"ಅವತ್ತು ತಳ್ಳಾಟ ನೂಕಾಟದಲ್ಲಿ ನಾನು ಕೆಳಗೆ ಬಿದ್ದೆ, ನನ್ನನ್ನೇ ತುಳಿದುಕೊಂಡು ಹೋಗಿದ್ರು"; ಸಾನ್ವಿ ಸುದೀಪ್
ಸಿನಿಮಾ ತಾರೆಯರನ್ನು ನೋಡಲು ಅಭಿಮಾನಿಗಳು ಮುಗಿಬೀಳುವುದು ಸರ್ವೇಸಾಮಾನ್ಯ. ಆದರೆ ಹೀಗೆ ಅಭಿಮಾನಿಗಳು ಒಮ್ಮೆಲೆ ಮುಗಿಬೀಳುವುದರಿಂದ ಕಾಲ್ತುಳಿತ ದುರಂತಗಳು ನಡೆದಿದೆ. 'ಪುಷ್ಪ'-2 ಸಿನಿಮಾ ರಿಲೀಸ್ ವೇಳೆ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಉಂಟಾಗಿ ಭಾರೀ ದುರಂತ ಸಂಭವಿಸಿದ್ದು ಗೊತ್ತೇಯಿದೆ.
ಡಾ. ರಾಜ್‌ಕುಮಾರ್ ನಟನೆಯ 'ತಾಯಿಗೆ ತಕ್ಕ ಮಗ' ಸಿನಿಮಾ ಬಿಡುಗಡೆ ವೇಳೆ ನಗರದ ಚಾಮರಾಜಪೇಟೆಯ ಸಂಜಯ್ ಚಿತ್ರಮಂದಿರದಲ್ಲಿ ಕೂಡ ಕಾಲ್ತುಳಿತ ಘಟನೆ ನಡೆದಿತ್ತು. ಅಂದು ಇಬ್ಬರು ಜೀವ ಕಳೆದುಕೊಂಡಿದ್ದರು. ಸ್ಟಾರ್ ನಟರು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಾಗ ತಳ್ಳಾಟ ನೂಕಾಟ ನಡೆಯುವುದು ಸಹಜ. ನಟ ಕಿಚ್ಚ ಸುದೀಪ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ನೋಡಲು ಆಟೋಗ್ರಾಫ್, ಜೊತೆಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಾರೆ.

ಕೆಲ ವರ್ಷಗಳ ಹಿಂದೆ ಮಗಳು ಸಾನ್ವಿ ಜೊತೆ ನಟ ಸುದೀಪ್ ಮಾಲ್‌ವೊಂದಕ್ಕೆ ಭೇಟಿ ನೀಡಿದ್ದರು. ಆಗ ಇದೇ ರೀತಿ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ತಳ್ಳಾಟ ನೋಕಾಟದಲ್ಲಿ ಸಾನ್ವಿ ಕೆಳಗೆ ಬಿದ್ದುಬಿಟ್ಟಿದ್ದಳಂತೆ. ಆಗ ಅಭಿಮಾನಿಗಳು ತಮಗೇ ಅರಿವಿಲ್ಲದೇ ಆಕೆಯನ್ನು ತುಳಿದುಕೊಂಡು ಹೋಗಿದ್ದರಂತೆ. ಆ ಕಹಿ ಘಟನೆಯನ್ನು ನನ್ನ ಜೀವನದಲ್ಲಿ ಮರೆಯೋಕೆ ಆಗಲ್ಲ ಎಂದು ಸಾನ್ವಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
"ಆಗ ನನಗೆ 5 ವರ್ಷ ವಯಸ್ಸು ಅನ್ನಿಸುತ್ತದೆ. ತಂದೆ ಜೊತೆ ಮಾಲ್‌ವೊಂದಕ್ಕೆ ಹೋಗಿದ್ದೆ. ಅಪ್ಪ ಅಲ್ಲಿಗೆ ಬಂದಿದ್ದ ವಿಷಯ ಅದು ಹೇಗೋ ಮಾಲ್ ತುಂಬಾ ಹಬ್ಬಿತ್ತು. ನಾವು ಹೊರಗೆ ಬರುವ ವೇಳೆಗೆ ಮಾಲ್‌ನಲ್ಲಿ ಇದ್ದವರೆಲ್ಲಾ ಹೊರಗೆ ಕಾಯುತ್ತಿದ್ದರು. ನಾನು ಅಪ್ಪನ ಕೈ ಹಿಡಿದುಕೊಂಡಿದ್ದೆ. ನಾವು ಹೊರಗೆ ಹೋದಾಗ ಕೆಲವರು ಒಮ್ಮೆ ಮುಗಿಬಿದ್ದರು" ಎಂದು ಸಾನ್ವಿ ಆ ಘಟನೆ ನೆನಪಿಸಿಕೊಂಡಿದ್ದಾರೆ.
"ನಾನು ಅಪ್ಪನ ಕೈ ಹಿಡಿದುಕೊಂಡಿದ್ದೆ. ಕಾರ್ ಏರಲು ಹೋದಾಗ ಒಂದು ಹಂತದಲ್ಲಿ ಕೈಬಿಟ್ಟೆ. ಕೆಳಗೆ ಬಿದ್ದೆ. ಜನ ನನ್ನನ್ನು ತುಳಿದುಕೊಂಡು ಹೋದರು. ಅವರಿಗೆ ಮಗುವಿನ ಮೇಲೆ ನಡೆದುಕೊಂಡು ಹೋಗುತ್ತಿರುವುದು ಕೂಡ ಗೊತ್ತಾಗಲಿಲ್ಲ. ಅದರಲ್ಲೂ ಒಬ್ಬ ಆಂಟಿ ಹೀಲ್ಸ್ ಹಾಕಿದ್ದರು. ಅದು ನನ್ನ ಬೆನ್ನಿಗೆ ಚುಚ್ಚಿ ಪೆಟ್ಟಾಗಿತ್ತು. ನಾನು ಅಂದು ಬಿಳಿ ಟೀಶರ್ಟ್ ಆಗಿದ್ದೆ. ಅದರಲ್ಲಿ ರಕ್ತದ ಕಲೆ ಆಗಿತ್ತು. ಆ ನೋವಿನಿಂದ ಹೊರಬರಲು ಬಹಳ ಕಷ್ಟವಾಯಿತು" ಎಂದು ಸಾನ್ವಿ ವಿವರಿಸಿದ್ದಾರೆ.

ಪ್ರೈಮರಿ ಸ್ಕೂಲ್‌ನಲ್ಲಿದ್ಧಾಗ ಒಂದು ಕಹಿ ಘಟನೆ ನಡೆದಿತ್ತು. ನಾನು ಶಾಲೆಯಿಂದ ಮನೆಗೆ ಬಸ್ ಇಳಿದು ಒಳಗೆ ಹೋಗುತ್ತಿದ್ದೆ. ಆಗ ನಾನು ಸರ್ಜಾಪುರ ರಸ್ತೆಯ ಮನೆಯಲ್ಲಿದ್ದೆ. ಕೆಲವರು ಸದಾ ನಮ್ಮ ಮನೆಯ ಬಳಿ ಇರುತ್ತಿದ್ದರು. ಒಮ್ಮೆ ಬಂದು ನನ್ನ ಬ್ಯಾಗ್ ಕಿತ್ಕೊಂಡ್ರು. ಅಪ್ಪನನ್ನು ಹೊರಗೆ ಕರೆಯೋಕೆ ಹೇಳಿದರು. ಅಷ್ಟರಲ್ಲಿ ನಮ್ಮ ತಾಯಿ ಬಂದು ಕೂಗಾಡಿ, ಇವಳು ನನ್ನ ಮಗಳು ಹೋಗಿ ಎಂದು ಅವರನ್ನು ಕಳುಹಿಸಿದರು" ಎಂದು ಸಾನ್ವಿ ಹೇಳಿದ್ದಾರೆ.
ಕೆಲ ಅಭಿಮಾನಿಗಳು ಶಾಲೆಯ ಬಳಿ ಬರುತ್ತಿದ್ದರು. ಗೇಟ್ ಬಳಿ ಬಂದು "ಅಕ್ಕ, ಅಕ್ಕ, ಅಣ್ಣ ಎಲ್ಲಿ" ಎಂದು ಕೇಳುತ್ತಿದ್ದರು. ಅದೆಲ್ಲಾ ಭಯ ಎನಿಸುತ್ತಿತ್ತು ಎಂದು ಸಾನ್ವಿ ತಿಳಿಸಿದ್ದಾರೆ. ಸುದೀಪ್ ಮಗಳ ಮಾತು ವೈರಲ್ ಆಗ್ತಿದೆ.


Click it and Unblock the Notifications











