Pankaj Tripathi: ತಂದೆಯ ನೆನಪಿನಲ್ಲಿ ತಮ್ಮ ಹಳ್ಳಿಯಲ್ಲಿ ಗ್ರಂಥಾಲಯ ತೆರೆದ ನಟ ಪಂಕಜ್ ತ್ರಿಪಾಠಿ
ಬಾಲಿವುಡ್ ನಟ ಪಂಕಜ್ ತ್ರಿಪಾಠಿ, ತಮ್ಮ ಅದ್ಭುತ ಅಭಿನಯದಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಇದರ ಜೊತೆಗೆ ತಮ್ಮ ಸ್ವಗ್ರಾಮದಲ್ಲಿ ಮಾಡುತ್ತಿರುವ ಹಲವು ಸಾಮಾಜಿಕ ಕಾರ್ಯಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಟ ತಮ್ಮ ಹಳ್ಳಿಯ ಶಾಲೆಯಲ್ಲಿ ಗ್ರಂಥಾಲಯ ತೆರೆದಿದ್ದಾರೆ.
ನಟ ಪಂಕಜ್ ತ್ರಿಪಾಠಿ ಬಿಹಾರದ ಗೋಪಾಲಗಂಜ್‌ನ ಬೆಲ್‌ಸಂಡ್‌ನಲ್ಲಿರುವ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೊಚ್ಚ ಹೊಸ ಗ್ರಂಥಾಲಯವನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಗ್ರಂಥಾಲಯವ್ನನು ಅವರ ದಿವಂಗತ ತಂದೆ ಪಂಡಿತ್ ಬನಾರಸ್ ತ್ರಿಪಾಠಿ ಅವರಿಗೆ ಸಮರ್ಪಿಸಲಾಗಿದೆ.

ಶಾಲೆಗೆ ಗ್ರಂಥಾಲಯ ಕೊಡುಗೆ
ಪಂಕಜ್ ತ್ರಿಪಾಠಿ ಹಲವು ಸಾಮಾಜಿಕ ಕಾರ್ಯಗಳನ್ಉ ಮಾಡುತ್ತಿರುತ್ತಾರೆ. ಸಾಹಿತ್ಯ ಮತ್ತು ಪುಸ್ತಕಗಳ ಮೇಲಿನ ಅವರ ಪ್ರೀತಿ ಎಲ್ಲರಿಗೂ ತಿಳಿಸಿದೆ. ಈಗ ಗೋಪಾಲಗಂಜ್‌ನ ಶಾಲೆಯೊಂದರಲ್ಲಿ ಸಂಪೂರ್ಣ ಸುಸಜ್ಜಿತ ಗ್ರಂಥಾಲಯವನ್ನು ನಿರ್ಮಾಣ ಮಾಡಿಸಿದ್ದಾರೆ. ಶಾಲೆಯ ಆವರಣದಲ್ಲಿ ಗ್ರಂಥಾಲಯವನ್ನು ಉದ್ಘಾಟಿಸಿದ್ದಾರೆ.
ಪಂಕಜ್ ತ್ರಿಪಾಠಿ ಇತ್ತೀಚಿಗೆ ಆಗಸ್ಟ್ 21 ರಂದು ತಮ್ಮ ತಂದೆ ಪಂಡಿತ್ ಬನಾರಸ್ ತ್ರಿಪಾಠಿ ಅವರನ್ನು ಕಳೆದುಕೊಂಡರು. ಇದಾಗಿ ಕೇವಲ ಮೂರು ದಿನಗಳ ನಂತರ ಅಂದರೆ, ಆಗಸ್ಟ್ 24 ರಂದು ಅವರಿಗೆ ಮಿಮಿ ಸಿನಿಮಾದ ನಟನೆಗಾಗಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಆದರೆ ಈ ಸಿಹಿ ಸುದ್ದಿಯನ್ನು ಸಂಭ್ರಮಿಸುವ ಪರಿಸ್ಥಿತಿ ಕೂಡ ಅವರಿಗಿರಲಿಲ್ಲ.

ತಮ್ಮ ಪ್ರೀತಿಯ ತಂದೆಯನ್ನು ಕಳೆದುಕೊಂಡ ಬೆನ್ನಲ್ಲೆ ನಟ ಗ್ರಂಥಾಲಯದ ಉದ್ಘಾಟನೆ ಮಾಡಿರುವುದು ವಿಶೇಷ ಮಹತ್ವವನ್ನು ಪಡೆದಿದೆ. ತನ್ನ ತಂದೆಯ ಸ್ಮರನಾರ್ಥವಾಗಿ ಪಂಕಜ್ ತ್ರಿಪಾಠಿ ಶಾಲೆ ಮತ್ತು ಅದರ ವಿದ್ಯಾರ್ಥಿಗಳಿಗೆ ಶಾಶ್ವತ ಉಡುಗೊರೆಯನ್ನು ನೀಡಿದ್ದಾರೆ.
ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಪಂಕಜ್ ತ್ರಿಪಾಠಿ, "ನನ್ನ ತಂದೆ ಪಂಡಿತ್ ಬನಾರಸ್ ತಿವಾರಿ ಅವರ ಅಚ್ಚುಮೆಚ್ಚಿನ ನೆನಪಿಗಾಗಿ ಈ ಗ್ರಂಥಾಲಯವನ್ನು ಅರ್ಪಿಸುವ ಮೂಲಕ, ಗೋಪಾಲಗಂಜ್‌ನ ಬೆಲ್‌ಸಂಡ್‌ನ ವಿದ್ಯಾರ್ಥಿಗಳ ಮನದಲ್ಲಿ ಜ್ಞಾನ ಮತ್ತು ಸಾಹಿತ್ಯದ ಬಗ್ಗೆ ಪ್ರೀತಿಯನ್ನು ತುಂಬಲು ನಾನು ಬಯಸುತ್ತೇನೆ. ಶಿಕ್ಷಣವು ನಾವು ನಮ್ಮ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಕೊಡುಗೆಯಾಗಿದೆ" ಎಂದಿದ್ದಾರೆ.
" ಇದು ಕುಟುಂಬದ ನಿರ್ಧಾರ. ನಾವು ಈಗಾಗಲೇ ಶಾಲೆಯನ್ನು ದತ್ತು ತೆಗೆದುಕೊಂಡಿದ್ದೇವೆ ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಿದ್ದೇವೆ. ಈ ಬಾರಿ ಎಲ್ಲಾ ಮಕ್ಕಳಿಗೆ ಪುಸ್ತಕಗಳು ಲಭ್ಯವಿರಬೇಕು ಎಂದು ನಾವು ಭಾವಿಸಿದ್ದೇವು. ನನ್ನ ತಂದೆ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು" ಎಂದು ಮಾಹಿತಿ ನೀಡಿದ್ದಾರೆ.
ಬಿಹಾರದ ಗೋಪಾಲ್‌ಗಂಜ್ ಮೂಲದ ಪಂಕಜ್ ತ್ರಿಪಾಠಿ ಅವರು ಈ ಹಿಂದೆ ತಾನು ಶಿಕ್ಷಣ ಪಡೆದ ಶಾಲೆಗೆ ಪುನಶ್ಚೇತನ ನೀಡುವ ಉದ್ದೇಶವನ್ನು ಹೊಂದಿದ್ದರು. ಅವರ ಅಣ್ಣನೊಂದಿಗೆ ಸೇರಿ ಸ್ಥಾಪಿಸಲಾದ ಪಂಡಿತ್ ಬನಾರಸ್ ತಿವಾರಿ ಫೌಂಡೇಶನ್ ಟ್ರಸ್ಟ್ ಮೂಲಕ ಈ ಪ್ರಯತ್ನ ಮಾಡುತ್ತಿದ್ದಾರೆ.
ಈ ಯೋಜನೆಯು ಶಾಲೆಯ ಮೂಲಸೌಕರ್ಯಗಳ ಸಮಗ್ರ ನವೀಕರಣ ಮಾಡುತ್ತದೆ. ಇದರಲ್ಲಿ ವಿದ್ಯುತ್ ಉಪಕರಣಗಳನ್ನು ಒದಗಿಸುವುದು, ಬಣ್ಣ ಬಳಿಸುವುದು, ಪರಿಸರ ಸ್ನೇಹಿ ಸೌರಶಕ್ತಿ ಫಲಕಗಳ ಸ್ಥಾಪನೆ, ವಿದ್ಯುತ್ ಸರಬರಾಜು ಮತ್ತು ನೀರಿನ ಪೂರೈಕೆ ಕೂಡ ಒಳಗೊಂಡಿದೆ.
ಬಾಲಿವುಡ್‌ನಲ್ಲಿ ಪಂಕಜ್ ತ್ರಿಪಾಠಿ
ಪಂಕಜ್ ತ್ರಿಪಾಠಿ ಸದ್ಯ ಓಎಂಜಿ ಭಾಗ ಎರಡರ ಖುಷಿಯಲ್ಲಿದ್ದರು. ಅವರ ಮುಂದಿನ ಚಿತ್ರ 'ಫುಕ್ರೆ' ಫ್ರ್ಯಾಂಚೈಸ್‌ನ ಮೂರನೇ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಇದಲ್ಲದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಚರಿತ್ರೆ, 'ಮೇನ್ ಅಟಲ್ ಹೂನ್' ನಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.


Click it and Unblock the Notifications











