವನೆ ಎಷ್ಟು ಕೇಳಬೇಕು ಗೊತ್ತಿರಲಿಲ್ಲ. 3 ಲಕ್ಷ ಅಂದೆ. ಹೂಂ ಅಂದ್ರು. ಅಯ್ಯೋ ಕಮ್ಮಿ ಕೇಳ್ಬಿಟ್ನಾ ಅಂತ ನನಗೆ ಅನ್ನಿಸ್ತು. ಮಿಲನಾ ಕೂಡ ಆ ಚಿತ್ರದಲ್ಲಿ ನಟಿಸಿದ್ದಾಳೆ. ನಾನು ನಾಲ್ಕೂವರೆ ತಗೊಂಡೆ ಅಂದ್ಲು. ಶಾಕ್ ಆಯ್ತು" ಎಂದು ಕೃಷ್ಣ ನಕ್ಕಿದ್ದಾರೆ.
"ಧಾರಾವಾಹಿಯಲ್ಲಿ ನಟಿಸುವಾಗ ದಿನಕ್ಕೆ 2 ಸಾವಿರ ರೂ. ಸಿಕ್ತಿತ್ತು. ಆಗ ದಿನಕ್ಕೆ 2 ಸಾವಿರ ರೂ. ಅಂದ್ರೆ ಬೆಲೆ ಇತ್ತು. 'ಜಾಕಿ' ಚಿತ್ರಕ್ಕೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾಗ ದಿನಕ್ಕೆ 100 ರೂ. ಕೊಡುತ್ತಿದ್ದರು. ಹೀಗೆ ನನ್ನ ಕರಿಯರ್ ಶುರುವಾಯಿತು" ಎಂದು ಕೃಷ್ಣ ನೆನಪಿಸಿಕೊಂಡಿದ್ದಾರೆ.


Click it and Unblock the Notifications











